ಭಾಗ್ಯನಗರದಲ್ಲಿ ಬಿರುಸಿನ ತಯಾರಿ; ತಾಲೂಕು ಕಸಾಪ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾಹಿತಿ
ಬಾಗೇಪಲ್ಲಿ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ‘ಬಾಗೇಪಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ’ ವನ್ನು ಮಾರ್ಚ ೨ರಂದು ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಳ್ಳಲು ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಸಮ್ಮೇಳನಾಧ್ಯಕ್ಷರನ್ನಾಗಿ ಉದಯಕುಮಾರ್ ಎಸ್. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಗಡಿ ತಾಲ್ಲೂಕಿನಲ್ಲಿ ೩ ದಶಕಗಳ ಕಾಲ ಕಲೆ.ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕನ್ನಡ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಚುಟುಕು ಸಾಹಿತಿ, ಕಲಾವಿದ, ನಿರ್ದೇಶಕರಾದ ಬಾಗೇಪಲ್ಲಿಯ ಉದಯ ಕುಮಾರ್ ಎಸ್. ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದಿದ್ದಾರೆ.
- ಬಾಗೇಪಲ್ಲಿಯಲ್ಲಿ ನಡೆದ ಕಸಾಪ ಪದಾಧಿಕಾರಿಗಳು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಎಲ್ಲಾ ಕನ್ನಡದ ಮನಸ್ಸುಗಳ ಬೆಂಬಲ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಬಾಗೇಪಲ್ಲಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವ ಆಶಯ ನಮ್ಮದಾಗಿದ್ದು ಗಡಿ ತಾಲ್ಲೂಕಿನ ಕೇಂದ್ರದಲ್ಲಿ ಸಂಪೂರ್ಣ ಕನ್ನಡವಾತಾವರಣ ನಿರ್ಮಿಸುವ ಭರವಸೆಯಿದೆ. ಎಲ್ಲಾ ಕಸಾಪ ಅಜೀವ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಪೂರ್ವಭಾವಿ ಸಭೆ
ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳ, ಕನ್ನಡಪರ ಹಾಗೂ ವಿವಿದ ಸಂಘಟನೆಗಳ ಮುಖಂಡರ ಸಭೆಯನ್ನು ಸೋಮವಾರ ಬೆಳಗ್ಗೆ ೧೧ ಗಂಟೆಗೆ ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ಪ್ರಶಾಂತ್ ಕೆ.ಪಾಟೀಲ ಅವರು ಪೂರ್ವಭಾವಿ ಸಭೆಯನ್ನು ಕರೆದಿದ್ದು, ಎಲ್ಲಾ ಕಸಾಪ ಸದಸ್ಯರು, ಪದಾಧಿಕಾರಿಗಳು, ಕನ್ನಡದ ಮನಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮೂಲ್ಯ ಸಲಹೆಗಳನ್ನು ನೀಡಿ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನಡೆಸಲು ಸಹಕರಿಸಬೇಕು ಎಂದು ಕೃಷ್ಣಾರೆಡ್ಡಿ ಅವರು ಕೋರಿದರು.
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಜಿ.ಸುಧಾಕರ್, ಗೌರವ ಕಾರ್ಯದರ್ಶಿಗಳಾದ ಎನ್.ಶಿವಪ್ಪ, ಶ್ರೀನಿವಾಸ್ ಬಾಣಾಲಪಲ್ಲಿ, ಕೋಶಾಧ್ಯಕ್ಷ ಡಾ.ಚಿನ್ನಕೈವಾರಮಯ್ಯ, ಆರ್.ಹನುಮಂತರೆಡ್ಡಿ, ಡಾ.ಕೆ.ಎಂ.ನಯಾಜ್ ಅಹಮದ್, ಪಿ.ವೆಂಕಟರಮಣಪ್ಪ, ಮಹಮದ್ ಎಸ್.ನೂರುಲ್ಲಾ, ಪಿ.ಎಸ್.ರಾಜೇಶ್, ಎಂ.ಸಿ.ಆಶ್ವತ್ಥಪ್ಪ, ಸುಕನ್ಯ, ಧರ್ಮಪುತ್ರಿ, ಬಿ.ಎಸ್.ಸುರೇಶ್, ಸಿ.ವೆಂಕಟರಾಯಪ್ಪ, ಪಿ.ಜಿ.ಶಿವಶಂಕರಾಚಾರಿ, ಪಿ.ಅಂಜಿನಪ್ಪ, ರಾ.ನಾ.ಗೋಪಾಲರೆಡ್ಡಿ, ರಾಮಚಂದ್ರ, ಮುಸ್ತಫಾ, ಶಬ್ಬೀರ್ ಬಾಷ ಮತ್ತಿತರರು ಉಪಸ್ಥತಿರಿದ್ದರು.