ಕೇಂದ್ರ ಗೃಹ ಸಚಿವರಿಂದ ಶಾಮನೂರು ಅತಿಥಿ ಗೃಹ ಉದ್ಘಾಟನೆ
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಹಿಂದೆ ಸರಿದಿದ್ದ ವೀರಶೈವ ಹಾಗೂ ನಾಯಕ ಸಮುದಾಯದವರ ಮನ ಗೆಲ್ಲಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಅವರು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಈ ಸಮಾಜಗಳಿಗೆ ಸೇರಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದಲ್ಲದೆ, ಲೋಕಸಭೆ ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಮುಖಂಡರೊಂದಿಗೆ ವ್ಯಾಪಕ ಚರ್ಚೆ ನಡೆಸಲಿದ್ದಾರೆ.
ಶಾಮನೂರು ಕಾರ್ಯಕ್ರಮ
ಸಿದ್ದರಾಮಯ್ಯ ಸರಕಾರದ ವಿರುದ್ಧ ಪದೆ ಪದೇ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಮತ್ತೆ ಲೋಕಸಭೆಗೆ ಆಯ್ಕೆಗೊಳ್ಳಬೇಕೆಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ನ ಹಿರಿಯ ಮುತ್ಸದ್ಧಿ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮೈಸೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲೂ ಶಾ ಅವರು ಭಾಗವಹಿಸುತ್ತಿದ್ದಾರೆ.
ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ಶಾಮನೂರು ಅವರು ತಮ್ಮ ಕುಟುಂಬದ ವತಿಯಿಂದ ನಿರ್ಮಿಸಿರುವ ಅತಿಥಿಗೃಹದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದಲೇ ಶಾ ಅವರು ಈ ಪ್ರವಾಸ ಕೈಗೊಂಡಿದ್ದಾರೆ.
ಅಂದಿನ ಸಮಾರಂಭಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಕೇಂದ್ರ ಗೃಹ ಸಚಿವಾಲಯ, ಶ್ರೀಕ್ಷೇತ್ರದ ಪ್ರಮುಖರು ತೀರ್ಮಾನಿಸಿದ್ದಾರೆ. ಆದರಲ್ಲೂ ಶಾಮನೂರು ಅವರ ನಿರ್ಧಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ ಎನ್ನಲಾಗಿದೆ.
ಸಿದ್ದರಾಮಯ್ಯಗೆ ಆಹ್ವಾನ ನೀಡಿಲ್ಲ
ಈ ಸಮಾರಂಭಕ್ಕೆ ಮೈಸೂರು ಜಿಲ್ಲೆ, ಕ್ಷೇತ್ರವನ್ನು (ವರುಣ) ಪ್ರತಿನಿಧಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ, ಅಷ್ಟೇ ಅಲ್ಲ; ಸ್ಥಳೀಯ ಉಸ್ತುವಾರಿ ಸಚಿವರಿಗೂ ವೇದಿಕೆಯಲ್ಲಿ ಅವಕಾಶವಿಲ್ಲ. ಶಾಮನೂರು ಕುಟುಂಬದ ಸ್ನೇಹಿತರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿದ್ದಗಂಗಾ ಕ್ಷೇತ್ರದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಸಮ್ಮುಖದಲ್ಲಿ ಅಮಿತ್ ಶಾ ಅವರು ಪಾರ್ವತಮ್ಮ ಮತ್ತು ಡಾ.ಶಾಮನೂರು ಶಿವಶಂಕರಪ್ಪ ಅತಿಥಿ ಗೃಹವನ್ನು ಉದ್ಘಾಟಿಸಲಿದ್ದಾರೆ.
ಎಲ್ಲದಕ್ಕೂ ಮಿಗಿಲಾಗಿ ಈ ಸಮಾರಂಭಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಶಾಮನೂರುಗೆ ಶಾರಿಂದ ಸನ್ಮಾನ
ಉಳಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ಮುಖಂಡರಾದ ಸಿ.ಟಿ, ರವಿ, ಡಾ.ಪ್ರಭಾಕರ್ ಕೋರೆ, ಉದ್ಯಮಿ ಎಸ್.ಎಸ್.ಗಣೇಶ್ ಉಪಸ್ಥಿತರಿರಲಿದ್ದಾರೆ. ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರನ್ನು ಅಮಿತ್ ಶಾ ಸನ್ಮಾನಿಸಲಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನವೋ, ನಂತರವೋ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಪತನಗೊಂಡು ಮಹಾರಾಷ್ಟ್ರ ಮಾದರಿಯಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ.
ಈ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಕೇಂದ್ರದ ಮಾಜಿ ಸಚಿವ ಪ್ರಫುಲ್ ಪಟೇಲ್, ರಾಜ್ಯದ ಇಬ್ಬರು ಕಾಂಗ್ರೆಸ್ ಧುರೀಣರೊಟ್ಟಿಗೆ ಸಂಪರ್ಕ ಇಟ್ಟುಕೊಂಡಿರುವ ಬೆನ್ನಲ್ಲೇ ಅಮಿತ್ ಶಾ ಅವರ ಈ ಭೇಟಿ ರಾಜಕೀಯ ತಿರುವಿಗೆ ವೇದಿಕೆ ಆಗಲಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಅತಿ ಪ್ರಮುಖವಾಗಿ ಕುಮಾರಸ್ವಾಮಿ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿವುದು ಎಲ್ಲರ ಗಮನ ಸೆಳೆದಿದೆ.