ಡಿಕೆಶಿ, ಎಲ್.ಆರ್.ಶಿವರಾಮೇಗೌಡ ವಿರುದ್ಧ ಕೇಸ್ ದಾಖಲಿಸಲು SITಗೆ ಸವಾಲು; ಡಿಜಿ ಕಚೇರಿಯಲ್ಲೇ ರೇವಣ್ಣ ವಿರುದ್ಧ ದೂರಿನ ಪ್ರತಿ ಟೈಪ್!
ಬೆಂಗಳೂರು: ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ನಾಶ ಮಾಡುವುದಕ್ಕೆ ಈ ಸರಕಾರದಲ್ಲಿರುವ ʼಸೀಡಿ ಶಿವುʼ ಸಂಚು ರೂಪಿಸಿರುವುದು ದೃಢಪಟ್ಟಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಇಡೀ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಯಿತಲ್ಲ, ಮೊಬೈಲ್ ಸಂಭಾಷಣೆಯಲ್ಲಿ ಎಲ್ಲವೂ ಬಯಲಾಗಿದೆ ಡಿ.ಕೆ.ಶಿವಕುಮಾರ್, ಎಲ್.ಆರ್.ಶಿವರಾಮೇಗೌಡ, ದೇವರಾಜೇಗೌಡ ನಡಿವಿನ ಸಂಭಾಷಣೆ ಆಡಿಯೋ ಲೀಕ್ ಆಗಿದೆ. ಸಂಚು ರೂಪಿಸಿರುವ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಮೇಲೆ ಕೂಡಲೇ ಪ್ರಕರಣ ದಾಖಲಿಸಿ, ವಿಚಾರಣೆಗೆ ಒಳಪಡಿಸಿ ಎಂದು ಗೃಹ ಡಾ.ಜಿ.ಪರಮೇಶ್ವರ್ ಅವರನ್ನು ಅವರು ಒತ್ತಾಯ ಮಾಡಿದರು
ಸೀಡಿ ಶಿವು ಅವರು ಪೆನ್ʼಡ್ರೈವುಗಳನ್ನು ಸೃಷ್ಟಿ ಮಾಡುವುದರಲ್ಲಿ ಇವರು ಎಕ್ಸ್ʼಪರ್ಟ್. ನಾನು ಬರೀ ಸಿನಿಮಾ ಹಂಚಿಕೆದಾರ. ಆದರೆ ಇವರ ಹಂಚಿಕೆಯೇ ಬೇರೆ. ಮೊದಲಿನಿಂದಲೂ ಅವರು ಅದನ್ನೇ ಮಾಡಿಕೊಂಡು ಬಂದರು. ಅವರ ಪಕ್ಷದ ಶಾಸಕನೊಬ್ಬ, ಪೆನ್ ಡ್ರೈವುಗಳ ಹಿಂದೆ ದೊಡ್ಡ ತಿಮಿಂಗಿಲ ಇದೆ ಎಂದು ಹೇಳಿದ್ದರಲ್ಲವೇ? ನಾನೆಲ್ಲಿ ಹೇಳಿದ್ದೆ ಪರಮೇಶ್ವರ್ ಅವರೇ. SIT ತನಿಖೆ ಪಾರದರ್ಶಕವಾಗಿದ್ದರೆ ಇವರಿಬ್ಬರ ಮೇಲೆ ಕೇಸ್ ಹಾಕಲಿ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು; ನಮ್ಮ ಕುಟುಂಬದ ಬಗ್ಗೆ ಅವರು ಏನೆಲ್ಲಾ ಷಡ್ಯಂತ್ರ್ಯ ನಡೆಸಿದ್ದಾರೆ ಎನ್ನುವುದು ಈ ಸಂಭಾಷಣೆಯ ಮೂಲಕ ಜಗಜ್ಜಾಹೀರು ಆಗಿದೆ ಎಂದರು.
ಎಲ್ಲವೂ ಮಾಡಿಸಿದ್ದು ಸೀಡಿ ಶಿವು
ದೇವರಾಜೇಗೌಡ, ಡಿ.ಕೆ.ಶಿವಕುಮಾರ್ ಹಾಗೂ ಎಲ್.ಆರ್.ಶಿವರಾಮೇಗೌಡರ ಮೊಬೈಲ್ ಸಂಭಾಷಣೆಯನ್ನು ಪ್ರಸ್ತಾಸಿದ ಕುಮಾರಸ್ವಾಮಿ ಅವರು; ಇದೆಲ್ಲವನ್ನೂ ʼಸೀಡಿ ಶಿವುʼನೇ ಹೇಳಿಸಿರುವುದು, ಇದನ್ನು ಮಾಡಿಸಿರುವುದು ಎಂದು ಆರೋಪಿಸಿದರು.
ಮಾಧ್ಯಮಗಳು ಪ್ರಸಾರ ಮಾಡಿದ ಆಡಿಯೋವನ್ನು ನಾನೂ ಕೇಳಿದ್ದೇನೆ. ಯಾವ ದೇವರಾಜೇಗೌಡನ ಜತೆ ಶಿವರಾಮೇಗೌಡ ಮಾತಾಡಿದ್ದ ಅನ್ನುವುದು ಗೊತ್ತಾಗಿದೆ. ಮೊದಲ ಆಡಿಯೋದಲ್ಲಿ ದೇವರಾಜೇಗೌಡ ಮಾತಾಡಿದ್ದಾರೆ. ಸದಾಶಿವ ನಗರದಲ್ಲಿ ವಾಸ ಇರುವವರು ಯಾರು? ಸದಾಶಿವ ನಗರದಲ್ಲಿ ವಾಸ ಇರುವುದು ಕುಮಾರಸ್ವಾಮೀನಾ? ʼಸೀಡಿ ಶಿವುʼನಾ? ಆ ದೇವರಾಜೇಗೌಡ ಜತೆ ಮಾತಾಡಿದ್ದು ʼಸೀಡಿ ಶಿವುʼ ತಾನೇ ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಈ ಪ್ರಕರಣದಲ್ಲಿ ನನ್ನ ಹೆಸರು ಹೇಳಿ ದೇವರಾಜೇಗೌಡಗೆ ಪ್ರಚೋದನೆ ನೀಡಿದ್ದೀರಿ ಅಲ್ಲವೇ ʼಸೀಡಿ ಶಿವುʼ ಅವರೇ.. ಪೆನ್ ಡ್ರೈವಿನಲ್ಲಿ ಏನಿದೆ ಎನ್ನುವುದು ಗೊತ್ತಾಯಿತಾ? ನನ್ನ ಮೇಲೆ ಇದನ್ನೆಲ್ಲಾ ತಿರುಗಿಸುವುದಕ್ಕೆ ನೋಡಿದಿರಿ. ನನಗಷ್ಟೇ ಅಲ್ಲ, ಇನ್ನೂ ಯಾರಿಗೆಲ್ಲಾ ನೀವು ಏನೇನು ಮಾಡಿದ್ದೀರಿ ಎನ್ನುವುದು ಗೊತ್ತಿದೆ. ದೇವೇಗೌಡರು ಇನ್ನೂ ಯಾಕೆ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುತ್ತಾನೆ ಅವನೊಬ್ಬ. ನನ್ನ ಮೇಲೆ, ನಮ್ಮ ಕುಟುಂಬದ ಮೇಲೆ ಯಾಕಿಷ್ಟು ಹಗೆತನ ನಿಮಗೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ತಿಹಾರ್ ಗೆ ಬಂದೆ; ಎರಡ್ಮೂರು ದಿನದಲ್ಲಿ ರಿಲೀಸ್ ಆದ್ರಿ!
ಆವತ್ತು ಈ ʼಸೀಡಿ ಶಿವುʼ ತಿಹಾರ್ ಜೈಲಿನಲ್ಲಿ ಇದ್ದರು. ನಾನು ಅಂದು ರಾಜಕೀಯ ಮಾಡಲಿಲ್ಲ. ಅವರ ಕುಟುಂಬದ ಜತೆ ನಿಂತೆ ನಾನು. ಅವರ ಹೆತ್ತ ತಾಯಿಯನ್ನು ಭೇಟಿ ಮಾಡಿ ಧೈರ್ಯ ಹೇಳಿದೆ. ತಿಹಾರ್ ಜೈಲಿಗೂ ಹೋಗಿ ಈ ವ್ಯಕ್ತಿಯನ್ನು ಭೇಟಿಯಾಗಿ ಧೈರ್ಯ ಹೇಳಿ ಬಂದೆ. ಅದಾದ ಎರಡು ಮೂರು ದಿನಗಳಲ್ಲಿ ಇವರು ಜೈಲಿನಿಂದ ಬಿಡುಗಡೆಯಾದರು. ಕೃತಜ್ಞತೆ ಎನ್ನುವುದು ಇರಲಿ. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿ ತಿಹಾರ್ ಜೈಲಿಗೆ ಹೋಗಿದ್ದರಾ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ದೇವರಾಜೇಗೌಡ ಜತೆ ಮಾತನಾಡಿರುವ ಮಾಜಿ ಶಾಸಕ ಹೇಳುತ್ತಾನೆ; ಅವರ ಇಡೀ ಕುಟುಂಬವನ್ನು ಬಲಿ ಹಾಕಲು ಸರಕಾರ ತೀರ್ಮಾನ ಮಾಡಿಬಿಟ್ಟಿದೆ ಎಂದು. ಅಲ್ಲಿಗೆ ಸರಕಾರದ ಉದ್ದೇಶ ಏನು? ಈ ಪೆನ್ ಡ್ರೈವುಗಳ ಹಂಚಿಕೆಯಲ್ಲಿ ಯಾರ ಪಾತ್ರವಿದೆ ಎನ್ನುವುದು ಗೊತ್ತಾಯಿತಲ್ಲವೇ? ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರಲು ನಾಲ್ವರು ಸಚಿವರ ಸಮಿತಿ ರಚನೆ ಮಾಡಿದ್ದಾರೆ ಎಂದು ಸ್ವತಃ ದೇವರಾಜೇಗೌಡ ಹೇಳಿದ್ದಾರೆ. ನಮ್ಮ ಕುಟುಂಬವನ್ನು ಮುಗಿಸುವುದಕ್ಕೆ ಇಂತಹ 10 ಮಿನಿ ಕ್ಯಾಬಿನೆಟ್ʼಗಳನ್ನು ರಚನೆ ಮಾಡಿಕೊಳ್ಳಲಿ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಗುಡುಗಿದರು.
ಭಾನುವಾರ ಈ ಸೀಡಿ ಶಿವು ಅವರು, ಅವರ ಚೇಲಾ ಮಾತನಾಡಿರುವ ಮೊಬೈಲ್ ಸಂಭಾಷಣೆಯ ಆಡಿಯೋ ಹೊರಗೆ ಬಂದು ವೈರಲ್ ಆಗಿದೆ. ಅದು ಬಂದ ಮೇಲೆ ಕಾಂಗ್ರೆಸ್ ನಾಯಕರ ಉಸಿರೇ ಇಲ್ಲ. ದಿನವೂ ಬಂದು ಪ್ರೆಸ್ʼಮೀಟ್ ಮಾಡಿದ್ದೇ ಮಾಡಿದ್ದು. ಈಗ ಯಾಕೆ ಯಾರೂ ಬಂದು ಮಾತನಾಡುತ್ತಿಲ್ಲ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.
ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಾ?
ಆಡಿಯೋದಲ್ಲಿ ನಮ್ಮ ಕುಟುಂಬವನ್ನು ಬಲಿ ಹಾಕುವುದಕ್ಕೆ ತೀರ್ಮಾನ ಮಾಡಿದಲಾಗಿದೆ ಎನ್ನುತ್ತಾರೆ ನಿಮ್ಮ ಮಾಜಿ ಶಾಸಕ. ಅದಕ್ಕೆ ಉದ್ದೇಶ ಈಡೇರಿಕೆಗೆ ಅಮಾಯಕ ಹೆಣ್ಣುಮಕ್ಕಳ ವಿಡಿಯೋಗಳನ್ನು ಹಾದಿಬೀದಿಯಲ್ಲಿ ಹಂಚಿದ್ದೀರಿ. ರಾಜಕೀಯ ಸ್ವಾರ್ಥಕ್ಕಾಗಿ ಎಂಥಾ ಕೀಳು ಮಟ್ಟಕ್ಕಾದರೂ ಇಳಿಯುತ್ತೀರಿ ನೀವು. ರಾತ್ರಿ ನಿದ್ದೆ ಬರುತ್ತದಾ ನಿಮಗೆ..? ಶಿವಕುಮಾರ್ ಅವರೇ.. ಇಂತಹ ರಾಜಕೀಯ ಬೇಕಾ ಡಿ.ಕೆ.ಶಿವಕುಮಾರ್ ಅವರೇ.. ಇಷ್ಟು ಕೆಳ ಮಟ್ಟಕ್ಕೆ ಇಳಿಯಬೇಕಾ? ಎಂದು ಡಿಕೆಶಿ ಮೇಲೆ ಕೆಂಡಾಮಂಡಲರಾದರು ಕುಮಾರಸ್ವಾಮಿ ಅವರು.
ಕಾರ್ತಿಕ್ ಎನ್ನುವವನು ಹೊಳೆನರಸೀಪುರದಲ್ಲಿ ಏನು ಮಾಡಿದ? ಯಾರ ಮನೆಗೆ ಅವನು ಬಂದು ಹೋಗುತ್ತಿದ್ದ? ನನಗೆ ಗೊತ್ತಿದೆ. ಇಂಥ ವಿಷಯಗಳನ್ನು ಇಟ್ಟುಕೊಂಡು ನೀವು ರಾಜಕೀಯ ಮಹಡಿ ಕಟ್ಟಬೇಕಾ? ನೀವು ಯಾಕೆ ಹೀಗೆ ಮಾಡುತ್ತಿದ್ದೀರಿ ಎನ್ನುವುದು ಗೊತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆಲ್ಲುವುದು ನಿಮ್ಮಿಂದ ಆಗಲ್ಲ. ಆ ಹತಾಶೆ ಇಷ್ಟೆಲ್ಲಾ ಮಾಡಿಸುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಯಾರೋ ಒಬ್ಬರು ಮಾಡಿದ ತಪ್ಪಿಗೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಲು ಹೊರಟಿದ್ದೀರಲ್ಲ ನೀವು. ಇದ್ಯಾವ ನ್ಯಾಯ? ಸಿದ್ದರಾಮಯ್ಯನವರೇ.. ನಮ್ಮ ಪಕ್ಷದಲ್ಲಿದ್ದಾಗ ನಮ್ಮ ತಾಯಿ ಕೈಯ್ಯಿಂದ ಊಟ ತಿಂದು ಬೆಳೆದವರು ನೀವು. ಆ ತಾಯಿಯ ನೋವು ಏನು ಎನ್ನುವುದು ಗೊತ್ತಿದೆಯಾ ನಿಮಗೆ. ನಿಮಗೆ ಪ್ರಾಮಾಣಿಕತೆ ಎನ್ನುವುದು ಇದ್ದರೆ ಈ ಪ್ರಕರಣದ ತನಿಖೆ ಎಲ್ಲಿಂದ ನಡೆಯಬೇಕು ಎನ್ನುವುದನ್ನು ಗಮನಿಸಿ. ಕಾರ್ತೀಕ್ ಗೌಡನ ವಿರುದ್ಧ ಕ್ರಮ ಆಗಿದೆಯಾ? 14 ವರ್ಷ ಅವನು ಆ ಮನೆಯಲ್ಲಿ ಚಾಲಕನಾಗಿದ್ದ. ಏಕೆ ಅವನು ಕೆಲಸ ಬಿಟ್ಟ? ಅಶ್ಲೀಲ ವಿಡಿಯೋಗಳು ಹೊರಬರುವಲ್ಲಿ ಅವನ ಪಾತ್ರ ಏನು? ಇದೆಲ್ಲಾ ತನಿಖೆ ಆಗಬೇಕಲ್ಲವೇ? ಎಂದು ಭಾವುಕರಾದರು ಕುಮಾರಸ್ವಾಮಿ ಅವರು.
ಆಡಿಯೋ ರಿಲೀಸ್ ಆದ ಮೇಲೆ ಡಿ.ಕೆ.ಶಿವಕುಮಾರ್ ಅವರ ಸದ್ದೇ ಇಲ್ಲ. ಅವರ ಏನು ಎನ್ನುವುದು ಸ್ಪಷ್ಟವಾಯಿತು. ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ ಈ ಉಪ ಮುಖ್ಯಮಂತ್ರಿಗೆ ಜವಾಬ್ದಾರಿ ಎನ್ನುವುದ್ದಿದ್ದರೆ ಪೆನ್ ಡ್ರೈವ್ ಕೈಗೆ ಸಿಕ್ಕಿದಾಗಲೇ ಕ್ರಮಕ್ಕೆ ಸೂಚನೆ ನೀಡಬೇಕಿತ್ತು. ಅದು ಬಿಟ್ಟು ಅದನ್ನು ಚುನಾವಣೆ ಸರಕು ಮಾಡಿಕೊಂಡರು. ಲೋಕಸಭೆ ಚುನಾವಣೆ ಬಂದಾಗ ಅದರ ಉಪಯೋಗ ಪಡೆಯಲು ಮುಂದಾದರು. ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಲು ಹೇಳಿದರು ಅಂತ ಹೇಳಿ ಎಂದು ಹೇಳಿಸಿದರು. ನಿಮ್ಮ ಮುಖವಾಡ ಏನು ಎನ್ನುವುದು ಕಳಚಿ ಬಿತ್ತಲ್ಲಾ ʼಸೀಡಿ ಶಿವು..ʼ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಅವರು ಹರಿಹಾಯ್ದರು.
ಸೆಕ್ಷನ್ 376 ಸರಕಾರ
ವಕೀಲ ದೇವರಾಜೇಗೌಡರನ್ನು ಅರೆಸ್ಟ್ ಮಾಡಿದ್ದಾರೆ. ಈ ಸರಕಾರದ ಮತ್ತೊಂದು ಸಾಧನೆ ಇದು ಎಂದು ಹೇಳುವುದಕ್ಕೆ ಸಿಎಂ ಮರೆತಿದ್ದಾರೆ! ಸೆಕ್ಷನ್ 376ರ ಪ್ರಕಾರ ಅವರನ್ನು ಬಂಧಿಸಿದ್ದಾರೆ. ಅದಕ್ಕೆ ಈ ಸರಕಾರವನ್ನು ʼಸೆಕ್ಷನ್ 376 ಸರಕಾರʼ ಎಂದು ಕರೆಯಬೇಕು. ನನ್ನ ಪ್ರಕಾರ ಇದು 376 ಸೆಕ್ಷನ್ ಸರಕಾರ! ಏಕೆಂದರೆ, ಸರಕಾರದ ವಿರುದ್ಧ ಮಾತನಾಡಿದರೆ 376 ಸೆಕ್ಷನ್ ಅಡಿಯಲ್ಲಿ ಕೇಸ್ ಹಾಕುತ್ತಾರೆ ಎಂದು ಕಿಡಿಕಾರಿದರು ಅವರು.
ದೇವರಾಜೇಗೌಡ-ರೇವಣ್ಣ ಜಗಳ ಬೇರೆ. ದೇವರಾಜೇಗೌಡ ಮೇಲಿನ ಅತ್ಯಾಚಾರ ಅರೋಪಕ್ಕೂ ಮುನ್ನ ಇವರೇ ಒಂದು ದೂರು ಕೊಟ್ಟಿದ್ದರು. ಆ ಹೆಣ್ಣುಮಗಳ ಮೇಲೆ ಹನಿಟ್ರ್ಯಾಪ್ ಕೇಸ್ ಹಾಕಿದ್ದರು. ಕಳೆದ ಮಾರ್ಚ್ʼನಲ್ಲಿ ದೂರು ಕೊಟ್ಟರೂ ಈವರೆಗೆ ಕ್ರಮ ಆಗಿಲ್ಲ. ಆದರೆ ಆ ಹೆಣ್ಣುಮಗಳು ಏಪ್ರಿಲ್ 1ರಂದು ದೂರು ಕೊಟ್ಟರೆ, ದೇವರಾಜೇಗೌಡನ್ನ ಮೇ ತಿಂಗಳಲ್ಲಿ ಬಂಧಿಸಿದ್ದಾರೆ. ಇದೆಲ್ಲ ನೋಡುತ್ತಿದ್ದರೆ ಈ ಸರಕಾರ ಸೆಕ್ಷನ್ 376 ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗಾಢವಾಗಿ ಅನಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.
ಡಿಜಿಗೆ ಬೆಂಗಳೂರು ಕಮೀಷನರ್ ಮಾಡಲಿಲ್ಲ ಅಂತ ಸಿಟ್ಟು!
ಕಾರು ಚಾಲಕ ಕಾರ್ತಿಕ್ ಗೌಡ ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಕೂಡಲೇ ದೇವರಾಜೇಗೌಡ ಆಡಿಯೊ ಬಿಡುಗಡೆ ಮಾಡಿದರು. ಆದಾದ ಮೇಲೆ ಆ ಹೆಣ್ಣುಮಗಳನ್ನು ಕರೆದುಕೊಂಡು ಬಂದರು. ಆಕೆಯನ್ನು ಕರೆದುಕೊಂಡು ಬಂದವರು ಯಾರು? ಆಕೆಗೆ ಎಷ್ಟು ದುಡ್ಡು ಕೊಟ್ಟರು? ಆಕೆ ಹೊಳೆನರಸೀಪುರದಲ್ಲಿಯೇ ದೂರು ಕೊಡಲಿಲ್ಲ, ಯಾಕೆ? ಆಕೆಯನ್ನು ಹೊಳೆನರಸೀಪುರದಿಂದ ಬೆಂಗಳೂರಿಗೆ ಕರೆದುಕೊಂಡು ಬಂದವರು ಯಾರು? ಭಾನುವಾರ ʼಸೀಡಿ ಶಿವುʼ ಹೇಳಿದ್ದಾರೆ ಈ ಬಗ್ಗೆ…, ಇದಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈಗಿನ ಡಿಜಿಗೆ ನಾನು ನನ್ನ ಅವಧಿಯಲ್ಲಿ ಬೆಂಗಳೂರು ಕಮೀಷನರ್ ಮಾಡಲಿಲ್ಲ ಎನ್ನುವ ಸಿಟ್ಟಿರಬೇಕು. ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ನೇರವಾಗಿ ಡಿಜಿ ಮೇಲೆಯೇ ಗಂಭೀರ ಆರೋಪ ಮಾಡಿದರು.
ಪೆನ್ ಡ್ರೈವ್ ಹಂಚಿದವರನ್ನು ಯಾಕೆ ಬಂಧಿಸಿಲ್ಲ?
ಏಪ್ರಿಲ್ 22ರಂದು ಪೆನ್ ಡ್ರೈವ್ ಹಂಚಿಕೆ ಮಾಡಿದವರ ಮೇಲೆ ದೂರು ನೀಡಲಾಯಿತು. ಆ ದೂರಿನಲ್ಲಿ ಹೆಸರಿಸಲಾದ ನಾಲ್ವರ ವಿರುದ್ಧ FIR ದಾಖಲಾದರೂ ಈವರೆಗೆ ಅವರನ್ನು ಬಂಧಿಸಿಲ್ಲ. ಅವರಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ. ಅತ್ಯಾಚಾರದ ಪ್ರಕರಣದಲ್ಲಿ 10 ಜನರನ್ನು ಕರೆದುಕೊಂಡು ಬಂದು ಚಿತ್ರಹಿಂಸೆ ಕೊಟ್ಟು ಹಾಗೆ ಹೇಳು, ಹೀಗೆ ಹೇಳು ಎಂದು ಕಿರುಕುಳ ಕೊಡುತ್ತಿದ್ದಾರೆ. ಆದರೆ, ಪೆನ್ ಡ್ರೈವ್ ಹಂಚಿದ ಕಿಡಿಗೇಡಿಗಳನ್ನು ಮಾತ್ರ ಪೊಲೀಸರು ಟಚ್ ಮಾಡುತ್ತಿಲ್ಲ. ಏನಿದರ ಒಳ ಮರ್ಮ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಡಿಜಿ ಕಚೇರಿಯಲ್ಲೇ ರೇವಣ್ಣ ವಿರುದ್ಧ ದೂರಿನ ಪ್ರತಿ ಟೈಪ್!
ಇಡೀ ಪ್ರಕರಣಕ್ಕೆ ಮೂಲ ಯಾರು? ಅವರು ತಪ್ಪು ಮಾಡಿದ್ದರೆ ನೇಣಿಗೆ ಹಾಕಿ. ನಿಮ್ಮ ಪರ ನಾವಿದ್ದೇವೆ. ಆದರೆ, ರೇವಣ್ಣ ವಿರುದ್ಧದ ಪೊಲೀಸ್ ದೂರು ಡಿಜಿ ಕಚೇರಿಯಲ್ಲೇ ಟೈಪ್ ಆಗಿದೆ ಎಂದರೆ ಅದಕ್ಕೆ ಏನು ಹೇಳಬೇಕು? ರೇವಣ್ಣ ಮೇಲೆ ಹಾಕಿರುವ ಕೇಸ್ ಅನ್ನೇ ದೇವರಾಜೇಗೌಡ ಮೇಲೆಯೂ ಹಾಕಿ SIT ತಂಡದಿಂದ ಬಂಧನ ಮಾಡಿಸಿದ್ದಾರೆ. ಮುಖ್ಯಮಂತ್ರಿಗಳೇ ಇದೇನಾ ನಿಮ್ಮ ತನಿಖೆ? ನಿಮ್ಮ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ? ಎಂದು ಅವರು ಕಿಡಿಕಾರಿದರು.
ಮಹಿಳಾ ಸಿಬ್ಬಂದಿ ಕ್ಷಮೆ ಕೇಳಿದ ಕುಮಾರಸ್ವಾಮಿ
ಇವತ್ತಿನ ಪತ್ರಿಕೆಯೊಂದರ ವರದಿ ನೋಡಿ ಮನಸ್ಸಿಗೆ ಬಹಳ ನೋವಾಯಿತು. ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯ ಬಗ್ಗೆ ಬರೆದಿರುವ ವರದಿ ಅದಾಗಿತ್ತು. ದೀರ್ಘ ರಜೆ ತೆಗೆದುಕೊಳ್ಳುವುದಕ್ಕೆ ಮಹಿಳಾ ಸಿಬ್ಬಂದಿ ಹಿಂಜರಿಯುತ್ತಿದ್ದಾರೆ ಎನ್ನುವ ಆ ವರದಿ ನನ್ನ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಮಾನಸಿಕ ಯಾತನೆ ಅನುಭವಿಸುತ್ತಿರುವ ಮಹಿಳೆಯರಲ್ಲಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಭಾವುಕರಾದರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು.
ನೊಂದ ಹೆಣ್ಣು ಮಕ್ಕಳಿಗೆ ಹೇಳಲು ಬಯಸುತ್ತೇನೆ. ದಯಮಾಡಿ ಕುಗ್ಗಬೇಡಿ. ನಮ್ಮ ಕುಟುಂಬದಿಂದ, ಪ್ರಜ್ವಲ್ ನಿಂದ ತಪ್ಪಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ. ಯಾವುದೇ ಕಾರಣಕ್ಕೂ ಅಂಜಬೇಡಿ. ನಿಮ್ಮ ಜತೆ ನಾನಿದ್ದೇನೆ, ನಿಮ್ಮ ಪರ ಹೋರಾಡುತ್ತೇನೆ ಎಂದರು ಕುಮಾರಸ್ವಾಮಿ ಅವರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 400 ಮಹಿಳೆಯರ ಮೇಲೆ ಮಾಸ್ ರೇಪ್ ಆಗಿದೆ ಎಂದು ಅಂಕಿಅಂಶ ಸಮೇತ ಆರೋಪಿಸಿದ್ದಾರೆ. ಇನ್ನೊಬ್ಬರು 2976 ಮಹಿಳೆಯರು ಎಂದಿದ್ದಾರೆ. ಅವರು ಯಾಕೆ 3 ಸಾವಿರ ಎಂದು ಹೇಳಿಲ್ಲವೋ ನನಗೆ ಗೊತ್ತಿಲ್ಲ. ಇಲ್ಲಿವರೆಗೆ ತನಿಖಾ ತಂಡ ಇವರಿಗೆಲ್ಲಾ ಯಾಕೆ ನೊಟೀಸ್ ಕೊಟ್ಟಿಲ್ಲ? ಇವರು ಯಾಕೆ ಮುಂದೆ ಬಂದು ದೂರು ನೀಡಿಲ್ಲ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.