ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಸ್ಪರ್ಧಿಸಲು ಪೈಪೋಟಿ
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಮತ್ತು ಕೆಲ ಪತ್ರಕರ್ತರು ಸಾಲು ಸಾಲಾಗಿ ರಾಜಕೀಯ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ. ಅಧಿಕಾರದಲ್ಲಿರುವವರು ಮತ್ತು ನಿವೃತ್ತಿ ಹೊಂದಿರುವ ಕೆಲ ಅಧಿಕಾರಿಗಳು ಸಂಸತ್ ಪ್ರವೇಶಿಸಲು ಹಾತೊರೆಯುತ್ತಿದ್ದಾರೆ.
ಪ್ರಭಾವ ಬಳಸಿ ಟಿಕೆಟ್ ಪಡೆಯುವ ಯತ್ನ
ಸುಮಾರು 14ಕ್ಕೂ ಹೆಚ್ಚು ಅಧಿಕಾರಿಗಳು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಅದರಲ್ಲೂ ಬಿಜೆಪಿ ಟಿಕೆಟ್‌ಗೆ ಹೆಚ್ಚು ಆಕಾಂಕ್ಷಿಗಳಾಗಿದ್ದು, ತಮ್ಮ ಪ್ರಭಾವ ಬಳಸಿ ಟಿಕೆಟ್ ಪಡೆಯುವ ಪ್ರಯತ್ನ ಮಾಡಿದ್ದಾರೆ. ಅವರು ಬೆಂಗಳೂರು ಹಾಗೂ ದೆಹಲಿಯಲ್ಲಿರುವ ತಮ್ಮ ಸಂಪರ್ಕ ಬಳಸಿಕೊಂಡು ಟಿಕೆಟ್ʼಗೆ ಪ್ರಯತ್ನ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಕಾರ್ಯಾಲಯ ಸೇರಿ ವಿವಿಧ ಇಲಾಖೆಗಳಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತು ವಿಜೃಂಭಿಸಿದ್ದ, ಸದ್ಯಕ್ಕೆ ನಿವೃತ್ತಿ ಅಂಚಿನಲ್ಲಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಚುನಾವಣೆ ಕಣಕ್ಕಿಳಿಯಲು ಬಯಸಿದ್ದಾರೆ. ಅವರಿಗೆ ಮಾತ್ರ ʼಮೀಸಲಾದʼ ಒಂದು ಕ್ಷೇತ್ರವನ್ನು ಬಿಟ್ಟುಕೊಡಲು ಮೂರು ಪಕ್ಷಗಳಲ್ಲಿಯೂ ಒಲವಿದೆ. ಅವರು ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೋ ಎಂಬುದನ್ನು ಕಾದು ನೋಡಬೇಕಷ್ಟೇ. ಕಳೆದ ಕೆಲ ಚುನಾವಣೆಗಳಲ್ಲಿ ಕಣಕ್ಕಿಳಿದು ಪರಾಭವಗೊಂಡ ಕೆಲವು ಅಧಿಕಾರಿಗಳು ಮರು ಪ್ರಯತ್ನ ಮಾಡಿದ್ದಾರೆ.
ರಾಜಕೀಯ ನಾಯಕರ ಜತೆ ಒಡನಾಟ
ಸರಕಾರಿ ಸೇವೆಯಲ್ಲಿ ಕಾರ್ಯ ನಿರ್ವಹಿಸುವಾಗ ಅಧಿಕಾರಿಗಳು ರಾಜಕೀಯ ಪಕ್ಷಗಳ ಮುಖಂಡರೊಂದಿಗಿನ ಒಡನಾಟವಿರುತ್ತದೆ. ಅದರಲ್ಲೂ ಕರ್ನಾಟಕ ಮೂಲದ ಅಧಿಕಾರಿಗಳಿಗೆ ರಾಜಕೀಯ ಪಕ್ಷಗಳು ಹಿಂದೆ ಟಿಕೆಟ್ ನೀಡಿವೆ. ಮುಂದೆಯೂ ನೀಡುವ ಸಾಧ್ಯತೆಗಳಿವೆ. ಈ ಪೈಕಿ ಕೆಲ ಅಧಿಕಾರಿಗಳು ಆಯಕಟ್ಟಿನ ಜಾಗದಲ್ಲಿದ್ದರು. ಇವರ ಹೆಸರು ಪ್ರಮುಖವಾಗಿ ಕೋಲಾರ ಮೀಸಲು ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಅವರೆಲ್ಲರೂ ಪ್ರಭಾವೀ ರಾಜಕಾರಣಿಗಳ ಪಡಸಾಲೆಯಲ್ಲಿ ನಿರಂತರವಾಗಿ ಪ್ರತ್ಯಕ್ಷರಾಗುತ್ತಿದ್ದರು.
ಇನ್ನೊಬ್ಬ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಮೂರು ಪಕ್ಷಗಳಿಗೂ ಕೆಲವು ಕ್ಷೇತ್ರಗಳಲ್ಲಿ ವರ್ಚಸ್ವಿ ಮತ್ತು ಸಮರ್ಥ ಅಭ್ಯರ್ಥಿಗಳಿಲ್ಲ. ಅಂತಹ ಕ್ಷೇತ್ರಗಳಿಗೆ ಈ ಅಧಿಕಾರಿಗಳನ್ನು ಕಣಕ್ಕಿಳಿಸಬೇಕು ಎಂಬ ಉದ್ದೇಶ ರಾಜಕೀಯ ಪಕ್ಷಗಳಲ್ಲಿದೆ. ಕಣಕ್ಕಿಳಿಯುವ ಅಧಿಕಾರಿಗಳು ಚುನಾವಣೆಯ ವೆಚ್ಚವನ್ನು ಅವರೇ ಭರಿಸುಕೊಳ್ಳುತ್ತಾರೆ ಎಂಬ ಲೆಕ್ಕಾಚಾರವಿದೆ.
ಆ ರೀತಿಯ ಸಾಮರ್ಥ್ಯ ಇರುವ ಅಧಿಕಾರಿಗಳೇ ಸ್ಪರ್ಧೆ ಬಗ್ಗೆ ಆಸಕ್ತಿ ತೋರಿರುವುದು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿದವರಿಗೆ ಕೆಲ ಸೀಟುಗಳನ್ನು ನೀಡುವ ಚಿಂತನೆ ಬಿಜೆಪಿಯಲ್ಲಿದೆ. ಅದನ್ನು ಬಂಡವಾಳ ಮಾಡಿಕೊಳ್ಳಲು ಈ ಹಾಲಿ, ನಿವೃತ್ತ ಅಧಿಕಾರಿಗಳು ಶತಪ್ರಯತ್ನ ನಡೆಸಿದ್ದಾರೆ. ಚುನಾವಣೆ ಕಣಕ್ಕಿಳಿಯಲು ಬಯಸಿ ಸೇವೆಯಲ್ಲಿರುವ ಕೆಲ ಅಧಿಕಾರಿಗಳು ಕೂಡ ಸ್ವಯಂ ನಿವೃತ್ತಿ ಪಡೆಯಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನವರು ಈ ವರ್ಷ ನಿವೃತ್ತಿಯಾಗುವವರು ಇದ್ದಾರೆ.
2ನೇ ಹಂತದ ಅಧಿಕಾರಿಗಳ ಯತ್ನ
ಜತೆಗೆ ಕಂದಾಯ, ಪೊಲೀಸ್, ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಎರಡನೇ ಹಂತದ ಅಧಿಕಾರಿಗಳು ತೆರೆಮರೆಯಲ್ಲಿ ಟಿಕೆಟ್ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೆ ಟಿಕೆಟ್ ದೊರೆಯುತ್ತದೋ ಎಂಬುದನ್ನು ಕಾದು ನೋಡಬೇಕಿದೆ. ಈ ಪೈಕಿ ಕೆಎಎಸ್ ಅಧಿಕಾರಿಗಳಲ್ಲಿ ಕೆಲವರು ಟಿಕೆಟ್ ಪಡೆಯಲು ಮೂರು ಪಕ್ಷಗಳ ವರಿಷ್ಠರ ಮನೆಗಳಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ.
ಪತ್ರಕರ್ತರೂ ಹಿಂದೆ ಬಿದ್ದಿಲ್ಲ
ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಮಾಧ್ಯಮದಲ್ಲಿರುವ ಮಂದಿಯೂ ಸಂಸತ್ ಭವನಕ್ಕೆ ಲಗ್ಗೆ ಇಡಲು ಹಾತೊರೆಯುತ್ತಿದ್ದಾರೆ. ರಾಜ್ಯದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸುದ್ದಿಮನೆಯಿಂದ ಸಂಸತ್ತಿಗೆ ಜಿಗಿದ ನಂತರ ಅನೇಕ ಪತ್ರಕರ್ತರಿಗೆ ಲೋಕಸಭೆ ಕನಸು ನಿರಂತರವಾಗಿದೆ.
ರಾಜ್ಯ ಮತ್ತು ರಾಷ್ಟ್ರೀಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿರುವ ಮತ್ತು ಸಲ್ಲಿಸುತ್ತಿರುವವರು ಬಿಜೆಪಿ ಟಿಕೆಟ್ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ವೃತ್ತಿಯಲ್ಲಿ ಇದ್ದಾಗಲೇ ರಾಜಕೀಯ ಪಕ್ಷಗಳ ಜತರ ಪರೋಕ್ಷವಾಗಿ ಗುರುತಿಸಿಕೊಂಡಿದ್ದ ಪತ್ರಕರ್ತರಲ್ಲಿ ಕೆಲವರು ಈಗ ಟಿಕೆಟ್ ಬೇಟೆ ಆರಂಭ ಮಾಡಿದ್ದಾರೆ.
ಈಗಾಗಲೇ ಸಂಪಾದಕ ಹುದ್ದೆಯಲ್ಲಿ ಒಬ್ಬ ಪತ್ರಕರ್ತರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡು ತಮ್ಮ ಪ್ರಭಾವ ವಿಸ್ತಾರ ಮಾಡಿಕೊಂಡಿದ್ದಾರೆ. ಇವರು ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ʼಗೆ ಲಾಬಿ ಆರಂಭ ಮಾಡಿದ್ದಾರೆ. ಆದರೆ, ಅಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆ ಬಹಳ ಕ್ರಿಯಾಶೀಲರಾಗಿದ್ದಾರೆ. ಆದರೆ, ಅವರ ವಿರುದ್ಧ ಕೆಲ ಪತ್ರಕರ್ತರೇ ಬಿಜೆಪಿ ವರಿಷ್ಠರ ಕಿವಿ ಕಚ್ಚುತ್ತಿದ್ದಾರೆ. ಹಿಂದೆ ಎರಡು ಪತ್ರಿಕೆಗಳ ಸಂಪಾದಕರಾಗಿದ್ದ ಅವರು ನೂರಾರು ಪತ್ರಕರ್ತರು ಕೆಲಸ ಕಳೆದುಕೊಳ್ಳುವುದಕ್ಕೆ ಕಾರಣರಾಗಿದ್ದರು ಎಂಬ ಆರೋಪವಿದೆ. ಆ ಹಳೆಯ ಸೇಡು ಈಗ ಅವರಿಗೆ ಮುಳುವಾಗಿದೆ.
ಅಲ್ಲದೆ, ಇವರು ಮೊದಲು ಬಿ.ಎಲ್.ಸಂತೋಷ್ ಅವರ ಕ್ಯಾಂಪಿನಲ್ಲಿದ್ದರು. ತದ ನಂತರ ಅವರ ವಿರೋಧಿ ಕ್ಯಾಂಪಿಗೆ ಜಿಗಿದಿದ್ದರು. ಈ ಜಿಗಿತವೂ ಅವರ ಟಿಕೆಟ್ಟಿಗೆ ಮುಳುವಾಗುವ ಸಾಧ್ಯತೆ ಇದೆ.
ಇನ್ನೊಂದು ವಾಹಿನಿ ಸಂಪಾದಕರೊಬ್ಬರು ಕೂಡ ಸಂಸತ್ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಉಡುಪಿ-ಚಿಕ್ಕಮಗಳೂರು ಅಥವಾ ಉತ್ತರ ಕರ್ನಾಟಕದ ಯಾವುದಾರೂ ಒಂದು ಕ್ಷೇತ್ರಕ್ಕೆ ಅವರು ಕಸರತ್ತು ನಡೆಸುತ್ತಿದ್ದಾರೆ. ಈ ಇಬ್ಬರು ಪತ್ರಕರ್ತರಿಗೆ ಸಂಘ ಪರಿವಾರದ ಕೃಪೆ ಇದ್ದರೂ ಬಿಜೆಪಿಯಲ್ಲಿ ವಿರೋಧವಿದೆ.
ಉತ್ತರ ಕರ್ನಾಟಕ ಭಾಗದ ಒಬ್ಬರು, ಮೈಸೂರು ನಗರದ ಇನ್ನೊಬ್ಬ ಪತ್ರಕರ್ತರು ಟಿಕೆಟ್ ಗೆ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ಇನ್ನೂ ಹಲವರು ಪತ್ರಕರ್ತರು ಕಮಲದ ಟಿಕೆಟ್ ಪಡೆಯಲು ಭಾರೀ ಪ್ರಯತ್ನ ಮಾಡಿದ್ದಾರೆ. ಪತ್ರಕರ್ತರಾಗಿದ್ದ ಪ್ರತಾಪಸಿಂಹ ಅವರು ಎರಡು ಬಾರಿ ಮೈಸೂರಿನ ಸಂಸದರಾಗಿ ಆಯ್ಕೆಗೊಂಡ ನಂತರ ಕೆಲವು ಪತ್ರಕರ್ತರಲ್ಲಿ ಸಂಸತ್ ಪ್ರವೇಶಿಸುವ ಆಸೆ ಇಮ್ಮಡಿಗೊಂಡಿದೆ. ಈ ಆಸೆಯಿಂದಲೇ ಅನೇಕ ಪತ್ರಕರ್ತರು ಬಿಜೆಪಿ, ಸಂಘ ಪರಿವಾರದ ಪರಿಚಾರಿಕೆ ಮಾಡಿಕೊಂಡು ಬಂದಿದ್ದಾರೆ.