ಉಪಾಧ್ಯಕ್ಷ ಅನಿಲ್ ಅವರ ಆಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನ
by GS Bharath Gudibande
ಗುಡಿಬಂಡೆ: ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ತೆರವಾದ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ದಿನಾಂಕ ಘೋಷಿಸಿದೆ.
ಡಿಸೆಂಬರ್ 27ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8ರಂದು ಆಯೋಗವು ಅಧಿಸೂಚನೆ ಹೊರಡಿಸಲಿದೆ.
ಗುಡಿಬಂಡೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ವಕೀಲ ಅನಿಲ್ ಅವರ ಆಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕೂಡ ಇದೇ ವೇಳೆ ಉಪ ಚುನಾವಣೆ ನಡೆಯಲಿದೆ.
ಚುನಾವಣೆ ವೇಳಾಪಟ್ಟಿ
ಡಿಸೆಂಬರ್ 8ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಅವರು ಅಧಿಸೂಚನೆ ಹೊರಡಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ.
ಡಿಸೆಂಬರ್15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿಸೆಂಬರ್16ರಂದು ನಾಮಪತ್ರ ಪರಿಶೀಲನೆ, ಡಿಸೆಂಬರ್18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.
ಡಿಸೆಂಬರ್ 27ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಗ್ಗೆ 7ಗಂಟೆಯಿಂದ ಸಂಜೆ 5 ಗಂಟೆಯ ವರೆಗೂ ಮತದಾನ ನಡೆಯಲಿದೆ.
ಅವಶ್ಯವಿದ್ದರೆ ಡಿಸೆಂಬರ್ 29ರಂದು ಮರು ಮತದಾನ ನಡೆಸಲಾಗುತ್ತದೆ. ಡಿಸೆಂಬರ್ 30ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ನೀತಿ ಸಂಹಿತೆ ಜಾರಿ
ಪಟ್ಟಣ ಪಂಚಾಯಿತಿ ವ್ಯಾಪ್ತಿ ಹಾಗೂ ಉಪ ಚುನಾವಣೆ ನಡೆಯುವ ವಾರ್ಡ್‌ನ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಡಿಸೆಂಬರ್ 8ರಿಂದ 30ರ ತನಕ ಜಾರಿಯಲ್ಲಿರಲಿದೆ.
ಜಿಲ್ಲೆಯಲ್ಲಿ ಎರಡು ಕಡೆ ಉಪ ಚುನಾವಣೆ
ಜಿಲ್ಲೆಯಲ್ಲಿ ಚಿಂತಾಮಣಿ ನಗರಸಭೆ ವಾರ್ಡ್ ಸಂಖ್ಯೆ 18ರಲ್ಲಿ ಹಾಗೂ ಗುಡಿಬಂಡೆ ಪಟ್ಟಣ ಪಂಚಾಯಿತಿ ವಾರ್ಡ್ ಸಂಖ್ಯೆ 2ರಲ್ಲಿ ಉಪ ಚುನಾವಣೆ ನಡೆಯಲಿದೆ.