ಸತತ 4 ಗಂಟೆ ಕಾಲ ನಡೆದ ಶಸ್ತ್ರಚಿಕಿತ್ಸೆ; ತಂದೆ ಆರೋಗ್ಯವಾಗಿದ್ದಾರೆ ಎಂದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಇಂದು ನಡೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು, ಅವರು ಆರೋಗ್ಯದಿಂದ ಇದ್ದಾರೆ.
ಪ್ರಖ್ಯಾತ ಹೃದ್ರೋಗ ತಜ್ಞ ಡಾ.ಸಾಯಿ ಸತೀಶ್, ಹಂಗೇರಿಯಿಂದ ಬಂದಿದ್ದ ತಜ್ಞ ವೈದ್ಯರಾದ ಡಾ.ಗೀಜಾ ಹಾಗೂ ರಾಜ್ಯದ ಸುಪ್ರಸಿದ್ಧ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸತತ ನಾಲ್ಕು ಗಂಟೆಗಳ ಕಾಲ, ಅಂದರೆ; ಬೆಳಗ್ಗೆ 6.30ಯಿಂದ 10.30 ಗಂಟೆವರೆಗೂ ಶಸ್ತ್ರ ಚಿಕಿತ್ಸೆ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿಗಳ ಕಚೇರಿಯ ಮೂಲಗಳು ತಿಳಿವೆ.
ತಜ್ಞ ವೈದ್ಯರ ತಂಡ ಮೇಲ್ವಿಚಾರಣೆ
ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದು, ತೀವ್ರ ನಿಗಾ ಘಟಕದಿಂದ ನಾಡಿದ್ದು, ಶನಿವಾರ ವಾರ್ಡ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಅವರ ಕುಟುಂಬ ವರ್ಗದವರೂ ಇದ್ದಾರೆ. ಮಾರ್ಚ್ 24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಅಂದೇ ಬೆಂಗಳೂರಿಗೆ ಕುಮಾರಸ್ವಾಮಿ ಹಿಂತಿರುಗಲಿದ್ದಾರೆ.
ತಮ್ಮ ತಂದೆಯವರ ಆರೋಗ್ಯದ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರು; ತಂದೆಯವರು ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಇಂದು ಅತ್ಯಂತ ಯಶಸ್ವಿಯಾಗಿ ಹೃದಯ ಶಸ್ತ್ರಚಿಕಿತ್ಸೆ ನಡೆಯಿತು. ಅಭಿಮಾನಿಗಳು, ಹಿತೈಷಿಗಳು, ಜಾತ್ಯತೀತ ಜನತಾದಳ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ರಾಜ್ಯದ ಸಮಸ್ತ ಜನತೆಯ ಹಾರೈಕೆ ಹಾಗೂ ಆ ಭಗವಂತನ ದಯೆಯಿಂದ ತಂದೆಯವರು ಆರೋಗ್ಯವಾಗಿದ್ದಾರೆ. ತಂದೆಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಹರಸಿದ ಪ್ರತಿಯೊಬ್ಬರಿಗೂ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿದ್ದೇವೆ ಎಂದು ನಿಖಿಲ್ ಅವರು ತಿಳಿಸಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ ಅವರು ಹೇಳಿದ್ದೇನು?
ಮಾಧ್ಯಮಗಳ ಜತೆ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್ ಅವರು; ಕುಮಾರಸ್ವಾಮಿ ಅವರಿಗೆ ಈಗಾಗಲೇ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿ ಹೃದಯ ಕಪಾಟುಗಳ ಬದಲಾವಣೆ ಮಾಡಲಾಗಿದೆ. 2007 ಮತ್ತು 2017ರಲ್ಲಿ ಅವರಿಗೆ ಆಪರೇಷನ್ ಆಗಿತ್ತು. ಅದನ್ನು ನಮ್ಮ ವೈದ್ಯೆ ಭಾಷೆಯಲ್ಲಿ ಅಯೋಟಿಕ್ ವಾಲ್ ಎಂದು ಕರೆಯುತ್ತೇವೆ. ಅದು ಚಿಕ್ಕದಾಗಿತ್ತು. ತೆರೆದ ಹೃದಯದ ಶಸ್ತ್ರಚಿಕಿತ್ಸೆ ಇಲ್ಲದೆ ಆಂಜಿಯೋಗ್ರಾಂ ಟೆಕ್ನಿಕ್ ರೀತಿಯಲ್ಲಿಯೇ ಅತ್ಯಂತ ಯಶಸ್ವಿಯಾಗಿ ಅವರಿಗೆ ಹೃದಯ ಕವಾಟನ್ನು ಜೋಡಿಸಲಾಗಿದೆ. ಅವರು ಲವಲವಿಕೆಯಿಂದ ಇದ್ದಾರೆ. ಭಾನುವಾರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲಿದ್ದಾರೆ.
ಈ ಟೆಕ್ನಿಕ್ ಇತ್ತೀಚೆಗೆ ಅಭಿವೃದ್ಧಿ ಹೊಂದಿದ್ದು ಆಗಿದೆ. ಸರ್ಜರಿ ಇಲ್ಲದೆ ಹೃದಯದ ಕವಾಟನ್ನು ಬದಲಿಸುವ ವಿಧಾನ. ಕಾಲಿನ ರಕ್ತನಾಳದ ಮೂಲಕ ಹೃದಯಕ್ಕೆ ಕವಾಟು ಜೋಡಿಸುವ ತಂತ್ರಜ್ಞಾನ. ಇದು ಅತ್ಯಂತ ಸೂಕ್ಷ್ಮವಾಗಿ, ಕರಾರುವಕ್ಕಾಗಿ ಅಂದಾಜಿಸಿ ಶಸ್ತ್ರಚಿಕಿತ್ಸೆ ಮಾಡಬೇಕು. ಅದೇ ರೀತಿಯಲ್ಲಿ ಡಾ.ಸಾಯಿ ಸತೀಶ್ ಅವರ ನೇತೃತ್ವದ ತಂಡ ನೆರವೇರಿಸಿದೆ. ಒಂದು ವೇಳೆ ಈ ಟೆಕ್ನಿಕ್ ಇಲ್ಲವಾಗಿದ್ದಿದ್ದರೆ ಮೂರನೇ ಬಾರಿಗೆ ಕುಮಾರಸ್ವಾಮಿ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ಅದು ಬಹಳ ರಿಸ್ಕಿನದಾಗಿತ್ತು ಹಾಗೂ ಅದರಿಂದ ಅವರು ಗುಣಮುಖರಾಗುವುದಕ್ಕೆ ಬಹಳ ಸಮಯ ಬೇಕಾಗುತ್ತಿತ್ತು. ಅವರು ಭಾನುವಾರ ಆಸ್ಪತ್ರೆಯಿಂದ ಮನೆಗೆ ಬರಲಿದ್ದಾರೆ. ಒಂದೆರಡು ದಿನ ವಿಶ್ರಾಂತಿ ಪಡೆದ ಮೇಲೆ ಅವರು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಬಹುದು ಎಂದು ಡಾ.ಸಿ.ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ನೇರ ಚುನಾವಣೆಗೆ
ಕುಮಾರಸ್ವಾಮಿ ಅವರ ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ಆವರ ಆರೋಗ್ಯ ಸುಧಾರಿಸುತ್ತಿದ್ದಂತೆ, ಇತ್ತ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ಅವರು ಹೇಳಿಕೆಯೊಂದನ್ನು ನೀಡಿ, ಕುಮಾರಸ್ವಾಮಿ ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕುಮಾರಣ್ಣನೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಇದರಲ್ಲಿ ಯಾವುದೇ ಅನುಮಾನ ಬೇಡ, ಅವರನ್ನು ಭಾರೀ ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡುತ್ತೇವೆ ಎಂದಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ.