ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಷಪ್ರಾಶನ ಶಂಕೆ ಹಿನ್ನೆಲೆಯಲ್ಲಿ ಹೊಸ ಚರ್ಚೆಗೆ ನಾಂದಿ
ನವದೆಹಲಿ: ಅಕ್ಸಯ್ ಚಿನ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡುತ್ತಿರುವ ಕೇಂದ್ರ ಸರಕಾರಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಡೆಮುರಿ ಕಟ್ಟಲಾಗದ ಅಸಹಾಯತೆ ಬಗ್ಗೆ ಈಗ ಭಾರೀ ಚರ್ಚೆ ಆಗುತ್ತಿದೆ.
ಕೆಲ ದಿನಗಳಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಅಡಗಿರುವ ಭಾರತ ವಿರೋಧಿಗಳಲ್ಲಿ ಸಾಕಷ್ಟು ಜನ ಖಲಾಸ್ ಆಗಿದ್ದರು. ಆದರೆ, ಭಾರತಕ್ಕೆ ಅಷ್ಟೇನೂ ದೂರದಲ್ಲಿ ಇಲ್ಲದ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿರುವ ದಾವೂದ್ ಹುಟ್ಟಡಗಿಸುವ ಕೆಲಸವನ್ನು ಕೇಂದ್ರ ಏಕೆ ಮಾಡುತ್ತಿಲ್ಲ? ಅಥವಾ ಮಾಡುತ್ತಿದೆ ಎಂದಿಟ್ಟುಕೊಂಡರೂ ಆ ನಿಟ್ಟಿನಲ್ಲಿ ಯಶಸ್ಸು ಸಾಧಿಸಿಲ್ಲ ಏಕೆ ಎಂದು ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಹಿರಿಯ ಪತ್ರಕರ್ತ ರಾಜದೀಪ್ ಸರ್ ದೇಸಾಯಿ ಅವರು ಅವರು ಎಕ್ಸ್ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಹೆಚ್ಚು ಗಮನ ಸೆಳೆದಿದೆ. ಅವರ ಪೋಸ್ಟ್ ಹೀಗಿದೆ.
“ದಾವೂದ್ ಇಬ್ರಾಹಿಂ ಸಾವಿನ ಕುರಿತ ಕಥೆಯು ಹುಡುಗನೊಬ್ಬ ತೋಳ ಬಂತು ತೋಳ ಎಂದು ಹೇಳಿದ ಕಥೆಯ ರೀತಿಯಲ್ಲಿಯೇ ಇದೆ. ಆತನನ್ನು ಈಗಾಗಲೇ ಹಲವಾರು ಸಲ ಕೊಂದಿದ್ದೇವೆ. ಏಡ್ಸ್, ಟೈಫಾಯಿಡ್, ಕೋವಿಡ್.. ಆದ್ದರಿಂದ ಯಾವುದನ್ನು ನಂಬಬೇಕು ಇಲ್ಲವೇ ನಂಬಬಾರದು ಎಂದು ನಮಗೆ ಗೊತ್ತಾಗುತ್ತಿಲ್ಲ. ಆತ ಪಾಕಿಸ್ತಾನದಲ್ಲಿಯೇ ವಾಸಿಸುತ್ತಿದ್ದಾನೆ ಎಂದು ಎನ್ನುವುದನ್ನು ಒಪ್ಪಿಕೊಳ್ಳದ ಆ ದೇಶವು (ಪಾಕಿಸ್ತಾನ), ಈ ವಿಷಯವನ್ನು ಖಚಿತಪಡಿಸುತ್ತಿಲ್ಲ. ಸೂಕ್ತ, ಅಗತ್ಯ ದಾಖಲೆಗಳು ಇಲ್ಲದೆ ಭಾರತದ ತನಿಖಾ ಸಂಸ್ಥೆಗಳು ಕೂಡ ಅದನ್ನು ಖಚಿತಪಡಿಸುವುದಿಲ್ಲ.ನಿಜವಾಗಿಯೂ ಕೇಳಲೇಬೇಕಾದ ಪ್ರಶ್ನೆ; ಆತನ ಚನಲವಲನದ ಬಗೆಗಿನ ಎಲ್ಲಾ ಮಾಹಿತಿಗಳನ್ನು ನಾವು ಹೊಂದಿದ್ದರೂ ಈ ಮೂವತ್ತು ವರ್ಷಗಳಲ್ಲಿ ಆತನನ್ನು ಭಾರತಕ್ಕೆ ಕರೆತಲಿಕ್ಕಾಗಲಿ, ಮುಗಿಸುವುದಕ್ಕಾಗಲಿ ನಮಗೆ ಸಾಧ್ಯವಾಗಲಿಲ್ಲ.. ಏಕೆ? ಈ ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ 13 ವರ್ಷ, ಬಿಜೆಪಿ ನೇತೃವತ್ವದ ಸರಕಾರದ 15 ವರ್ಷ, ಕಾಂಗ್ರೆಸ್-ಬಿಜೆಪಿಯೇತರ ಸರಕಾರಗಳು ಎರಡು ವರ್ಷ ದೆಹಲಿಯಲ್ಲಿ ಆಡಳಿತ ನಡೆಸಿವೆ. ಯೋಚಿಸಿ.”
ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಯಾರೋ ಅಗಂತುಕರು ವಿಷಪ್ರಾಶನ ಮಾಡಿದ್ದು, ಆತ ಪಾಕಿಸ್ತಾನದ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ, ಆಸ್ಪತ್ರೆ ಸುತ್ತಮುತ್ತ ಭಾರೀ ಭದ್ರತೆ ಮಾಡಲಾಗಿದೆ ಎನ್ನುವ ಸುದ್ದಿ ನಿನ್ನೆ ಬಂದಿತ್ತು..
ಕ್ರಿಮಿನಲ್ ಚಟುವಟಿಕೆಗಳ ರೂವಾರಿ ದಾವೂದ್ ಇಬ್ರಾಹಿಂಗೆ ವಿಷಪ್ರಾಶನ ಮಾಡಲಾಗಿದೆ. ಇದರಿಂದ ಹಠಾತ್ ಆರೋಗ್ಯ ಕೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ನಿನ್ನೆ ಭಾರೀ ಸಂಚಲನ ಉಂಟು ಮಾಡಿತ್ತು. ಕಳೆದ ಎರಡು ದಿನಗಳಿಂದ ದಾವೂದ್ ಚಿಕಿತ್ಸೆ ಪಡೆಯುತ್ತಿದ್ದು, ವಿಷಪ್ರಾಶನವಾಗಿರಬಹುದು ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡಿದೆ. ಆದರೆ, ಈ ಬಗ್ಗೆ ಈವರೆಗೆ ಪಾಕಿಸ್ತಾನ ಸರಕಾರ ಬಾಯಿ ಬಿಟ್ಟಿಲ್ಲ. ಆದರೆ, ದಾವೂದ್ ಬಲಗೈ ಬಂಟ ಚೋಟಾ ಶಕೀಲ್ ಮಾತ್ರ, “ಈ ಸುದ್ದಿ ವದಂತಿ ಮಾತ್ರ” ಎಂದಿದ್ದಾನೆ.
ಸದ್ಯಕ್ಕೆ, ಆಸ್ಪತ್ರೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ದಾವೂದ್ ಇಬ್ರಾಹಿಂನನ್ನು ಆಸ್ಪತ್ರೆಯ ಮಹಡಿಯಲ್ಲಿ ಪ್ರತ್ಯೇಕವಾಗಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿದ್ದು, ಆಸ್ಪತ್ರೆಯ ಉನ್ನತ ಅಧಿಕಾರಿಗಳು ಮತ್ತು ಆತನ ಹತ್ತಿರದ ಕುಟುಂಬ ಸದಸ್ಯರನ್ನು ಮಾತ್ರ ಒಳ ಬಿಡಲಾಗಿದೆ ಎನ್ನುವ ವರದಿ ಇಂದೂ ಕೂಡ ಸದ್ದು ಮಾಡುತ್ತಲೇ ಇದೆ.
ಭಾರತಕ್ಕೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂಗಾಗಿ ಮುಂಬಯಿ ಪೊಲೀಸರು ಆತನ ಸಂಬಂಧಿಕರಾದ ಅಲಿಶಾ ಪಾರ್ಕರ್ ಮತ್ತು ಸಾಜಿದ್ ವಾಗ್ಲೆ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಮುಂಬಯಿನಲ್ಲಿ 1993ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಸ್ಫೋಟದಲ್ಲಿ 250 ಕ್ಕೂ ಹೆಚ್ಚು ಅಮಾಯಕ ನಾಗರಿಕರು ಮೃತಪಟ್ಟು, 750ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಭೀಕರ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ.ಅಲ್ಲಿಂದ ಆತ ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಎನಿಸಿಕೊಂಡಿದ್ದಾನೆ.ಆದರೆ ಈವರೆಗೆ ಈತ ಸೆರೆಸಿಕ್ಕಿಲ್ಲ.
ಗಮನಾರ್ಹ ಸಂಗತಿ ಎಂದರೆ, ಈ ಬಗ್ಗೆ ಪಾಕ್ ಮಾಧ್ಯಮಗಳು ಕೂಡ ವರದಿ ಮಾಡಿಲ್ಲ! ಭಾರತೀಯ ಮಾಧ್ಯಮಗಳು ಮಾತ್ರ ಕಳೆದ 48 ಗಂಟೆಗಳಿಂದ ಈ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಿವೆ.