ಸರಣಿ ದರಗಳ ಹೆಚ್ಚಳದ ನಂತರ ಬಸ್ ದರವೂ ತುಟ್ಟಿ; ಶೇ.25ರಷ್ಟು ದರ ಹೆಚ್ಚಳಕ್ಕೆ ಮನವಿ ಮಾಡಿದ ಸಾರಿಗೆ ಸಂಸ್ಥೆ
ಬೆಂಗಳೂರು: ವಿಧಾನಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರವನ್ನು ಶೇ.12ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ.
ಪೆಟ್ರೋಲ್, ಡೀಸೆಲ್, ಹಾಲು, ನೀರು ದರ ಏರಿಕೆ ಮಾಡಿದ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ.
ಡೀಸೆಲ್, ವಾಹನ ಬಿಡಿಭಾಗಗಳ ಬೆಲೆ ಏರಿಕೆ ಆಗಿರುವುದು, ನೌಕರರ ವೇತನ ಹೆಚ್ಚಳ ಮಾಡಿರುವುದು ಮತ್ತು ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಆಗುತ್ತಿರುವ ನಷ್ಟ ಭರಿಸಲು ಶೇಕಡ 25 ರಷ್ಟು ದರ ಹೆಚ್ಚಳ ಮಾಡುವಂತೆ ಸರ್ಕಾರವನ್ನು ಸಾರಿಗೆ ಸಂಸ್ಥೆ ಕೋರಿದೆ.
ನಿಗಮಗಳ ಮೇಲೆ ಭಾರೀ ಹೊರೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕಳೆದ 10 ವರ್ಷಗಳಿಂದ ಪ್ರಯಾಣ ದರ ಹೆಚ್ಚಳ ಮಾಡದಿರುವುದರಿಂದ ನಿಗಮಗಳ ಮೇಲೆ ಭಾರೀ ಹೊರೆ ಬಿದ್ದಿದೆ.
ಈ ಅವಧಿಯಲ್ಲಿ ಡೀಸೆಲ್ ದರ ಹಲವು ಬಾರಿ ಹೆಚ್ಚಳಗೊಂಡಿದೆ, ನೌಕರರ ವೇತನದಲ್ಲೂ ಹೆಚ್ಚಳವಾಗಿದೆ, ಅಲ್ಲದೆ, ವಾಹನಗಳ ಬಿಡಿಭಾಗಗಳ ಬೆಲೆಯೂ ಏರಿಕೆಯಾಗಿದೆ.
ನಾಲ್ಕೂ ನಿಗಮಗಳ ಅಡಿಯಲ್ಲೂ ಕನಿಷ್ಠ ಶೇಕಡ 25ರಷ್ಟು ದರ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಲೇಬೇಕು, ಇಲ್ಲದಿದ್ದರೆ ನಿಗಮಗಳ ಪರಿಸ್ಥಿತಿ ಚಿಂತಾಜನಕವಾಗಲಿದೆ ಎಂದು ಪೂರ್ಣ ವರದಿ ನೀಡಿದೆ.
ಶಕ್ತಿ ಯೋಜನೆಗೆ ಸರ್ಕಾರದಿಂದ ಒಂದಷ್ಟು ಅನುದಾನ ಬರುತ್ತಿದೆ, ಆದರೂ, ಅದು ಯಾವುದಕ್ಕೂ ಸಾಲದಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ನೌಕರರ ವೇತನ ಮತ್ತೆ ಹೆಚ್ಚಳ
ರಾಜ್ಯ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ವರದಿ ಶಿಫಾರಸು ಜಾರಿಗೊಳಿಸಿರುವುದರಿಂದ ನಮ್ಮ ನೌಕರರ ವೇತನವನ್ನೂ ಮತ್ತೆ ಹೆಚ್ಚಳ ಮಾಡಬೇಕು, ಈ ಎಲ್ಲಾ ಕಾರಣಕ್ಕೆ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ಕೊಡಿ ಎಂದಿದೆ.
ಸಂಸ್ಥೆ ನೀಡಿದ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಲಂಕಷವಾಗಿ ಪರಿಶೀಲಿಸಿ ದರ ಹೆಚ್ಚಳದ ಅನಿವಾರ್ಯ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದಾರೆ.
ಹಾಲು, ಪೆಟ್ರೋಲ್ ಮತ್ತು ಇತರೆ ವಸ್ತುಗಳ ಮೇಲಿನ ದರ ಹೆಚ್ಚಳಕ್ಕೆ ಅಪಸ್ವರ ಕೇಳಿಬಂದಿದೆ, ಶೇಕಡ 25ರಷ್ಟು ಹೆಚ್ಚಳಕ್ಕೆ ಅವಕಾಶ ನೀಡಬೇಡಿ, ಶೇಕಡ 10ರಿಂದ 12ರಷ್ಟು ದರ ಹೆಚ್ಚಳ ಮಾಡಿಕೊಳ್ಳಲಿ, ಈ ತೀರ್ಮಾನವನ್ನು ಅಧಿವೇಶನ ಮುಗಿದ ನಂತರ ಕೈಗೊಳ್ಳಲಿ ಎಂದು ಮುಖ್ಯಮಂತ್ರಿ ಅವರು ಸಾರಿಗೆ ಸಚಿವರಿಗೆ ಸಲಹೆ ಮಾಡಿದ್ದಾರೆ.