ಪ್ಲೇ ಆಫ್ಸ್ ಸೇರಿ 18 ಪಂದ್ಯಗಳು ಬಾಕಿ
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಸಮರ ಭೀತಿ ಜೋರಾಗುತ್ತಿದ್ದಂತೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಇಂದು ನಡೆದ ಮಹತ್ವದ ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಅದರಂತೆ ಇಂದಿನಿಂದ ನಡೆಯುವ ಎಲ್ಲಾ ಪಂದ್ಯಗಳನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದೆ. ಪ್ಲೇ ಆಫ್ಸ್ ಸೇರಿ 18 ಪಂದ್ಯಗಳು ಬಾಕಿ ಉಳಿದಿವೆ.
ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಬಿಸಿಸಿಐ ಆದ್ಯತೆ ನೀಡಿದೆ. ಆಟಗಾರರನ್ನು ಸದ್ಯಕ್ಕೆ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆಗಳ ಬಗ್ಗೆ ಗಮನಹರಿಸಲಿದೆ.
ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪಂದ್ಯಾವಳಿಯ ಹೊಸ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಜಮ್ಮು ಮತ್ತು ಪಠಾಣ್‌ಕೋಟ್ ನಗರಗಳಲ್ಲಿ ದಾಳಿಯ ಎಚ್ಚರಿಕೆಗಳು ಬಂದಿದ್ದರಿಂದ ಗುರುವಾರ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಐಪಿಎಲ್ ಲುದಾರರೊಂದಿಗೆ ಪರಿಸ್ಥಿತಿಯ ಬಗ್ಗೆ ಅವಲೋಕನ ಮಾಡಿ ಸಮಾಲೋಚನೆ ನಡೆಸಲಾಗುವುದು. ಆ ನಂತರ ಪಂದ್ಯಾವಳಿಯ ಹೊಸ ವೇಳಾಪಟ್ಟಿ ಮತ್ತು ಪಂದ್ಯಗಳು ನಡೆಯಲಿರುವ ಸ್ಥಳಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.