ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ಎನ್‌ಐಎ ದಾಳಿ
ಬೆಂಗಳೂರು: ಐಸಿಸ್ ಭಯೋತ್ಪಾದನೆ ಸಂಚು ವಿಫಲಗೊಳಿಸಲು ಕಾರ್ಯಾಚರಣೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿ, ಬೆಂಗಳೂರಿನಲ್ಲಿ ಒಬ್ಬ ಶಂಕಿತ ಉಗ್ರ ಸೇರಿ 13 ಮಂದಿಯನ್ನು ಬಂಧಿಸಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಪೊಲೀಸ್ ಪಡೆಗಳ ನೆರವಿನೊಂದಿಗೆ ಎನ್‌ಐಎ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದೆ.ಶನಿವಾರ ಬೆಳಿಗ್ಗೆನಿಂದಲೇ ಎನ್ಐಎ ಕರ್ನಾಟಕದ 1 ಪ್ರದೇಶ, ಪುಣೆಯ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆ ನಗರದಲ್ಲಿ ಒಂಬತ್ತು ಮತ್ತು ಭಾಯಂದರ್‌ನಲ್ಲಿ ಒಂದು ಪ್ರದೇಶದ ಮೇಲೆ ಕಾರ್ಯಾಚರಣೆ ನಡೆಸಿದೆ.
ಪುಲಕೇಶಿ ನಗರದಲ್ಲಿ ಸಿಕ್ಕಿಬಿದ್ದ
ಬೆಂಗಳೂರಿನ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆಲಿ ಅಬ್ಬಾಸ್ ಪೇಟಿವಾಲ ಎಂಬಾತನನ್ನು ಎನ್‌ಐಎ ಬಂಧಿಸಿದೆ.
ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಮುಂಬೈ ಮೂಲದ ಅಲಿ ಅಬ್ಬಾಸ್ ಕಳೆದ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದಾನೆ.ಬೆಂಗಳೂರಿಗೆ ಬರುವ ಮೊದಲು ಪುಣೆಯಲ್ಲಿ ನೆಲೆಸಿದ್ದ.
ಜಾಲತಾಣಗಳಲ್ಲಿ ಸಕ್ರಿಯ
ಬೆಂಗಳೂರಿನಲ್ಲಿದ್ದುಕೊಂಡೇ ದೇಶದ ವಿವಿಧ ಭಾಗಗಳಿಗೆ ಸಂಚರಿಸುತ್ತಿದ್ದ.ಸ್ಥಳೀಯವಾಗಿ ವಾಟ್ಸಪ್, ಟೆಲಿಗ್ರಾಂ ಹಲವು ಗ್ರೂಪ್ ಗಳನ್ನು ಮಾಡಿದ್ದ ಈತ ತನ್ನ ವಿಚಾರ ಒಪ್ಪುವವರಿಗೆಲ್ಲ ಬೇರೊಂದು ಗ್ರೂಪ್ ಮಾಡಿ ಅದರಲ್ಲಿ ಪ್ರಚೋದನೆ ನೀಡುವ ಹೇಳಿಕೆ ಕಳುಹಿಸುತ್ತಿದ್ದ.
ಸ್ಥಳೀಯವಾಗಿ ತೀರಾ ಹತ್ತಿರದವರಿಗೆ ವಾಟ್ಸಪ್ ಯೂಸ್ ಮಾಡದಂತೆ ಹೇಳುತ್ತಿದ್ದ. ವಾಟ್ಸಪ್‌ಗಿಂತ ಟೆಲಿಗ್ರಾಂ ಸುರಕ್ಷಿತ. ಅದನ್ನೇ ಬಳಸುವಂತೆ ಸೂಚನೆ ನೀಡುತ್ತಿದ್ದ.
ಭಾರತದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುವ ಭಯೋತ್ಪಾದಕ ಸಂಘಟನೆಯ ಯೋಜನೆಗಳನ್ನು ವಿಫಲಗೊಳಿಸಲು ಎನ್ಐಎ ಶ್ರಮಿಸುತ್ತಲೇ ಇದೆ.