ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ
ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ ಒಡೆಯರ್, ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಸೇರಿ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಅದೃಷ್ಟ ಪರೀಕ್ಷೆಗೆ ಇಳಿದಿರುವ 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮಂಗಳವಾರ (ಜೂನ್ 4) ತೀರ್ಮಾನವಾಗಲಿದೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆದಿರುವ ಮತದಾನದ ಮತ ಎಣಿಕೆ ಕಾರ್ಯ ನಾಳೆ, ಅಂದರೆ; ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಮಧ್ಯಾಹ್ನದ ವೇಳೆಗೆ ಮುಕ್ತಾಯವಾಗಿ ಫಲಿತಾಂಶ ಹೊರಬೀಳಲಿದೆ. ಇವಿಎಂ ಯಂತ್ರಗಳ ಬಳಕೆ ಕಾರಣಕ್ಕೆ ಫಲಿತಾಂಶ ಹೆಚ್ಚು ತಡವಾಗುವುದಿಲ್ಲ.
ಬೆಂಗಳೂರಲ್ಲಿ 3 ಕ್ಷೇತ್ರಗಳ ಮತ ಎಣಿಕೆ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಲೋಕಸಭೆ ಕ್ಷೇತ್ರಗಳ ಮತ ಎಣಿಕೆ ನಡೆದರೆ ಉಳಿದಂತೆ ಆಯಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭಗೊಳ್ಳಲಿದೆ.
ಸಂಬಂಧಪಟ್ಟ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಪ್ರತಿ ಕೇಂದ್ರದಲ್ಲೂ ಮೇಲ್ವಿಚಾರಣೆ
ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗ ನೇಮಿಸಿರುವ ವೀಕ್ಷಕರು ಪ್ರತಿ ಕೇಂದ್ರದಲ್ಲೂ ಮೇಲ್ವಿಚಾರಣೆ ನಡೆಸಲಿದ್ದಾರೆ.
ರಾಜ್ಯದ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಎನ್‌ಡಿಎ ಮೈತ್ರಿಕೂಟದಿಂದ ಬಿಜೆಪಿ 25 ಹಾಗೂ ಜೆಡಿಎಸ್ 3 ಕ್ಷೇತ್ರಗಳಲ್ಲಿ ತನ್ನ ಉಮೇದುವಾರರನ್ನು ನಿಲ್ಲಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು-ಕೊಡಗು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರ್ಗಿ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣಕ್ಕಿಳಿದಿರುವ ಮಂಡ್ಯ ಲೋಕಸಭೆ ಕ್ಷೇತ್ರಗಳ ಫಲಿತಾಂಶ ಕುತೂಹಲ ಮೂಡಿಸಿವೆ.
ಕಾಂಗ್ರೆಸ್ ಮುಖಂಡರಿಗೆ ಪ್ರತಿಷ್ಠೆ
ಈ ನಾಲ್ಕರಲ್ಲಿ ಮೂರು ಕ್ಷೇತ್ರಗಳು ಕಾಂಗ್ರೆಸ್ ಮುಖಂಡರಿಗೆ ಪ್ರತಿಷ್ಠೆಯಾಗಿದೆ. ಇನ್ನು ಕುಮಾರಸ್ವಾಮಿ ಅವರಿಗೆ ರಾಜಕೀಯ ಭವಿಷ್ಯ ನಿರ್ಧಾರದ ಕ್ಷಣವಾಗಲಿದೆ. ಪ್ರಸಕ್ತ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂದು ಕಾಂಗ್ರೆಸ್ 28ರ ಪೈಕಿ 20ರಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಳಿಯ ರಾಧಾಕೃಷ್ಣ ಅವರನ್ನು ಕಲಬುರ್ಗಿಯಿಂದ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರದಿಂದ, ಸಚಿವರಾದ ಹೆಚ್.ಸಿ.ಮಹಾದೇವಪ್ಪ, ಎಸ್.ಎಸ್.ಮಲ್ಲಿಕಾರ್ಜುನ್, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ ಹಾಗೂ ಶಿವಾನಂದ ಪಾಟೀಲ್ ಅವರುಗಳ ಮಕ್ಕಳು ಇಲ್ಲವೇ ಪತ್ನಿಯರನ್ನು ಇದೇ ಮೊದಲ ಬಾರಿಗೆ ಕಣಕ್ಕಿಳಿಸಲಾಗಿದೆ.
ಕಣದಲ್ಲಿ ಬಿಜೆಪಿ ದಿಗ್ಗಜರು
ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದಿಂದಲೂ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಧಾರವಾಡ, ಭಗವಂತ ಖೂಬಾ ಬೀದರ್, ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಬೆಳಗಾವಿ, ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಕಣದಲ್ಲಿದ್ದಾರೆ.
ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಚಿತ್ರದುರ್ಗ, ಬಿ.ಶ್ರೀರಾಮುಲು ಬಳ್ಳಾರಿಯಿಂದ ಕಣದಲ್ಲಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳ 56 ಅಭ್ಯರ್ಥಿಗಳೂ ಸೇರಿದಂತೆ ಒಟ್ಟಾರೆ 474 ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ರಾಜ್ಯದ ಮತದಾರರು ಈಗಾಗಲೇ ಬರೆದಿದ್ದಾರೆ.
ಕುತೂಹಲ ಕೆರಳಿಸಿರುವ ಕೋಲಾರ, ಚಿಕ್ಕಬಳ್ಳಾಪುರ
ಬೆಂಗಳೂರು ನೆರೆ ಕ್ಷೇತ್ರಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳು ಬಹಳ ಕುತೂಹಲ ಕೆರಳಿಸಿವೆ. ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಹಾಗೂ ಕಾಂಗ್ರೆಸ್‌ಸಿನ ಕೆ.ವಿ.ಗೌತಮ್ ಅವರ ನಡುವೆ ಪೈಪೋಟಿ ಇದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಕಾಂಗ್ರೆಸ್ಸಿನ ರಕ್ಷಾ ರಾಮಯ್ಯ ಅವರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಆದರೆ; ಇವೆರಡೂ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.