70 ಕ್ಕೂ ಹೆಚ್ಚು ಕಂಪೆನಿಗಳು ಭಾಗಿ ಎಂದ ರಕ್ಷಾ ರಾಮಯ್ಯ
ಚಿಕ್ಕಬಳ್ಳಾಪುರ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನವರಿ 13 ರಂದು ಬೃಹತ್ ಉದ್ಯೋಗ ಮತ್ತು ಸಾಲ ಮೇಳ ಆಯೋಜಿಸಲಾಗಿದ್ದು, 70 ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಳ್ಳಲಿರುವ ಈ ಮೇಳ ಯುವ ಜನಾಂಗದ ಸ್ವಾವಲಂಬಿ ಬದುಕಿಗೆ ಭದ್ರ ಬುನಾದಿಯಾಗಲಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಹೇಳಿದ್ದಾರೆ.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಉದ್ಯೋಗ ಮೇಳದ ಜೊತೆಗೆ ಶೈಕ್ಷಣಿಕ ಸಾಲ, ನವೋದ್ಯಮಗಳಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಯಕ ಸಂಸ್ಕೃತಿಗೆ ಒತ್ತು ನೀಡಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂಬ ಆಶಯ ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ಕಳೆದ 2019ರ ಅಂಕಿ ಅಂಶಗಳಂತೆ ದೇಶದಲ್ಲಿ ನಿರುದ್ಯೋಗ ಪ್ರಮಾಣ 7.7% ಕ್ಕೆ ಏರಿಕೆಯಾಗಿದ್ದು, 45 ವರ್ಷಗಳಲ್ಲೇ ಇದು ಅತ್ಯಧಿಕವಾಗಿತ್ತು. ದುರಂತವೆಂದರೆ 2023 ರ ನವೆಂಬರ್ ನಲ್ಲಿ ಈ ಪ್ರಮಾಣ 10.05% ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಉದ್ಯೋಗ ದರ 6.2% ರಿಂದ 10.82% ಕ್ಕೆ ಹೆಚ್ಚಳವಾಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪ್ರಸ್ತುತ ಬಿಜೆಪಿ ಆಡಳಿತವಿರುವ ಹರಿಯಾಣ 37.4 ಶೇ ರಷ್ಟು ನಿರುದ್ಯೋಗ ಪ್ರಮಾಣವಿದ್ದು, ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಆತಂಕ ಮೂಡಿಸುತ್ತಿದೆ ಎಂದರು.
ಕರ್ನಾಟಕದಲ್ಲಿ ನಿರುದ್ಯೋಗ ದರ 2023 ರ ಮಾರ್ಚ್ ನಲ್ಲಿ 2.31% ರಷ್ಟಿತ್ತು. ಕರ್ನಾಟಕದ ಜಿಡಿಪಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೊಡುಗೆ 1.1% (3,525 ಕೋಟಿ) ರಷ್ಟಿದೆ. ಚಿಕ್ಕಬಳ್ಳಾಪುರದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು (ಪಶುಸಂಗೋಪನೆ, ಅರಣ್ಯ, ಹೈನುಗಾರಿಕೆ) ರಾಜ್ಯದ ಕೊಡುಗೆ 2.7% (1156 ಕೋಟಿ), ಕೈಗಾರಿಕೆ (ಉತ್ಪಾದನೆ, ನಿರ್ಮಾಣ, ಗಣಿಗಾರಿಕೆ) ಕೊಡುಗೆ 1% (713 ಕೋಟಿ). ಕ್ಷೀರ ಕ್ರಾಂತಿ, ಪುಷ್ಪೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಯುವ ಸಮೂಹಕ್ಕೆ ಉದ್ಯೋಗ ದೊರಕಿಸಿಕೊಟ್ಟು ಚಿಕ್ಕಬಳ್ಳಾಪುರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ 70 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ಪ್ರಮುಖ 5 ಬ್ಯಾಂಕ್‌ಗಳು ಸಾಲ ಸೌಲಭ್ಯ ಒದಗಿಸಲು ಮುಂದಾಗಿವೆ. ಸಂದರ್ಶನದ ಕಾರ್ಯಕ್ಷಮತೆ, ಕೌಶಲ್ಯ, ಶಿಕ್ಷಣದ ಆಧಾರದ ಮೇಲೆ 16,000 ರಿಂದ 1 ಲಕ್ಷ ರೂಪಾಯಿವರೆಗೆ ವೇತನ ದೊರೆಯುವ ಉದ್ಯೋಗಗಳನ್ನು ದೊರಕಿಸಿಕೊಡಲು ಒತ್ತು ನೀಡಲಾಗುತ್ತಿದೆ. ನವೋದ್ಯಮಗಳ ಬೆಳವಣಿಗೆ, ಶೈಕ್ಷಣಿಕ ಸಾಲಗಳ ಮೇಲೂ ಗಮನಹರಿಸಿಸಲಾಗಿದೆ. ಉದ್ಯೋಗ ಮೇಳಕ್ಕೆ ಈಗಾಗಲೇ ಆನ್‌ಲೈನ್ ನೋಂದಣಿ ಆರಂಭವಾಗಿದೆ ಎಂದರು ಅವರು.
ಪ್ರಮುಖವಾಗಿ ಹೋಂಡಾ ಮೋಟಾರ್ಸ್, ವಿವಾ ಮೋಟಾರ್ಸ್, ಅಪೊಲೊ ಹೋಮ್‌ಕೇರ್, ರಿಲಯನ್ಸ್ ರಿಟೇಲ್, ಮೊಟೊರೊಲಾ, ಜಸ್ಟ್ ಡಯಲ್ ಲಿಮಿಟೆಡ್, ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವೀಸಸ್ ಲಿಮಿಟೆಡ್, ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್, ವಿಸ್ಟ್ರಾನ್ ಇನ್ಫೋಕಾಮ್, 1. ರಾಯಲ್ ಮಾರ್ಟ್, ಟಾಟಾ ವಿಸ್ಟ್ರಾನ್, ಬಿಗ್ ಬಾಸ್ಕೆಟ್ ನಂತಹ ಕಂಪನಿಗಳು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಮತ್ತು ದೇವೇನಹಳ್ಳಿ ಆಸು ಪಾಸಿನಲ್ಲಿ ಉದ್ಯೋಗ ದೊರಕಿಸಿಕೊಡಲಿದೆ ಎಂದು ಅವರು ಹೇಳಿದರು.
ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್.ಡಿ.ಎಫ್.ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಮುತ್ತೂಟ್ ಹೌಸಿಂಗ್ ಲೋನ್ ಹಣಕಾಸು ಸೇವೆಗಳು, ಫೆಡರಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಇಂಡಸ್‌ಇಂಡ್ ಬ್ಯಾಂಕ್ ಗಳು ಸಾಲ ಸೌಲಭ್ಯ ಒದಗಿಸುತ್ತಿವೆ ಎಂದು ತಿಳಿಸಿದರು.