ಕಣದಲ್ಲಿ ಕುಪೇಂದ್ರ ರೆಡ್ಡಿ; ಬಿಜೆಪಿ-ಜೆಡಿಎಸ್ ತಂತ್ರಗಾರಿಕೆಯಿಂದ ಕೈ ಕಂಗಾಲು
ಬೆಂಗಳೂರು: ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಎಲ್ಲಾ ಸದಸ್ಯರನ್ನು ನಗರದ ಹೊರವಲಯದ ಐಷಾರಾಮಿ ರೆಸಾರ್ಟ್ ಒಂದಕ್ಕೆ ಸ್ಥಳಾಂತರಿಸಲಾಗುತ್ತಿದೆ.
ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಮೂವರು ಅಭ್ಯರ್ಥಿಗಳ ಗೆಲುವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ಶಾಸಕರನ್ನು ರೆಸಾರ್ಟ್ನಲ್ಲಿ ಹಿಡಿದಿಡುವ ನಿರ್ಧಾರಕ್ಕೆ ಬಂದಿದ್ದಾರೆ.
ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ದಿಢೀರನೆ ನವದೆಹಲಿಗೆ ಕರೆಸಿಕೊಂಡು ಗುರುವಾರ ಚರ್ಚೆ ನಡೆಸಿರುವ ಬೆನ್ನಲ್ಲೇ ಕಾಂಗ್ರೆಸ್ ಈ ನಿರ್ಧಾರಕ್ಕೆ ಬಂದಿದೆ.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಎರಡೂ ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರದಲ್ಲಿವೆ. ಅದಕ್ಕಾಗಿ ಎರಡೂ ಪಕ್ಷಗಳು, ಅದರಲ್ಲಿಯೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಇಡುತ್ತಿರುವ ಹೆಜ್ಜೆಗಳು ಕಾಂಗ್ರೆಸ್ ಪಕ್ಷಕ್ಕೆ ಕಂಗಾಲು ಉಂಟು ಮಾಡಿದೆ.
ತಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದೆ. ಪ್ರಸಕ್ತ ಬಜೆಟ್ ಅಧಿವೇಶನ ಸೋಮವಾರ ಮುಕ್ತಾಯವಾಗಲಿದೆ.ಅಂದು ಸಂಜೆಯಿಂದಲೇ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಒತ್ತಡದಲ್ಲಿ ಕಾಂಗ್ರೆಸ್ ಸಿಲುಕಿದೆ.
ಹಿರಿಯ ಶಾಸಕರ ಸಲಹೆ ಮೇರೆಗೆ ಸದನದ ಕಲಾಪ ಮುಗಿದ ಬಳಿಕ ಶಾಸಕರು ತಮ್ಮ ಕ್ಷೇತ್ರಗಳಿಗೆ ತೆರಳಲಿ ಹಾಗೂ ಸೋಮವಾರ ನಡೆಯುವ ಪಕ್ಷದ ಶಾಸಕರು, ಮುಖಂಡರ ಮಹತ್ವದ ಸಭೆಯಲ್ಲಿ ಭಾಗವಹಿಸುವಂತೆ ಕಡ್ಡಾಯವಾಗಿ ಸೂಚಿಸಲಾಗಿದೆ.
ರೆಸಾರ್ಟ್’ನಿಂದ ನೇರ ಮತಗಟ್ಟೆಗೆ
ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಈ ಸಭೆಯ ನಂತರ ಎಲ್ಲಾ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ, ರಾತ್ರಿ ಅಲ್ಲೇ ತಂಗಲು ವ್ಯವಸ್ಥೆ ಮಾಡಿ, ಮರುದಿನ ಅಂದರೆ; ಫೆಬ್ರವರಿ 27ರ ಬೆಳಗ್ಗೆ ಮತಗಟ್ಟೆಗೆ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುತ್ತಿಲ್ಲ ಎಂದು ಗೊತ್ತಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಅವರೇ ಸಭೆ ನಡೆಸಿ ಅವರ ನಾಯಕತ್ವದಲ್ಲೇ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ರೆಸಾರ್ಟ್ನಲ್ಲೇ ತಮ್ಮ ಪಕ್ಷದ ಯಾವ ಅಭ್ಯರ್ಥಿಗಳಿಗೆ ಯಾವ ಶಾಸಕರು ಮತ ಚಲಾಯಿಸಬೇಕೆಂಬ ಬಗ್ಗೆಯೂ ವಿಪ್ ನೀಡುವುದಲ್ಲದೆ, ಮಾದರಿ ಮತಪತ್ರವನ್ನು ನೀಡಿ ವಿವರಿಸಲಿದ್ದಾರೆ.
ಮೂರು ಗುಂಪುಗಳಾಗಿ ಶಾಸಕರು
ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕನಿಷ್ಠ 45 ಮತಗಳ ಅಗತ್ಯವಿದ್ದು, ತಮ್ಮ ಮೂವರು ಅಭ್ಯರ್ಥಿಗಳಿಗೂ ತಲಾ 46 ಮತಗಳನ್ನು ಹಂಚಿ ವಿಪ್ ನೀಡಲಿದ್ದಾರೆ. ರೆಸಾರ್ಟ್ನಿಂದ ಪ್ರತ್ಯೇಕವಾಗಿ ಮೂರು ಗುಂಪುಗಳಾಗಿ ಮತಗಟ್ಟೆಗೆ ಧಾವಿಸಿ ಮತ ಚಲಾಯಿಸುವ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸ್ಪಷ್ಟ ಸಂಖ್ಯಾಬಲವಿದೆ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು 45 ಮತಗಳನ್ನು ನಿಗದಿ ಮಾಡಿದ ನಂತರ ಉಳಿಯುವ 21 ಮತಗಳನ್ನು ಎನ್ಡಿಎ ಕೂಟದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಹಂಚಲಿದ್ದಾರೆ. ಜೆಡಿಎಸ್ನ 19 ಮತಗಳು ಜತೆಗೆ ಬಿಜೆಪಿಯ 21 ಸೇರಿ 40 ಮತಗಳಾಗಲಿವೆ.
ಕುಪೇಂದ್ರ ರೆಡ್ಡಿ ಗೆಲುವಿಗೆ ಇನ್ನೂ ಐದು ಮತಗಳ ಅಗತ್ಯವಿದೆ, ಇವುಗಳನ್ನು ಪಡೆಯಲು ಪಕ್ಷೇತರರು ಮತ್ತು ಕಾಂಗ್ರೆಸ್ ಬುಟ್ಟಿಗೆ ಬಿಜೆಪಿ-ಜೆಡಿಎಸ್ ಕೈಹಾಕಿದೆ.
ಚುನಾವಣೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಜೊತೆಗೆ ಅಮಿತ್ ಶಾ ಚರ್ಚೆ ನಡೆಸಿರುವುದು ಹಾಗೂ ಬಿಜೆಪಿ-ಜೆಡಿಎಸ್ ಜಂಟಿಯಾಗಿ ತಮ್ಮ ಶಾಸಕರನ್ನು ಸೆಳೆಯಬಹುದೆಂಬ ಸುಳಿವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೆ ಮೊರೆ ಹೋಗಿದೆ.