ಅರಣ್ಯರೋಧನವಾಗಿದೆ ಅತಿಥಿ ಉಪನ್ಯಾಸಕರ ಪಾಡು
cknewsnow news and views by Dr. Guruprasad Hawaldar
ಸೇವಾ ಭದ್ರತೆ, ಸೇವೆಯ ಕಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 36 ದಿನಗಳಿಂದ ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 11000 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಹೋರಾಟ ನಡೆಸುತ್ತಿದ್ದಾರೆ.
ಇಂದಲ್ಲ ನಾಳೆ ಉದ್ಯೋಗ ಕಾಯಂ ಆಗಬಹುದೆನ್ನುವ ನಿರೀಕ್ಷೆಯಲ್ಲಿ 15–20 ವರ್ಷಗಳನ್ನು ಕಳೆದವರೂ ಇದ್ದಾರೆ. ಕನಿಷ್ಠ ಗೌರವಧನ ಪಡೆದು ಹತ್ತಾರು ವರ್ಷ ಕಾರ್ಯನಿರ್ವಹಿಸಿದವರೂ ಉಂಟು. ಅವರ ನಿರೀಕ್ಷೆ ಈವರೆಗೆ ಮರೀಚಿಕೆಯಾಗಿಯೇ ಉಳಿದಿದ್ದವು. ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಆಗಾಗ ಧರಣಿ, ಮುಷ್ಕರ ನಡೆಸಿದ್ದರಿಂದ ಸಣ್ಣಪುಟ್ಟ ಬೇಡಿಕೆಗಳು ಈಡೇರಿದ್ದು ಬಿಟ್ಟರೆ ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗಿಯೇ ಉಳಿದುಬಿಟ್ಟಿದೆ.
ಮೂಗಿಗೆ ತುಪ್ಪ ಸವರಿದ ಸರಕಾರ
ಈ ಬಾರಿ ಸೇವಾ ಭದ್ರತೆಗಾಗಿ ಅಚಲವಾಗಿ ನಿಂತು ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ ಹೂಡಿದ್ದರು ಅತಿಥಿ ಉಪನ್ಯಾಸಕರು. ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿಯೂ ಸಮಾರು 8000 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದ್ದರು.
ಸರಕಾರ ತನ್ನ ಪ್ರಣಾಳಿಕೆಯಲ್ಲಿ ನುಡಿದಂತೆ ನಡೆಯುತ್ತೇವೆ, ಯಾವುದೇ ತೊಂದರೆ ಆಗದ ರೀತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ನೀಡುತ್ತೇವೆ ಎನ್ನುತ್ತಾ ಉನ್ನತ ಶಿಕ್ಷಣ ಸಚಿವರು ಡಿಸೆಂಬರ್ ೨೯ರಂದು ಸುದ್ದಿಗೋಷ್ಠಿ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇವೆ ತಿಳಿಸಿದ್ದಾರೆ. ಅದರೆ ವಾಸ್ತವಕ್ಕೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
ಅತಿಥಿ ಉಪನ್ಯಾಸಕರಿಗೆ 5,000 ರೂ. ಹೆಚ್ಚಳ
ಅತಿಥಿ ಉಪನ್ಯಾಸಕರು ಕೇಳಿದ್ದು ಸೇವಾ ಭದ್ರತೆ. ಅದನ್ನು ಬಿಟ್ಟು ಘೋಷಣೆ ಮಾಡಿದ್ದು- ವೇತನ, ರಜೆ, ಕೃಪಾಂಕ, ಆರೋಗ್ಯ ವಿಮೆ. ಯಾವುದೇ ಬದುಕಿನ ಭದ್ರತೆ ಕಲ್ಪಿಸಿಲ್ಲ, ಮತ್ತೆ ಅದೇ ರೀತಿಯ ಅದೇ ಹಳೆಯ ಪದ್ಧತಿಗೆ ಅತಿಥಿಗಳನ್ನು ನೂಕುವ ಕೆಲಸಕ್ಕೆ ಕೈ ಹಾಕಿದೆ ಸರಕಾರ.
ಸರಕಾರದ ನಿರ್ಧಾರ ತಿರಸ್ಕಾರ
ಸಚಿವರ ಈ ಪ್ರಸ್ತಾಪವನ್ನು ಅತಿಥಿ ಉಪನ್ಯಾಸಕರ ಸಂಘ ನೇರವಾಗಿ ತಿರಸ್ಕರಿಸಿದೆ. ಮತ್ತೆ ಸೇವಾ ಭದ್ರತೆಗಾಗಿ ಜನವರಿ 1ರಂದು ತುಮಕೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ನಿರ್ಧಾರ ಘೋಷಣೆ ಮಾಡಿದ್ದಾರೆ.
ಮುಖ್ಯವಾಗಿ ಹೋರಾಟ ಇದ್ದದ್ದು ಸೇವಾ ಭದ್ರತೆಗಾಗಿ, ಸರಕಾರ ಅದನ್ನೇ ಒಪ್ಪಿಲ್ಲ. ಸಮಸ್ಯೆ ಬಗೆಹರಿಸಲು ಉನ್ನತ ಶಿಕ್ಷಣ ಇಲಾಖೆಗೆ, ಸಚಿವರಿಗೆ ಮನಸ್ಸಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿರುವ ಅಂಶ.
15 -20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಬಹಳಷ್ಟು ಜನ 45 ರಿಂದ 50 ವರ್ಷ ವಯಸ್ಸು ಮೀರಿದವರು ಇದ್ದಾರೆ. ಅವರು ಇತರೆ ನೌಕರಿಗೆ ಪರೀಕ್ಷೆ ಬರೆಯುವ ವಯೋಮಾನ ಕಳೆದುಕೊಂಡಿದ್ದಾರೆ. ಕೃಪಾಂಕದಿಂದಾಗಿ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಏಕೆಂದರೆ, ನೇಮಕಾತಿಗಳು ನಡೆಯುವುದು ಏಳೆಂಟು ವರ್ಷಕ್ಕೊಮ್ಮೆ.
ತಿಂಗಳಿಗೆ 400 ರೂ. ಕಟ್ಟಿದರೆ 5 ಲಕ್ಷ ರೂಪಾಯಿ ಮೌಲ್ಯದ ಆರೋಗ್ಯ ವಿಮೆ ಸಿಗುತ್ತದೆ. ಇದು ಕೂಡ ಪ್ರಯೋಜನವಿಲ್ಲ. ಏಕೆಂದರೆ ಈಗಾಗಲೇ ಒಂದು ಖಾತೆ ತೆರೆದು ವರ್ಷಕ್ಕೆ 399 ಕಟ್ಟಿದರೆ 10 ಲಕ್ಷ ವಿಮೆ ದೊರೆಯುತ್ತದೆ.
60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ನಿವೃತ್ತಿಯಾಗುವಾಗ 5 ಲಕ್ಷ ರೂ. ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳುತ್ತಾರೆ. ಅದರೆ ಸರಕಾರ ನೀಡುವ ಈ ಇಡಗಂಟು ನಿವೃತ್ತಿ ಸಮಯದಲ್ಲಿ ಇಂದಿನ ದಿನಮಾನಗಳಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವೇ?
ಒಂದು ವೇಳೆ ಒಬ್ಬ ಅತಿಥಿ ಉಪನ್ಯಾಸಕರ 60 ವರ್ಷ ತುಂಬುವದಕ್ಕಿಂತ ಮುನ್ನವೇ, ಅಂದರೆ; 59 ವರ್ಷ ದಲ್ಲಿದ್ದಾಗಲೇ ಪ್ರತೀ ವರ್ಷ ನೆಡೆಸುವ ಕೌನ್ಸೆಲಿಂಗ್ʼನಲ್ಲಿ ಈ ಉದ್ಯೋಗ ಸಿಗದೇ ಇದ್ದರೆ ಕೊಡುವ 5 ಲಕ್ಷ ರೂಪಾಯಿ ಇಡುಗಂಟು ಕೂಡ ಸಿಗುವುದಿಲ್ಲ.
ಅತಿಥಿ ಉಪನ್ಯಾಸಕರ ವೇತನದ ವಿಚಾರಕ್ಕೆ ಬಂದರೆ UGC ನಿಯಮಾವಳಿ ಪ್ರಕಾರದಂತೆ ಪದವಿ ತರಗತಿಯನ್ನು ತೆಗೆದುಕೊಳ್ಳುವ ಉಪನ್ಯಾಸಕರಿಗೆ ಕನಿಷ್ಠ 1500 ರೂ. ನೀಡಬೇಕು. ಈಗಾಗಲೇ ಯುಜಿಸಿ ನಿಯಮದಂತೆ ಸರಕಾರದ ನೇಮಕಾತಿಯಿಂದ ಆಯ್ಕೆಯಾದಂತಹ ಅಧ್ಯಾಪಕರಿಗೆ ತಿಂಗಳಿಗೆ ವೇತನ ಲಕ್ಷ ರೂಪಾಯಿಗೂ ಹೆಚ್ಚು.
IAS ಅಧಿಕಾರಿಗಳ ಮಾತು ಕೇಳಿ ಗಿಳಿಪಾಠ ಒಪ್ಪಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್
ಅತಿ ಕನಿಷ್ಠ ವೇತನ, ಗರಿಷ್ಠ ಕೆಲಸ
ಅವರಷ್ಟೇ ಸ್ನಾತಕೋತ್ತರ ಪದವಿ, ಎಂಫಿಲ್ ಡಾಕ್ಟರೇಟ್ ಹಾಗೂ ಹೆಚ್ಚಿನ ಅನುಭವವನ್ನು ಅತಿಥಿ ಉಪನ್ಯಾಸಕರು ಪಡೆದಿದ್ದರೂ ಸಮಾನ ವೇತನ ಎನ್ನುವುದು ಕನಸಿನ ಮಾತಾಗಿಯೇ ಉಳಿದಿದೆ. ಅದೇ ಸರಕಾರಿ ನೇಮಕಾತಿ ಮಾಡಿಕೊಂಡರೆ, ಅವರಿಗೆ ಕೊಡುವ ಲಕ್ಷ ರೂ. ವೇತನ ನೀಡುವಲ್ಲಿ ಕನಿಷ್ಠ 6-8 ಜನ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡು ಪಾಠ ಪ್ರವಚನ ನಿರ್ವಹಿಸಬಹುದು ಎಂಬುದು ಸರಕಾರದ ಲೆಕ್ಕಾಚಾರ. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಉಳಿತಾಯ, ವಿದ್ಯಾರ್ಥಿಗಳಿಗೆ ಅನ್ಯಾಯ.
ಸರಕಾರ ಪದವಿ ಕಾಲೇಜುಗಳ ಮಕ್ಕಳ ಭವಿಷ್ಯ ನಿಂತಿರುವುದು ಅತಿಥಿ ಉಪನ್ಯಾಸಕರ ಮೇಲೆಯೇ. ಅವರು ಇಲ್ಲದೆ ಹೋದರೆ ಉಪನ್ಯಾಸಕರಿಗಾಗಿ ತತ್ವಾರ ಮಿತಿ ಮೀರುತ್ತಿತ್ತು. ಎಷ್ಟೋ ಜನ ಅತಿಥಿ ಉಪನ್ಯಾಸಕರು ಒಂದು ಬಾರಿ ಆಯ್ಕೆಯಾದರೆ, ಮತ್ತೆ ಮರು ವರ್ಷ ಅರ್ಜಿ ಸಲ್ಲಿಸಬೇಕು. ಆಗ ಅವರೇ ಆಯ್ಕೆಯಾಗುತ್ತಾರೆ ಎಂಬ ಭರವೆಸಯೂ ಇರುವುದಿಲ್ಲ.
ಇತ್ತೀಚೆಗೆ ಗ್ರಾಮ ಪಂಚಾಯತಿ ಕೆಲಸ ಮಾಡುತ್ತಿರುವರಿಗೆ ಸೇವಾ ಭದ್ರತೆ ಘೋಷಣೆ ಮಾಡಿದೆ ಹಾಗೆಯೇ ,ಇಂಧನ ಇಲಾಖೆಯು ತನ್ನಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುವ ನೌಕರರಿಗೆ ಸೇವಾ ಭದ್ರತೆ ನೀಡಲು ಸಮಿತಿ ರಚಿಸಿದೆ. ಅದರೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯಾಗಲಿ, ಕಾಯಾಮಾತಿ ಮಾಡಲು ಅವಕಾಶ ಇಲ್ಲ ಎನ್ನುತ್ತಿದೆ ಸರಕಾರ. ಇದು ಸಹಜ ನ್ಯಾಯಕ್ಕೆ ವಿರುದ್ಧವಾಗಿರುವ ಅಂಶ.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ
ಸಮಾನ ಕೆಲಸಕ್ಕೆ- ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ರಾಜ್ಯ ಸರಕಾರ ಕಾಯಂ ಉಪನ್ಯಾಸಕರಿಗೆ ನೀಡುವ ಸಂಬಳದ ಜತೆಗೆ, ಅವರಿಗೆ ನೀಡುವ ಎಲ್ಲಾ ಸೇವಾ ಭದ್ರತೆಗಳನ್ನು ಅತಿಥಿ ಉಪನ್ಯಾಸಕರಿಗೂ ಒದಗಿಸಲು, ” ಕೆಸಿಎಸ್ಆರ್ 1977ರ ನಿಯಮ (1), (2) (3) ಮತ್ತು 14ರ ಅಡಿಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ ತಾತ್ಕಾಲಿಕ ನೌಕರರನ್ನು ಸೇವೆಯಲ್ಲಿ ವಿಲೀನಗೊಳಿಸಲು ಅವಕಾಶವಿದೆ. ಸಂವಿಧಾನದ ಕಲಂ 209ರ ಪ್ರಕಾರ ತಾತ್ಕಾಲಿಕ ನೌಕರರನ್ನು ಕಾಯಂ ಮಾಡಲು ಇಲಾಖೆಯ “ಸಿ ಮತ್ತು ಆರ್’ ನಿಯಮಾವಳಿಗೆ ತಿದ್ದುಪಡಿ ಮಾಡಬಹುದು. ಆದರೆ, ಉನ್ನತ ಶಿಕ್ಷಣ ಸಚಿವರು ಹಾಗೂ ಇಲಾಖೆ ಈ ನಿಯಮ ಜಾರಿ ಮಾಡಲು ಸಾಧ್ಯವಿದೆಯಾ? ಎಂದು ಯೋಚನೆಯಾಗಲಿ.
ತಜ್ಞರ ಸಲಹೆಯನ್ನೇ ಪಡೆಯದೆ ವೇತನ, ವಿಮೆ, ರಜೆ,ಕೃಪಾಂಕ ಘೋಷಣೆ ಮಾಡಿ ಸೇವಾಭದ್ರತೆ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವ ಮನಸ್ಸು ಮಾಡಲಿಲ್ಲ ಸರಕಾರ. ರಾಜ್ಯದ ಪದವಿ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಅತಿಥಿ ಉಪನ್ಯಾಸಕರ ಕೊಡುಗೆ ಅಪಾರ. ಆದರೆ, ಸರಕಾರ ಬೋಧನೆಯಲ್ಲೂ ಅಗ್ಗದ, ಚೌಕಾಸಿ ಮನಃಸ್ಥಿತಿಯ ಮೂಲಕ ವರ್ತಿಸುತ್ತಿದೆ.
15-20 ವರ್ಷಗಳಿಂದ ಕಡಿಮೆ ಸಂಬಳದಲ್ಲಿಯೂ ವೃತ್ತಿಬದ್ಧತೆ ಮೆರೆದ, ಪಾಠ, ಬೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಪರಿಗಣಿಸಿ ಅವರ ಮುಖ್ಯ ಬೇಡಿಕೆಯನ್ನು ಪರಿಗಣಿಸದೇ ಇರುವುದು ಅತ್ಯಂತ ನೋವಿನ ಸಂಗತಿ.
34 ವರ್ಷಗಳ ನಂತರ ಕೇಂದ್ರ ಸರಕಾರ ಜಾರಿಗೆ ತಂದಂತಹ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ವಿರೋಧಿಸುವ , ಕರ್ನಾಟಕ ರಾಜ್ಯದ ಹೊಸ ಶಿಕ್ಷಣ ನೀತಿಯನ್ನೇ ಅಳವಡಿಸಿಕೊಳ್ಳುತ್ತೇವೆ ಎನ್ನುವ ಸರಕಾರ, ಅದನ್ನು ಪದವಿ ಶಿಕ್ಷಣದಲ್ಲಿ ಸಮರ್ಥವಾಗಿ ಕಾರ್ಯರೂಪಕ್ಕೆ ತರುವಲ್ಲಿ ಅತಿಥಿ ಉಪನ್ಯಾಸಕರ ಪಾತ್ರ ಬಹು ದೊಡ್ಡದು ಎನ್ನುವುದನ್ನು ಸರಕಾರ ಮರೆಯುತ್ತಿದೆ.
ಯಾಕೆಂದರೆ, ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಅತಿಥಿ ಉಪನ್ಯಾಸಕರಿಂದಲೇ ಕಾಲೇಜುಗಳು ನಡೆಯುತ್ತಿವೆ. ಈ ನೀತಿಯು ಯಶಸ್ವಿಯಾಗಬೇಕಾದರೆ ಇವರಿಗೆ ಸೇವಾ ಭದ್ರತೆ ನೀಡುವುದು ಬಹಳ ಮುಖ್ಯ.ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯ ಮಂತ್ರಿಗಳಾಗಲಿ, ಉನ್ನತ ಶಿಕ್ಷಣ ಸಚಿವರು ಆಗಲಿ ನಿರ್ಧಾರ ಕೈಗೊಳ್ಳದೇ ಇರುವುದು ವಿಪರ್ಯಾಸ.