ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯಲ್ಲಿ ಮೂರ್ತಿರೂಪದಲ್ಲಿ ನೆಲೆಸಿದ್ದಾರೆ ಶಿವಪಾರ್ವತಿಯರು! ದಕ್ಷಿಣ ಭಾರತದಲ್ಲಿಯೇ ಇಲ್ಲಿ ಮಾತ್ರ ಆದಿದಂಪತಿಯ ಇಂಥಾ ದರ್ಶನ!!
800 ವರ್ಷಗಳ ದೇವಸ್ಥಾನ, ಚೋಳರಿಂದ ನಿರ್ಮಾಣ; ಜಿಲ್ಲಾಡಳಿತದ ಅಸಡ್ಡೆ, ಮೂಲಭೂತ ಸೌಕರ್ಯದ ಕೊರತೆ
by GS Bharath Gudibande
ಗುಡಿಬಂಡೆ: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತರು ಅನೇಕ ದೇವಾಲಯಗಳಿಗೆ ತೆರಳುವುದು, ಈ ರಾತ್ರಿ ದೇವಾಲಯಗಳಲ್ಲಿಯೇ ಜಾಗರಣೆ ಮಾಡಿ ಶಿವಧ್ಯಾನದಲ್ಲಿ ಮುಳುಗುವುದು ಸಾಮಾನ್ಯ.
ಅದೇ ರೀತಿಯಲ್ಲಿ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜಂಗಾಲಹಳ್ಳಿ ಗ್ರಾಮದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯ ಪುರಾಣ ಮತ್ತು ಐತಿಹಾಸಿಕ ಕಾರಣಗಳಿಗೆ ಬಹಳ ಪ್ರಖ್ಯಾತವಾಗಿ ತಾಲೂಕು ಮಾತ್ರವಲ್ಲದೆ, ರಾಜ್ಯದ ನಾನಾ ಭಾಗಗಳಿಂದ ಇಲ್ಲಿ ಶಿವರಾತ್ರಿ ಪುಣ್ಯದಿನದಂದು ಭಕ್ತಸಾಗರವೇ ಹರಿದುಬರುತ್ತದೆ.
ಸಾಮಾನ್ಯವಾಗಿ ಶಿವನು ಎಲ್ಲೆಡೆ ಲಿಂಗ ಸ್ವರೂಪನಾಗಿ ದರ್ಶನ ನೀಡಿದರೆ, ಜಂಗಾಲಹಳ್ಳಿಯಲ್ಲಿ ಮಾತ್ರ ಶಿವಪಾರ್ವತಿಯರಿಬ್ಬರೂ ವಿಗ್ರಹ ರೂಪದಲ್ಲಿ ದರ್ಶನ ನೀಡುತ್ತಾರೆ. ದಕ್ಷಿಣ ಭಾರತದಲ್ಲಿಯೇ ಈ ರೀತಿಯಲ್ಲಿ ಶಿವಪಾರ್ವತಿಯರ ದರ್ಶನ ಎಲ್ಲಿಯೂ ಸಿಗುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.
ಏನಿದು ಜಂಗಾಲಹಳ್ಳಿ?
ಮೂಲತಃ ಜಂಗಾಲಹಳ್ಳಿಯ ಹೆಸರಿನ ಜಂಗಮರ ಹೆಸರಿನೊಂದಿಗೆ ಬೆಸೆದುಕೊಂಡಿದೆ. ಜಂಗಮ ಎಂದರೆ ಶಿವಸ್ವರೂಪಿ ಅಥವಾ ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ. ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿಯಾದ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ ಎನ್ನುವ ನಾನಾ ಅರ್ಥಗಳು ಇವೆ. ಜಂಗಮದಿಂದ ಜಂಗಾಲಹಳ್ಳಿ ಬಂದಿದೆ.
ಹಾಗಿದ್ದರೆ ಜಂಗಮಕ್ಕೂ ಜಂಗಾಲಹಳ್ಳಿಗೂ ಏನು ಸಂಬಂಧ ಎಂದು ನೋಡಿದರೆ, ಈ ಭಾಗದಲ್ಲಿ ಪುರಾಣ, ಐತಿಹಾಸಿಕ ಕಾಲಘಟ್ಟದಲ್ಲಿ ದಟ್ಟ ಅರಣ್ಯವಿತ್ತು. ಅದು ಜಿಂಕೆ, ಆನೆ, ಪಶು ಪಕ್ಷಿಗಳಿಂದ ಸಮೃದ್ಧವಾಗಿದ್ದ ಬೀಡಾಗಿತ್ತು.
ಸುಮಾರು 800 ವರ್ಷಗಳ ಹಿಂದೆ ಜಿಂಕೆಗಳನ್ನು ಭೇಟೆಯಾಡಲು ಮೂವರು ನವರಾಜರೆಂಬ ತರುಣರು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದರು. ಆಗ ಅವರಿಗೆ ಕಂಡಿದ್ದು ಇದೇ ಜಂಗಾಲಹಳ್ಳಿಯ ಗ್ರಾಮ, ಅಂದರೆ ಜಂಗಮರ ಬೀಡು.
ಈ ಜಾಗಕ್ಕೆ ಬಂದ ಮೂವರು ರಾಜ ತರುಣರು ಜಿಂಕೆಯನ್ನು ಭೇಟೆಯಾಡಿದರು. ನಂತರ ಅದನ್ನು ಕತ್ತರಿಸಲು ಹೋದಾಗ ತೇಜೋಮಯವಾದ ಶಿವಲಿಂಗ ದರ್ಶನವಾಗಿದೆ. ಕೂಡಲೇ ಅವರಿಗೆ ತಪ್ಪಿನ ಅರಿವಾಗಿ, ಸಾಕ್ಷಾತ್ ಶಿವನಿಗೇ ಅಪಚಾರ ಮಾಡಿದೆವು ಎಂದು ಭಾವಿಸಿದ್ದಾರೆ. ಇದೊಂದು ಮಹಿಮೆಯುಳ್ಳ ತಣವಾಗಿದ್ದು, ಇಲ್ಲಿಯೇ ಆ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಆ ಮೂವರು ತರುಣರು ನಿಶ್ಚಯ ಮಾಡಿಕೊಂಡರು.
ಕೊನೆಗೆ ಅದೇ ಜಾಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ಅವರು, ಆ ಲಿಂಗಕ್ಕೆ ಶ್ರೀ ಚಂದ್ರಮೌಳೇಶ್ವರ ಎಂದು ಕರೆಯುತ್ತಾರೆ ಹಾಗೂ ಸಣ್ಣ ಗುಡಿಯೊಂದನ್ನು ನಿರ್ಮಾಣ ಮಾಡಿ ಮಳೆ, ಗಾಳಿ, ಬಿಸಿಲಿನಿಂದ ಲಿಂಗಕ್ಕೆ ಹಾನಿಯಾಗಬಾರದು ಎಂದು ರಕ್ಷಣೆ ಮಾಡುತ್ತಾರೆ. ಹೀಗೆ ಜಂಗಮರ ನಾಡಿನಲ್ಲಿ ಶ್ರೀ ಚಂದ್ರಮೌಳೇಶ್ವರ ದೇವರು ಅವತರಿಸುತ್ತಾರೆ.
ಶಿವಲಿಂಗ ಪ್ರತಿಷ್ಠಾಪನೆಯಾದ ಮೇಲೆ ಈ ಭಾಗದಲ್ಲಿ ಸಾಕಷ್ಟು ಸಮೃದ್ಧಿ ಕಂಡು ಬಂದು ಜನರು ಸಂತೋಷದಿಂದ ಇದ್ದರು ಎನ್ನುವುದು ಸ್ಥಳ ಪುರಾಣದಿಂದ ಸಿಕ್ಕಿದ ಮಾಹಿತಿ. ಅಲ್ಲದೆ; ಶ್ರೀ ಚಂದ್ರಮೌಳೇಶ್ವರ ಮಹಾ ಮಹಿಮಾನ್ವಿತನಾದ ಕಾರಣಕ್ಕೆ ಜನರು ಹಗಲು ಹೊತ್ತಿನಲ್ಲಿ ಮಾತ್ರ ದೇವರ ದರ್ಶನ ಪಡೆಯುತ್ತಿದ್ದರು. ಸೂರ್ಯಾಸ್ತದ ನಂತರ ಯಾರೂ ದೇಗುಲದ ಕಡೆ ಬರುತ್ತಿರಲಿಲ್ಲವಂತೆ. ಸುತ್ತಮುತ್ತ ದಟ್ಟ ಅಡವಿ, ವನ್ಯಮೃಗಗಳು ಇದ್ದದ್ದೂ ಜನರ ಭೀತಿಗೆ ಕಾರಣವಾಗಿತ್ತು.
ವಿಶೇಷ ಶಿವಾಲಯ; ಏಕಸ್ಥಳದಲ್ಲಿ ಅನೇಕ ದೇವತೆಗಳು
ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಆವರಣದಲ್ಲಿ ಶಿವಪಾರ್ವತಿಯರು ದಕ್ಷಿಣಾಭಿಮುಖವಾಗಿ ನೆಲೆಸಿರುವ ವಿಶೇಷ ವಿಗ್ರಹವನ್ನು ಕಾಣಬಹುದು. ಅಲ್ಲದೇ ಉಮಾಮಹೇಶ್ವರಿ, ವೀರಭದ್ರ, ಕಾಲಭೈರವ, ಗಂಗಾದೇವಿ, ಬೇಡರ ಕಣ್ಣಪ್ಪ ಹಾಗೂ ಆಂಜನೇಯ ಸ್ವಾಮಿಯ ದೇವರುಗಳನ್ನು ಒಂದೇ ಸ್ಥಳದಲ್ಲಿ ಕಾಣಬಹುದು, ಇವರ ಆರಾಧನೆಯಿಂದ ಜನರ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬುದು ಜನರ ದೃಢವಾದ ನಂಬಿಕೆ.
- ಕೆಳಗಿನ ಸ್ಲೈಡ್ ಶೋ ಕ್ಲಿಕ್ ಮಾಡಿ
ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಕಾರ್ತೀಕ ಸೋಮವಾರ ಹಾಗೂ ಪ್ರತೀ ವರ್ಷ ಮಹಾ ಶಿವರಾತ್ರಿ ಹಬ್ಬದ ದಿನದಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತವೆ. ಈ ಸಂದರ್ಭದಲ್ಲಿ ಸುಮುತ್ತಲಿನ ಗ್ರಾಮಸ್ಥರು ಸೇರಿ ರಾತ್ರಿ ಇಡೀ ಜಾಗರಣೆ ಮಾಡುವುದರ ಜತೆಗೆ ಭಜನೆ ಮೂಲಕ ಪ್ರಾರ್ಥನೆ, ಜಾಗರಣೆ ಮಾಡುತ್ತಾರೆ.
ನಂದಿಯ ಮಹಿಮೆ
ದೇವಾಲಯದ ಒಳಭಾಗದಲ್ಲಿ ಶಿವಪಾರ್ವತಿ ದೇವರ ಎದರಾಗಿ ಇರುವ ನಂದಿ ವಿಗ್ರಹದ ಆಕರ್ಷಣೆ ಬಹಳ. ಭಕ್ತಾದಿಗಳು ತಮ್ಮ ಇಷ್ಟ ಕೋರಿಕೆಗಳನ್ನು ನಂದಿಗೆ ಹೇಳಿಕೊಳ್ಳುತ್ತಾರೆ. ಅಲ್ಲದೆ; ನಂದಿಯ ಕೆಳಗೆ ತೂರಿದಾಗ ಹೋದರೆ ಪ್ರಾರ್ಥನೆಗಳು ಈಡೇರುತ್ತವೆ ಎಂದು ಜನರು ನಂಬುತ್ತಾರೆ. ಪ್ರಾರ್ಥನೆಗಳು ಈಡೇರವುದಾದರೆ ನಂದಿಯ ಕೆಳಗಿಂದ ಸುಲಭವಾಗಿ ಹೊರ ಬರಬಹುದು, ಇಲ್ಲದಿದ್ದರೆ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದು ಸ್ಥಳೀಯರ ಮಾತು.
ಅಭಿವೃದ್ಧಿಯ ಬಗ್ಗೆ ಅಸಡ್ಡೆ
ಸುಮಾರು 800 ವರ್ಷಗಳ ಹಳೆಯ ದೇವಸ್ಥಾನ ಜಿಲ್ಲಾಡಳಿತ, ಸರಕಾರದ ಅಸಡ್ಡೆಯಿಂದ ಅನಾಥವಾಗಿದೆ. ಇಲ್ಲಿಗೆ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಇಲ್ಲ. ಇಂಥ ಪುಣ್ಯಕ್ಷೇತ್ರವನ್ನು ಗುರುತಿಸಿ ಅಭಿವೃದ್ಧಿಪಡಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತರ ಸೋತಿದೆ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಕಣ್ಣಿಗೂ ಈ ದೇವಾಲಯ ಬಿದ್ದಿಲ್ಲದಿರುವುದು ದುರದೃಷ್ಟಕರ.
ಕಳ್ಳಕಾಕರ ಕಣ್ಣು
ಮೊದಲಿಂದಲೂ ಈ ದೇವಾಲಯ ಕಳ್ಳಕಾಕರ ವಕ್ರದೃಷ್ಟಿಗೆ ಬಿದ್ದಿದೆ. ಸೂಕ್ತ ಭದ್ರತೆ ಇಲ್ಲದ ಕಾರಣಕ್ಕೆ ಮೂವರು ರಾಜ ತರುಣರು ಪ್ರತಿಷ್ಠಾಪನೆ ಮಾಡಿದ್ದ ಮೂಲ ಶಿವಲಿಂಗವನ್ನು ಹತ್ತು ವರ್ಷಗಳ ಹಿಂದೆ ಯಾರೋ ದುಷ್ಟರು ಕಳವು ಮಾಡಿದ್ದರು. ವಿಚಿತ್ರವೆಂದರೆ, ಶಿವಲಿಂಗ ಕಳುವಾಗುವುದಕ್ಕೆ ಮೊದಲೇ ಈ ದೇವಾಲಯದಲ್ಲಿ ಶಿವಪಾರ್ವತಿಯೆ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.
ಮೂಲ ಶಿವಲಿಂಗವನ್ನು ಯಾರು ಕದ್ದರು? ಆ ಪ್ರಕರಣದ ಹಿನ್ನೆಲೆ, ತನಿಖೆ ಇತ್ಯಾದಿಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಗ್ರಾಮಸ್ಥರಿಂದಲೂ ಈ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.
ಹೋಗುವುದು ಹೇಗೆ?
ಬೆಂಗಳೂರಿನಿಂದ ದೇವನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ NH-44 ರಲ್ಲಿ ಬಾಗೇಪಲ್ಲಿ ಕಡೆ ಸಾಗಿದರೆ ವರಲಕೊಂಡ ಎಂಬ ಗ್ರಾಮ ಬರುತ್ತದೆ. ಆ ಗ್ರಾಮದಲ್ಲಿ ಸರ್ವೀಸ್ ರಸ್ತೆಗೆ ಪ್ರವೇಶ ಪಡೆದು ಎಡಕ್ಕೆ ಚಲಿಸಿದರೆ ಗುಡಿಬಂಡೆ ಮಾರ್ಗವಾಗಿ ಚಲಿಸಿದರೆ, ಪೋಲಂಪಲ್ಲಿ ಗ್ರಾಮ ಸಿಗುತ್ತದೆ. ಆ ಗ್ರಾಮದಿಂದ ಕೆಲ ಮೀಟರ್ ಗಳಷ್ಟೇ ಮುಂದಕ್ಕೆ ಸಾಗಿದರೆ ಜಂಗಾಲಹಳ್ಳಿ ಕ್ರಾಸ್ ಬರುತ್ತದೆ. ಅಲ್ಲಿಂದ ಜಂಗಾಲಹಳ್ಳಿಗೆ ಬಹಳ ಹತ್ತಿರ. ಬೆಂಗಳೂರಿನಿಂದ ಗರಿಷ್ಠ ಎಂದರೂ ಒಂದೂವರೆ ತಾಸು ಪ್ರಯಾಣ (ಕಾರಿನಲ್ಲಾದರೆ). 80ರಿಂದ 85 ಕಿ.ಮೀ. ದೂರ.