ಅತ್ತ ಕೆಲಸವೂ ಸಿಗಲಿಲ್ಲ, ಇತ್ತ ಬೆಂಗಳೂರಿನಲ್ಲಿ ಮನೆ ಬಾಡಿಗೆಯನ್ನೂ ಕಟ್ಟಲಾಗಲಿಲ್ಲ; ಸರಕಾರಿ ಕಚೇರಿಗಳನ್ನು ಅಲೆದಿದ್ದಷ್ಟೇ ಉಳಿದದ್ದಷ್ಟೇ ಭಾಗ್ಯ!
by GS Bharath Gudibande
ಬೆಂಗಳೂರು: ಕೆಲಸ ಸಿಕ್ಕೇ ಸಿಗುತ್ತದೆ ಎಂದು ಮುಖ್ಯಮಂತ್ರಿಗಳು ಕೊಟ್ಟ ಭರವಸೆಯನ್ನು ನಂಬಿ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿರುವ ವಿಕಲಚೇತನ ಯುವತಿಯೊಬ್ಬರು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಇದು ಹೊಸ ನಮೂನೆಯ ತಬರನ ಕಥೆ.
ಶೇ.75ರಷ್ಟು ಅಂಗವೈಕಲ್ಯ ಹೊಂದಿರುವ ಬಿ.ಎಂ.ನಂದಿತಾ ಎಂಬ ಯುವತಿ ಸರಕಾರಿ ಉದ್ಯೋಗ ಕೊಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನತಾ ದರ್ಶನದಲ್ಲಿ ಮನವಿ ಮಾಡಿದ್ದರು. ಸಿಎಂ ಅವರು ಕೂಡ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಭರವಸೆ ಕೊಟ್ಟು ಎರಡು ತಿಂಗಳೇ ಕಳೆದರೂ ಆ ಯುವತಿಗೆ ಉದ್ಯೋಗ ಸಿಕ್ಕಿಲ್ಲ. ಆಕೆಯ ಅಲೆದಾಟವೂ ತಪ್ಪಿಲ್ಲ.
ಕಳೆದ ನವೆಂಬರ್ 27ರಂದು ನಡೆಸಿದ ಜನತಾದರ್ಶನಕ್ಕೆ ತೆರಳಿದ್ದ ಬಿ.ಎಂ ನಂದಿತಾ ಅವರು ಎಂ.ಕಾಂ ಪದವೀಧರೆ. ತಮ್ಮ ಕಷ್ಟವನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದರು. ಅವರ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಯುವತಿಗೆ ಉದ್ಯೋಗ ನೀಡುವಂತೆ ಆದೇಶ ನೀಡಿದ್ದರು. ಆದರೆ, ಅವರ ಆದೇಶಕ್ಕೆ ಕಿಮ್ಮತ್ತೇ ಸಿಕ್ಕಿಲ್ಲ. ಆ ಕಚೇರಿಗೆ ಹಾಗೂ ಅಧಿಕಾರಿಗಳನ್ನು ಎಷ್ಟು ಸಲ ಭೇಟಿ ಮಾಡಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ನಂದಿತಾ ಅವರು ಅಳಲು ತೋಡಿಕೊಂಡಿದ್ದಾರೆ.
ಸ್ಥಳದಲ್ಲಿಯೇ ಸಮಸ್ಯೆ ಪರಿಹಾರ ಎಂದಿದ್ದ ಸಿಎಂ!!
ಕಾಂಗ್ರೆಸ್ ಸರಕಾರದ ಜನತಾ ದರ್ಶನ ಕಾರ್ಯಕ್ರಮದ ಬಳಿಕ ವಿಕಲಚೇತನ ಯುವತಿಗೆ ಮಾನವೀಯ ನೆರವು ಎಂದು ನೊಂದ ಯುವತಿಯ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅರ್ಜಿ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಹಾಗೂ ಜನರ ಬಳಿಗೆ ಸರಕಾರ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಸಮಸ್ಯೆ ಪರಿಹಾರ ಎಂದು ಪೋಸ್ಟ್ ಮಾಡಲಾಗಿತ್ತು. ಇದೆಲ್ಲಾ ನಡೆದು ಎರಡು ತಿಂಗಳಾದರೂ ಆ ವಿಕಲಚೇತನ ಯುವತಿಯ ಸಂಕಷ್ಟ ನಿವಾರಣೆ ಆಗಿಲ್ಲ.
- ಮುಖ್ಯಮಂತ್ರಿ ಸಚಿವಾಲಯವು ಬಿ.ಎಂ.ನಂದಿತಾ ಮನವಿಯನ್ನು ಪರಿಗಣಿಸಿ ಅವರಿಗೆ ಉದ್ಯೋಗ ಕಲ್ಪಿಸುವಂತೆ ಕೋರಿ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಟಿಪ್ಪಣಿ.
ಬಾಡಿಗೆ ಮನೆಯಿಂದ ಹೊರಹಾಕಿದ ಮಾಲೀಕ
ಅನೇಕಲ್‍ನ ಬಯಾಸಾರಿ ಲೇಔಟ್ ನಿವಾಸಿಯಾಗಿರುವ ನಂದಿತಾ ಅವರು ವಿದ್ಯಾವಂತೆ. ಎಂ.ಕಾಂ ಪದವೀಧರೆ. ವಿಕಲಚೇತನೆಯಾದ ಅವರು ತೊಂದರೆಯಲ್ಲಿದ್ದರು.ಹೀಗಾಗಿ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಆಕಾಂಕ್ಷೆಯಿಂದ ಅವರು ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ನೀಡಿದ ಭರವಸೆಯ ಮೇರೆಗೆ ಆನೇಕಲ್ ಬಿಟ್ಟು ಬೆಂಗಳೂರಿನ ಜೆ.ಪಿ.ನಗರದಲ್ಲಿ ಮನೆ ಮಾಡಿಕೊಂಡು ಉದ್ಯೋಗಕ್ಕೆ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆ ಅವರಿಗೆ ನಿರಾಸೆಯೇ ಎದುರಾಗಿದೆ.
ಅತ್ತ ಕೆಲಸವೂ ಸಿಗದೆ, ಇತ್ತ ಮನೆ ಬಾಡಿಗೆಯನ್ನೂ ಕಟ್ಟಲಾಗದೆ ತೀವ್ರ ಮಾನಸಿಕ ವೇದನೆಗೆ ಗುರಿಯಾದ ಅವರನ್ನು ಮನೆ ಮಾಲೀಕ ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರ ಹಾಕಿದ್ದಾನೆ. ಇದರಿಂದ ಮತ್ತಷ್ಟು ಕಷ್ಟಕ್ಕೆ ಸಿಲುಕಿದ ಅವರು, ಮುಖ್ಯಮಂತ್ರಿ ಅವರು ಆದೇಶ ನೀಡಿದ್ದ ಕಚೇರಿ ಮತ್ತು ಅಧಿಕಾರಿಗಳ ಬಳಿಗೆ ಅಲೆದು ಅಲೆದೂ ಸುಸ್ತಾಗಿದ್ದಾರೆ. ತಮಗೆ ಶೀಘ್ರವೇ ಉದ್ಯೋಗ ಸಿಗುವಂತೆ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು ಎಂದು ಅವರು ಕಣ್ಣೀರು ಹಾಕುತ್ತಾ ಮನವಿ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಅವರು ಕೊಡಸುವ ಉದ್ಯೋಗದಲ್ಲಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆಯಿಂದ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದ ಅವರು ಮನೆ ಮಾಲೀಕನಿಂದ ಅಪಮಾನಕ್ಕೀಡಾದರು. ಕೊನೆಗೆ ಅವರು ತಮ್ಮ ಮಾವನ ಮನೆಯಲ್ಲಿ ಈಗ ಆಶ್ರಯ ಪಡೆದಿದ್ದಾರೆ.
ಮತ್ತೊಂದು ಜನತಾದರ್ಶನಕ್ಕೆ ತಯಾರಿ!!
ಮುಖ್ಯಮಂತ್ರಿಗಳು ನವೆಂಬರ್ 27ರಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆಸಿದ ಜನತಾ ದರ್ಶನದಲ್ಲಿ ಎಷ್ಟು ಜನರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂಬುದು ತಿಳಿದಿಲ್ಲ. ಆದರೆ, 3,812 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 950 ಅರ್ಜಿಗಳನ್ನು ಸ್ವತಃ ಮುಖ್ಯಮಂತ್ರಿಗಳೇ ಸ್ವೀಕರಿಸಿದ್ದಾರೆ. 2862 ಅರ್ಜಿಗಳನ್ನು IPGRS ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದೆ. ಬಹುತೇಕರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಬಣ್ಣ ಬಣ್ಣದ ಪೋಸ್ಟರುಗಳು, ಆಕರ್ಷಕ ತಲೆಬರಹಗಳನ್ನು ಬರೆದು CM ACTS, SLOVED ಎಂದು ಪೋಸ್ಟ್ ಮಾಡಲಾಗಿದೆ.
ನಂದಿತಾ ಅವರು ಬಗ್ಗೆಯೂ ಇದೇ ರೀತಿಯ ಮಾಡಿರುವ ಸಿಎಂ ಕಚೇರಿ, ಸಮಸ್ಯೆ ಬಗೆಹರಿದಿದೆ. ವಿಕಲಚೇತನ ಯುವತಿಗೆ ಮಾನವೀಯ ನೆರವು ಎಂದು ಪೋಸ್ಟ್ ಮಾಡಿದ್ದಾರೆ. ನಂದಿತಾ ಅವರಷ್ಟೇ ಅಲ್ಲದೆ, ಇನ್ನೂ ಅನೇಕರು ಸಿಎಂ ಭರವಸೆ ನೀಡಿದ್ದಾರೆ ಎಂದು ನಂಬಿಕೊಂಡು ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಅಷ್ಟರಲ್ಲೇ ಫೆಬ್ರವರಿ 8ರಂದು ವಿಧಾನಸೌಧದ ಬಳಿ ರಾಜ್ಯ ಮಟ್ಟದ ಜನತಾ ದರ್ಶನ ನಡೆಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ!!
ಮುಖ್ಯಮಂತ್ರಿ ಸಚಿವಾಲಯ ಬಿ.ಎಂ.ನಂದಿತಾ ಮನವಿ ಬಗೆಹರಿದೆ ಎಂದು ಎಕ್ಸ್ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಇಲ್ಲಿದೆ ನೋಡಿ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯನ್ನು ನಂಬಿಕೊಂಡು ನಾನು ಆನೇಕಲ್ ಬಿಟ್ಟು ಬೆಂಗಳೂರಿಗೆ ಬಂದು ಬಾಡಿಗೆ ಮನೆ ಮಾಡಿದೆ. ಆದರೆ, ಸಿಎಂ ಹೇಳಿದಂತೆ ಕೆಲಸ ಸಿಗಲಿಲ್ಲ. ಬಾಡಿಗೆ ಕಟ್ಟಲು ಆಗದೆ ಮನೆಯ ಮಾಲಿಕರಿಂದ ಬೈಸಿಕೊಂಡು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂತು. ಪ್ರಸ್ತುತ ನಮ್ಮ ಮಾವನ ಮನೆಯಲ್ಲಿ ಇದ್ದೇನೆ. ನಾನು ಎಂ.ಕಾಂ ಪದವೀಧರೆಯಾಗಿದ್ದೇನೆ. ಸ್ವಂತ ಬಲದಿಂದ ಉದ್ಯೋಗ ಮಾಡುವ ಛಲವಿದೆ. ದಯಮಾಡಿ ಮುಖ್ಯಮಂತ್ರಿಗಳು ನನಗೆ ಕೆಲಸ ಕೊಡಿಬೇಕು ಎಂದು ಮನವಿ ಮಾಡುತ್ತೇನೆ.
ಬಿ.ಎಂ.ನಂದಿತಾ ವಿಕಲಚೇತನ ಯುವತಿ.
- ನಂದಿತಾ ಅವರ ಅರ್ಜಿ ಬಾಕಿ ಬಿದ್ದಿದೆ ಎನ್ನುವುದನ್ನು ಸೂಚಿಸುವ ದಾಖಲೆ
ಮುಖ್ಯಮಂತ್ರಿಯವರ ಕಚೇರಿಗೆ ಹೋಗಿದ್ದೆ. ಅವರು ಜಿಲ್ಲಾಧಿಕಾರಿಗಳಿಗೆ ನಿಮ್ಮ ಅರ್ಜಿಯನ್ನು ಕಳಿಸಿದ್ದೇವೆ, ನೀವು ಅಲ್ಲಿಯೇ ಹೋಗಿ ವಿಚಾರಿಸಿ ಎಂದು ಹೇಳಿದರು. ಅಲ್ಲಿ ಹೋಗಿ ವಿಚಾರಿಸಿದರೆ ಅವರು ಸ್ಪಂದಿಸುತ್ತಿಲ್ಲ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿದೇರ್ಶಕರ ಬಳಿಯೂ ನಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದೇವೆ, ಅವರೂ ಇಲಾಖೆಯಲ್ಲಿ ನೇರವಾಗಿ ಉದ್ಯೋಗ ಕಲ್ಪಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.
ಚೌಡಯ್ಯ ಯುವತಿಯ ಮಾವ
Really super brither