ಈ ವಾರದಲ್ಲಿಯೇ ಮೊದಲ ಪಟ್ಟಿ ಬಿಡುಗಡೆ; ಪ್ರಭಾವೀ ಕುಟುಂಬಗಳಿಗೆ ಕಾಂಗ್ರೆಸ್ ಟಿಕೆಟ್
ಬೆಂಗಳೂರು: ಬಿಜೆಪಿಯ ಮೊದಲ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ಆಯ್ಕೆಯಲ್ಲಿ ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್ ಪಕ್ಷವೂ, ಅಧಿಕಾರ ಇರುವ ಕರ್ನಾಟಕದಲ್ಲಿ ಗೆಲುವಿಗಾಗಿ ಫ್ಯಾಮಿಲಿ ಫಾರ್ಮುಲಾ ರೂಪಿಸಿದೆ.
ಬಿಜೆಪಿ-ಜೆಡಿಎಸ್ ಮೈತ್ರಿಯ ಒತ್ತಡವೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೇಲಿದೆ. ಹೀಗಾಗಿ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತನ್ನೊಳಗೇ ಇರುವ ಪ್ರಭಾವೀ ರಾಜಕೀಯ ಕುಟುಂಬಗಳ ಮೊರೆ ಹೋಗಿದೆ.
ಇತರೆ ರಾಜಕೀಯ ಪಕ್ಷಗಳ ಮೇಲೆ ಕುಟುಂಬ ರಾಜಕಾರಣದ ಆರೋಪ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ಅದೇ ಕುಟುಂಬ ರಾಜಕಾರಣಕ್ಕೆ, ಫ್ಯಾಮಿಲಿ ಫಾರ್ಮುಲಾಕ್ಕೆ. ಮನ್ನಣೆ ಹಾಕುತ್ತಿದ್ದಾರೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಖಚಿತ ಮಾಹಿತಿ ಪ್ರಕಾರ; ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಕಾಂಗ್ರೆಸ್ ನಲ್ಲಿ ಈ ಫ್ಯಾಮಿಲಿ ಫಾರ್ಮುಲಾ ಭಾರೀ ತಿಕ್ಕಾಟಕ್ಕೆ ಕಾರಣವಾಗಿದ್ದು, ಸಿಎಂ ಮತ್ತು ಡಿಸಿಎಂ ನಡುವೆ ಹಗ್ಗಜಗ್ಗಾಟಕ್ಕೂ ಹಾದಿಯಾಗಿದೆ.
ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಮಾರ್ಚ್ 10ರೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ ಕಾಂಗ್ರೆಸ್. ಆದರೆ, ಈ ಪಟ್ಟಿ ದೊಡ್ಡ ರಂಪಾಟಕ್ಕೆ ಕಾರಣವಾಗುವ ಎಲ್ಲಾ ಸೂಚನೆಗಳೂ ಇವೆ. ಅದನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಉಸ್ತುವಾರಿ ಸುರ್ಜೀವಾಲ ಅವರಿಗೆ ವಹಿಸಿದ್ದಾರೆ.
ಕ್ಷೇತ್ರಕ್ಕೊಂದೇ ಹೆಸರು
ಪ್ರಥಮ ಹಂತದಲ್ಲಿ 15 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರುಗಳ ಪಟ್ಟಿಯನ್ನು ಕೆಪಿಸಿಸಿ ಸಿದ್ಧಪಡಿಸಿದ್ದು; ಅದನ್ನು ಎಐಸಿಸಿಗೆ ರವಾನಿಸಿದೆ. ವಿಶೇಷವೆಂದರೆ, ಒಂದು ಕ್ಷೇತ್ರಕ್ಕೆ ಒಬ್ಬರ ಹೆಸರನ್ನಷ್ಟೇ ಆಖೈರು ಮಾಡಿ ಕಳಿಸಿದೆ. ಈ ಪಟ್ಟಿಗೆ ವರಿಷ್ಠರು ಹಸಿರು ನಿಶಾನೆ ತೋರುವ ನಿರೀಕ್ಷೆ ಇದ್ದು, ಇನ್ನು ವಾರೊಪ್ಪತ್ತಿನಲ್ಲಿ ಪಟ್ಟಿ ಹೊರಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಕಡೇ ಗಳಿಗೆಯಲ್ಲಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರಕ್ಕೆ ಕುಸುಮಾ ಹನುಮಂತರಾಯಪ್ಪ ಅವರ ಜತೆಗೆ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿದ್ದ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೆಸರೂ ಮುನ್ನೆಲೆಗೆ ಬಂದಿದೆ. ಅವರ ಹೆಸರು ಪಟ್ಟಿಗೆ ಸೇರಿದೆಯಾ? ಇಲ್ಲವಾ? ಎನ್ನುವುದು ಗೊತ್ತಾಗಿಲ್ಲ.
ಸ್ಟಾರ್ ಚಂದ್ರು, ಲಕ್ಷ್ಮಣ್, ವೀಣಾ ಕಾಶಪ್ಪನವರ್
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ, ದಿವಂಗತ ಬಂಗಾರಪ್ಪ, ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಜಯಾನಂದ ಕಾಶೆಪ್ಪನವರ್ ಸೇರಿದಂತೆ ಪ್ರಮುಖ ರಾಜಕೀಯ ಕುಟುಂಬಗಳಿಗೆ ಸೇರಿದವರಿಗೆ ಮೊದಲ ಪಟ್ಟಿಯಲ್ಲಿ ಪ್ರಾತಿನಿಧ್ಯ ದೊರೆತಿದೆ.
ಮೃಣಾಲ್ ಹೆಬ್ಬಾಳ್ಕರ್
ಎಐಸಿಸಿಗೆ ಶಿಫಾರಸು
ಮೊದಲ ಪಟ್ಟಿಯಲ್ಲೇ ಡಿ.ಕೆ.ಶಿವಕುಮಾರ್ ಸಹೋದರ, ಹಾಲಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಬೆಂಗಳೂರು ಗ್ರಾಮಾಂತರ, ಮಹಾದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಗೆ ಚಾಮರಾಜನಗರ ಮೀಸಲು, ಶಾಸಕ ಹಾಗೂ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್ ಅವರ ಪತ್ನಿ ವೀಣಾ ಕಾಶೆಪ್ಪನವರ್ ಅವರಿಗೆ ಬಾಗಲಕೋಟೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸಲು ಕೆಪಿಸಿಸಿ, ಎಐಸಿಸಿಗೆ ಶಿಫಾರಸು ಮಾಡಿದೆ.
ಉಳಿದಂತೆ ಮೊದಲ ಪಟ್ಟಿಯಲ್ಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಟಾರ್ ಚಂದ್ರು (ವೆಂಕಟರಮಣ ಗೌಡ), ಬಂಗಾರಪ್ಪ ಅವರ ಪುತ್ರಿ ಹಾಗೂ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.
ತುಮಕೂರು ಲೋಕಸಭೆ ಕ್ಷೇತ್ರದಿಂದ ಹಿರಿಯ ನಾಯಕ ಎಸ್.ಪಿ.ಮುದ್ದಹನುಮೇಗೌಡ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೋಲಾರದ ನಸೀರ್ ಅಹ್ಮದ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಳ್ಳಾರಿ ಮೀಸಲು ಲೋಕಸಭೆ ಕ್ಷೇತ್ರದಿಂದ ವಿ.ಎಸ್.ಉಗ್ರಪ್ಪ, ಚಿತ್ರದುರ್ಗ ಮೀಸಲು ಲೋಕಸಭೆ ಕ್ಷೇತ್ರದಿಂದ ಮಾಜಿ ಸಂಸದ ಚಂದ್ರಪ್ಪ, ಬೀದರ್ ಲೋಕಸಭೆ ಕ್ಷೇತ್ರದಿಂದ ರಾಜಶೇಖರ ಪಾಟೀಲ್, ದಾವಣಗೆರೆಯಿಂದ ವಿನಯ್, ಕೊಪ್ಪಳದಿಂದ ರಾಘವೇಂದ್ರ ಇಟ್ನಾಳ್ ಅವರು ಕಣಕ್ಕಿಳಿಯಲಿದ್ದಾರೆ. ಇದರ ಬೆನ್ನಲ್ಲಿಯೇ ಕೊಪ್ಪಳದಿಂದ ಇನ್ನೊಂದು ಪ್ರಮುಖ ಹೆಸರು ಪ್ರಸ್ತಾವನೆಗೆ ಬಂದಿದ್ದು, ಅದೂ ಪರಿಶೀಲನೆಯಲ್ಲಿ ಇದೆ. ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆಯಲ್ಲಿರುವ ಅವರನ್ನು ಕೊಪ್ಪಳದಿಂದ ಕಣಕ್ಕೆ ಇಳಿಸಲು ಸಿಎಂ ಅಪ್ರ ವಲಯ ದೊಡ್ಡ ಮಟ್ಟದಲ್ಲಿ ಪ್ರಯತ್ನ ನಡೆಸಿದೆ ಎಂದು ಹೇಳಲಾಗಿದೆ.
20 ಕ್ಷೇತ್ರಗಳಲ್ಲಿ ಗೆಲುವಿನ ಗುರಿ
ಗ್ಯಾರಂಟಿ ಯೋಜನೆಗಳನ್ನೇ ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕಾಗಿ ಭಾರೀ ಕಸರತ್ತು ನಡೆಸಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆ, ಜಿಲ್ಲಾ ಉಸ್ತುವಾರಿ ಸಚಿವರ ತಂಡ ನೀಡಿರುವ ವರದಿ, ಪಕ್ಷ ನಿಯೋಜಿಸಿರುವ ಚುನಾವಣಾ ನಿಪುಣರು ನೀಡಿರುವ ಮಾಹಿತಿಯೂ ಸೇರಿ ಎಲ್ಲಾ ಅಂಶಗಳನ್ನು ಆಧರಿಸಿ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಶಿಫಾರಸು ಮಾಡಲಾಗಿದೆ. ಉಳಿದ 13 ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಅದೂ ಕೂಡ ಮೊದಲ ಪಟ್ಟಿ ಬೆನ್ನಲ್ಲಿಯೇ ಹೊರಬೀಳಲಿದೆ.
ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳು
ಲೋಕಸಭೆ ಚುನಾವಣೆಗೆ ಕಣಕ್ಕಿಳಿಯಲು ಪಕ್ಷದ ಕೆಲವು ಮುಖಂಡರುಗಳೇ ಆಸಕ್ತಿ ತೋರದ ಕಾರಣ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕುವುದೇ ರಾಜ್ಯ ಮುಖಂಡರಿಗೆ ಕಷ್ಟವಾಗಿದೆ. ಕೋಲಾರ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಾಟವೇ ಬಿಕ್ಕಟ್ಟು ಆಗಿದ್ದು, ಸಚಿವ ಕೆ.ಹೆಚ್.ಮುನಿಯಪ್ಪ ಅವರೇ ಅಭ್ಯರ್ಥಿ ಆದರೂ ಆಗಬಹುದು. ಇನ್ನು ಚಿಕ್ಕಬಳ್ಳಾಪುರಕ್ಕೆ ಮಾಜಿ ಸಂಸದ ವೀರಪ್ಪ ಮೊಯಿಲಿ ಹಾಗೂ ರಕ್ಷಾ ರಾಮಯ್ಯ ನಡುವೆ ಪೈಪೋಟಿ ಇದೆ. ಆದರೆ, ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಎನ್ನುವುದು ಇನ್ನೊಂದು ವಾರದ ಹೊತ್ತಿಗೆ ಸ್ಪಷ್ಟವಾಗಬಹುದು.
ಈ ಕಾರಣಕ್ಕಾಗಿ ಪ್ರಭಾವಿ ರಾಜಕಾರಣಿ ಕುಟುಂಬ, ಉದ್ದಿಮೆ ಮತ್ತು ಗುತ್ತಿಗೆದಾರರು ಹಾಗೂ ಬಿಜೆಪಿಯಿಂದ ಕೆಲವು ಮುಖಂಡರನ್ನು ಸೆಳೆದು ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.