ಕಾಂಗ್ರೆಸ್‌ಗೆ 3, ಬಿಜೆಪಿ 1, ಜೆಡಿಎಸ್‌ಗೆ ಸೋಲು; ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಅಸ್ತ್ರವಾಯಿತು ಪಾಕಿಸ್ತಾನ್ ಜಿಂದಾಬಾದ್!
ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಗೆದ್ದ ಜೋಶ್ʼನಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನಾಘಾತವಾಗಿದೆ!
ರಾಜ್ಯಸಭೆಗೆ ಪುನರಾಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಆವರಣದಲ್ಲಿಯೇ ವಿಜಯೋತ್ಸವ ಆಚರಿಸುವ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
ಈ ಘಟನೆಯ ಬಗ್ಗೆ ಇಡೀ ರಾಜ್ಯವೇ ತೀವ್ರ ಆಘಾತಕ್ಕೆ ಒಳಗಾಗಿದ್ದು, ವಿಜಯದಿಂದ ಬೀಗುತ್ತಿದ್ದ ಕಾಂಗ್ರೆಸ್ ತೀವ್ರ ಮುಜುಗರ ಉಂಟಾಗಿದೆ. ಅಲ್ಲದೆ, ಲೋಕಸಭೆ ಚುನಾವಣೆಗೆ ರಣೋತ್ಸಾಹದಲ್ಲಿದ್ದ ಕೈ ಪಾಳೆಯಕ್ಕೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹೊಡೆತ ಕೊಡುವ ಆತಂಕ ಶುರುವಾಗಿದೆ.
ಇಂಥ ಪುಂಡ, ದೇಶದ್ರೋಹಿಗಳನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದ ನಾಸೀರ್ ಹುಸೇನ್ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೇ ಆಕ್ರೋಶ ವ್ಯಕ್ತವಾಗುತ್ತಿದ್ದು, ಜಯದ ಹೊಳೆಯಲ್ಲಿ ತೇಲಬೇಕಾಗಿದ್ದ ನಾಯಕರು ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.
ರಾಜ್ಯಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಿಷೇದಾಜ್ಞೆ ಜಾರಿಯಲ್ಲಿದ್ದ ವಿಧಾನಸೌಧದ ಆವರಣದಲ್ಲಿಯೇ ಸಂಭ್ರಮಕ್ಕೆ ಮುಂದಾದ ನಾಸೀರ್ ಹುಸೇನ್, ಅವರ ಹುಚ್ಚು ಬೆಂಬಲಿಗರು ಮೊದಲು, ನಾಸೀರ್ ಹುಸೇನ್ ಜಿಂದಾಬಾದ್ ಎಂದೂ, ನಂತರ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರು. ಅಲ್ಲಿಯೇ ಇದ್ದ ವಿದ್ಯುನ್ಮಾನ ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಈ ಘೋಷಣೆ, ಅದನ್ನು ಕೂಗಿದ ಕಿಡಿಗೇಡಿಗಳ ದೃಶ್ಯಗಳು ಸೆರೆಯಾಗಿವೆ. ಈ ದೃಶ್ಯಗಳು ಆ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ನಾಸೀರ್ ಹುಸೇನ್ ಬೆಂಬಲಿಗರ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಸಿಕೆನ್ಯೂಸ್ ನೌ ಗೆ ಗೊತ್ತಾಗಿದೆ.
ಮತ್ತೊಂದೆಡೆ ಪಾಕಿಸ್ತಾನ್ ಜಿಂದಾಬಾದ್ ಗೋಷಣೆಗೆ ಜೆಡಿಎಸ್, ಬಿಜೆಪಿ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ನಾಯಕರು ಕೆಂಡಾಮಂಡಲಗೊಂಡಿದ್ದಾರೆ.
ಕಾಂಗ್ರೆಸ್‌ಗೆ 3, ಬಿಜೆಪಿ 1, ಜೆಡಿಎಸ್‌ಗೆ ಸೋಲು
ಇನ್ನು, ಚುನಾವಣೆ ಫಲಿತಾಂಶಕ್ಕೆ ಬಂದರೆ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಜಯ್ ಮಕೇನ್, ನಾಸೀರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಹಾಗೂ ಬಿಜೆಪಿ ಅಭ್ಯರ್ಥಿ ನಾರಾಯಣಸಾ ಭಾಂಡಗೆ ಜಯ ಗಳಿಸಿದ್ದಾರೆ. ಆದರೆ, ಜೆಡಿಎಸ್ ಪಕ್ಷದಿಂದ ಎನ್‌ಡಿಎ ಅಭ್ಯರ್ಥುಯಾಗಿ ಕಣಕ್ಕೆ ಇಳಿದಿದ್ದ ಡಿ.ಕುಪೇಂದ್ರ ರೆಡ್ಡಿ ಸೋಲನಿಭವಿಸಿದ್ದಾರೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಡ್ಡ ಮತದಾನ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರೆ, ಅದೇ ಪಕ್ಷದ ಮತ್ತೊಬ್ಬ ಶಾಸಕ, ಯಲ್ಲಾಪುರ ಕ್ಷೇತ್ರದ ಶಿವರಾಂ ಹೆಬ್ಬಾರ್ ಅವರು ಮತಗಟ್ಟೆಯಿಂದಲೇ ದೂರ ಉಳಿದು ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಲು ಪರೋಕ್ಷವಾಗಿ ಸಹಕರಿಸಿದರು.
ಉಳಿದಂತೆ ಪಕ್ಷೇತರರಾದ ಗಂಗಾವತಿಯ ಗಾಲಿ ಜನಾರ್ದನ ರೆಡ್ಡಿ, ಮೇಲುಕೋಟೆಯ ದರ್ಶನ್ ಪುಟ್ಟಣ್ಣಯ್ಯ, ಗೌರಿಬಿದನೂರಿನ ಪುಟ್ಟಸ್ವಾಮಿ ಗೌಡ, ಹರಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ.
222 ಮತ ಚಲಾವಣೆ
ವಿಧಾನಸಭೆಯಲ್ಲಿ 223 ಸದಸ್ಯರ ಬಲ ಇದ್ದು, 222 ಮತಗಳಷ್ಟೇ ಚಲಾವಣೆಗೊಂಡವು. ಅದರಲ್ಲಿ ಕಾಂಗ್ರೆಸ್‌ನ ಅಜಯ್ ಮಾಕೆನ್ (47), ನಾಸೀರ್ ಹುಸೇನ್ (47) ಹಾಗೂ ಜಿ.ಸಿ. ಚಂದ್ರಶೇಖರ್ (45) ಮತಗಳನ್ನು ಪಡೆದು ರಾಜ್ಯಸಭೆ ಪ್ರವೇಶಿಸಿದರೆ, ಬಿಜೆಪಿಯ ನಾರಾಯಣಸಾ ಬಾಂಡಗೆ (47) ಮತಗಳನ್ನು ಪಡೆದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.
36 ಮತ ಪಡೆದಿರುವ ಕುಪೇಂದ್ರ ರೆಡ್ಡಿ ಪರಾಭವಗೊಂಡಿದ್ದು, ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಇದು ಸತತ ಮೂರನೇ ಸೋಲಾಗಿದೆ. ಆಡಳಿತ ಪಕ್ಷದ ಕೆಲವು ಮತಗಳನ್ನು ಪಡೆದು ಐದನೇ ಅಭ್ಯರ್ಥಿಯನ್ನು ಗೆಲ್ಲಿಸುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ತಕ್ಕ ಉತ್ತರ ನೀಡಿದೆ.
ಕಾಂಗ್ರೆಸ್‌ಗೆ 139 ಮತ
ವಿಧಾನಸಭೆಯಲ್ಲಿ ಸಭಾಧ್ಯಕ್ಷರೂ ಸೇರಿ ಕಾಂಗ್ರೆಸ್ 134 ಸದಸ್ಯ ಬಲ ಹೊಂದಿದ್ದರೂ ಅವರಿಗೆ ಚುನಾವಣೆಯಲ್ಲಿ 139 ಮತಗಳು ಲಭ್ಯವಾಗಿವೆ.
ಸದನದಲ್ಲಿ 66 ಸಂಖ್ಯಾಬಲ ಹೊಂದಿರುವ ಬಿಜೆಪಿ ಎನ್‌ಡಿಎ ಕೂಟದ ಎರಡನೇ ಅಭ್ಯರ್ಥಿಯ ಗೆಲುವು ಸಾಧ್ಯವಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಕೊನೆ ಗಳಿಗೆಯಲ್ಲಿ ತಮ್ಮ ಅಭ್ಯರ್ಥಿಗೆ ನಿಗದಿಪಡಿಸಿದ್ದ 45 ಮತಗಳ ಬದಲು 47 ಮತಗಳನ್ನು ನೀಡಿತು, ಉಳಿದ 17 ಮತಗಳು ಜೆಡಿಎಸ್ ಅಭ್ಯರ್ಥಿಗೆ ಲಭಿಸಿತು.
ಬಿಜೆಪಿಯ ಹೆಚ್ಚುವರಿ 21 ಹಾಗೂ ತಮ್ಮ ಪಕ್ಷದ 19 ಮತಗಳು ಒಗ್ಗೂಡಿಸಿ, ಪಕ್ಷೇತರರು ಹಾಗೂ ಕಾಂಗ್ರೆಸ್‌ನ ಕೆಲವರಿಂದ ಅಡ್ಡ ಮತದಾನ ಮಾಡಿಸಿ ಜಯ ಗಳಿಸುವ ಇರಾದೆ ಕುಪೇಂದ್ರ ರೆಡ್ಡಿ ಅವರಿಗೆ ಕೈಗೂಡಲಿಲ್ಲ.
ಜೆಡಿಎಸ್‌ನ ಮೂರನೇ ಎರಡು ಭಾಗದಷ್ಟು ಶಾಸಕರನ್ನು ಸೆಳೆಯುತ್ತೇವೆ ಎಂದಿದ್ದ ಕಾಂಗ್ರೆಸ್‌ಗೆ ಆ ಪಕ್ಷದ ಒಂದೂ ಮತವನ್ನು ಪಡೆಯಲಾಗಲಿಲ್ಲ, ಆ ಪಕ್ಷದ ಶಾಸಕರೆಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿದರು.
ಲೆಕ್ಕಾಚಾರ ಬುಡಮೇಲು
ಇನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಹಿಡಿದಿಟ್ಟುಕೊಂಡು ಪಕ್ಷೇತರ 4 ಹಾಗೂ ಬಿಜೆಪಿಯ ಒಂದು ಮತ ಗಳಿಸಿ ಪ್ರತಿಪಕ್ಷಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿತು.
ಕೇಂದ್ರ ಬಿಜೆಪಿ ಬಲದಿಂದ ತಮ್ಮ ಸದಸ್ಯರ ಅಡ್ಡ ಮತದಾನದ ಆಗಬಹುದೆಂಬ ಭೀತಿಯಿಂದ ಕಾಂಗ್ರೆಸ್ ಮುಖಂಡರು ಕಳೆದ ಒಂದು ವಾರದಿಂದಲೇ ತಮ್ಮವರನ್ನು ಹಿಡಿದಿಟ್ಟುಕೊಳ್ಳುವ ಹಾಗೂ ಪಕ್ಷೇತರರು ಮತ್ತು ಬಿಜೆಪಿ ಮತಗಳನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದ್ದರು.
ಸ್ವತಃ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಕೆಲವು ಸಚಿವರು, ಬಿಜೆಪಿಯ ಹಾಗೂ ಜೆಡಿಎಸ್‌ನ ಕೆಲವು ಶಾಸಕರನ್ನು ಸೆಳೆಯಲು ತೆರೆಮರೆಯ ಪ್ರಯತ್ನ ಮಾಡಿದ್ದರು. ಬಿಜೆಪಿಯತ್ತ ಮುಖ ಮಾಡಿದ್ದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಕಡೆ ಗಳಿಗೆಯಲ್ಲಿ ತಮ್ಮೆಡೆಗೆ ಸೆಳೆದುಕೊಂಡ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಗೆಲುವಿಗೆ ನಿನ್ನೆಯೇ ಎಲ್ಲಾ ಲೆಕ್ಕಾಚಾರ, ಗುಣಾಕಾರ ಹಾಕಿತ್ತು.
ತಮ್ಮ ಸದಸ್ಯರನ್ನು ಒಗ್ಗಟ್ಟಿನಿಂದ ಇಟ್ಟುಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ನಾಯಕರು ನಿನ್ನೆಯೇ ಪಂಚತಾರಾ ಹೋಟೆಲ್ ಸೇರಿಕೊಂಡಿದ್ದರು. ಹೋಟೆಲ್‌ನಿಂದ ಇಂದು ನೇರವಾಗಿ ಮತಗಟ್ಟೆಗೆ ಧಾವಿಸಿದ ಕಾಂಗ್ರೆಸ್ ಶಾಸಕರು ತಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು.
ಪಕ್ಷದ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ಚುನಾವಣೆಯಲ್ಲಿ ನಡೆಸಿದ ತಂತ್ರಗಾರಿಕೆ ಯಶಸ್ಸು ತಂದು ಕೊಟ್ಟಿದೆ.