ಯದುವೀರ್ ಒಡೆಯರ್ ಅವರ ವಿರುದ್ಧ ಪರೋಕ್ಷ ದಾಳಿಗೆ ಇಳಿದ ಪ್ರತಾಪ್ ಸಿಂಹ
ಮೈಸೂರು: ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರಲಿಕ್ಕಾಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯದುವೀರ್ ಅವರಿಗೆ ಟಿಕೆಟ್ ಕೊಡುವುದು ನಿಜವಾದರೆ ಅದನ್ನು ಸ್ವಾಗತಿಸುತ್ತೇನೆ, ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ ಹೇಳಿದರು.
ರಾಜ – ಪ್ರಜೆ ನಡುವೆ ವ್ಯತ್ಯಾಸ ಬದಿಗಿಟ್ಟು ರಾಜರೇ ಪ್ರಜೆಗಳ ಜತೆ ಇರಲು ಬಂದರೆ ನನ್ನ ಸ್ವಾಗತ ಇದ್ದೇ ಇರುತ್ತದೆ ಎಂದರು ಅವರು.
ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ, ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ, ಯದುವೀರ್ ಜನಪ್ರತಿನಿಧಿಯಾಗಿ ಅದನ್ನೆಲ್ಲಾ ಜನರಿಗೇ ಬಿಟ್ಟು ಕೊಡಿಸುತ್ತಾರೆ ಎಂದು ಪ್ರತಾಪ್ ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟದ ಮೇಲಿನ ಅರಮನೆ ಆವರಣದ ಒಳಗೆ ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ, ಯದುವೀರ್ ಜನಪ್ರತಿನಿಧಿ ಆದರೆ ಆ ಸಮಸ್ಯೆ ಬಗೆಹರಿಯುತ್ತದೆ ಎಂದು ಅವರು ಹೇಳಿದರು.
ಶ್ರೀ ರಾಜೇಂದ್ರ ಸ್ವಾಮೀಜಿ ಪ್ರತಿಮೆ ವಿಚಾರದಲ್ಲಿ ಅರಮನೆಯವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಯದುವೀರ್ ಈ ಸಮಸ್ಯೆ ಬಗೆಹರಿಸಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ಮಾಡುತ್ತಾರೆ. ಅರಮನೆ ಒಳಗೆ ಆರಾಮಾಗಿ ಇದ್ದಂತ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ ಎಂದು ಹೇಳಿದರು.
ಅರಮನೆ ವೈಭೋಗ ಬೇಕಾಗಿಲ್ಲ, ಜನರ ಜತೆ ಹೋರಾಟಕ್ಕೆ ಬರುತ್ತೇನೆ ಅಂತಾ ಹೊರಟಿದ್ದಾರೆ, ಅದಕ್ಕೆ ಸ್ವಾಗತವಿದೆ, ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ ಎಂದು ಮಾರ್ಮಿಕವಾಗಿ ನುಡಿದರು.
ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಪರೋಕ್ಷವಾಗಿ ಯಾರ ಹೆಸರೂ ಹೇಳದೆ ಪ್ರತಾಪ್ ಸಿಂಹ ಚಾಟಿ ಬೀಸಿದರು.
ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ನನ್ನ ಭೇಟಿ ಮಾಡಲು ಕರೆದಿದ್ದಾರೆ. ಹೀಗಾಗಿ ಇಂದು ಬೆಂಗಳೂರಿಗೆ ತೆರಳುತ್ತೇನೆ. ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ದಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ. 25 ಸಂಸದರಲ್ಲಿ ನನ್ನಷ್ಟು ಹಿಂದೂತ್ವದ ಕಮಿಟ್ ಮೆಂಟ್ ಇರುವ ಮತ್ಯಾರು ಇದ್ದಾರೆ ಹಿಂದೂತ್ವದ ವಿಚಾರದಲ್ಲಿ ನನ್ನನ್ನು ಯಾರಿಗೂ ಮ್ಯಾಚ್ ಮಾಡಲು ಯಾರಿಂದಲೂ ಆಗಲ್ಲ ಎಂದು ಹೇಳಿದರು.
ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದ್ದಾಗ ಸಿದ್ದರಾಮಯ್ಯ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ? ಮೈಸೂರು-ಕೊಡಗು ಅಭಿವೃದ್ಧಿಗೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ? ನನಗೆ ಪಕ್ಷ ನಿಷ್ಠೆ ಇದೆ, ಬ್ಯಾನರ್, ಬಂಟಿಂಗ್ ಕಟ್ಟಲೂ ನಾನು ಸಿದ್ದ ಎಂದು ಪ್ರತಾಪ್ ಸಿಂಹ ಭಾವುಕರಾಗಿ ನುಡಿದರು.