ಜಿ.ಎ.ಶಂಕರ್; ಐತಿಹಾಸಿಕ ಗುಡಿಬಂಡೆ ಹೋರಾಟಗಳ ಮುಂಚೂಣಿ ನಾಯಕ, ೬ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಗೌರವ
ಗುಡಿಬಂಡೆ: ಐತಿಹಾಸಿಕ ಗುಡಿಬಂಡೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರದ ಕೇಂದ್ರ ಸ್ಥಾನವಾಗಬೇಕು ಎಂಬ ಕೂಗಿಗೆ ಈಗ ಕಾಲು ಶತಮಾನ. ಅಂದು ಈ ಧ್ವನಿ ಎತ್ತಿದ ಹೋರಾಟಗಾರ ಹಾಗೂ ಗುಡಿಬಂಡೆ ವಿಧಾನಸಭಾ ಕ್ಷೇತ್ರ ಹೋರಾಟ ಕ್ರಿಯಾ ಸಮಿತಿಯ ಕಾರ್ಯದರ್ಶಿಯಾಗಿದ್ದ ಜಿ.ಎ.ಶಂಕರ್ ಅವರಿಗೆ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿ ಗೌರವಿಸಲಾಗುತ್ತಿದೆ. ಸಮ್ಮೇಳನ ಇಂದಿಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಸಮ್ಮೇಳನದಲ್ಲಿ ಗೌರವಿಸಲ್ಪಡುವ ಸಾಧಕರಲ್ಲಿ ಹೋರಾಟಗಾರ ಜಿ.ಎ.ಶಂಕರ್ ಅವರ ಹೆಸರಿದ್ದು, ಸ್ಥಳೀಯರಿಗೆ ಸಂತಸ ಉಂಟು ಮಾಡಿದೆ.ಇವರ ಜತೆಗೆ ಇನ್ನೂ ಹಲವಾರು ಹೋರಾಟಗಾರರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದ ಈ ಹೋರಾಟವು ಈವರೆಗೂ ಫಲ ಕೊಟ್ಟಿಲ್ಲವಾದರೂ ಅದರ ಕಾವು ಮಾತ್ರ ಕಡಿಮೆ ಆಗಿಲ್ಲ. ಜನಸಂಖ್ಯೆಯ ಕಾರಣವೋ, ಸರಕಾರದ ನಿರ್ಲಕ್ಷ್ಯವೋ, ಸ್ಥಳೀಯ ನಾಯಕತ್ವದ ಕೊರತೆಯೋ ಇಂದಿಗೂ ಗುಡಿಬಂಡೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿ ಹೊರಹೊಮ್ಮಿಲ್ಲ. ಬದಲಿಗೆ ಬಾಗೇಪಲ್ಲಿ ಕ್ಷೇತ್ರದ ಒಂದು ಭಾಗವಾಗಿಯೇ ಉಳಿದುಕೊಂಡಿದ್ದು, ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ದೋರಣಿಗೆ ತುತ್ತಾಗಿದೆ.
ಕರ್ನಾಟಕದ ಕಟ್ಟಕಡೆಯ ಹಾಗೂ ಗಡಿ ತಾಲೂಕು ಆಗಿರುವ ಗುಡಿಬಂಡೆ ಅತಿ ಹಿಂದುಳಿದ ಪ್ರದೇಶವೂ ಹೌದು. ಅಭಿವೃದ್ಧಿಯಿಂದ ಸಂಪೂರ್ಣ ವಂಚಿತವಾಗಿದೆ. ಸ್ವಾತಂತ್ರ್ಯ ಬಂದು ಏಳೂವರೆ ದಶಕವಾದರೂ ಬಡತನ ತಾಂಡವಾಡುತ್ತಿದೆ. ಅನೇಕ ಹಳ್ಳಿಗಳಲ್ಲಿ ಕಡು ಬಡತನವಿದೆ. ಬೇಸಾಯಕ್ಕೆ ಮತ್ತು ಜನರಿಗೆ ಶುದ್ಧ ನೀರಿಲ್ಲದ ದುಃಸ್ಥಿತಿಯಲ್ಲಿದೆ ಈ ಪ್ರದೇಶ. ಹೀಗೆ ಅನೇಕ ಸಮಸ್ಯೆಗಳ ನಡುವೆಯೂ ತಾಲೂಕಿನ ಜನರು ಪ್ರತ್ಯೇಕ ವಿಧಾನಸಭೆ ಕ್ಷೇತ್ರಕ್ಕಾಗಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ.
25 ವರ್ಷಗಳ ಹಿಂದೆಯೇ ಹೋರಾಟಕ್ಕೆ ಅಂಕುರಾರ್ಪಣೆ
1996ರಲ್ಲಿ ತಾಲೂಕಿನ ಜಿ.ಎನ್.ರಾಜಶೇಖರ ನಾಯ್ಡು, ಜಿ.ಎ.ಶಂಕರ್, ಸ್ನೇಹಿತರ ತಂಡ ಸೇರಿ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಹೋರಾಟ ಸಮಿತಿ ರಚಿಸಿಕೊಂಡು ಅಂದಿನ ಜನತಾದಳ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಅಲ್ಲದೆ, ಕಾನೂನುಬದ್ಧ ಹೋರಾಟ ನಡೆಸಿ ಸರಕಾರದ ಗಮನ ಸೆಳೆದು ಕಳೆದ ವರ್ಷದ ಜೂನ್ ೯ಕ್ಕೆ 25 ವರ್ಷವಾಗಿದೆ. ಇನ್ನಾದರೂ ಗುಡಿಬಂಡೆ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗುತ್ತಾ? ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
ಕನ್ನಡಕ್ಕಾಗಿ ಕನ್ನಡ ಭುವನೇಶ್ವರಿ ಸಂಘ
ಆಂಧ್ರ ಪ್ರದೇಶದ ಗಡಿ ಭಾಗದಲ್ಲಿರುವ ಗುಡಿಬಂಡೆಯಲ್ಲಿ ಕನ್ನಡಾಭಿಮಾನ ಸುಮಾರು 1980ರಲ್ಲಿಯೇ ಕಂಪಿಸಲು ಕಾರಣವಾದ ಸಂಘ ಇದಾಗಿದೆ. ಈ ಸಂಘದ ಮೂಲಕ ತಾಲೂಕಿನಲ್ಲಿ ಕನ್ನಡ ಭಾಷೆ ಹಬ್ಬಿಸಲು ಆರಂಭ ಮಾಡಿದ್ದರು. ಅಲ್ಲದೇ ಮುಖ್ಯರಸ್ತೆಯ ಅಂಗಡಿಗಳ ಮುಂದೆ ಕನ್ನಡ ಮಾತಾಡಬೇಕು, ಒಂದು ವೇಳೆ ಯಾರಾದರೂ ಮಾತಾಡಲಿಲ್ಲವೆಂದರೆ ಅವರಿಗೆ ಒಂದು ಕಾಫಿ ಅಥವಾ ಟೀ ಕೊಡಿಸಬೇಕು ಎಂಬ ಷರತ್ತನ್ನು ಮಾಡಿಕೊಂಡಿದ್ದರು. ಅಂದು ಆರಂಭವಾದ ಕನ್ನಡ ಭುವನೇಶ್ವರಿ ಸಂಘವನ್ನು ಇಂದಿಗೂ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ.
- ಜಿ.ಎನ್.ರಾಜಶೇಖರ ನಾಯ್ಡು, ಜಿ.ಎ.ಶಂಕರ್ & ಸ್ನೇಹಿತರ ತಂಡ
ಶಂಕರ್ ಅವರು ಭಾಗಿಯಾಗಿದ್ದ ಹೋರಾಟಗಳು
ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಹೋರಾಟ
ತಾಲ್ಲೂಕು ಕಚೇರಿಗಾಗಿ ಹೋರಾಟ
ತಾಲೂಕು ಆಸ್ಪತ್ರೆಗಾಗಿ ಹೋರಾಟ
ತಾಲೂಕಿನಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕಾಗಿ ಹೋರಾಟ
ತಾಲೂಕು ಕ್ರೀಡಾಂಗಣಕ್ಕೆ ಹೋರಾಟ
ಸಮರ್ಪಕ ಬಸ್’ಗಳಿಗಾಗಿ ಹೋರಾಟ
ಹೀಗೆ ಗುಡಿಬಂಡೆ ತಾಲೂಕಿಗೆ ಅನ್ಯಾಯವಾಗುತ್ತಿದ್ದ ಪ್ರತಿಯೊಂದು ವಿಷಯ, ವಿಚಾರದಲ್ಲಿ ಜಿ.ಎ.ಶಂಕರ್ ಹಾಗೂ ಅವರ ಸ್ನೇಹಿತರು ಹೋರಾಟ ಮಾಡಿ ಅದನ್ನು ಯಶಸ್ವಿಯಾಗಿ ಪಡೆಯಲು ಪ್ರಯತ್ನಗಳನ್ನು ಮಾಡುತ್ತಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.