JDS – BJP ಸಮನ್ವಯ ಸಭೆ; ಮೈತ್ರಿಗೆ ಧಕ್ಕೆ ಆಗದಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಒಮ್ಮತವಾಗಿ ಕೆಲಸ ಮಾಡಬೇಕು
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ನಡುಕ ಬಂದಿದೆ. ನಾವೂ ಎಲ್ಲಿಯೂ ಮೈ ಮರೆಯೋದು ಬೇಡ. ಸೂರ್ಯಚಂದ್ರರು ಹುಟ್ಟೋದು ಎಷ್ಟು ಸತ್ಯವೋ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರ ಮತ್ತೆ ಬರುವುದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಬೆಂಗಳೂರಿನಲ್ಲಿ ನಡೆದ ಜೆಡಿಎಸ್ -ಬಿಜೆಪಿ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ನಮ್ಮ ಎರಡು ಪಕ್ಷಗಳ ಸಮನ್ವಯತೆಯನ್ನು ಬೂತ್ ಮಟ್ಟದಿಂದ ಬಲಪಡಿಸಿಕೊಳ್ಳಬೇಕು. ಇವತ್ತಿನ ಮೈತ್ರಿಗೆ ಈ ಚುನಾವಣೆ ಮೂಲಕ ಭದ್ರ ಬುನಾದಿ ಹಾಕಿದರೆ ಭವಿಷ್ಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಇಲ್ಲದಂತೆ ಮಾಡಬಹುದು ಎಂದರು.
ಪ್ರತಿಷ್ಠೆಗೆ ಬೀಳುವುದು ಬೇಡ
ಕಾಂಗ್ರೆಸ್ ನವರಿಗೆ ಮೈತ್ರಿಯ ಬಗ್ಗೆ ನಡುಕ ಉಂಟಾಗಿದೆ. ಇಡೀ ರಾಜ್ಯದ ಜನ ನಮ್ಮ ಮೈತ್ರಿಕೂಟದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು ಎಂದು ಎಲ್ಲರೂ ಭಾವಿಸಿದ್ದಾರೆ. ಹೀಗಾಗಿ ನಮ್ಮಲ್ಲಿನ ವಿಶ್ವಾಸಕ್ಕೆ ಕಿಂಚಿತ್ತೂ ವ್ಯತ್ಯಾಸ ಬರಬಾರದು. ಏನೇ ಸಮಸ್ಯೆ ಇದ್ದರೂ, ನಮ್ಮ ಗಮನಕ್ಕೆ ತನ್ನಿ. ಯಾರೂ ವೈಯಕ್ತಿಕ ಪ್ರತಿಷ್ಠೆಗೆ ಬೀಳುವುದು ಬೇಡ. ನಮ್ಮ ಮನಸ್ಸು ಶುದ್ದ, ಮೈತ್ರಿಯು ಈ ಚುನಾವಣೆಗೆ ಮಾತ್ರವಲ್ಲ, ಇದು ಮುಂದೆಯೂ ಮುಂದುವರಿಸಿಕೊಂಡು ಹೋಗಬೇಕು. ಈ ಮೈತ್ರಿ ನಾವು ಅಧಿಕಾರಕ್ಕಾಗಿ ಅಲ್ಲ, ರಾಜ್ಯದ ಅಭಿವೃದ್ಧಿಗಾಗಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಿ ಹೇಳಿದರು.
ನಾನು, ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡಿದ್ದೇವೆ
2006ರಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಆದಾಗ ದೇಶಕ್ಕೆ ಮಾದರಿಯಾಗುವ ಸರಕಾರ ಮಾಡಿದ್ದೇವೆ. ನಾನು ಮುಖಸ್ತುತಿಗೆ ಈ ಮಾತು ಹೇಳುತ್ತಿಲ್ಲ, ಹಿರಿಯರಾದ ಯಡಿಯೂರಪ್ಪ ಮತ್ತು ನಾನು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದೇವೆ. ಆ 20 ತಿಂಗಳ ಆಡಳಿತ ಜನರ ಮನಸ್ಸಿನಲ್ಲಿ ಈಗಲೂ ಇದೆ. ಈ ಲೋಕಸಭೆ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಪಡೆಯುವ ಮೂಲಕ ಅಂತಹ ಮಾದರಿ ಸರಕಾರ ತರಲು ನಾವೆಲ್ಲರೂ ಪ್ರಯತ್ನ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಅಂದು ಇಂದು ಬಿಜೆಪಿಯ ಅನೇಕ ನಾಯಕರು ನನ್ನ ಮೇಲೆ ಅಪಾರವಾದ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ಮೈತ್ರಿ ಸಂದರ್ಭದಲ್ಲಿ ದೇವೇಗೌಡರಿಗೆ ಕೆಲವರು ತಪ್ಪು ಮಾಹಿತಿ ನೀಡಿದ್ದರಿಂದ ಸಮಸ್ಯೆಗಳು ಆದವು. ಆಗಲೇ ನನಗೆ ಬಿಜೆಪಿಯ ಜತೆ ದೀರ್ಘಾವಧಿ ಮೈತ್ರಿಯ ಉದ್ದೇಶ ಇತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗದಿರುವ ಬಗ್ಗೆ ನನಗೆ ಬೇಸರವಿದೆ ಎಂದು ಅವರು ಹೇಳಿದರು.
2018ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಬೇಕಿತ್ತು. ಆಗ ಮೈತ್ರಿ ಆಗಿದ್ದಿದ್ದರೆ ಬಹುಶಃ ಇಂದಿಗೂ ರಾಜ್ಯದಲ್ಲಿ ನಮ್ಮ ಮೈತ್ರಿ ಸರ್ಕಾರವೇ ಇರುತ್ತಿತ್ತು. ವಿಧಿಯಾಟ, ಆವತ್ತು ಏನೋ ನಡೆದು ಹೋಗಿದೆ ಎಂದು ಕುಮಾರಸ್ವಾಮಿ ಅವರು ನುಡಿದರು.
ಕಾಂಗ್ರೆಸ್ ಸುಳ್ಳು ಹೇಳುತ್ತಿದೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ. ಅದನ್ನೇ ನಾವು ಜನರ ಮನಸ್ಸಿಗೆ ಮುಟ್ಟುವಂತೆ ಹೇಳಬೇಕು. ನಿತ್ಯವ್ಯೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಗ್ಯಾರಂಟಿಗಳನ್ನು ಕೊಟ್ಟು ಏನೋ ಸಾಧನೆ ಮಾಡಿದ್ದೇವೆ ಅಂತಾರೆ. ಐದು ವರ್ಷಗಳಲ್ಲಿ ಯಾವ ರಾಜ್ಯಕ್ಕೆ ಎಷ್ಟು ಹಣ ಹಂಚಿಕೆ ಮಾಡಬೇಕು ಎಂದು ಹಣಕಾಸು ಆಯೋಗ ತೀರ್ಮಾನ ಮಾಡಿರುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅವರು ನೇರ ಆರೋಪ ಮಾಡಿದರು.
ನುಡಿದಂತೆ ನಡೆದಿದ್ದೇವೆ ಎಂದು ಪ್ರತಿನಿತ್ಯವೂ ಪುಟಗಟ್ಟಲೆ ಜಾಹೀರಾತು ಕೊಡುತ್ತಿದ್ದಾರೆ. ಜನರು ಬರಗಾಲದಿಂದ ತತ್ತರಿಸಿದ್ದರೆ ಇವರು ಸಪ್ಲಿಮೆಂಟರಿ ಬಜೆಟ್ ನಲ್ಲಿ ಪ್ರಚಾರಕ್ಕೆಂದು 200 ಕೋಟಿ ರೂಪಾಯಿ ಅನುದಾನಕ್ಕೆ ಒಪ್ಪಿಗೆ ಕೊಟ್ಟು ಕೊಂಡಿದ್ದಾರೆ. ಇದರ ಬಗ್ಗೆ ನಾವು ಜನರಿಗೆ ತಿಳಿಸಬೇಕು. ನಿಮ್ಮ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆಂದು ಜನರಿಗೇ ಹೇಳಬೇಕು. ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದರು. ಮೇಕೆದಾಟು ಪಾದಯಾತ್ರೆಯೂ ಆಯಿತು. ಸಿದ್ದರಾಮಯ್ಯನವರು ಆ ಯೋಜನೆಗಳಿಗೆ ಎಷ್ಟು ಹಣ ಕೊಟ್ಟರು? ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಕನ್ನಡಿಗರಿಗೆ ಅನ್ಯಾಯ ಅಂತಾರೆ, ಪಾಪ ನಿನ್ನೆ ಕಾಂಗ್ರೆಸ್ ಬಾವುಟ ಬಿಟ್ಟು ತಲೆಗೆಲ್ಲ ಕನ್ನಡ ಬಾವುಟ ಕಟ್ಟಿಕೊಂಡು ಹೋಗಿದ್ದನ್ನು ನೋಡಿದ್ದೇವೆ. ಕನ್ನಡಕ್ಕೆ ನಿರಂತರವಾಗಿ ಅನ್ಯಾಯ ಮಾಡಿದ ಇವರಿಗೆ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದ ಇವರಿಗೆ ಕನ್ನಡತನ ಎನ್ನುವುದು ಈಗ ನೆನಪಾಗಿದೆ ಎಂದು ಯಾರನ್ನು ಹೆಸರನ್ನು ಹೇಳದೆಯೇ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು ಮಾಜಿ ಮುಖ್ಯಮಂತ್ರಿಗಳು.
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಎರಡೂ ಪಕ್ಷಗಳ ಮಾಜಿ ಸದುವರು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು ಹಾಜರಿದ್ದರು.