Local vs Non Local ಅಭಿಯಾನ ಆರಂಭ; ಎಡ-ಬಲದಲ್ಲಿ ನಲುಗಿದ್ದ ಕೈ ಪಕ್ಷಕ್ಕೆ ಹೊಸ ಪೀಕಲಾಟ
ಕೋಲಾರ: ಎಡಗೈ ಬಲಗೈ ವಿವಾದದ ನಡುವೆ ಸಿಕ್ಕಿಬಿದ್ದಿದ್ದ ಕೋಲಾರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಕೊನೆಗೂ ಬೆಂಗಳೂರು ಮೂಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಅದರ ಬೆನ್ನಲ್ಲಿಯೇ ಸಮಸ್ಯೆಯ ಸುಳಿಗೆ ಸಿಲುಕಿದೆ.
ಬಿಜೆಪಿಯ ಘಟಾನುಘಟಿ ನಾಯಕರೇ ಎದುರಿಸಿ ಕಂಗಾಲಾಗಿದ್ದ ಗೋ ಬ್ಯಾಕ್ ಚಳವಳಿ ಬಿಸಿ ಈಗ ಕೈ ಪಾಳೆಯಕ್ಕೂ ತಟ್ಟಿದೆ. ಕೋಲಾರ ಕ್ಷೇತ್ರಕ್ಕೆ ಬೆಂಗಳೂರಿನ ಕಾರ್ಪೋರೇಟರ್ ವಿಜಯ್ ಕುಮಾರ್ ಅವರ ಪುತ್ರ ಕೆ.ವಿ.ಗೌತಮ್ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಕಾಂಗ್ರೆಸ್ ಅಸಮಾಧಾನಿರು ಇರಲಿ, ಜನರೇ ಅಖಾಡಕ್ಕೆ ಇಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
#GoBack #GoBackGowtham ಎಂಬ ಹ್ಯಾಷ್ ಟ್ಯಾಗ್ ಗಳು ಹಾಗೂ ಸ್ಲೋಗನ್ ಗಳು ಜಾಲತಾಣಗಳಲ್ಲಿ ಕಣ್ಣಿಗೆ ರಾಚುತ್ತಿವೆ. ಅಭ್ಯರ್ಥಿ ಬಗ್ಗೆ ಎಐಸಿಸಿ ಅಧಿಕೃತ ಪ್ರಕಟಣೆ ಹೊರಬಿದ್ದ ಮೇಲೆ ಸಚಿವ ಕೆ.ಹೆಚ್.ಮುನಿಯಪ್ಪ ಹಾಗೂ ಅವರ ವಿರೋಧಿಯಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಸ್ತುಸ್ಥಿತಿ ಹಾಗಲ್ಲ.
ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಶತಾಯ ಗತಾಯ ಟಿಕೆಟ್ ತಪ್ಪಿಸಲೇಬೇಕೆನ್ನಯವ ಹಠಕ್ಕೆ ಬಿದ್ದಿದ್ದ ರಮೇಶ್ ಕುಮಾರ್ ಬಣಕ್ಕೆ ಇಲ್ಲಿ ಕೈ ಮೇಲಾಗಿದೆ. ಏಕೆಂದರೆ; ಅವರಿಗೆ ಪತ್ರಕರ್ತ ಸಿ.ಎಂ.ಮುನಿಯಪ್ಪಗೋ ಅಥವಾ ಎಲ್.ಹನುಮಂತಯ್ಯ ಅವರಿಗೋ ಟಿಕೆಟ್ ಕೊಡಿಸುವ ಉದ್ದೇಶಕ್ಕಿಂತ ಮುನಿಯಪ್ಪ ಅವರನ್ನು ಹಣಿಯುವುದು ಮುಖ್ಯವಾಗಿತ್ತು. ಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಿಂದ ಬಂದು ಕೋಲಾರದಲ್ಲಿ ಅಭ್ಯರ್ಥಿ ಆಗಿರುವ ಗೌತಮ್ ಅವರು ರಮೇಶ್ ಕುಮಾರ್ ಬಣಕ್ಕೆ ಕೊನೆಯ ಆಯ್ಕೆ ಆಗಿತ್ತು ಎಂಬುದನ್ನು ಹಿರಿಯ ಕಾಂಗ್ರೆಸ್ ನಾಯಕರೊಬ್ಬರೇ ಬಾಯಿ ಬಿಟ್ಟಿದ್ದಾರೆ.
ಇದೊಂದೆಡೆ ಇದ್ದರೆ, ಇನ್ನೊಂದೆಡೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಲೋಕಲ್ vs ನಾನ್ ಲೋಕಲ್ ಎಂಬ ಅಭಿಯಾನ ಕ್ಷೇತ್ರದಲ್ಲಿ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು local v/s non local ಅಭಿಯಾನ ಆರಂಭ ಮಾಡಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕೋಲಾರಕ್ಕೂ ಗೌತಮ್‌ಗೂ ಏನು ಸಂಬಂಧ? ಕಾಂಗ್ರೆಸ್ ಪಕ್ಷವನ್ನು ಸೋಲಿಸಲಿಕ್ಕಾಗಿಯೇ ಹೊರಗಿನ ವ್ಯಕ್ತಿಗೆ ಟಿಕೆಟ್ ಕೊಡಲಾಗಿದೆ ಎಂದೆನಿಸುತ್ತಿದೆ ಎಂದು ಕೆಲವರು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ಕ್ಷೇತ್ರದ ಮತದಾರರ ಫೇಸ್ ಬುಕ್, ವಾಟ್ಸಾಫ್ ಖಾತೆಗಳಲ್ಲಿ #GoBack #GoBackGowtham ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಅದಕ್ಕೆ ಯಾವ ರೀತಿ ಕೌಂಟರ್ ಕೊಡುವುದು ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆ ನೋವಾಗಿದೆ. #ಗೌತಮ್_ಬೇಡವೇಬೇಡ, #ಗೌಥಮ್_ಕಥೆ_ಗೋವಿಂದಾ!!! ಇಂಥ ಹ್ಯಾಶ್ ಟ್ಯಾಗ್ʼಗಳು ಭಾರೀ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿವೆ.
ಟಿಕೆಟ್ ಘೋಷಣೆಯಾದ ಮರುದಿನವೇ ಅಭ್ಯರ್ಥಿ ಗೌತಮ್ ಜಿಲ್ಲೆಯ ಜನರಿಂದ ಅನಾದರಕ್ಕೆ ಒಳಗಾಗಿದ್ದರೆ, ಇನ್ನೊಂದೆಡೆ ಸಿಟ್ಟು ಮಾಡಿಕೊಂಡಿರುವ ಸಚಿವ ಮುನಿಯಪ್ಪ ಅವರ ಅವರನ್ನು ಮನವೊಲಿಸಲು ಕಾಂಗ್ರೆಸ್ ವರಿಷ್ಠರೇ ಹರಸಾಹಸ ನಡೆಸಿದ್ದಾರೆ.
ಸ್ವತಃ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಅವರೇ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು; “ಕೋಲಾರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ವ್ಯಾಪಕ ಚರ್ಚೆಯಾಗಿದೆ. ಸಚಿವ ಮುನಿಯಪ್ಪ ಅವರು ನಮ್ಮ ಅಭ್ಯರ್ಥಿ ಗೆಲ್ಲುವ ತಂತ್ರಗಾರಿಕೆಯ ಬಗ್ಗೆ ಹೇಳಿದ್ದರು. ಎಸ್ಸಿ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಅವರು ಮನವರಿಕೆ ಮಾಡಿಕೊಟ್ಟಿದ್ದರು” ಹೇಳಿದ್ದಾರೆ. ಕೋಲಾರದ ತಿಕ್ಕಾಟ ಸುರ್ಜೇವಾಲ ಅವರ ಕೈ ಮೀರಿದೆ ಎಂಬುದನ್ನು ಅವರ ಹೇಳಿಕೆಯೇ ಸಾರಿ ಹೇಳಿದಂತಿದೆ. ಹೀಗಾಗಿ, ಇದೆಲ್ಲಾ ಬೇಗುದಿಯನ್ನು ಬೆಂಗಳೂರಿನಿಂದ ಕೋಲಾರಕ್ಕೆ ಬಂದಿರುವ ಅಭ್ಯರ್ಥಿ ಅನುಭವಿಸಲೇಬೇಕು.
ಕಾಂಗ್ರೆಸ್ ಪಕ್ಷದ ಸೆಲ್ಪ್ ಸೂಸೈಡ್
ಕೆ.ವಾಸುದೇವ ರೆಡ್ಡಿ ಎಂಬುವವರು ಪೇಸ್ ಬುಕ್ ನಲ್ಲಿ ಹಾಕಿರುವ ಸ್ಟೇಟಸ್ ವಿಶೇಷವಾಗಿದೆ ಹಾಗೂ ಕಾಂಗ್ರೆಸ್ ಪಕ್ಷದ ಅಸಹಾಯಕತೆಯನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಿದೆ.
ಯಾರ್ರೀ ಈ ಗೌತಮ್…? ಕೋಲಾರದಲ್ಲಿ ಕಾಂಗ್ರೆಸ್ ಸೋಲಲು ಸಿದ್ದವಾಗಿದಿಯೇ.? ಕೋಲಾರಕ್ಕೂ ಈ ಗೌತಮ್ ರವರಿಗೂ ಏನು ಸಂಬಂಧ? ಕ್ಷೇತ್ರದ ಮತದಾರರು ಈ ಮನುಷ್ಯನ ಮುಖ ನೋಡಿಯೇ ಇಲ್ಲ..! ಕ್ಷೇತಕ್ಕೆ ಹೊರಗಿನವರು, ಕನಿಷ್ಠ ಪಕ್ಷ ಕ್ಷೇತ್ರದ ಜನರಿಗೆ 0.1% ಸಹಾ ಮುಖ ಪರಿಚಯ ಇಲ್ಲದ ಯಾರೋ ಅನಾಮಿಕ ವ್ಯಕ್ತಿಯನ್ನು ತಂದು ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮಾಡುತ್ತಿದೆ..ಇದೊಂದು ರೀತಿ ಕಾಂಗ್ರೆಸ್ ಪಕ್ಷದ ಸೆಲ್ಪ್ ಸೂಸೈಡ್ (ರಾಜಕೀಯ ಆತ್ಮಹತ್ಯೆ) ತೀರ್ಮಾನವಾಗಿದೆ… ಸ್ಥಳೀಯರಿಗೆ, ಸುಶಿಕ್ಷಿತ, ಪಕ್ಷ ಸಂಘಟನೆ ಮಾಡಿದವರಿಗೆ ಟಿಕೆಟ್ ನೀಡಿದ್ದರೆ ಕಾಂಗ್ರೆಸ್ ಬಹಳ ಸುಲಭವಾಗಿ ಕೋಲಾರದಲ್ಲಿ ಗೆಲ್ಲುತ್ತಿತ್ತು…ಆದರೆ ಕಾಂಗ್ರೆಸ್ ಅನವಶ್ಯಕವಾಗಿ ಎಡ-ಬಲ ಅಂತ ಬಿಕ್ಕಟ್ಟು ಸೃಷ್ಟಿಸಿಕೊಂಡು ಕೊನೆ ಕ್ಷಣದಲ್ಲಿ ಯಾವುದೊ ಕಾಣದ ಕೈಗಳ ಒತ್ತಡಗಳಿಂದ ಇಂತಹ ಅನಾಮಿಕ ವ್ಯಕ್ತಿಗಳನ್ನು ತಂದು ಕ್ಷೇತದ ಜನರ ಮೇಲೆ ಏಕಾಏಕಿ ಹೇರುವುದರ ಮೂಲಕ ಕ್ಷೇತ್ರದ ಮತದಾರರನ್ನು ಕನ್ವಿನ್ಸ್ ಮಾಡಲು ಸಾಧ್ಯವಿಲ್ಲ.. ಅದಕ್ಕೆ ಸಮಯಾವಕಾಶವೂ ಇಲ್ಲ.. ಅನೇಕ ಸ್ಥಳೀಯ , ಜನ ಪರಿಚಿತ ಅಭ್ಯರ್ಥಿಗಳಿದ್ದರು ಸಹ ಅಂತಹ ಉತ್ತಮ ಅಭ್ಯರ್ಥಿ ವ್ಯಕ್ತಿಯೇ ಕಾಂಗ್ರೆಸ್ ಗೆ ಸಿಗಲಿಲ್ಲವೇ .? ಗೌತಮ್ ರವರೇ ಅಂತಿಮವಾದರೆ ಡೌಟೇ ಬೇಡ.. ಕಾಂಗ್ರೆಸ್ ಈ ಚುನಾವಣೆಗೆ ಮೊದಲೇ ಸೋಲುವ ಮೊದಲ ಕ್ಷೇತ್ರ ಕೋಲಾರ ಆಗಲಿದೆ… ಅಭ್ಯರ್ಥಿಯನ್ನು ಬದಲಿಸಿ ಸ್ಥಳಿಯರಿಗೆ ನೀಡಲಿ.
#gobackgowtham#ಗೌತಮ್_ಬೇಡವೇಬೇಡ#ಗೌಥಮ್_ಕಥೆ_ಗೋವಿಂದಾ..!!!