ತಾಳೆಗರಿಗಳ ಮೇಲೆ ರಚಿತವಾದ ರಾಮಚರಿತೆ; ಗುಡಿಬಂಡೆ ಪಟ್ಟಣದಲ್ಲಿದೆ ಅತಿ ವಿರಳ ಸಂರಕ್ಷಿತ ರಾಮಗ್ರಂಥ ಸಂಗ್ರಹ
by GS Bharath Gudibande
ಗುಡಿಬಂಡೆ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದ್ದು, ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದಂತೆ ಏಳು ವಿಭಿನ್ನ, ಅಪರೂಪದ ತಾಳೆಗರಿಯ ಗ್ರಂಥಗಳು ಗುಡಿಬಂಡೆಯಿಂದ ರಾಮ ಸನ್ನಿಧಿಗೆ ತೆರಳಲು ತವಕಿಸುತ್ತಿವೆ.
ಈ ಸಪ್ತ ರಾಮಾಯಣ ಗ್ರಂಥಗಳನ್ನು ಅಯೋಧ್ಯೆಯ ಶ್ರೀರಾಮನಿಗೇ ಅರ್ಪಿಸಿ ಗುಡಿಬಂಡೆ ಹೆಸರನ್ನು ರಾಮ ಸನ್ನಿಧಿಯಲ್ಲಿ ಚಿರಸ್ಥಾಯಿಗೊಳಿಸುವ ಪ್ರಯತ್ನ ನಡೆದಿದೆ.
ಸುಮಾರು 800 ವರ್ಷಗಳ ಹಿಂದೆ ಪೆನ್ನು, ಪೆನ್ಸಿಲ್, ಪುಸ್ತಕ, ಮುದ್ರಣ ಇಲ್ಲದ ಕಾಲದಲ್ಲಿ ಅಂದಿನ ವಿದ್ವಾಂಸರು ತಾಳೆಗರಿಗಳಲ್ಲಿ ಹಳಗನ್ನಡ ಹಾಗೂ ಸಂಸ್ಕೃತದಲ್ಲಿ ಈ ರಾಮಾಯಣಗಳನ್ನು ರಚನೆ ಮಾಡಿದ್ದಾರೆ. ಅಲ್ಲದೇ, ಅವುಗಳನ್ನು ಬಹಳ ಜೋಪಾನವಾಗಿ ರಕ್ಷಣೆ ಮಾಡಲಾಗಿದೆ.
ತಾಳೆಗರಿಗಳಲ್ಲಿ ಬರೆದಿಡಲಾದ ರಾಮಾಯಣ ಗ್ರಂಥಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರಖ್ಯಾತ ವೇದ ಪಂಡಿತರೂ, ಹಿರಿಯ ಪತ್ರಕರ್ತರೂ ಆಗಿದ್ದ ದಿವಂಗತ ಎಸ್.ನರಸಿಂಹ ಮೂರ್ತಿ ಅವರ ಸಂಗ್ರಹದಲ್ಲಿವೆ. ಈ ರಾಮಯಾಣ ಗ್ರಂಥಗಳನ್ನು ಅಯೋಧ್ಯೆ ರಾಮ ಮಂದಿರಕ್ಕೆ ಒಪ್ಪಿಸಲು ಅವರ ಮಕ್ಕಳು ನಿರ್ಧರಿಸಿದ್ದು, ರಾಮನ ಸನ್ನಿಧಿಗೆ ಅವರೆಲ್ಲರೂ ತೆರಳಲು ಕಾತರದಿಂದ ಕಾಯುತ್ತಿದ್ದಾರೆ ಹಾಗೂ ಅವುಗಳನ್ನು ರಾಮ ಸನ್ನಿಧಿಗೆ ಅರ್ಪಿಸುವುದಕ್ಕಾಗಿ ಅವರೆಲ್ಲರೂ ಚಾತಕ ಪಕ್ಷಿಗಳಂತೆ ನಿರೀಕ್ಷೆಯಲ್ಲಿದ್ದಾರೆ.
ವಿಶೇಷವಾಗಿ ತಾಳೆಗರಿಗಳಲ್ಲಿ ಬರೆದಿರುವ ಸಪ್ತ ರಾಮಾಯಣಗಳು ಅಪರೂಪದಲ್ಲಿಯೇ ಅಪರೂಪ. ಭಕ್ತಿ, ಶ್ರದ್ಧೆಯಿಂದ ಕಾಪಾಡಿಕೊಂಡು ಬರಲಾದ ಈ ಅಮೂಲ್ಯ ಗ್ರಂಥಗಳು ಆದಷ್ಟು ಬೇಗ ಅಯೋಧ್ಯೆಯ ರಾಮ ಸನ್ನಿಧಿಯನ್ನು ಸೇರಲಿವೆ ಎಂದಿದ್ದಾರೆ ಎಸ್.ನರಸಿಂಹ ಮೂರ್ತಿ ಅವರ ಪುತ್ರ, ಉಪನ್ಯಾಸಕ, ವೇದ ಪಂಡಿತರಾದ ಸ.ನ.ನಾಗೇಂದ್ರ.
ಸಪ್ತ ರಾಮಾಯಣಗಳು ಯಾವುವು?
1.ವಾಲ್ಮೀಕಿ ರಾಮಾಯಣ ಯುದ್ಧಕಾಂಡ
2.ಆಧ್ಯಾತ್ಮ ರಾಮಾಯಣ
3.ವಿದರ್ಭರಾಜ ವಿರಚಿತ ಚಂಪೂಕಾವ್ಯ ರಾಮಾಯಣ
4.ಕೌಮುದ ರಾಮಾಯಣ
5.ಶ್ರೀಮದ್ವಾಲ್ಮೀಕಿ ರಾಮಾಯಣ ಅರಣ್ಯಕಾಂಡ ಚತುರ್ಥ ಸರ್ಗದಿಂದ ಆರಂಭ ಕೃತಿ
6.ಸಂಪೂರ್ಣ ರಾಮಾಯಣ
7.ಸಂಪೂರ್ಣ ರಾಮಕರುಣಾಮೃತಂ
ಈ ಸಪ್ತ ರಾಮಾಯಣ ಗ್ರಂಥಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ನಡೆದಿದೆ. ಬಸವಾ ಭಟ್ಟರ ಮನೆತನದ ಪ್ರಯತ್ನಕ್ಕೆ ಶ್ರೀ ಶೃಂಗೇರಿ ಶಾರದಾ ಪೀಠದ ಅಧ್ಯಯನದ ಸಹಯೋಗದೊಂದಿಗೆ ಬೆಂಗಳೂರಿನ ಸಂಶೋಧನಾ ಸಂಸ್ಥೆಯೂ ಕೈ ಜೋಡಿಸಿದೆ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.
ಎಸ್.ನರಸಿಂಹಮೂರ್ತಿ ಅವರು ತಮ್ಮ ಜೀವಿತಾವಧಿಯಲ್ಲಿ ಧರ್ಮಕಾರ್ಯ, ಇತಿಹಾಸ, ಪುರಾಣಗಳ ಅಧ್ಯಯನಕ್ಕೆ ಬಹುಪಾಲು ಜೀವನವನ್ನು ಮೀಸಲಿಟ್ಟಿದ್ದರು. ಅಲ್ಲದೆ, ವೇದಗಳನ್ನು ಗಾಢವಾಗಿ ಅಧ್ಯಯನ ಮಾಡಿ ಪಾಂಡಿತ್ಯ ಸಾಧಿಸಿದ್ದರು. ಕೆಲ ದಿನಗಳ ಹಿಂದೆ ಅವರು ವಿಧಿವಶರಾಗಿದ್ದರು. ಬಳಿಕ ಅವರ ಪುತ್ರ ನಾಗೇಂದ್ರ ಅವರು ತಂದೆಯವರ ದಾರಿಯಲ್ಲಿಯೇ ಹೆಜ್ಜೆ ಹಾಕುತ್ತಿದ್ದು; ವೇದ, ಪುರಾಣಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ಎಸ್.ನರಸಿಂಹಮೂರ್ತಿ ಹಾಗೂ ಎಸ್.ಎನ್.ನಾಗೇಂದ್ರ ಅವರು ತಮ್ಮ ಪೂರ್ವಜರ ಕಾಲದಿಂದಲೂ ಅವರ ಮನೆಯಲ್ಲಿದ್ದ ತಾಳೆಗರಿಗಳ ಗ್ರಂಥಗಳ ಸಂಗ್ರಹವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ತಾಳೆಗರಿಗಳ ಮೇಲೆ ಬರೆಯಲ್ಪಟ್ಟಿರುವ ಸಪ್ತ ರಾಮಾಯಣ ಗ್ರಂಥಗಳನ್ನು ರಕ್ಷಣೆ ಮಾಡಿಕೊಂಡು ಬಂದಿರುವುದು ಬಹಳ ಸವಾಲಿನ ಕೆಲಸವಾಗಿದೆ.
ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ತಾಳೆಗರಿಗಳ ಲಿಪಿಯಲ್ಲಿ ತೆಲುಗು ಮಿಶ್ರಿತ ರಾಮಾಯಣ, 1791ರಲ್ಲಿ ರಚಿತ ʼಸಂಪೂರ್ಣ ರಾಮ ಕರುಣಾಮೃತʼ ರಾಮಾಯಣ ಗ್ರಂಥವನ್ನು ನಾಗೇಂದ್ರ ಅವರ ಮನೆಯಲ್ಲಿ ಕಾಣಬಹುದು. ಈಗ ಇವೆಲ್ಲಾ ಗ್ರಂಥಗಳನ್ನು ಅಷ್ಟೇ ಜತನದಿಂದ ಅಯೋಧ್ಯೆಯ ರಾಮ ಸನ್ನಿಧಿಗೆ ಒಪ್ಪಿಸಬೇಕು. ಅವೆಲ್ಲವೂ ಶ್ರೀರಾಮನ ಆಸ್ತಿಯಾಗಿ ಆಯೋಧ್ಯೆಯಲ್ಲಿಯೇ ಶಾಶ್ವತವಾಗಿ ಉಳಿಯಬೇಕು ಎಂಬುದು ಅವರ ಉದ್ದೇಶವಾಗಿದೆ.
ಪೆನ್ನು, ಪೆನ್ಸಿಲ್, ನೋಟ್ ಪುಸ್ತಕ, ಪ್ರಿಂಟಿಂಗ್ ತಂತ್ರಜ್ಞಾನವಿಲ್ಲದ ಕಾಲದಲ್ಲಿ ಆಗಿನ ವಿದ್ವಾಂಸರು ತಾಳೆ ಗರಿಗಳಲ್ಲಿ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಗ್ರಂಥಗಳನ್ನು ಬರೆದಿದ್ದು, ಅದನ್ನು ಆಧುನಿಕ ಪ್ರಿಂಟಿಂಗ್ ತಂಜ್ರಜ್ಞಾನಕ್ಕೆ ಮಾರ್ಪಡಿಸುವ ಅವಶ್ಯಕತೆ ಇದೆ. ಇಂತಹ ಅಮೂಲ್ಯ ಸಂಪತ್ತನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ.
ಸ.ನ.ನಾಗೇಂದ್ರ, ವೇದ ಪಂಡಿತರು