ಸಮಾಜ ತಲೆ ತಗ್ಗಸುವ ವಿಲಕ್ಷಣ ಘಟನೆ: ಭಾಗ್ಯನಗರದ ಪ್ರತಿಷ್ಠೆಗೆ ಧಕ್ಕೆ; ಹಾಸ್ಟೆಲ್ ಮೇಲ್ವಿಚಾರಕಿ, ಅಧಿಕಾರಿಗಳ ಕರ್ತವ್ಯಲೋಪ; ಪೋಕ್ಸೋ ಪ್ರಕರಣ ದಾಖಲು
ಬಾಗೇಪಲ್ಲಿ: ಹಾಸ್ಟೆಲ್, ಮತ್ತು ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಗ್ಧ ಹೆಣ್ಣುಮಕ್ಕಳನ್ನು ಟ್ರ್ಯಾಪ್ ಮಾಡುವ ಪುಂಡ ಯುವಕರು, ಆ ಹೆಣ್ಣುಮಕ್ಕಳ ಜೀವನ ಹಾಳು ಮಾಡುತ್ತಿರುವುದಕ್ಕೆ ಬಾಗೇಪಲ್ಲಿ ಪಟ್ಟಣದಿಂದ ಅತ್ಯಂತ ಆತಂಕಕಾರಿ ವರದಿಯೊಂದು ಬಂದಿದೆ.
ಹೆಗಲಿಗೆ ಪುಸ್ತಕದ ಚೀಲ ಹಾಕಿಕೊಂಡು ಶಾಲೆಗೆ ಹೋಗುತ್ತಾ ಪಾಠ ಕಲಿಯುವ, ಕಿಲಕಿಲನೆ ನಗುನಗುತ್ತಾ ಸಹಪಾಠಿಗಳೊಂದಿಗೆ ಆಟವಾಡುವ ಕಿರು ವಯಸ್ಸಿನಲ್ಲಿಯೇ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ವಿಲಕ್ಷಣ ಹಾಗೂ ಅನಾಗರಿಕ ಘಟನೆ ನಡೆದಿದೆ.
ಬಾಲಕಿಯ ಪೋಷಕರು ಹಾಗೂ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.ಆ ಬಾಲಕಿಗೆ ಇನ್ನೂ 14 ವರ್ಷ. 9ನೇ ತರಗತಿ ವಿದ್ಯಾರ್ಥಿನಿ. ಆಕೆಯ ತಾಯಿ ಬಾಗೇಪಲ್ಲಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಂಗನವಾಡಿ ಶಿಕ್ಷಕಿ, ತಂದೆ ಕೃಷಿಕ. ತಮ್ಮ ಮಗಳು ಚೆನ್ನಾಗಿ ಓದಿ ಬುದ್ದಿವಂತಳಾಗಿ ಉದ್ಧಾರವಾಗಲಿ ಎಂದು ದೂರದ ಮಧುಗಿರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಕ್ಕೆ ಸೇರಿಸಿ ಅಲ್ಲಿಂದ ಶಾಲೆಗೆ ಕಳುಹಿಸಿದ್ದರು ಪೋಷಕರು.
ಆದರೆ; ಆ ಬಾಲಕಿ ಕೈಯ್ಯಲ್ಲಿ ಉತ್ತಮ ಫಲಿತಾಂಶದ ಅಂಕಪಟ್ಟಿಯ ಬದಲಿಗೆ ಈಗ ಪುಟ್ಟ ಮಗುವೊಂದು ಕಾಣುತ್ತಿದೆ.ಶಾಲಾ ಬಾಲಕಿ ಗರ್ಭಿಣಿಯಾಗಿ, ಮಗುವಿಗೆ ಹೆರಿಗೆಯಾಗುವ ತನಕ ಆಕೆಯ ಪೋಷಕರು, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ, ಶಾಲಾ ಶಿಕ್ಷಕರು ಬಾಲಕಿಯ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಲಿಲ್ಲವೇ ಎಂದ ಪ್ರಶ್ನೆ ಸಹಜವಾಗಿ ಮೂಡುತ್ತಿದೆ.
ಗೊತ್ತಿದ್ದರೂ ಕಂಡೂ ಕಾಣದಂತೆ ಇರಲು ಕಾರಣವಾದರೂ ಏನು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ, ಗಂಡು ಮಗು ಜನನ!
ಬಾಲಕಿ ಮೂರು ದಿನಗಳ ಹಿಂದಷ್ಠೇ ಹೊಟ್ಟೆನೋವು ಎಂದು ತನ್ನ ತಾಯಿಯ ಜತೆಯಲ್ಲಿ ಬಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದು ಚುಚ್ಚುಮದ್ದು ಹಾಕಿಸಿಕೊಂಡು ಹೋಗಿದ್ದಾಳೆ.
ಕೆಲ ಸಮಯದ ನಂತರ ಮತ್ತೆ ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದಿದ್ದಾಳೆ. ಆಗ ಚಿಕಿತ್ಸೆ ನೀಡಿದಾಗ ಕೆಲ ಸಮಯದಲ್ಲೇ ಆ ಬಾಲಕಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಜನಿಸಿದ ಮಗು 2.2 ಕೆಜಿ ತೂಕವಿತ್ತು ಎಂಬ ಮಾಹಿತಿ ಸಿಕ್ಕಿದೆ. ಹೆರಿಗೆಯ ನಂತರ ಆಸ್ಪತ್ರೆಯ ಸಿಬ್ಬಂದಿ ಮಾಹಿತಿ ಕಲೆ ಹಾಕಿದಾಗಲೇ ಸತ್ಯ ಹೊರಗೆ ಬಂದಿದೆ, ಆಕೆ ಅಪ್ರಾಪ್ತ ಶಾಲಾ ಬಾಲಕಿ ಎಂದು. ಹೆರಿಗೆಯಾದ ಮಗುವನ್ನು ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿ ತಕ್ಷಣವೇ ಬಾಗೇಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ತಾಲೂಕು ವೈಧ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ತಿಳಿಸಿದ್ದಾರೆ.
ಅಂಗನವಾಡಿ ಶಿಕ್ಷಕಿ ಬಾಲಕಿ ತಾಯಿ!
ಲಭ್ಯ ಮಾಹಿತಿಯ ಪ್ರಕಾರ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿಯ ತಾಯಿ ಅಂಗನವಾಡಿ ಶಿಕ್ಷಕಿ ಎಂಬುದು ಆಶ್ಚರ್ಯ ಉಂಟು ಮಾಡುವ ವಿಚಾರ.
ಸರಕಾರದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುವ ಹಾಗೂ ಮಹಿಳೆಯರಿಗೆ ಅರಿವು ಮೂಡಿಸುವ ಜವಾಬ್ದಾರಿಯುಳ್ಳ ಅಂಗನವಾಡಿ ಶಿಕ್ಷಕಿಯೇ ತನ್ನ ಮಗಳು 14ನೇ ವರ್ಷಕ್ಕೆ ಗರ್ಭಧರಸಿ, ಹೆರಿಗೆಯಾಗಿ ಬಾಣಂತಿ ಆಗುವವರೆವಿಗೂ ಮಗುವಿನ ದೈಹಿಕ ಬದಲಾವಣೆಯನ್ನು ಗಮನಿಸಿಲ್ಲ ಎಂದರೆ; ಇನ್ನು ಆಕೆ ಇನ್ನು ಎಷ್ಟರಮಟ್ಟಿಗೆ ಕರ್ತವ್ಯ ನಿರ್ವಹಿಸುತ್ತಾ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುತ್ತಾರೆಯೇ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ.
ಹಾಸ್ಟೆಲ್ ಮೇಲ್ವಿಚಾರಕಿ, ಅಧಿಕಾರಿಗಳ ಕೆಲಸದ ಬಗ್ಗೆ ಅನುಮಾನ
ವಿದ್ಯಾಭ್ಯಾಸ ಮಾಡಲೆಂದು ವಿದ್ಯಾರ್ಥಿ ನಿಲಯಕ್ಕೆ ಸೇರಿರುವ ವಿದ್ಯಾರ್ಥಿನಿ ಒಂದು ಮಗುವಿಗೆ ಜನ್ಮ ನೀಡುವಂತಹ ಸ್ಥಿತಿಗೆ ತಲುಪಿದ್ದರೂ ಅದನ್ನು ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಗಮನಿಸದೇ ಇರುವುದು ಅಕ್ಷಮ್ಯ.
ಅವರ ಕಾರ್ಯವೈಖರಿಯ ಬಗ್ಗೆ ಜನರು ಆಡಿಕೊಳ್ಳುವಂತೆ ಆಗಿದೆ. ಅಪ್ರಾಪ್ತ ವಿದ್ಯಾರ್ಥಿನಿಯರ ಬಗ್ಗೆ ಲಕ್ಷ್ಯವನ್ನೇ ಕೊಡುತ್ತಿರಲಿಲ್ಲ ಎನ್ನುವುದು ಇದರಿಂದ ವೇದ್ಯವಾಗುತ್ತದೆ.
ಬಾಲಕಿಗೆ ಮಗು ಕೊಟ್ಟವನಿಗಾಗಿ ಶೋಧ
ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯನ್ನಾಗಿ ಮಾಡಿ ಆಕೆಗೆ ಮಗು ಜನಿಸಲು ಕಾರಣರಾದವನನ್ನು ಹುಡುಕುವ ಜವಾಬ್ದಾರಿ ಈಗ ಪೊಲೀಸರ ಮೇಲೆ ಬಿದ್ದಿದೆ.
ಯುವಕ, ಬಾಲಕಿ ನಡುವೆ ಯಾವ ರೀತಿಯ ಸಂಬಂಧ ಇತ್ತು ಹಾಗೂ ಆ ಯುವಕ ಅತ್ಯಾಚಾರ ಎಸಗಿರುವ ಸಾಧ್ಯತೆ ಇದೆಯಾ? ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ಮಾಡಬೇಕಿದೆ. ಈ ಪ್ರಕರಣವನ್ನು ಮಕ್ಕಳಾಟ ಎಂದು ಪೊಲೀಸರು ಪರಿಗಣಿಸುವಂತಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೀದಿ ನಾಟಕದ ಹೆಸರಲ್ಲಿ ಸರಕಾರದ ನಾಟಕ
ಗ್ರಾಮೀಣ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚೆಚ್ಚು ವರದಿ ಆಗುತ್ತಲೇ ಇವೆ. ಪೋಕ್ಸೋ ಪ್ರಕರಣಗಳು ಸಾಕಷ್ಟು ವರದಿ ಆಗುತ್ತಿದ್ದರೂ ಅಂತಹ ಗಂಭೀರ ಪ್ರಕರಣಗಳನ್ನು ರಾಜಿ ಮಾಡಿ ತೇಪೆ ಹಚ್ಚುವ ಕೆಲಸ ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಬಾಗೇಪಲ್ಲಿ ತಾಲೂಕಿನಲ್ಲಿ ಅಪ್ರಾಪ್ತ ಮದುವೆಗಳ ಅಬ್ಬರ ವ್ಯಾಪಕವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರಮಾಣ ಅಧಿಕವಾಗಿದೆ. ಈ ಸಂಬಂಧ ಜಾಗೃತಿ ಮೂಡಿಸಬೇಕಾದ ತಾಲೂಕು ಆಡಳಿತ, ಅಧಿಕಾರಿಗಳು ತಮ್ಮ ‘ಮಾಮೂಲು’ ಲೋಕದಲ್ಲಿ ತಲ್ಲೀನರಾಗಿದ್ದಾರೆ.
ಬಾಳಿ ಬದುಕಬೇಕಾದ ಭವಿಷ್ಯದ ಜತೆಗೆ ಚಲ್ಲಾಟವಾಡುತ್ತಿದ್ದಾರೆ ಅಧಿಕಾರಿಗಳು. ಅವರನ್ನು ಹೇಳುವವರು ಕೇಳುವವರು ಯಾರೂ ಇಲ್ಲದ ಸ್ಥಿತಿ ಇದೆ. ರಾಜಧಾನಿಗೆ ಹತ್ತಿರದಲ್ಲಿಯೇ ಇರುವ ತಾಲೂಕು ಜೀವನ ಮಟ್ಟದ ಸೂಚ್ಯಂಕದಲ್ಲಿ ದಯನೀಯ ಸ್ಥಿತಿಯಲ್ಲಿ ಇದೆ.
ಪೋಷಕರ ನಿರ್ಲಕ್ಷ್ಯ, ಮಕ್ಕಳ ಭವಿಷ್ಯ ಹಾಳುಮನೆಯ ಮಕ್ಕಳ ಚಲನವಲನಗಳ ಮೇಲೆ ಸದಾ ಗಮನ ಇಡಬೇಕಾದ ಪೋಷಕರು ತಾಳಿರುವ ನಿರ್ಲಕ್ಷ್ಯಕ್ಕೆ ಈ ಪ್ರಕರಣ ಒಂದು ಉದಾಹರಣೆ ಅಷ್ಟೆ.
ಪೋಷಕರ ಈ ರೀತಿಯ ವರ್ತನೆ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ. ಗಳಿಕೆಯ ಹಿಂದೆ ಬಿದ್ದು, ಮೊಬೈಲುಗಳಿಗೆ ದಾಸರಾಗಿ, ದೈನಂದಿನ ಯಾಂತ್ರಿಕ ಬದುಕುಗಳಿಗೆ ಪೋಷಕರೂ ಅಂಟಿಕೊಂಡಂತೆ ಕಾಣುತ್ತಿದೆ. ತಮ್ಮ ಸುಖ ಸಂತೋಷಗಳಲ್ಲಿ ಮುಳಗಿ ಹೋಗಿರುವ ಹಿರಿಯರು ಸಂಸಾರದಲ್ಲಿ ತಮ್ಮ ಹಿಡಿತ ಕಳೆದುಕೊಳ್ಳುತ್ತಿರುವುದೂ ಇದರಿಂದ ಸ್ಪಷ್ಟವಾಗುತ್ತಿದೆ ಎಂದು ಮಾನಸಿಕ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.
ಪೋಕ್ಸೋ ಪ್ರಕರಣ ದಾಖಲು
ಈ ವಿಲಕ್ಷಣ ಘಟನೆಯ ಬಗ್ಗೆ ಬಾಗೇಪಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಶಾಂತ್ ವರ್ಣಿಯವರ ಅಭಿಪ್ರಾಯ ಕೇಳಿದಾಗ; ಈ ಬಗ್ಗೆ ಬಾಗೇಪಲ್ಲಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆಯ ನಂತರ ಘಟನೆ ಬೇರೊಂದು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರೆ ಅಲ್ಲಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಕೈಯಲ್ಲಿ ಆಟದ ವಸ್ತುಗಳನ್ನು ಇಟ್ಟುಕೊಂಡು ಆಟವಾಡಬೇಕಾದ ಪುಟ್ಟ ವಯಸ್ಸಿನಲ್ಲಿ ಅಪ್ರಾಪ್ತ ಬಾಲಕಿಗೆ ಕಂಕುಳಲ್ಲಿ ಪುಟ್ಟ ಮಗುವೊಂದನ್ನು ಏರಿಸಿಕೊಳ್ಳುವಂತಹ ದುಸ್ಥಿತಿ ಬಂದಿರುವುದು ನಾಚಿಕೆಗೇಡಿನ ಸಂಗತಿ.ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಕೆಲಸ. ಇದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸುತ್ತಿದ್ದಾರೆ.