ಜಾತಿ ಹೆಸರಿನಲ್ಲಿ ಪ್ರಚಾರ ನಡೆಸಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು!
ಕೋಲಾರ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಸಂಚಕಾರ ಬರುತ್ತದೆ ಎಂದು ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ಒಬ್ಬರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಭೈರತಿ ಸುರೇಶ್ ಅವರು ಹೇಳಿದ್ದಾರೆ
ಅಲ್ಲದೆ; ಜಾತಿ ಹೆಸರಿನಲ್ಲಿ ಅವರು ಸಮಾವೇಶ ನಡೆಸಿದರಲ್ಲದೆ, ಈ ಸಭೆ ಒಂದು ಜಾತಿಗಷ್ಟೇ ಸೀಮಿತವಾಗಿತ್ತು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಖಾಸಗಿ ಸಭಾಂಗಣ ಒಂದರಲ್ಲಿ ಕರುಬ ಸಮುದಾಯದ ಸಭೆ ನಡೆಸಿದ ಅವರು; “ಒಂದು ವೇಳೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಅವರಿಗೆ ತೊಂದರೆ ಆಗುತ್ತದೆ. ಹೀಗಾಗಿ ಕೋಲಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೌತಮ್ ಅವರ ಕೈ ಬಲಪಡಿಸಿ ಹಾಗೂ ಅವರಿಗೆ ಸಹಾಯ ಮಾಡಿ” ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ನಂತರ ಈ ಸರಕಾರ ಬಿದ್ದು ಹೋಗುತ್ತದೆ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಅಶೋಕ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡಬೇಡಿ. ಒಂದು ವೇಳೆ ನೀವೆಲ್ಲಾ ಬೇರೆ ರೀರಿಯ ನಿರ್ಧಾರ ಮಾಡಿದರೆ ಸಿದ್ದರಾಮಯ್ಯ ಅವರಿಗೆ ತೊಂದರೆ ಆಗುತ್ತದೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಚಿವರು; ಸಿದ್ದರಾಮಯ್ಯ ಬಳಿ ಹಣವಿಲ್ಲ. ಒಂದು ವೇಳೆ ಅವರ ಬಳಿ ಹಣ ಇದ್ದಿದ್ದರೆ ಮೋದಿ ಅವರು, ಆದಾಯ ತೆರಿಗೆ ಇಲಾಖೆ (ಐಟಿ), ಜಾರಿ ನಿರ್ದೇಶನಾಲಯ (ಇಡಿ) ಸುಮ್ಮನೆ ಬಿಡುತ್ತಿದ್ದವೆ. ಪ್ರಮಾಣಿಕ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನೇ ಬಂಧಿಸಿದ್ದಾರೆ ಅವರು ಎಂದರು.