ಫಿಟ್ನೆಸ್, ವಿಮೆ ಇಲ್ಲದ ನೀರಿನ ಟ್ಯಾಂಕರ್ ವಾಹನ; ಅಧಿಕಾರಿಗಳ ಅಸಡ್ಡೆಗೆ ನಿದರ್ಶನ
ಬಾಗೇಪಲ್ಲಿ: ಬೇಸಿಗೆಯ ಬವಣೆಗೆ ಸಿಲುಕಿ ಸಾರ್ವಜನಿಕರು ಒದ್ದಾಟಕ್ಕೆ ಸಿಲುಕಿರುವುದು ಒಂದೆಡೆಯಾದರೆ, ಮತ್ತೊಂದೆಡೆ ನೀರಿನ ಟ್ಯಾಂಕ್ ಚಾಲಕರ ಉಪಟಳದಿಂದ ಅದೇ ಜನರು ಮತ್ತಷ್ಟು ಕಂಗೆಟ್ಟಿದ್ದಾರೆ.
ಪುರಸಭೆಯ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಆ ವೃದ್ದನನ್ನು ಪಟ್ಟಣದ ಹೊರವಲಯದ ಶ್ರೀರಾಮರೆಡ್ಡಿ ಲೇಔಟ್ ನಿವಾಸಿ ಲಕ್ಷ್ಮೀಪತಿ (60) ಎಂದು ಗೊತ್ತಾಗಿದೆ.
ವೃತ್ತಿಯಲ್ಲಿ ಟೇಲರ್ ಆಗಿರುವ ವೃದ್ದರು ಪಟ್ಟಣದ ಮುಖ್ಯರಸ್ತೆಯ ಕುಂಬಾರಪೇಟೆ ಸರ್ಕಲ್ ಸಮೀಪ ರಸ್ತೆ ದಾಟುತ್ತಿದ್ದಾಗ ಅವರಿಗೆ ಪುರಸಭೆಯ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಮುಂದಿನ ಚಕ್ರ ಅವರ ಮೇಲೆ ಹರಿದಿದೆ ಎಂದು ಗೊತ್ತಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿರುವ ವೃದ್ದರನ್ನು ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಗೆ ಕಳಿಸಲಾಗಿದೆ.
ಡಿಕ್ಕಿ ಹೊಡೆಯುತ್ತಿದ್ದಂತೆ ನೀರಿನ ಟ್ಯಾಂಕರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಪಟ್ಟಣದ ಪುರಸಭೆಯ ನೀರಿನ ಟ್ಯಾಂಕರ್ ಗೆ ಮಾರ್ಚ್ 16, 2022ಕ್ಕೆ ಫಿಟ್ನೆಸ್ ಅವಧಿ ಮುಗಿದ್ದು, ಕಳೆದ ಎರಡು ವರ್ಷಗಳಿಂದ ಫಿಟ್ನೆಸ್ ಇಲ್ಲದೆ ನೀರಿನ ಟ್ಯಾಂಕರ್ ಓಡಿಸಲಾಗುತ್ತಿದೆ.
ಪುರಸಭೆಯ ಅಧಿಕಾರಿಗಳ ಬೇಜವ್ದಾರಿತನದಿಂದ ಫಿಟ್ನೆಸ್ ಹಾಗೂ ಇನ್ಸೂರೆನ್ಸ್ ಇಲ್ಲದೆ ಈ ವಾಹನ ಓಡಾಡುತ್ತಿದ್ದು ಆರ್.ಟಿ.ಓ. ಅಧಿಕಾರಿಗಳಾಗಲೀ, ಸ್ಥಳೀಯ ಪೊಲೀಸರಾಗಲಿ ಕ್ರಮ ಕೈಗೊಳ್ಳದೇ ಇರುವುದೇ ಇಂತಹ ಅಪಘಾತಗಳಿಗೆ ಕಾರಣವಾಗಿದೆ.
ಅಧಿಕಾರಿಗಳ ಅಸಡ್ಡೆ, ಕರ್ತವ್ಯಲೋಪದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.