ಸರಕಾರವನ್ನು ಹಿಗ್ಗಮುಗ್ಗಾ ತರಾಟೆಗೆ ತೆಗೆದುಕೊಂಡ ಹೆಚ್.ಡಿ.ಕುಮಾರಸ್ವಾಮಿ
ಸುವರ್ಣ ವಿಧಾನಸೌಧ, ಬೆಳಗಾವಿ: ಪ್ರಚಾರಕ್ಕೆ 140 ಕೋಟಿ ರೂಪಾಯಿಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವೆಚ್ಚ ಮಾಡಿದೆ ಎಂದು ಸಿಕೆನ್ಯೂಸ್ ನೌ ಪ್ರಕಟಿಸಿದ್ದ ವರದಿಯನ್ನು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬರದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು; ರಾಜ್ಯ ಕಾಂಗ್ರೆಸ್ ಸರಕಾರ ಪ್ರಚಾರಕ್ಕೆ ಕೊಡುವಷ್ಟು ಮಹತ್ವ ರೈತರ ಬಗ್ಗೆ ನೀಡುತ್ತಿಲ್ಲ. ಸಚಿವರೊಬ್ಬರು ಸಿಎಂಗೆ ಪತ್ರ ಬರೆದಿದ್ದಾರೆ, ಪ್ರಚಾರಕ್ಕೆ ಕೊಟ್ಟ ಜಾಹೀರಾತಿನ ಮೊತ್ತ 140 ಕೋಟಿ ರೂಪಾಯಿ ಕೂಡಲೇ ಬಿಡುಗಡೆ ಮಾಡಿ ಎಂದು ಅವರು ಪತ್ರ ಬರೆದಿದ್ದಾರೆ. ಅವರು ರೈತರ ಬಗ್ಗೆ ಇಂಥ ಪತ್ರಗಳನ್ನು ಬರೆದಿದ್ದಾರೆಯೇ? ಎಂದು ಪ್ರಶ್ನಿಸಿದರು ಮಾಜಿ ಮುಖ್ಯಮಂತ್ರಿಗಳು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಮಾಧ್ಯಮ ಪ್ರಚಾರಕ್ಕೆ ನೀಡಲಾಗಿರುವ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು. ಈ ವಿಷಯವನ್ನು ಸಿಕೆನ್ಯೂಸ್ ನೌ ಡಿಸೆಂಬರ್ 5ರಂದು ವರದಿ ಮಾಡಿತ್ತು. ಇದನ್ನೇ ಮಾಜಿ ಮುಖ್ಯಮಂತ್ರಿಗಳು ಸದನದಲ್ಲಿ ಪ್ರಸ್ತಾಪ ಮಾಡಿದ್ದರು.
ಸಚಿವರಿಗೆ ನಾನು ದೋಷ ಕೊಡುವ ಉದ್ದೇಶದಿಂದ ನಾನು ಈ ಮಾತು ಹೇಳುತ್ತಿಲ್ಲ. ಆದರೆ, ಅವರಿಗೆ ರೈತರಿಗಿಂತ ಪ್ರಚಾರದ ಮೇಲೆ ಮಹತ್ವ ಜಾಸ್ತಿ ಇದ್ದಂತೆ ಕಾಣುತ್ತಿದೆ, ಯಾಕೆ ಹೀಗೆ? ಎಂದು ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಕಾರ್ಯಕ್ರಮಗಳಿಗೆ ಕೊಟ್ಟ ಮಹತ್ವ ರೈತರ ನಷ್ಟಗಳಿಗೆ ಯಾಕೆ ಕೊಡಲು ಆಗ್ತಾ ಇಲ್ಲ. ಕೇಂದ್ರದ ವರದಿ ಬಳಿಕ ಬೆಳೆ ಹಾನಿ ಪರಿಹಾರ ಅಂತ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಕಲಬುರಗಿ, ರಾಯಚೂರು ಎಲ್ಲಾ ಕಡೆ ಕೈಗೆ ಬರಬೇಕಿದ್ದ ಬೆಳೆ ಹಾಳಾಗಿದೆ. ಪದೇ ಪದೇ ಕೇಂದ್ರದ ಕಡೆ ಬೆರಳು ತೋರಿಸಲಾಗ್ತಿದೆ. ಕೇಂದ್ರದಿಂದ ಮೊದಲನೆ ಕಂತಿನ ಹಣ ಬಂದಿರಬಹುದು. ಕೇಂದ್ರದ ತಂಡ ಬರ ಅದ್ಯಯನ ಮಾಡುತ್ತಿದ್ದಾಗ ಗದಗ ಜಿಲ್ಲೆಯ ಅಧಿಕಾರಿಗಳು ನಿದ್ದೆ ಮಾಡ್ತಾ ಇದ್ದರು ಎನ್ನುವ ವಿಚಾರ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆಡಳಿತ ಇಷ್ಟೊಂದು ಜಿಡ್ಡುಗಟ್ಟಿದೆಯೇ? ಎಂದು ಮಾಜಿ ಮುಖ್ಯಮಂತ್ರಿ ಅವರು ಆಕ್ರೋಶ ವ್ಯಕ್ತಪಡಿಸಿದರು.