ಸಂಸ್ಕರಿಸಿದ ನೀರು ನೇರ ಬಳಕೆ ತಡೆಯದ ಅಧಿಕಾರಿಗಳ ವಿರುದ್ಧವೂ ಕ್ರಮ ಎಂದ ಸಚಿವ ಎನ್.ಎಸ್.ಭೋಸರಾಜು
ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ವಿಷಯುಕ್ತ ನೀರನ್ನು ಹರಿಸುತ್ತಾ, ದಿನಕ್ಕೊಂದು ಸದಾರಮೆ ನಾಟಕ ಆಡುತ್ತಿರುವ ರಾಜ್ಯ ಸರಕಾರ; ಈ ಅವಳಿ ಜಿಲ್ಲೆಗಳ ರೈತರಿಗೆ ನೀರಿನ ಕಳ್ಳತನದ ಪಟ್ಟಲು ಹೊರಟಿದೆ.
ಕೆಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿದ ನಂತರವೇ ಹರಿಸಬೇಕು ಎಂದು ಈ ಭಾಗದ ಜನರು ಒತ್ತಾಯ ಮಾಡುತ್ತಿದ್ದರೂ, ಜನರ ಗಮನವನ್ನು ಬೇರೆಡೆಗೆ ಹೊರಳುವಂತೆ ಮಾಡಲು ಸರಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಈಗಾಗಲೇ ಬೆಂಗಳೂರಿನ ತ್ಯಾಜ್ಯ ನೀರಿನಿಂದ ಎರಡೂ ಜಿಲ್ಲೆಗಳ ನೂರಾರು ಕೆರೆಗಳು ಕಲುಷಿತವಾಗಿ, ಅಂತರ್ಜಲವೂ ಹಾಳಾಗಿದೆ. ವಿಷಕಾರಿ ಲವಣಾಂಶಗಳ ಜತೆಗೆ ವಿನಾಶಕಾರಿ ಯುರೇನಿಯಂ ಅಂಶವೂ ಈ ನೀರಿನಲ್ಲಿ ಪತ್ತೆಯಾಗಿದೆ. ಹೀಗಿದ್ದರೂ, ಆ ಬಗ್ಗೆ ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕಿದ್ದ ಸರಕಾರ, ರೈತರನ್ನು ನೀರಿನ ಕಳ್ಳರನ್ನಾಗಿ ಬಿಂಬಿಸುವ ಪ್ರಯತ್ನ ನಡೆಸುತ್ತಿದೆ ಅನೇಕ ರೈತರು ಆರೋಪ ಮಾಡುತ್ತಿದ್ದಾರೆ.
ನೇರವಾಗಿ ಬಳಸಿದರೆ ಕ್ರಮ
ಹೆಚ್.ಎನ್ ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿರುವ ಎರಡನೇ ಹಂತದ ಸಂಸ್ಕರಿಸಿದ ನೀರನ್ನ ನೇರವಾಗಿ ಬಳಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಹೇಳಿದ್ದಾರೆ. ಅವರ ಹೇಳಿಕೆ ಅವಳಿ ಜಿಲ್ಲೆಗಳ ರೈತರಿಗೆ ಅಚ್ಚರಿ ಉಂಟು ಮಾಡಿದೆ.
ನಾವು ಕೇಳುತ್ತಿರುವುದು ಎತ್ತಿನಹೊಳೆ ನೀರನ್ನು, ಆದರೆ, ಸರಕಾರ ಕೊಡುತ್ತಿರುವುದು ಕೊಳಚೆ ನೀರನ್ನು. ಇದು ಅನ್ಯಾಯ ಎಂದು ಆ ಭಾಗದ ಜನರು ಕಿಡಿಕಾರುತ್ತಿದ್ದಾರೆ.
ಈ ಎರಡೂ ವ್ಯಾಲಿಗಳ ಏತ ನೀರಾವರಿ ಯೋಜನೆಯ ಮೂಲಕ ಬಯಲು ಸೀಮೆಯ ಜಿಲ್ಲೆಗಳಾದ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರಕ್ಕೆ ಸಂಸ್ಕರಿಸಿದ ನೀರನ್ನು ಹರಿಸಲಾಗುತ್ತಿದೆ. ಸಂಸ್ಕರಿಸಿದ ನೀರಿನ ಮೂಲಕ ಕೆರೆಗಳನ್ನ ತುಂಬಿಸಲಾಗುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ. ಅಂತರ್ಜಲ ಹೆಚ್ಚಳದ ಪ್ರಮುಖ ಗುರಿಯ ಯೋಜನೆಯ ಫಲ ಈಗಾಗಲೇ ಗೋಚರವಾಗುತ್ತಿದೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದ್ದು, ಜನರು ಕೊಳೆವೆ ಬಾವಿಗಳ ಮೂಲಕ ನೀರನ್ನ ತಮ್ಮ ಬೆಳೆಗಳಿಗೆ ಉಪಯೋಗಿಸಬಹುದಾಗಿದೆ. ಸಂಸ್ಕರಿಸಿದ ನೀರನ್ನು ನೇರವಾಗಿ ಕುಡಿಯಲು ಹಾಗೂ ಕೃಷಿಗೆ ಬಳಸುವುದನ್ನು ನಿಷೇಧಿಸಲಾಗಿದೆ.
ಆದರೆ, ಕೆಲವರು ಈ ನೀರನ್ನು ನೇರವಾಗಿ ತಮ್ಮ ಬೆಳೆಗಳಿಗೆ ಬಳಸುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳಿಂದ ಯೋಜನೆಯ ಮೂಲ ಉದ್ದೇಶಕ್ಕೆ ತೊಂದರೆಯಾಗುತ್ತಿದೆ. ಸಂಸ್ಕರಿಸಿದ ನೀರು ಉತ್ತಮ ಗುಣಮಟ್ಟದ್ದಾಗಿದೆ. ಆದರೆ, ಇದರ ನೇರ ಬಳಕೆಯಿಂದ ತೊಂದರೆ ಆಗಬಾರದು ಎನ್ನುವ ಮುನ್ನೆಚ್ಚರಿಕೆ ನಮ್ಮದಾಗಿತ್ತು. ಇದನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಸಿದ್ದಾರೆ.
ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೂ ಕ್ರಮ
ಸಂಸ್ಕರಿಸಿದ ನೀರನ್ನು ಜನರು ನೇರವಾಗಿ ತಮ್ಮ ಜಮೀನುಗಳಿಗೆ ಪಂಪ್ ಮಾಡುವುದು ಹಾಗೂ ಹರಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಆಗಾಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ನೀರನ್ನು ಬಳಸಿಕೊಳ್ಳುತ್ತಿರುವ ಜನರ ಮೇಲೆ ಕ್ರಮ ಕೈಗೊಳ್ಳಬೇಕು, ಕ್ರಮ ಕೈಗೊಳ್ಳಲು ವಿಫಲರಾಗುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.