ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ನೀಡುವಂತೆ ಕೈದಿಗಳ ಬೇಡಿಕೆ
by GS Bharath Gudibande
ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದೇವರ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲಿಯೇ ರಾಜ್ಯದ ಜೈಲುಗಳಲ್ಲಿರುವ ಕೈದಿಗಳು ಪ್ರಾಯಶ್ಚಿತ್ತಕ್ಕಾಗಿ ರಾಮದೇವರ ಮೊರೆ ಹೋಗಿದ್ದಾರೆ.
ತಾವು ಮಾಡಿರುವ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಪ್ರಾಣ ಪ್ರತಿಷ್ಠೆಯ ದೃಶ್ಯಾವಳಿಯ ನೇರ ಪ್ರಸಾರವನ್ನು ಟೀವಿಯಲ್ಲಿ ವೀಕ್ಷಣೆ ಮಾಡಲು ಅವಕಾಶ ನೀಡುವಂತೆ ಆಯಾ ಜೈಲುಗಳ ಅಧೀಕ್ಷಕರಲ್ಲಿ ಕೈದಿಗಳು ಮೊರೆ ಇಟ್ಟಿದ್ದಾರೆ. ಇದಕ್ಕೆ ಅನುಮತಿ ಕೊಡುವಂತೆ ಕೈದಿಗಳ ಕುಟುಂಬ ಸದಸ್ಯರು ಕೂಡ ಮನವಿ ಮಾಡಿದ್ದಾರೆ.
ಜನವರಿ 22ರಂದು ದೇಶಾದ್ಯಂತ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದಲ್ಲಿಯೂ ಶಾಲಾ- ಕಾಲೇಜು, ದೇವಸ್ಥಾನಗಳು, ಬೆಂಗಳೂರಿನ ಅರಮನೆ ಮೈದಾನ ಸೇರಿದಂತೆ ರಾಜ್ಯದ ಹಳ್ಳಿ ಹಳ್ಳಿ, ಪ್ರತೀ ಜನಬೀಡ ಪ್ರದೇಶಗಳಲ್ಲಿ ಹಿಂದೂಪರ ಸಂಘ ಸಂಸ್ಥೆಗಳು ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಲು ಮುಂದಾಗಿವೆ. ಪ್ರತಿಯೊಬ್ಬರೂ ಈ ಪುಣ್ಯಕ್ಷಣಕ್ಕೆ ಸಾಕ್ಷಿಯಾಗಬೇಕು ಎಂಬುದು ಅವರೆಲ್ಲರ ಉದ್ದೇಶವಾಗಿದೆ.
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವೀಕ್ಷಿಸಲು ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೈದಿಗಳು ಅಲ್ಲಿನ ಜೈಲರ್‌ಗಳಿಗೆ ಮನವಿಯನ್ನು ಮಾಡಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೇ; ಈಗಾಗಲೇ ಜೈಲ್ಲಿನಲ್ಲಿರುವ ಅಪರಾಧಿಗಳು, ಅಪರಾಧ ಹಿನ್ನೆಲೆಯುಳ್ಳವರು ಹಾಗೂ ಯಾವ ತಪ್ಪು ಮಾಡದೇ ಜೈಲು ಪಾಲಾಗಿರುವ ಕೆಲ ಕೈದಿಗಳು ರಾಮನಾಮ ಜಪ ಮಾಡುತ್ತಿದ್ದಾರೆ. ಆ ಮೂಲಕ ಅವರು ತಾವೆಸಗಿದ ಪಾಪಗಳನ್ನು ತೊಡೆದುಕೊಂಡು ಪ್ರಾಯಶ್ಚಿತ್ತ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ವೀಕ್ಷಿಸಲು ಬೇಡಿಕೆ ಇಟ್ಟಿದ್ದಾರೆ ಎಂದು ಹೆಸರಲು ಹೇಳಲು ಇಚ್ಚಿಸದ ಕೈದಿಯ ಕುಟುಂಬದ ಸದಸ್ಯರೊಬ್ಬರು ಸಿಕೆನ್ಯೂಸ್ ನೌ ಗೆ ತಿಳಿಸಿದ್ದಾರೆ.
ರಾಮ ದೇವರ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಅನೇಕ ಕೈದಿಗಳು ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸರಕಾರಕ್ಕೂ ಈ ಹೋಗಿದ್ದು, ಸರಕಾರವೂ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕೊಲೆ, ಸುಲಿಗೆ, ಕಳ್ಳತನ, ಅತ್ಯಾಚಾರ ಇತರೆ ಕಾನೂನುಬಾಹಿರ ಆರೋಪಿಗಳು ಹಾಗೂ ಅಪರಾಧಿಗಳಿಗೂ ಜೈಲಿನಲ್ಲಿ ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಬೇಕು. ನೇರ ವೀಕ್ಷಣೆ ಮಾಡುವ ಮೂಲಕ ಅವರು ಪಾಪವನ್ನು ತೊಳೆದುಕೊಂಡು, ಪುಣ್ಯ ಕಟ್ಟಿಕೊಳ್ಳಲು ಪ್ರಯತ್ನ ಮಾಡಬಹುದು. ಕೈದಿಗಳ ಈ ಬೇಡಿಕೆಗೆ ಸರಕಾರ ಕರುಣೆ ತೋರಿಸಿ. ವೀಕ್ಷಣೆ ಮಾಡಲು ಅವಕಾಶ ನೀಡಬೇಕು.
ಹೆಸರು ಹೇಳಲು ಇಚ್ಚಿಸದ ಕೈದಿ