ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಸಣ್ಣ ನೀರಾವರಿ ಸಚಿವರು & ಪರಿಸರ ಸಚಿವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲು ಮನವಿ
ಬೆಂಗಳೂರು: ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಬೆಂಗಳೂರಿನ ಅರೆ ಸಂಸ್ಕರಿತ ತ್ಯಾಜ್ಯ ನೀರು ಹರಿಸುವ ಮೊದಲು ಆ ಕೊಚ್ಚೆ ನೀರನ್ನು ತೃತೀಯ ಹಂತದ ಸಂಸ್ಕರಣೆಗೆ ಒಳಪಡಿಸುವಂತೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು, ಸಣ್ಣ ನೀರಾವರಿ ಸಚಿವರು ಮತ್ತು ಪರಿಸರ ಸಚಿವರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಅವರ ನೇತೃತ್ವದಲ್ಲಿ ಭಾನುವಾರ ರಾಜಭವನಕ್ಕೆ ನಿಯೋಗದಲ್ಲಿ ತೆರಳಿದ ಸಮಿತಿ ಸದಸ್ಯರು, ಮೂರು ಜಿಲ್ಲೆಯ ಜಲ ಸಂಕಷ್ಟವನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಕಣ್ಣಿಗೆ ಕಟ್ಟುವಂತೆ ಮನವರಿಕೆ ಮಾಡಿಕೊಟ್ಟಿತು.
ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಹೀಗಿದೆ
ಬಯಲುಸೀಮೆಯ ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮಳೆಯಾಶ್ರಿತ, ಅಂತರ್ಜಲ ಅತಿಬಳಕೆ ಪ್ರದೇಶಕ್ಕೆ ಸೇರಿವೆ, ಸ್ವಾತಂತ್ರ್ಯ ಬಂದ ನಂತರ ನದಿ ನಾಳೆಗಳಿಲ್ಲದ, ಶಾಶ್ವತ ನೀರಾವರಿ ಸೌಲಭ್ಯಗಳಿಂದ ವಂಚಿತವಾದ ಕಾರಣ ಇಲ್ಲಿನ ರೈತರು ತಮ್ಮ ಕುಡಿಯುವ ನೀರು ಮತ್ತು ಕೃಷಿ ಬಳಕೆಗಾಗಿ 15,00 ಅಡಿ ಆಳದ ಕೊಳವೆ ಬಾವಿಗಳನ್ನು ಕೊರೆಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇದರಿಂದ ಅಂತರ್ಜಲ ಪಾತಾಳಕ್ಕೆ ಕುಸಿದಿದೆ, ಮಾತ್ರವಲ್ಲದೆ ಆಳದಲ್ಲಿ ಸಿಗುವ ನೀರು ಕುಡಿಯಲು ಮಾತ್ರವಲ್ಲದೆ ಕೃಷಿಗೂ ಅಯೋಗ್ಯವಾಗಿದೆ. ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಮತ್ತು ನೈಟ್ರೇಟ್‌ಗಳ ಜತೆಗೆ, ಯುರೇನಿಯಂ ಮತ್ತು ಆರ್ಸೆನಿಕ್ ಕಣಗಳು ಪತ್ತೆಯಾಗಿರುವುದು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಸಂಶೋಧನೆಯಲ್ಲಿ ದೃಢಪಟ್ಟಿದೆ. ಇದು ಕುಡಿಯುವ ನೀರು ಹಾಗೂ ಕೃಷಿ ಬೆಳೆಗಳನ್ನು ವಿಷಪೂರಿತಗೊಳಿಸುವುದರ ಜೊತೆಗೆ ಜನರು ಮತ್ತು ಜಾನುವಾರುಗಳನ್ನು ಮಾರಣಾಂತಿಕ ಕಾಯಿಲೆಗಳಿಗೆ ದೂಡುತ್ತಿದೆ.
ಬರಪೀಡಿತ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಅವೈಜ್ಞಾನಿಕ ಎತ್ತಿನಹೊಳೆ ಯೋಜನೆ ಇಲ್ಲಿಯವರೆಗೂ ಯಾವುದೇ ಪರಿಹಾರವನ್ನು ನೀಡುವಲ್ಲಿ ವಿಫಲವಾಗಿದೆ, ಪರಿಹಾರವಾಗಿ ಬೆಂಗಳೂರು ನಗರದ ಎರಡು ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸಿ ಅಂತರ್ಜಲವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಮ್ಮ ಜಿಲ್ಲೆಗಳ ಜನಸಾಮಾನ್ಯರ ಸಂಕಟವನ್ನು ಉಂಟುಮಾಡಿದೆ.
ಅಂತರ್ಜಲವನ್ನು ಪುನಾ ತುಂಬಿಸುವ ಪ್ರಯತ್ನದಲ್ಲಿ, ರಾಜ್ಯ ಸರಕಾರವು 2018ರಲ್ಲಿ ಬೆಂಗಳೂರಿನಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪಂಪ್ ಮಾಡುವ ಮೂಲಕ ಕೆಲವು ಆಯ್ದ ಕೆರೆಗಳನ್ನು ತುಂಬಲು ಪ್ರಾರಂಭಿಸಿತು. ಭರವಸೆ ನೀಡಿದಂತೆ, ಸರಕಾರವು ನೀರಿನ ತೃತೀಯ ಸಂಸ್ಕರಣೆಯನ್ನು ಖಾತ್ರಿಪಡಿಸುವ ಬದಲು, ಅವರು ಕುಡಿಯುವ ನೀರನ್ನು ಒದಗಿಸಲು ಕೊರೆಸಿರುವ ಕೊಳವೆಬಾವಿಗಳು ಹೊಂದಿರುವ ಕೆರೆಗಳನ್ನು ಎರಡು ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸಿ ಅಂತರ್ಜಲವನ್ನು ಕಲುಷಿತಗೊಳಿಸುವುದಲ್ಲದೆ, ಮೀನುಗಳು ಮತ್ತು ಇತರ ಜಲಚರಗಳ ಸಾವಿಗೆ ಕಾರಣವಾಗುವುದರಿಂದ ಕೆರೆಗಳ ಜೀವವೈವಿಧ್ಯ ನಾಶಕ್ಕೆ ಕಾರಣವಾಗಿವೆ.
ಆದರೆ, ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಮರುಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಪಾಲಿಸುತ್ತಿಲ್ಲ. 2013 ರಲ್ಲಿ, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ, ಕೇಂದ್ರ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಎಂಜಿನಿಯರಿಂಗ್ ಸಂಸ್ಥೆ (CPHEEO), ನವದೆಹಲಿ ಮತ್ತು ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಜಂಟಿಯಾಗಿ ರೂಪಿಸಿದ ಕೊಳಚೆ ಮತ್ತು ಒಳಚರಂಡಿ ಸಂಸ್ಕರಣಾ ವ್ಯವಸ್ಥೆಗಳ ಕೈಪಿಡಿಯನ್ನು ಹೊರತಂದಿದೆ. ಇದನ್ನು ಎಲ್ಲಾ ರಾಜ್ಯ ಸರಕಾರಗಳು ಒಪ್ಪಿಕೊಂಡಿವೆ.
ಕೊಳಚೆ ಮತ್ತು ಒಳಚರಂಡಿ ಸಂಸ್ಕರಣಾ ಮಾನದಂಡಗಳ ಕೈಪಿಡಿಯ ಪ್ರಕಾರ ಮುಖ್ಯ ಶಿಫಾರಸುಗಳಲ್ಲಿ ಒಂದೆಂದರೆ ಅಗತ್ಯವಿರುವ ಸಂಸ್ಕರಣಾ ತಂತ್ರಗಳನ್ನು ಅನುಸರಿಸುವ ಮೂಲಕ ಒಳಚರಂಡಿ ನೀರಿನ ಕಡ್ಡಾಯ ಮೂರು ಹಂತಗಳಲ್ಲಿ ಸಂಸ್ಕರಣೆಯಾಗಬೇಕಿದೆ. ಎಲ್ಲಾ ಮಾರ್ಗಸೂಚಿಗಳು ನಿರ್ದಿಷ್ಟವಾಗಿ, ಬೆಂಗಳೂರಿನ ಕೊಳಚೆ ಮತ್ತು ಒಳಚರಂಡಿ ನೀರಿನ ತೃತೀಯ ಸಂಸ್ಕರಣೆ ಅತ್ಯಗತ್ಯ ಎಂದು ಹೇಳಿದೆ.
ಕರ್ನಾಟಕ ಸರಕಾರವು ಮೇಲಿನ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಬೆಂಗಳೂರಿನ ಹೆಬ್ಬಾಳ-ನಾಗವಾರ ಕಣಿವೆ (ಎಚ್‌ಎನ್ ವ್ಯಾಲಿ) ಮತ್ತು ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ (ಕೆಸಿ ವ್ಯಾಲಿ) ಯಿಂದ ದ್ವಿತೀಯ ಸಂಸ್ಕರಿಸಿದ ನೀರನ್ನು ಕೋಲಾರದ ಕೆಲವು ಆಯ್ದ ಸಣ್ಣ ನೀರಾವರಿ ಕೆರೆಗಳಿಗೆ ಹರಿಸುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ವಿಷಪೂರಿತವಾಗಿ ಜನ ಮತ್ತು ಜಾನುವಾರುಗಳ ಜೀವಕ್ಕೆ ಸರಿಪಡಿಸಲಾಗದ ಹಾನಿಯಾಗಿದೆ.
ಆದ್ದರಿಂದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ವೈಜ್ಞಾನಿಕ ಕಳವಳಗಳನ್ನು ಪರಿಹರಿಸಿ, ರಾಜ್ಯ ಸರ್ಕಾರವು 2023-24 ನೇ ಸಾಲಿನ ಬಜೆಟ್‌ನಲ್ಲಿ (2023 ರ ವಿಧಾನಸಭಾ ಚುನಾವಣೆಗೆ ಮೊದಲು ಅಂದಿನ ಹಣಕಾಸು ಮಂತ್ರಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದಂತೆ ) ತೃತೀಯ ಹಂತದ ಶುದ್ಧೀಕರಿಸಿದ ನೀರನ್ನು ಹರಿಸುವ ಭರವಸೆ ನೀಡಿತ್ತು. ಆದಾಗ್ಯೂ, ಚುನಾವಣೆಯ ನಂತರದ ನಂತರದ ಸರಕಾರವು ತನ್ನ ಬಜೆಟ್‌ನಲ್ಲಿ ಅದಕ್ಕೆ ಹಣವನ್ನು ಮೀಸಲಿಡುವ ಬಗ್ಗೆ ಏನನ್ನೂ ಉಲ್ಲೇಖಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಬರಪೀಡಿತ ಜಿಲ್ಲೆಗಳನ್ನು ಉಳಿಸಲು ಆದ್ಯತೆಯ ಆಧಾರದ ಮೇಲೆ ತೃತೀಯ ಹಂತದ ಸಂಸ್ಕರಣಾ ಸೌಲಭ್ಯಗಳೊಂದಿಗೆ ಎಸ್‌ಟಿಪಿಗಳನ್ನು ಉನ್ನತೀಕರಣಗೊಳಿಸಲು ಅಗತ್ಯವಾದ ಹಣ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಮತ್ತು ಸಚಿವರುಗಳಿಗೆ ನಿರ್ದೇಶನ ನೀಡಲು ನಿಮ್ಮ ಸಮಯೋಚಿತ ಮಧ್ಯಸ್ಥಿಕೆಯನ್ನು ನಾವು ಬಯಸುತ್ತೇವೆ.
ಯಾರು ಏನೆಂದರು?
ನೀರಾವರಿ ವಿಚಾರದಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಮೇಲೆ ನಡೆಯುತ್ತಿರುವ ಸರಕಾರಿ ಪ್ರಾಯೋಜಿತ ದೌರ್ಜನ್ಯ, ಶೋಷಣೆ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಈ ಭಾಗದ ಅಂತರ್ಜಲದಲ್ಲಿ ಫ್ಲೋರೋಸಿಸ್ ಕಂಡಾಯಿತು, ಆಮೇಲೆ ಅರೆ ಸಂಸ್ಕರಿತ ನೀರಿನಲ್ಲಿ ವಿಷಕಾರಿ ಲವಣಾಂಶಗಳೆಲ್ಲ ಕೆರೆಗಳನ್ನು ಸೇರಿ ಅಂತರ್ಜಲ ವಿಷ ಆಗಿದ್ದೂ ಆಯಿತು. ಅದಾದ ಮೇಲೆ ನೀರಿನಲ್ಲಿ ಯುರೇನಿಯಂ ಅಂಶವೂ ಕಾಣಿಸಿಕೊಂಡಿತು. ಜನ ಜಾನುವಾರುಗಳು ಸಾವಿನ ದವಡೆಯಲ್ಲಿ ಇದ್ದರೂ ಸರಕಾರಕ್ಕೆ ಅದನ್ನು ಸರಿ ಮಾಡುವ ನಾಗರಿಕ ಪ್ರಜ್ಞೆಯೇ ಇಲ್ಲವಾಗಿದೆ. ನಮ್ಮ ಮನವಿಗೆ ರಾಜ್ಯಪಾಲರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ.
ಆರ್.ಆಂಜನೇಯ ರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ