ಶ್ರೀಬಾಲರಾಮ ದೇವರು ಇನ್ನು ಟೆಂಟಿನಲ್ಲಿ ಇರುವುದಿಲ್ಲ.. ಭವ್ಯ ಮಂದಿರದಲ್ಲಿ ದರ್ಶನ ನೀಡುತ್ತಾನೆ.. ಪ್ರಾಣ ಪ್ರತಿಷ್ಠಾಪನೆ ನಂತರ ದೇಶವನ್ನು ಉದ್ದೇಶಿಸಿ ಮತನಾಡಿದ ಪ್ರಧಾನಿ ನರೇಂದ್ರ ಮೋದಿ
ರಾಮ ಮಂದಿರ ಪ್ರಾಣಪ್ರತಿಷ್ಠೆ ಮೂಲಕ ಭವ್ಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಪೂಜಾ ವಿಧಿವಿಧಾನ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ರಾಮಜನ್ಮಭೂಮಿ ಆವರಣದಲ್ಲಿ ಆಯೋಜಿಸಿದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
by Dr.Guruprasad Hawaladar
ಆಯೋಧ್ಯೆ: ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ಶತ ಶತಮಾನಗಳ ಹೋರಾಟ ಸಾರ್ಥಕವಾಗಿದೆ. ಆಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆ ಮಾಡಿದ ಪ್ರಧಾನಿ ಮೋದಿ ಬಳಿಕ ರಾನಜನ್ಮಭೂಮಿ ಆವರದಲ್ಲಿ ಆಯೋಜಿಸಿದ ಸಭೆಯಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿದ್ದಾರೆ.
ಸೀತಾರಾಮ ರಾಮಚಂದ್ರ ಪ್ರಭು ಎಂದು ಭಾಷಣ ಆರಂಭಿಸಿದ ನರೇಂದ್ರ ಮೋದಿ ಅವರು; ಹೋರಾಟ, ತ್ಯಾಗ ಬಲಿದಾನ ಬಳಿಕ ನಮ್ಮ ಪ್ರಭು ಶ್ರೀರಾಮ ಚಂದ್ರ ಇಂದು ಆಯೋಧ್ಯೆಗೆ ಆಗಮಿಸಿದ್ದಾನೆ ಎಂದರು.
ನಮ್ಮ ರಾಮ ಲಲ್ಲಾ ಟೆಂಟಿನಲ್ಲಿ ಇರುವುದಿಲ್ಲ. ನಮ್ಮ ರಾಮಲಲ್ಲಾ ಭವ್ಯ ರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಇಂದು ಪ್ರಾಣಪ್ರತಿಷ್ಠೆಯ ಅನುಭೂತಿ ವಿಶ್ವದ ಮೂಲೆ ಮೂಲೆಗೆ ತಲುಪಿದೆ ಎಂದು ಮೋದಿ ಅವರು ಹೇಳಿದರು.
1000 ವರ್ಷಗಳ ಬಳಿಕವೂ ಈ ದಿನ ನೆನಪಿರುತ್ತದೆ
1000 ವರ್ಷಗಳ ಬಳಿಕವೂ ಈ ದಿನಾಂಕವನ್ನು ಎಲ್ಲರೂ ನೆನಪಿಟ್ಟುಕೊಳ್ಳುತ್ತಾರೆ. ಕಾರಣ ಈ ದಿನ ಪವಿತ್ರ ದಿನ. ದಿವ್ಯತೆಯ ಪರಿಪೂರ್ಣ ದಿನವಾಗಿದೆ. ಇದು ಸಾಮಾನ್ಯ ಸಮಯವಲ್ಲ. ಕಾಲಚಕ್ರದಲ್ಲಿ ಅಚ್ಚಳಿಯದೆ ಉಳಿಯುವ ದಿನ. ಎಲ್ಲಿ ಶ್ರೀರಾಮ ಇದ್ದಾನೋ ಅಲ್ಲಿ ಹನುಮಾನ್ ಭಕ್ತಿ ಇದ್ದೇ ಇರುತ್ತೆ. ಸೀತಾಮಾತಾ, ಲಕ್ಷ್ಣಣ ಸೇರಿದಂತೆ ಎಲ್ಲಾ ದೈವೀ ಸಂಭೂತರಿಗೆ ನಮನ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.
ಪ್ರಭು ಶ್ರೀರಾಮನಲ್ಲಿ ಕ್ಷಮೆಯನ್ನೂ ಕೇಳುತ್ತೇನೆ. ಇಷ್ಟು ವರ್ಷ ಶ್ರೀರಾಮನ ಸೇವೆಯಲ್ಲಿ ನಮ್ಮಿಂದ ಏನಾದರೂ ಕಡಿಮೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಮೋದಿ ಗದ್ಗದಿತರಾಗಿ ಹೇಳಿದರು.
ಇಂದು ಪ್ರಭು ಶ್ರೀರಾಮನ ನೋಡಿ ಆಯೋಧ್ಯೆ ಹಾಗೂ ಇಡೀ ದೇಶದ ನಾಗರೀಕರು ಸಂಸತದಲ್ಲಿ ತೇಲಾಡಿದ್ದಾರೆ. ಶ್ರೀರಾಮ 14 ವರ್ಷ ವನವಾಸ ಮಾಡಿದ್ದರು. ಆದರೆ ಶ್ರೀರಾಮನನ್ನು ಭವ್ಯ ರಾಮ ಮಂದಿರದಲ್ಲಿ ವಿರಾಜಮಾನಗೊಳಿಸಲು ಶತ ಶತಮಾನಗಳ ಕಾಲ ನಮ್ಮ ತಲೆ ತಲೆಮಾರುಗಳ ಹೋರಾಟ ನಡೆಸಿದೆ ಎಂದರು ಅವರು.
ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕವೂ ಶ್ರೀರಾಮನ ಹೋರಾಟ ನಡೆಯುತ್ತಲೇ ಇತ್ತು. ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಗಿತ್ತು. ಕಾನೂನು ಹೋರಾಟ ನಡೆದಿತ್ತು. ಈ ವೇಳೆ ನ್ಯಾಯಪಾಲಿಕೆಗೆ ಗೌರವ ಸೂಚಿಸುತ್ತಿದ್ದೇನೆ. ಪ್ರತಿ ಮನೆಯಲ್ಲಿ ದೀಪಾವಳಿ ಸಡಗರ ಮನೆ ಮಾಡಿದೆ ಎಂದು ಮೋದಿ ನುಡಿದರು.
ರಾಮಸೇತು ಆರಂಭ ಬಿಂದುವಾಗಿ ಅರಿಚಲ್ ಮುನೈಗೆ ಭೇಟಿ ನೀಡಿದ್ದೆ. ಅಲ್ಲಿ ನಿಂತು ಶ್ರೀರಾಮನ ಹೆಜ್ಜೆಗಳ ಅನುಭೂತಿ ಪಡೆಯಲು ಪ್ರಯತ್ನ ಮಾಡಿದ್ದೇನೆ. ಕಳೆದ 11 ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ರಾಮಕಥೆ ಕೇಳುವ ಸೌಭಾಗ್ಯ ನನಗೆ ಸಿಕ್ಕಿತ್ತು ಎಂದರು ಅವರು.
ರಾಮ ಭಕ್ತರು, ರಾಜ ಮಹಾರಾಜರು, ಸಾಧು ಸಂತರು, ಕರಸೇವಕರು, ಜತೆಗೆ ಕೋಟಿ ಕೋಟಿ ಹಿಂದೂಗಳ ಹೋರಾಟಕ್ಕೆ ನಾನು ಚಿರಋಣಿ ಆಗಿದ್ದೇನೆ. ಇತಿಹಾಸ, ನಾಗರೀಕತೆಯನ್ನು ಪುನರುತ್ಥಾನಗೊಳಿಸಲು ಹೊರಟ ದೇಶಗಳಿಗೆ ಅತ್ಯಂತ ಕಠಿಣ ಸವಾಲು ಎದುರಾಗಿದೆ. ಭಾರತ ಕೂಡ ಹಲವು ಸವಾಲು ಎದುರಿಸಿದೆ. ಇಂದು ಭಾರತ ಭವ್ಯ ರಾಮ ಮಂದಿರ ನಿರ್ಮಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಿದೆ. ರಾಮ ಮಂದಿರ ಧೈರ್ಯ, ಶಾಂತಿ, ಸಮನ್ವಯದ ಪ್ರತೀಕವಾಗಿದೆ ಎಂದು ಪ್ರಧಾನಿಗಳು ಹೇಳಿದರು.
ರಾಷ್ಟ್ರೀಯ ಕೀರ್ತನೆಯ ಮಂದಿರ
ರಾಮ ವಿವಾದವಲ್ಲ, ರಾಮ ಭಕ್ತಿಯ ಸಂಕೇತ, ರಾಮ ಎಲ್ಲರಿಗೂ ಸೇರಿದ ಆದರ್ಶ ಪುರುಷ. ಇದು ಕೇವಲ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠೆ ಅಲ್ಲ, ಭಾರತೀಯ ಸಂಸ್ಕೃತಿಗೆ ಪ್ರಾಣಪ್ರತಿಷ್ಠೆಯಾಗಿದೆ. ಇದು ಕೇವಲ ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ಭಾರತದ ದರ್ಶನದ ಮಂದಿರವಾಗಿದೆ. ಇದು ರಾಷ್ಟ್ರೀಯ ಕೀರ್ತನೆಯ ಮಂದಿರವಾಗಿದೆ. ರಾಮ ಭಾರತದ ವಿಚಾರ, ರಾಮ ಭಾರತದ ವಿಕಾಸ, ರಾಮ ಭಾರತದ ಚೇತನ, ರಾಮ ಭಾರತದ ಚಿಂತನೆ, ರಾಮ ಭಾರತದ ಪ್ರತಾಪ, ರಾಮ ಭಾರತದ ಪ್ರಭಾವ, ರಾಮ ನೀತಿಯೂ ಹೌದು, ನಿರಂತರತೆ ಹೌದು. ರಾಮ ವ್ಯಾಪಕವೂ ಹೌದು.. ಎಂದು ಪ್ರಧಾನಿ ಮೋದಿ ನುಡಿದರು.
ತ್ರೇತಾಯುಗದಲ್ಲಿ ರಾಮ ಆಗಮಿಸಿದ್ದ. ಸಾವಿರಾರು ವರ್ಷಗಳ ಕಾಲ ರಾಮರಾಜ್ಯ ನೆಲೆಸಿತ್ತು. ಈಗ ಶ್ರೀರಾಮನ ಭವ್ಯ ಮಂದಿರ ನಿರ್ಮಾಣಗೊಂಡಿದೆ. ಮುಂದೇನು? ಈ ಸಂದರ್ಭದಲ್ಲಿ ಎಲ್ಲಾ ದೇವರು ನಮಗೆ ಆಶೀರ್ವಾದ ಮಾಡಲು ಸೇರಿದ್ದಾರೆ. ನಮ್ಮ ಅಂತಃಕರಣ ವಿಸ್ತಾರ ಮಾಡಬೇಕು, ದೇವರಿಂದ ದೇಶದ ತನಕ, ರಾಮನಿಂದ ರಾಷ್ಟ್ರದ ತನಕ ವಿಸ್ತರಿಸಬೇಕು. ಭಾರತದಲ್ಲಿ ಭಕ್ತಿ, ಸೇವೆ, ಸಮರ್ಪಣೆ ಭಾವ ಭಾರತದ ಆಧಾರವಾಗಿದೆ.
ಪ್ರಧಾನಿ ನರೇಂದ್ರ ಮೋದಿ
ರಾಮ ಬರುತ್ತಾನೆ ಎಂದು ತಾಯಿ ಶಬರಿದೇವಿ ಹೇಳಿದ್ದರು. ದೇಶದಲ್ಲಿ ಸಂಕುಚಿತಗೊಳ್ಳುವ ಅವಶ್ಯಕತೆ ಇಲ್ಲ. ಯಾವುದೇ ಸ್ತರದಲ್ಲಿ ಇರಲಿ, ಪ್ರಯತ್ನಗಳಿಂದ ಸಾಧಕರಾಗಲು ಸಾಧ್ಯ. ಜಟಾಯು ಕರ್ತವ್ಯ ನಿಷ್ಠೆ ನೋಡಿ ನಾವು ಪಾಠ ಕಲಿಯಬೇಕು. ರಾವಣನ ಮುಂದೆ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ ಅನ್ನೋದು ಜಟಾಯುವಿಗೆ ತಿಳಿದಿತ್ತು. ಆದರೂ ಹೋರಾಟ ಮಾಡಿತ್ತು. ಇದು ಸಮರ್ಥ, ಸಕ್ಷಂ, ಭವ್ಯ ದಿವ್ಯ ಭಾರತ ಎಂದು ಮೋದಿ ಹೇಳಿದ್ದಾರೆ.
ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಕಳೆದ 11 ದಿನಗಳಿಂದ ಕಠಿಣ ವ್ರತ ಕೈಗೊಂಡಿದ್ದರು. ಬೆಳ್ಳಿ ಛಾತ್ರ ಹಾಗೂ ವಸ್ತ್ರ ಹಿಡಿದು ಗರ್ಭಗುಡಿ ಪ್ರವೇಶಿಸಿದ ಪ್ರಧಾನಿ; ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯದಲ್ಲಿ ಯಜಮಾನನ ಸ್ಥಾನ ವಹಿಸಿದ್ದರು. ಪ್ರಾಣ ಪ್ರತಿಷ್ಠಾಪನೆಯ ವಿವಿಧ ವಿಧಿಗಳು ಮಧ್ಯಾಹ್ನ 12.20ರಿಂದ ಆರಂಭಗೊಂಡಿತು. ಮೂಲ ಮುಹೂರ್ತ ಮಧ್ಯಾಹ್ನ 12.30ರ ಸುಮಾರಿಗೆ ಪ್ರಾಣಪ್ರತಿಷ್ಠೆ ನೇರವೇರಿಸಲಾಯಿತು. 84 ಸೆಕೆಂಡುಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಬಳಿಕ ಇತರ ವಿಧಿ ವಿಧಾನಗಳನ್ನು 12.55ರೊಳಗೆ ಮುಗಿಸಲಾಯಿತು.