ಐತಿಹಾಸಿಕ ಮಿಷನ್ ಭಾಗವಾದ ಹಳ್ಳಿ ಪ್ರತಿಭೆಗಳು
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆ ಮತ್ತು ನಿರೀಕ್ಷೆಗಳ ಪ್ರತೀಕವಾದವಾದ ಇಸ್ರೋ ಇನ್ನೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ. ಆ ಮೈಲುಗಲ್ಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹೆಜ್ಜೆಗುರುತುಗಳು ಮೂಡಿವೆ.
ಗುಡಿಬಂಡೆ ತಾಲೂಕಿನ ಗುರ್ರಪ್ಪ ಹಾಗೂ ಗೌರಿಬಿದನೂರಿನ ಶ್ರೀನಾಥ ಅವರು ಈ ಮಹೋನ್ನತ ಮಿಷನ್ ನಲ್ಲಿ ಕಾರ್ಯ ನಿರ್ವಹಣೆ ಮಾಡಿ ನಮ್ಮ ಜಿಲ್ಲೆಗೆ ಗರಿಮೆಯನ್ನು ಹೆಚ್ಚಿಸಿದ್ದಾರೆ.
ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಯಾಗಿದ್ದ ಆದಿತ್ಯ ನೌಕೆ ನಿಗದಿತ ಎಲ್-1 ಪಾಯಿಂಟ್ ತಲುಪಿದ್ದು, ಇಸ್ರೋ ಮಿಷನ್ ಯಶಸ್ವಿಯಾಗಿದೆ. ಈ ಮಿಷನ್ ನ ವಿಜ್ಞಾನಿಗಳ ತಂಡದಲ್ಲಿ ಕೆಲಸ ಮಾಡಿದ್ದ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಗ್ರಾಮದ ಗುರ್ರಪ್ಪ ನಮ್ಮೆಲ್ಲರ ಹೆಮ್ಮೆಗೆ ಕಾರಣರಾಗಿದ್ದಾರೆ.
ಚಂದ್ರಯಾನ-3 ಮಿಷನ್ ಬಳಿಕ ಇಸ್ರೋ ಈ ಮಹತ್ವದ ಸಾಧನೆ ಮಾಡಿದ್ದು, ಆದಿತ್ಯ ನೌಕೆಯು ಸೂರ್ಯನ ಅಧ್ಯಯನ ಆರಂಭಿಸಲಿರುವ ಮೊದಲ ನೌಕೆ ಆಗಿದೆ. ವಿಶೇಷ ಎಂದರೆ; ಚಂದ್ರಯಾನ-3 ಯಶಸ್ವಿಯಾದ ಕೇವಲ ಹತ್ತೇ ದಿನಗಳಲ್ಲಿ ಆದಿತ್ಯ ಎಲ್-1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಸುದೀರ್ಘ 126 ದಿನಗಳ ಬಳಿಕ ನೌಕೆ ತನ್ನ ಗುರಿಯನ್ನು ಮುಟ್ಟಿದೆ.
𝐈𝐧𝐝𝐢𝐚, 𝐈 𝐝𝐢𝐝 𝐢𝐭. 𝐈 𝐡𝐚𝐯𝐞 𝐫𝐞𝐚𝐜𝐡𝐞𝐝 𝐭𝐨 𝐦𝐲 𝐝𝐞𝐬𝐭𝐢𝐧𝐚𝐭𝐢𝐨𝐧!
— ISRO InSight (@ISROSight) January 6, 2024
Aditya-L1 has successfully entered the Halo orbit around the L1 point.#ISRO #AdityaL1Mission #AdityaL1 pic.twitter.com/6gwgz7XZQx
ಇಂಥಹ ಮಹಾನ್ ಕಾರ್ಯದಲ್ಲಿ ತಾವೂ ಭಾಗಿಯಾಗಿ, ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಗುರ್ರಪ್ಪ ಅವರು ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಇಡೀ ಇಸ್ರೋ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದಿಸಿದ್ದಾರೆ.
ಗುರಪ್ಪ ಅವರು ಗಗನನೌಕೆಯ ನಿರ್ವಹಣಾ ತಂತ್ರಜ್ಞ (Spacecraft operation manager) ಆಗಿದ್ದು, ನಿಯಂತ್ರಣ ಕೇಂದ್ರದಲ್ಲಿ ಮಿಷನ್ ಆಗುಹೋಗುಗಳನ್ನು ಬಹಳ ಜತನವಾಗಿ ಗಮನಿಸುತ್ತಾರೆ. ಹಾಗೆಯೇ, ಗೌರಿಬಿದನೂರು ತಾಲೂಕಿನ ಶ್ರೀನಾಥ ಅವರು ದತ್ತಾಂಶ ಸ್ವೀಕರಿಸುವ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾರೆ.
ಯಾರು ಈ ಗುರ್ರಪ್ಪ?
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ಗ್ರಾಮದವರು. ಅತ್ಯಂತ ಬಡ, ಕೃಷಿ ಕುಟುಂಬದಲ್ಲಿ ಜನಿಸಿದ ಅವರು; ವಿಶೇಷ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.
ಇಸ್ರೋ ನಿರ್ಮಿತ ಸಂಪೂರ್ಣ ಸ್ವದೇಶಿ ಉಪಗ್ರಹ ಮಂಗಳನ ಅಂಗಳಕ್ಕೆ ಮೊದಲ ಯತ್ನದಲ್ಲಿ ಯಶಸ್ವಿಯಾಗಿ ಇಳಿದ ನೌಕೆಯ ನಿರ್ಮಾಣದಲ್ಲಿ ಜೆ.ಸಿ.ಗುರಪ್ಪ ವಿಶೇಷ ತಂತ್ರಜ್ಞರಾಗಿ ಕರ್ತವ್ಯ ನಿರ್ವಹಿಸಿದ್ದರು.
ಬಿಎಂಎಸ್ ಎಂಜಿಯರಿಂಗ್ ಕಾಲೇಜಿನಿಂದ ಬಿಇ ಪದವೀಧರರಾದ ಅವರು, ಬೆಂಗಳೂರಿನ ಐಟಿಐನಲ್ಲಿ ಅಪ್ರೆಂಟಿಸ್ ಟ್ರೈನಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದರು.
1990ರಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳ ನೌಕೆಯ ನಿಯಂತ್ರಣ ಕಾರ್ಯ ಯಶಸ್ವಿಯಾಗಿ ನಡೆಸಿದ ಇವರು ಮಂಗಳ ನೌಕೆಯ ಅಭೂತಪೂರ್ವ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.