ಒಂದು ವರ್ಷ ಶೂನ್ಯ ಸಾಧನೆ ಮಾಡಿದ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಆರ್.ಅಶೋಕ
ಬೆಂಗಳೂರು: ಕಾಂಗ್ರೆಸ್ ಸರಕಾರ ಒಂದು ವರ್ಷದಲ್ಲಿ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿದೆ. ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಬದಲಾಗಿದೆ. ಇಂತಹ ಶೂನ್ಯ ಸಾಧನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ರಾಜ್ಯಪಾಲರು ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರಕಾರದ ಅವಧಿ ಮುಗಿಯತೆಂಬ ಕಾರಣಕ್ಕೆ ಜನರಿಗೆ ಧನ್ಯವಾದ ತಿಳಿಸಿದ್ದಾರೆಯೋ ಅಥವಾ ಕಾನೂನು ಸುವ್ಯವಸ್ಥೆ ಹಾಳು ಮಾಡಿರುವ ಕೊಲೆಗಾರರಿಗೆ ಧನ್ಯವಾದ ಹೇಳಿದ್ದಾರೆಯೋ ಗೊತ್ತಿಲ್ಲ. ನೇಹಾ, ಅಂಜಲಿ ಕೊಲೆಯಾದರು. ಇನ್ನು ಯಾವ ಹೆಣ್ಣುಮಕ್ಕಳು ಕೊಲೆಯಾಗುತ್ತಾರೆ ಎಂಬ ಆತಂಕವಿದೆ. ಹೆಣ್ಣುಮಕ್ಕಳು ಕಾಲೇಜಿಗೆ ಹೋದರೆ ಗ್ಯಾರಂಟಿ ಇಲ್ಲ, ಮನೆಯಿಂದ ಆಚೆ ಬಂದರೆ ಗ್ಯಾರಂಟಿ ಇಲ್ಲ. ಸರಕಾರ ಎಷ್ಟು ಉಚಿತ ನೀಡಿದರೂ ಬದುಕುವ ಗ್ಯಾರಂಟಿಯೇ ಇಲ್ಲ ಎಂದು ಟೀಕಿಸಿದರು.
ಅಂಜಲಿಯ ಕೊಲೆಯ ಹಿಂದೆ ಪೊಲೀಸರ ಲೋಪವಿದೆ ಎಂದು ಗೃಹ ಸಚಿವರೇ ಹೇಳಿದ್ದಾರೆ ಎಂದ ಮೇಲೆ ಸರಕಾರ ಯಾಕೆ ಬದುಕಿರಬೇಕು? ಹಿಂದೂಗಳ ಮಾರಣಹೋಮವಾದರೂ ಇಲ್ಲಿ ಕೇಳುವವರಿಲ್ಲ. ಬೆಂಗಳೂರಿನಲ್ಲಿ ಮುಸ್ಲಿಮರು ಪೊಲೀಸ್ ಠಾಣೆಗೆ ಹೋಗಿ ಕಪಾಳಮೋಕ್ಷ ಮಾಡುವ ಸ್ಥಿತಿಯಿದೆ. ಕೊಲೆಗಾರರನ್ನು ನೇಣಿಗೇರಿಸುವ ಬದಲು ಈ ಸರ್ಕಾರವನ್ನೇ ನೇಣಿಗೇರಿಸಬೇಕು. ಈ ಸರಕಾರ ಬಂದ ನಂತರ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಹೇಳಲು ಅನುಮತಿ ಸಿಕ್ಕಿದೆ. ಹನುಮಾನ್ ಚಾಲೀಸ ಕೇಳಿದರೆ, ಜೈ ಶ್ರೀರಾಮ್ ಎಂದರೆ ಹಲ್ಲೆಯಾಗುತ್ತದೆ ಎಂದು ದೂರಿದರು.
ಒಂದು ವರ್ಷದಲ್ಲಿ ಮಗು ಅಂಬೆಗಾಲಿಡುತ್ತದೆ. ಆದರೆ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ರಸ್ತೆ, ನೀರಾವರಿ, ಸೇತುವೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಶಾಲೆ ಕಟ್ಟಡ ದುರಸ್ತಿಗೂ ಹಣವಿಲ್ಲ. ಬಸ್ ಚಾಲಕರಿಗೆ, ಆಂಬ್ಯುಲೆನ್ಸ್ ಚಾಲಕರಿಗೆ ಸಂಬಳವಿಲ್ಲ, ರೈತರಿಗೆ ಹಾಲಿನ ಪ್ರೋತ್ಸಾಹಧನ ಸಿಕ್ಕಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ವೆಂಟಿಲೇಟರ್‌ನಲ್ಲಿದೆ. ಸಿಎಂ ಸಿದ್ದರಾಮಯ್ಯನವರು 15 ಬಜೆಟ್ ಮಂಡಿಸಿ ಒಂದೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದು ದೂರಿದರು.
ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಿಂದ ದಾಖಲೆಯ ಬರ ಪರಿಹಾರ ಸಿಕ್ಕಿದೆ. ಆದರೆ ಇನ್ನೂ 2 ಲಕ್ಷ ರೈತರಿಗೆ ಪರಿಹಾರ ನೀಡಬೇಕಿದೆ. ಕೆಲವರಿಗೆ 300, 400 ರೂ. ಪರಿಹಾರ ನೀಡಿದ್ದಾರೆ. ಬಿತ್ತನೆ ಮಾಡಬೇಡಿ ಎಂದು ಮೊದಲಿಗೆ ಹೇಳಿ, ಈಗ ಬಿತ್ತನೆ ಮಾಡದವರಿಗೆ ಪರಿಹಾರ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಕನ್ನಡ ಮಾತಾಡಲು ಬರಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೂ ಬರ ಬಂದಿದೆ. 20 ಕೃಪಾಂಕ ನೀಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದಾರೆ. ಹೀಗೆ ಓದುವುದನ್ನೂ ಉಚಿತ ಮಾಡಿ ಓದದೆಯೇ ಪಾಸು ಮಾಡುವ ಯೋಜನೆ ತಂದಿದ್ದಾರೆ. ಹಾಗಾದರೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಬೆಲೆ ಇಲ್ಲವೇ? ಸಿಇಟಿ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ್ದಾರೆ. ಈ ಸರಕಾರ ಶಿಕ್ಷಣ ಇಲಾಖೆಗೆ ಅನುದಾನ ಕಡಿಮೆ ಮಾಡಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಮಣಿವಣ್ಣನ್ ಎಂಬ ಅಧಿಕಾರಿ ಕುವೆಂಪು ವಾಣಿಯನ್ನು ತಿದ್ದುವಂತಹ ಸ್ಥಿತಿ ಇದೆ ಎಂದರು.
ಲೂಟಿ ಸರಕಾರ
ಒಂದು ವರ್ಷದಲ್ಲಿ ಈ ಸರಕಾರ ಚೆನ್ನಾಗಿ ಲೂಟಿ ಮಾಡಿದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆಂದು ಹೇಳಿ ನೀರಿನ ಸಮಸ್ಯೆ ತಂದು ಬ್ಯಾಡ್ ಬೆಂಗಳೂರು ಮಾಡಿದ್ದಾರೆ. 16 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ರಸ್ತೆ ಮಾಡುತ್ತೇವೆಂದು ಕಮಿಶನ್ ಹೊಡೆಯಲು ಯೋಜನೆ ರೂಪಿಸಿದ್ದಾರೆ. ಯಾವುದೇ ಡೆವಲಪರ್ ಬಂದರೂ ಚದರ ಅಡಿಗೆ 100 ರೂ. ಕಾಂಗ್ರೆಸ್ ಟ್ಯಾಕ್ಸ್ ಎಂಬ ಕಮಿಶನ್ ಕೊಡಬೇಕಾಗುತ್ತದೆ. ಈ ಕಮಿಶನ್ ಸಾಗಿಸಲು ಸುರಂಗ ನಿರ್ಮಿಸಲು ಯೋಜನೆ ಮಾಡಿದ್ದಾರೆ. ಇಂತಹ ಸರಕಾರ ಇದ್ದರೂ ಒಂದೇ, ಹೋದರೂ ಒಂದೇ ಎಂದರು.
ಕಾಂಗ್ರೆಸ್ ಶಾಸಕರೇ ಸರಕಾರ ಬೀಳಿಸುತ್ತಾರೆ
ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಅವರ ಶಾಸಕರೇ ತಯಾರಾಗಿದ್ದಾರೆ. ಒಂದು ವರ್ಷ ಶಾಸಕರಿಗೆ ಅನುದಾನ ನೀಡದಿದ್ದರಿಂದ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಸರಕಾರ ಬೀಳಿಸಲು ಅವರೇ ಮುಹೂರ್ತ ನಿಗದಿ ಮಾಡಲಿದ್ದಾರೆ. ಈಗ ಕೌಂಟ್‌ಡೌನ್ ಶುರುವಾಗಿದೆ ಎಂದರು ಅವರು.