ಬೆಂಗಳೂರು ತಾಜ್ ವೆಸ್ಟೆಂಡ್ʼನಲ್ಲಿ ಕಾಂಗ್ರೆಸ್ ನಾಯಕರ ಜತೆ ಸುಧಾಕರ್ ಟಿಕೆಟ್ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದ ಶಾಸಕ!
ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಆಗುವುದಕ್ಕೆ ಮುನ್ನವೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜಕೀಯ ತಿಕ್ಕಾಟ ತೀವ್ರವಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದರೆ ಕಾಂಗ್ರೆಸ್ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸಲು ಡಾ.ಕೆ ಸುಧಾಕರ್ ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು; ಬೆಂಗಳೂರು ಉತ್ತರದ ಕಾಂಗ್ರೆಸ್ ಟಿಕೆಟ್ಗಾಗಿ ಸುಧಾಕರ್ ಅವರು ಶತಪ್ರಯತ್ನ ನಡೆಸಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಹಲವು ಕಾಂಗ್ರೆಸ್ ನಾಯಕರನ್ನು ಅವರು ಟಿಕೆಟ್ ಗಾಗಿ ಕೇಳಿಕೊಂಡಿದ್ದಾರೆ ಎಂದಿದ್ದಾರೆ.
ಸುಧಾಕರ್ ಅವರು ಬಿಜೆಪಿಯಲ್ಲಿ ಇದ್ದರೇನೇ ಗೌರವ. ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಎಲ್ಲೂ ಇಲ್ಲದವರಾಗುತ್ತಾರೆ ಎಂದು ಪ್ರದೀಪ್ ಈಶ್ವರ್ ಸಲಹೆ ನೀಡಿದ್ದಾರೆ.
ಸುಧಾಕರ್ ಅವರು ಡಬಲ್ ಗೇಮ್ ರಾಜಕಾರಣಿಯಾಗಿದ್ದು, ಅಧಿಕಾರಕ್ಕಾಗಿ ಯಾವುದೇ ಪಕ್ಷಕ್ಕೆ ಬೇಕಾದರೂ ಹೋಗುತ್ತಾರೆ. ಅವರಿಗೆ ತಾಕತ್ತು, ದಮ್ಮು ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಒಂದು ಓಟು ಹೆಚ್ಚಿಗೆ ತೆಗೆದುಕೊಳ್ಳಲಿ ನೋಡೋಣ ಎಂದು ಶಾಸಕರು ಸವಾಲು ಹಾಕಿದ್ದಾರೆ.
ಒಂದು ಅಗಳು ಅನ್ನ ದಾನ ಧರ್ಮ ಮಾಡದೇ ಪ್ರದೀಪ್ ಈಶ್ವರ್ ಶಾಸಕರಾಗಿದ್ದಾರೆ ಎಂದು ಡಾ.ಕೆ.ಸುಧಾಕರ್ ಅವರು ನೀಡಿರುವ ಹೇಳಿಕೆಗೆ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಶಿಕ್ಷಣ ಸೇವೆಯಲ್ಲಿ ತೊಡಗಿದ್ದೇನೆ. ಶಾಸಕರಾದ ಮೇಲೆ ಶಾಲಾ ಕಾಲೇಜು, ಅಂಗನವಾಡಿಗಳಿಗೆ ಬಟ್ಟೆ, ಅನ್ನ ದಾನ, ಧರ್ಮ ಪ್ರೋತ್ಸಾಹ ಧನ ನೀಡುತ್ತಿದ್ದೇನೆ. ಶಾಸಕರಾದ ಮೇಲೆ ಆರೋಗ್ಯ ಸೇವೆ, ಶಿಕ್ಷಣ ಸೇವೆ, ದಲಿತರು ಬಡವರ ಸೇವೆಯಲ್ಲಿ ತೊಡಗಿದ್ದೇನೆ. ಡಾ.ಕೆ.ಸುಧಾಕರ್ ಅವರಿಗೆ ದಲಿತರ ಸ್ಮಶಾನಕ್ಕೆ ಜಾಗ ಕೊಡುವ ಯೋಗ್ಯತೆ ಇರಲಿಲ್ಲ. ನಾನು ಶಾಸಕನಾದ ಮೇಲೆ ಸ್ವಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ಜಾಗ ಕೊಟ್ಟಿದ್ದೇನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಸುಧಾಕರ್ ಅವರು; ಒಂದು ಅಗಳು ಅನ್ನದಾನ ಮಾಡದ ವ್ಯಕ್ತಿಯನ್ನು ಚಿಕ್ಕಬಳ್ಳಾಫುರದ ಜನ ಶಾಸಕರನ್ನಾಗಿ ಮಾಡಿದ್ದಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಹಗಲು ರಾತ್ರಿ ನಾನು ಕ್ಷೇತ್ರಕ್ಕಾಗಿ ದುಡಿದೆ. ಆದರೂ ನನ್ನನ್ನು ಜನರು ಸೋಲಿಸಿದ್ದಾರೆ ಎಂದು ಅವರು ಅಸಮಾಧಾನ ಹೊರಹಾಕಿದ್ದರು. ಈ ಹೇಳಿಕೆ ಈಗ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.