ಅನ್ಯಪಕ್ಷಗಳ ಮುಖಂಡರಿಗೆ ಮುಂದುವರಿದ ಕಾಂಗ್ರೆಸ್ ಗಾಳ
ಬೆಂಗಳೂರು: 136 ಶಾಸಕರು ಸೇರಿದಂತೆ ಮಾಜಿ ಸಚಿವರು, ಶಾಸಕರು, ಮುಖಂಡರಿಂದ ಕಾಂಗ್ರೆಸ್ ತುಂಬಿ ತುಳುಕುತ್ತಿದ್ದರೂ ರಾಜ್ಯ ನಾಯಕರಿಗೆ ಆಪರೇಷನ್ ಹಸ್ತದ ದಾಹ ಇಂಗಿದಂತೆ ಕಾಣುತ್ತಿಲ್ಲ.
ಪಕ್ಷದ ಹಿರಿಯ ತಲೆ ಹಾಗೂ ಪ್ರಭಾವೀ ಸಚಿವರೊಬ್ಬರ ಸೂಚನೆ ಮೇರೆಗೆ ಮಧ್ಯವರ್ತಿಗಳನ್ನು ಬಿಟ್ಟು ಅನ್ಯಪಕ್ಷಗಳ ಮುಖಂಡರುಗಳಿಗೆ ಹಸ್ತಪಾಳೆಯ ಗಾಳ ಹಾಕುತ್ತಿದೆ ಎನ್ನುವ ಮಾಹಿತಿ ಸಿಕೆನ್ಯೂಸ್ ನೌ ಗೆ ಸಿಕ್ಕಿದೆ.
ಕಾಂಗ್ರೆಸ್ ಪಕ್ಷದಲ್ಲೇ ಅಧಿಕಾರದಿಂದ ವಂಚಿತರಾದ, ವಿಧಾನಸಭೆ ಮತ್ತು ಪರಿಷತ್ತಿನ ಶಾಸಕ- ಮುಖಂಡರ ದಂಡೇ ಇದ್ದರೂ, ಅನ್ಯಪಕ್ಷಗಳಿಂದ ಸೆಳೆಯಲಾಗುತ್ತಿರುವ ನಾಯಕರಿಗೆ ಅಧಿಕಾರ ಮತ್ತು ಇತರೆ ಆಮಿಷಗಳನ್ನು ನೀಡುವ ಭರವಸೆ ಮಾಡುತ್ತಿದ್ದಾರೆ.
ಅದರೆ, ಕಾಂಗ್ರೆಸ್ ಪಕ್ಷದಲ್ಲಿ ಈಗಿರುವ ಪರಿಸ್ಥಿತಿಯಲ್ಲಿ ಹಾಲಿ ಇರುವವರಿಗೇ ಅಧಿಕಾರ ಕೊಡುವುದು ಸಿಎಂ, ಡಿಸಿಎಂ ಅವರಿಗೆ ಕಷ್ಟವಾಗಿದೆ. ವಸ್ತುಸ್ಥಿತಿ ಹೀಗಿದ್ದರೂ ಆಪರೇಷನ್ ಹಸ್ತ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ.
ಅನ್ಯಪಕ್ಷಗಳ ಮುಖಂಡರಿಗೆ ಲೋಕಸಭೆ ಟಿಕೆಟ್!
ಆರ್‌ಎಸ್‌ಎಸ್, ಎಬಿವಿಪಿಯಲ್ಲಿ ಹಲವು ಸಮಯದಿಂದ ದುಡಿದು ಬಿಜೆಪಿಯಲ್ಲಿ ಅಧಿಕಾರದ ಹುದ್ದೆ ಹೊಂದಿರು ಬಿಜೆಪಿಯ ಇಬ್ಬರು ಹಿರಿಯ ನಾಯಕರಿಗೆ ಈ ಕೈ ಮಧ್ಯವರ್ತಿಗಳು ಬೆಲೆ ಬೀಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.
ಮಾಜಿ ಸಚಿವರು ಆಗಿರುವ ಆ ಇಬ್ಬರು ನಾಯಕರು ಪಕ್ಷಕ್ಕೆ ಬಂದರೆ ಲೋಕಸಭೆ ಚುನಾವಣೆಗೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು. ಅಲ್ಲದೆ; ಅವರು ಸ್ಪರ್ಧೆ ಮಾಡಲು ಇಚ್ಚಿಸಿದರೆ ಟಿಕೆಟ್ ಕೊಡಲಿಕ್ಕೂ ಆ ನಾಯಕರು ತುದಿಗಾಲ ಮೇಲೆ ನಿಂತಿದ್ದಾರೆ.
ಚಿಕ್ಕಮಗಳೂರು ಹಾಗೂ ಮೂಲತಃ ಬಾಗಲಕೋಟೆ ಜಿಲ್ಲೆಯವರಾದ, ಬೆಂಗಳೂರಿನಿಂದ ಪೂರ್ವ ದಿಕ್ಕಿನ ಮೀಸಲು ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದವರಿಗೆ ಆಪರೇಷನ್ ಹಸ್ತದ ಬಲೆ ಬೀಸಲಾಗಿದೆ.
ಈ ಪೈಕಿ ಒಬ್ಬರಿಗೆ ಕೋಲಾರ ಮೀಸಲು ಕ್ಷೇತ್ರ, ಇನ್ನೊಬ್ಬರಿಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ನೀಡಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ. ಈ ಇಬ್ಬರು ನಾಯಕರಿಗೆ ಟಿಕೆಟ್ ಜತೆಗೆ ಇಡೀ ಚುನಾವಣಾ ವೆಚ್ಚ ಭರಿಸುವ ಭರವಸೆ ನೀಡಿದೆ ಎಂದು ಹೇಳಲಾಗಿದೆ.
ಆದರೆ, ಸಂಘ ಪರಿವಾರದಿಂದ ಬಂದಿರುವ ಹಾಗೂ ತಳಮಟ್ಟದಿಂದ ಬೆಳೆದು ಬಂದಿರುವ ಈ ನಾಯಕರಿಬ್ಬರೂ ಅಷ್ಟು ಸುಲಭವಾಗಿ ಕಾಂಗ್ರೆಸ್ ಬಲೆಗೆ ಬೀಳುತ್ತಾರಾ? ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಗೆ ಅಭ್ಯರ್ಥಿಗಳ ಕೊರತೆ
ಗ್ಯಾರೆಂಟಿಗಳ ಜಾರಿಯಿಂದ ಬೀಗುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈಗ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಪಕ್ಷದಲ್ಲಿ ಕೆಲವರು ಇದ್ದಾರೆ, ಅವರು ಹಳೆ ಮುಖಗಳು. ನರೇಂದ್ರ ಮೋದಿ ಪ್ರಭಾವದಲ್ಲಿ ಜನರು ಅವರಿಗೆ ಮಣೆ ಹಾಕುತ್ತಾರ ಎನ್ನುವ ಅನುಮಾನ ಕೈ ಪಕ್ಷವನ್ನು ಕಾಡುತ್ತಿದೆ.
ಹೀಗಾಗಿ, ಕೊನೆಯ ಪಕ್ಷ ಹತ್ತರಿಂದ ಹದಿನೈದು ಕ್ಷೇತ್ರಗಳಲ್ಲಿ ಹೊಸಬರನ್ನು ಅದರಲ್ಲೂ ಅನ್ಯಪಕ್ಷಗಳ ಪ್ರಬಲ ನಾಯಕರನ್ನು ಕರೆತಂದು ಟಿಕೆಟ್ ಕೊಡುವ ಆಲೋಚನೆ ಕಾಂಗ್ರೆಸ್ ಪಕ್ಷಕ್ಕೆ ಇದೆ.
ಕರ್ನಾಟಕದಿಂದ ಕೊನೆಪಕ್ಷ 20 ಕ್ಷೇತ್ರಗಳನ್ನು ಗೆಲ್ಲಲೇಬೇಕು ಎನ್ನುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಆದರೆ, ಬಿಜೆಪಿ- ಜೆಡಿಎಸ್ ಮೈತ್ರಿಕೂಟ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ.
20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ
ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂಬ ಕಾರಣಕ್ಕಾಗಿ ಅನ್ಯಪಕ್ಷಗಳ ಮುಖಂಡರನ್ನು ಸೆಳೆಯುವ ತಂತ್ರಕ್ಕೆ ಮತ್ತೆ ಚಾಲನೆ ಕೊಟ್ಟಿದೆ.
ಸಿಎಂ, ಡಿಸಿಎಂ ಅವರಿಬ್ಬರೂ ದೆಹಲಿಯ ನಾಯಕರೊಂದಿಗೆ ಚರ್ಚಿಸಿ ಹಿಂತಿರುಗುತ್ತಿದ್ದಂತೆ ಅನ್ಯಪಕ್ಷಗಳ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು, ಶಾಸಕರು ಮತ್ತು ಸಂಸದರನ್ನು ಸೆಳೆಯಲು ಪ್ರಭಾವೀ ನಾಯಕರು ರಾತ್ರಿ ಕಸರತ್ತು ನಡೆಸಿದ್ದಾರೆ.
ಕೆಲ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್ ಸೇರಿ ಕೆಲ ನಾಯಕರು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ.
ಪ್ರತಿಷ್ಠೆಯಾದ ಲೋಕಸಭಾ ಚುನಾವಣೆಕೆಪಿಸಿಸಿ ಅಧ್ಯಕ್ಷರಿಗೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿದೆ. ವಿಧಾನಸಭಾ ಚುನಾವಣಾ ಜಯಭೇರಿಯನ್ನೇ ಲೋಕಸಭಾ ಚುನಾವಣೆಯಲ್ಲೂ ಸಾಧಿಸಲು ತಂತ್ರ ರೂಪಿಸಿದ್ದಾರೆ.
ದೆಹಲಿಯಲ್ಲಿ ವರಿಷ್ಠರೊಂದಿಗೆ ನಡೆದ ಸಭೆಯಲ್ಲಿ ಆಪರೇಷನ್ ಹಸ್ತಕ್ಕೆ ಹಸಿರು ನಿಶಾನೆ ಪಡೆದಿರುವುದಲ್ಲದೆ, ಇದರಿಂದಾಗಿ ನಿಗಮ-ಮಂಡಳಿ ನೇಮಕಾತಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳ ಪುನರ್ ರಚನೆಯೂ ಮುಂದಕ್ಕೆ ಹೋಗಿದೆ.
ನಿಗಮ-ಮಂಡಳಿ ನೇಮಕ ಮತ್ತೆ ಮುಂದಕ್ಕೆ
ಪಕ್ಷದ 39 ಶಾಸಕರಿಗೆ ಅಧಿಕಾರ ನೀಡುವ ಪಟ್ಟಿ ಅಂತಿಮಗೊಂಡು ಇನ್ನೇನು ಪ್ರಕಟಗೊಳ್ಳಬೇಕೆಂಬ ಸಮಯದಲ್ಲಿ ವರಿಷ್ಠರು ಆ ಪಟ್ಟಿಗೆ ತಡೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲೇಬೇಕೆಂಬ ಗುರಿ ಇಟ್ಟುಕೊಂಡಿರುವ ಎಐಸಿಸಿ, ರಾಜ್ಯ ನಾಯಕರಿಗೆ ಟಾರ್ಗೆಟ್ ನೀಡಿ ಮುಂದುವರಿಯುವಂತೆ ತಿಳಿಸಿದೆ.
Comments 1