ಕಾಂಗ್ರೆಸ್ ಹೈಕಮಾಂಡ್ ಮೂಗಿನ ನೇರಕ್ಕೆ ಈ ಹಣ ವರ್ಗಾವಣೆ; ಎಲ್ಲಾ ನಿಗಮ-ಮಂಡಳಿ ಹಣ ವ್ಯವಹಾರದ ಬಗ್ಗೆ ತನಿಖೆ ಆಗಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣದ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಹೊರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಎಲ್ಲವನ್ನೂ ಸಚಿವ ನಾಗೇಂದ್ರ ಅವರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಅಕ್ರಮದಲ್ಲಿ ಸರ್ಕಾರದ ಇಡೀ ಸಂಪುಟವೇ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಎಲ್ಲಾ ನಿಗಮ ಮಂಡಳಿಗಳಲ್ಲಿ ಇರುವ ಹಣದ ಬಗ್ಗೆ ಜನರ ಮುಂದೆ ಲೆಕ್ಕ ಇಡಬೇಕು ಎಂದು ಒತ್ತಾಯ ಮಾಡಿದರು.
ನಿಗಮದ ಹಣ ಹಲವಾರು ನಕಲಿ ಖಾತೆಗಳಿಗೆ ವರ್ಗಾವಣೆ ಆಗಿದೆ. ಈ ಬಗ್ಗೆ ದಾಖಲೆಗಳೇ ಬಹಿರಂಗ ಆಗಿವೆ. ಕೇವಲ ತೆಲಂಗಾಣಕ್ಕೆ ಮಾತ್ರ ಈ ಹಣ ಯಾಕೆ ಹೋಯಿತು? ಯಾರು ವರ್ಗಾವಣೆ ಮಾಡಿಸಿದರು? ಇಲ್ಲಿ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಅದ ಕೆಲ ಹೊತ್ತಿನಲ್ಲಿ ನಕಲಿ ಬ್ಯಾಂಕ್ ಖಾತೆಗಳಿಂದ ರಾಕೆಟ್ ವೇಗದಲ್ಲಿ ಅಷ್ಟೂ ದೊಡ್ಡ ಮೊತ್ತ ಹಣವನ್ನು ಡ್ರಾ ಮಾಡಲಾಗಿದೆ. ಇದು ಬಹುದೊಡ್ಡ ಅಕ್ರಮ. ಸಿಎಂ ಸೇರಿದಂತೆ ಇಡೀ ಸಂಪುಟವೇ ಶಾಮೀಲಾಗಿದೆ ಎಂದು ಅವರು ನೇರ ಆರೋಪ ಮಾಡಿದರು.
ಕೇವಲ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಮಾತ್ರ ಹಣ ವರ್ಗಾವಣೆ ಆಗಿರಲು ಸಾಧ್ಯವಿಲ್ಲ. ಬೇರೆ ಬೇರೆ ಇಲಾಖೆಗಳ ನಿಗಮ ಮಂಡಳಿಗಳ ಖಾತೆಗಳಿಂದ ಹಣ ವರ್ಗ ಆಗಿರುವ ಸಾಧ್ಯತೆ ಇದೆ. ತೆಲಂಗಾಣ ಚುನಾವಣೆಗೆ ರಾಜ್ಯದಿಂದ ಯಾರೆಲ್ಲ ಉಸ್ತುವಾರಿಗಳು ಇದ್ದರು? ಅದನ್ನೆಲ್ಲ ಗಮನಿಸಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಎಲ್ಲಾ ನಿಗಮ ಮಂಡಳಿ ಹಣ ವ್ಯವಹಾರದ ಬಗ್ಗೆ ತನಿಖೆ ಆಗಲಿ
ಈ ಹಗರಣಕ್ಕೆ ಸಂಬಂಧಿಸಿ 14 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆ ಖಾತೆಗಳನ್ನು ತೆರೆದವರು ಯಾರು? ಯಾವೆಲ್ಲ ಕಾಣದ ಕೈಗಳು ಇವುಗಳ ಹಿಂದೆ ಇವೆ? ಎಲ್ಲಾ ಹೊರಗೆ ಬರಬೇಕು ಅಲ್ಲವೇ? ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಎನ್ನುವುದು ಇದೆಯಾ? ಎಲ್ಲಾ ನಿಗಮ ಮಂಡಳಿಗಳ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆದರೆ ಇನ್ನೆಷ್ಟು ಅಕ್ರಮಗಳು ಹೊರಗೆ ಬರುತ್ತವೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕಳವಳ ವ್ಯಕ್ತಪಡಿಸಿದರು.
ಹಣಕಾಸಿನ ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರೇ ಇದಕ್ಕೆಲ್ಲ ನೇರ ಜವಾಬ್ದಾರಿ ಹೊರಬೇಕು. ಹಗರಣದ ತನಿಖೆ ಬಗ್ಗೆ ಆಮೆ ವೇಗ! ಆದರೆ ಹಣ ವರ್ಗಾವಣೆ ಮಾಡಿಕೊಳ್ಳಲು ರಾಕೆಟ್ ವೇಗ!! ಇದು ಇವರ ಕಾರ್ಯವೈಖರಿ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ಇಷ್ಟು ಮೊತ್ತದ ಹಣವನ್ನು ಯಾರ ನಿರ್ದೇಶನದ ಮೇರೆಗೆ ಮಾಡಿದ್ದರು. ನಿಗಮ ಆಡಳಿತ ಮಂಡಳಿ ಸಭೆಯಲ್ಲಿ ಇದೆಲ್ಲಾ ಚರ್ಚೆ ನಡೆದು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಜನರ ತೆರಿಗೆ ಹಣ, ಅವರ ಬೆವರಿನ ಹಣ. ಜನರ ದುಡ್ಡನ್ನು ಇಷ್ಟು ಸ್ವೇಚ್ಚಾಚಾರವಾಗಿ ಬಳಕೆ ಮಾಡಿಕೊಂಡಿದ್ದಾರೆ. ನಿಮಗೆ ಯಾವ ನೈತಿಕತೆ ಇದೆ ಸಿದ್ದರಾಮಯ್ಯನವರೇ? ಬಡವರ ದುಡ್ಡನ್ನೇ ಕೊಳ್ಳೆ ಹೊಡೆಯೋದು, ಅವರನ್ನು ಉದ್ಧಾರ ಮಾಡುತ್ತಿದ್ದೇವೆ ಎಂದು ನಾಟಕ ಆಡೋದು. ಇದು ಯಾವ ಸೀಮೆ ಅಭಿವೃದ್ಧಿ? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಪ್ರಿಯಾಂಕ್ ಖರ್ಗೆ ಏನು ಹೇಳುತ್ತಾರೆ?
ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಹಳ ಮಾತಾನಾಡುತ್ತಾರೆ. ಪ್ರತಿಯೊಂದಕ್ಕೂ ಮುಂದೆ ಬಂದು ಹೇಳಿಕೆ ಕೊಡುತ್ತಾರೆ. ಇದಕ್ಕೂ ಅವರು ಉತ್ತರ ಕೊಡಲಿ. ಯಾರಪ್ಪನ ಮನೆಯ ದುಡ್ಡು ಇದು? ಕೇಂದ್ರ ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದು ಹೇಳುತ್ತೀರಿ, ಇನ್ನೊಂದು ಕಡೆ ಇರುವ ಹಣವನ್ನು ಹೀಗೆ ಲೂಟಿ ಮಾಡುತ್ತೀರಿ!! ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
KRDL ಖರ್ಗೆ ಅವರ ಇಲಾಖೆಗೆ ಸೇರಿದ್ದು. ಅಲ್ಲಿಯೂ ಒಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಪ್ರಿಯಾಂಕ್ ಮಾತಾಡ್ತಾರಾ? ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಹೈ ಕಮಾಂಡ್ ಮಾಡಿಸಿದೆ
ದೆಹಲಿ ಕಾಂಗ್ರೆಸ್ ಹೈಕಮಾಂಡ್ ಮೂಗಿನ ನೇರದಲ್ಲೇ ಈ ಅಕ್ರಮ ಹಣದ ವರ್ಗಾವಣೆ ನಡೆದಿದೆ. ಹೈಕಮಾಂಡ್ ಸೂಚನೆ ಮೇರೆಗೆ ಹಣ ವರ್ಗಾವಣೆ ಆಗಿದೆ. 200 ಪರ್ಸೆಂಟ್ ಕಾಂಗ್ರೆಸ್‌ನ ಹೈಕಮಾಂಡ್ ಗಮನಕ್ಕೆ ಬಂದೇ ಇದೆಲ್ಲಾ ನಡೆದಿದೆ. ವಿವಿಧ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಪಕ್ಷ ರಾಜ್ಯದಿಂದಲೇ ಹಣ ಪೂರೈಕೆ ಮಾಡಿದೆ ಎನ್ನುವುದಕ್ಕೆ ಇದೇ ಸಾಕ್ಷ್ಯ ಎಂದು ಅವರು ಕಾಂಗ್ರೆಸ್ ಹೈ ಕಮಾಂಡ್ ಮೇಲೆಯೇ ನೇರ ಆರೋಪ ಮಾಡಿದರು.
ಈಗ ಎಸ್ ಐಟಿ ರಚನೆ ಮಾಡಿ ಯಾರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಇವರು? ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಮರಣಪತ್ರದಲ್ಲಿ ಸಚಿವ ನಾಗೇಂದ್ರ ಹೆಸರನ್ನೂ ಬರೆದಿಲ್ಲ. 36 ಜನ ಸಚಿವರಿದ್ದಾರೆ, ನಾವು ಯಾರೂ ಅಂತ ಅಂದುಕೊಳ್ಳಬೇಕು ಹಲವಾರು ನಿಗಮ ಮಂಡಳಿಗಳಲ್ಲಿ ಹೀಗೆ ಆಗುತ್ತಿದೆ. ಎಲ್ಲವೂ ತನಿಖೆ ಆಗಬೇಕು ಎಂದು ಅವರು ಒತ್ತಾಯ ಮಾಡಿದರು.
ಎಸ್ ಐಟಿಯಿಂದ ಸಾಕ್ಷ್ಯ ನಾಶ
ಹಗರಣದಲ್ಲಿ ಯೂನಿಯನ್ ಬ್ಯಾಂಕ್ ಇರುವುದರಿಂದ ಸಿಬಿಐ ತನಿಖೆ ಆಗಿಯೇ ಆಗುತ್ತದೆ. ಆದರೆ, ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್ ಐಟಿ ರಚನೆ ಮಾಡಿದೆ. ಎಸ್ ಐಟಿ ಆದರೆ ದಾಖಲೆ ನಾಶ ಮಾಡಬಹುದು, ಕಡತಗಳನ್ನು ಸುಟ್ಟು ಹಾಕಬಹುದು. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ್ ಅವರ ಮನೆಯಿಂದ ಪೆನೆ ಡ್ರೈವ್ ತೆಗೆದುಕೊಂಡು ತೆಗೆದುಕೊಂಡು ಬಂದರಲ್ಲ, ಆ ಪೆನ್ ಡ್ರೈವ್ ಎಲ್ಲಿದೆ ಈಗ? ಯಾಕೋ.. ಈ ಬಾರಿ ಪೆನ್ ಡ್ರೈ ಹೆಚ್ಚು ಸದ್ದು ಮಾಡುತ್ತಿದೆ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟರು ಮಾಜಿ ಮುಖ್ಯಮಂತ್ರಿ.