ಎಲ್ಲರಿಗಿಂತ ರಕ್ಷಾಗೇ ಟಿಕೆಟ್ ಗ್ಯಾರಂಟಿ ಎಂದು ಬರೆದಿತ್ತು ಸಿಕೆನ್ಯೂಸ್ ನೌ
ಬೆಂಗಳೂರು/ನವದೆಹಲಿ: ಕೊನೆಗೂ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ಆಗಿದ್ದು, ಮಾಜಿ ಶಾಸಕ ಎಂ.ಆರ್.ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಅವರನ್ನು ಅಭ್ಯರ್ಥಿ ಮಾಡಿದೆ.
ಬಲಿಜಿಗ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು, ಬಿಜೆಪಿ ಒಕ್ಕಲಿಗ ಸಮುದಾಯದ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕೆ ಇಳಿಸಿದೆ.
ಸೆಪ್ಟೆಂಬರ್ 16ರಂದೇ ಸಿಕೆನ್ಯೂಸ್ ನೌ ವರದಿ ಮಾಡಿ, ರಕ್ಷಾ ರಾಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ಎಂದು ವರದಿ ಮಾಡಿತ್ತು.
ಲೋಕಸಭೆ ಚುನಾವಣೆ; ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಗ್ಯಾರಂಟಿ
ಕೊನೆ ಕ್ಷಣದವರೆಗೂ ಟಿಕೆಟ್ ಗಾಗಿ ಶತಾಯ ಗತಾಯ ಪ್ರಯತ್ನ ಮಾಡಿದ್ದ ಕೇಂದ್ರದ ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರಿಗೆ ಅವಕಾಶ ಸಿಕ್ಕಿಲ್ಲ.
ಸ್ಥಳೀಯ ನಾಯಕರ ತೀವ್ರ ವಿರೋಧದ ನಡುವೆಯೂ ರಕ್ಷಾ ರಾಮಯ್ಯ ಅವರನ್ನು ಕಾಂಗ್ರೆಸ್ ಕಣಕ್ಕೆ ಇಳಿಸುತ್ತಿದ್ದು, ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.
ಕ್ಷೇತ್ರದಲ್ಲಿರುವ 1.80 ಲಕ್ಷಕ್ಕೂ ಹೆಚ್ಚು ಬಲಜಿಗ ಸಮುದಾಯದ ಮತಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ರಕ್ಷಾ ರಾಮಯ್ಯ ಅವರನ್ನು ಹುರಿಯಾಳು ಮಾಡಿದೆ.
ಈ ನಡುವೆ ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್ ತಪ್ಪಿದ್ದು ಏಕೆ ಎಂಬ ಬಗ್ಗೆ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆ ಆಗುತ್ತಿದ್ದು, ಮೊಯಿಲಿ ಬೆಂಬಲಿಗರು ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಇವರಿಬ್ಬರೇ ಮೊಯಿಲಿ ಅವರಿಗೆ ಟಿಕೆಟ್ ತಪ್ಪಲು ಕಾರಣ ಎಂದು ಅವರು ದೂರುತ್ತಿದ್ದಾರೆ.
ಹೈಕಮಾಂಡ್ ವಲಯದಲ್ಲಿ ಭಾರೀ ಪ್ರಭಾವಿ ಆಗಿರುವ ಮೊಯಿಲಿ ಅವರಿಗೆ ಟಿಕೆಟ್ ತಪ್ಪಿದ್ದು ಕೆಪಿಸಿಸಿ ಕಡೆಯೂ ಅಚ್ಚರಿ ಉಂಟಾಗಿದೆ. ಆದರೆ, ಕ್ಷೇತ್ರಕ್ಕೆ ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಕೊಟ್ಟ ಕೊಡುಗೆ ಶೂನ್ಯ ಎಂದು ಕ್ಷೇತ್ರದ ಜನರಷ್ಟೇ ಅಲ್ಲ, ಕಾಂಗ್ರೆಸ್ ನಾಯಕರು ಕೂಡ ಹೇಳುವ ಮಾತು.
ಚಿಕ್ಕಬಳ್ಳಾಪುರ ಟಿಕೆಟ್ ಫೈನಲ್ ಮಾಡಿರುವ ಕಾಂಗ್ರೆಸ್, ನೆರೆಯ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಬಾಕಿ ಇಟ್ಟುಕೊಂಡಿದೆ. ಮೀಸಲು ಕ್ಷೇತ್ರವಾದ ಕೋಲಾರದಲ್ಲಿ ಎಡ ಬಲದ ಸುಳಿಗೆ ಸಿಕ್ಕಿಬಿದ್ದಿರುವ ಕೈ ಪಕ್ಷ, ಯಾರಿಗೆ ಟಿಕೆಟ್ ಎನ್ನುವುದನ್ನು ಇನ್ನೂ ಅಂತಿಮಗೊಳಿಸಿಲ್ಲ.
ಅದರೆ, ನಿನ್ನೆ ತಡರಾತ್ರಿ ಬಂದ ಪಟ್ಟಿಯಲ್ಲಿ ಬಳ್ಳಾರಿ ಮೀಸಲು ಕ್ಷೇತ್ರಕ್ಕೆ ಇ.ತುಕಾರಾಂ ಅವರಿಗೆ, ಚಾಮರಾಜನಗರ ಮೀಸಲು ಕ್ಷೇತ್ರಕ್ಕೆ ಸಚಿವ ಹೆಚ್.ಸಿ.ಮಹಾದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಮೀಸಲು ಕ್ಷೇತ್ರಗಳೇ ಕಾಂಗ್ರೆಸ್ ಗೆ ಕಗ್ಗಂಟು
ರಾಜ್ಯದ ಮೀಸಲು ಕ್ಷೇತ್ರಗಳೇ ಕಾಂಗ್ರೆಸ್ ಪಕ್ಷಕ್ಕೆ ಕಗ್ಗಂಟಾಗಿದ್ದು ವಿಪರ್ಯಾಸ. ಕಳೆದ ಎಪ್ಪತ್ತೈದು ವರ್ಷಗಳಿಂದ ದಲಿತರನ್ನು ಕೂಡ ಮತ ಬ್ಯಾಂಕ್ ಮಾಡಿಕೊಂಡಿರುವ ಆ ಪಕ್ಷಕ್ಕೆ ಈಗ ಮೀಸಲು ಕ್ಷೇತ್ರಗಳೇ ಸಮಸ್ಯೆ ಆಗಿದ್ದು ವಿಪರ್ಯಾಸ.
ಕೋಲಾರ ಕ್ಷೇತ್ರದ ಅಭ್ಯರ್ಥಿ ಕಗ್ಗಂಟು ಕಾಂಗ್ರೆಸ್ ಪಕ್ಷವನ್ನು ಬೀದಿಗೆ ತಂದು ನಿಲ್ಲಿಸಿದೆ. ಅಲ್ಲಿನ ಬಣಗಳ ರಾಜಕೀಯ ವರಿಷ್ಠರಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಹೆಚ್.ಮುನಿಯಪ್ಪ ಅವರ ನಡುವಿನ ಜಿದ್ದಾಜಿದ್ದಿ ಜಿಲ್ಲಾ ಕಾಂಗ್ರೆಸ್ ಅನ್ನು ವಿಭಜನೆ ಮಾಡಿದೆ.
ಚಾಮರಾಜನಗರ ಮೀಸಲು (ಎಸ್ಸಿ) ಕ್ಷೇತ್ರವು ಟಿಕೆಟ್ ಜಿದ್ದಾಜಿದ್ದಿಗೆ ಸಾಕ್ಷಿ ಆಗಿತ್ತು. ಸಚಿವ ಮಹದೇವಪ್ಪ ಅವರನ್ನೇ ಕಣಕ್ಕೆ ಇಳಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆಶಿ ಅವರು ಶತಾಯ ಗತಾಯ ಪ್ರಯತ್ನ ಮಾಡಿದ್ದರು. ಆದರೆ, ಡಿಸಿಎಂ ಅವರಿಗೇ ಟಕ್ಕರ್ ಕೊಟ್ಟ ಅವರು ತಮ್ಮ ಮಗನಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದಾರೆ.
27 ಕಾಂಗ್ರೆಸ್ ಅಭ್ಯರ್ಥಿಗಳು
- ಧಾರವಾಡ – ವಿನೋದ್ ಅಸುಟಿ
- ಬಾಗಲಕೋಟೆ: ಸಂಯುಕ್ತಾ ಪಾಟೀಲ್
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
- ಕೊಪ್ಪಳ – ರಾಜಶೇಖರ ಹಿಟ್ನಾಳ್
- ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
- ಬೀದರ್ – ರಾಜಶೇಖರ್ ಪಾಟೀಲ್
- ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
- ಬೆಳಗಾವಿ – ಮೃಣಾಲ್ ಹೆಬ್ಬಾಳಕರ್
- ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
- ದಕ್ಷಿಣ ಕನ್ನಡ – ಪದ್ಮರಾಜ್
- ಮೈಸೂರು -ಎಂ.ಲಕ್ಷ್ಮಣ್
- ರಾಯಚೂರು -ಜಿ.ಕುಮಾರ ನಾಯಕ್
- ಬಳ್ಳಾರಿ – ಇ ತುಕಾರಾಂ
- ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್ ಹೆಗ್ಡೆ
- ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ
- ಚಾಮರಾಜನಗರ – ಸುನೀಲ್ ಬೋಸ್
- ಬೆಂಗಳೂರು ಉತ್ತರ -ಪ್ರೊ.ರಾಜೀವ್ ಗೌಡ
- ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
- ಬೆಂಗಳೂರು ಸೆಂಟ್ರಲ್ -ಮನ್ಸೂರ್ ಅಲಿಖಾನ್
- ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್
- ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್
- ಶಿವಮೊಗ್ಗ – ಗೀತಾ ಶಿವಕುಮಾರ್
- ತುಮಕೂರು – ಮುದ್ದಹನುಮೇಗೌಡ
- ಹಾಸನ – ಶ್ರೇಯಸ್ ಪಟೇಲ್
- ಮಂಡ್ಯ – ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
- ವಿಜಯಪುರ – ರಾಜು ಅಲಗೂರು
- ಹಾವೇರಿ – ಅನಂತ ಸ್ವಾಮಿ ಗಡ್ಡೇವರ ಮಠ