ಯುರೋಪ್ ಇತಿಹಾಸದಲ್ಲಿ ನನಗೆ ಬಿಡದೆ ಕಾಡುವವರು ಇಬ್ಬರು. ಒಬ್ಬ ಅಡಾಲ್ಫ್ ಹಿಟ್ಲರ್. ಇನ್ನೊಬ್ಬ ಬೆನಿಟೊ ಮುಸೊಲಿನಿ. ಇಬ್ಬರೂ ಸರ್ವಾಧಿಕಾರಿಗಳೇ. ಹೀಗಾಗಿ ಹೆಚ್ಚು ಹೇಳುವುದೇನೂ ಇಲ್ಲ. ಇವರನ್ನು ಬಹುತೇಕರು ಓದಿದ್ದಾರೆ ಎನ್ನುವುದಕ್ಕಿಂತ ಎಲ್ಲರಿಂದಲೂ ಅವರೇ ಓದಿಸಿಕೊಂಡಿದ್ದಾರೆ. ಆ ಮಟ್ಟಿಗೆ ಇವರಿಬ್ಬರು ಇನ್ನೂ ಬದುಕಿದ್ದಾರೆ.
ಹಿಟ್ಲರ್ ಗಿಂತ ಮುಸೊಲಿನಿಯ ಬಗ್ಗೆಯೆ ನನಗೆ ಹೆಚ್ಚು ಕುತೂಹಲ. ಅವನೊಬ್ಬ ಸರ್ವಾಧಿಕಾರಿ. ಅದಕ್ಕೂ ಮೊದಲು ಪ್ರಧಾನಿ. ಅದಕ್ಕೂ ಮೊದಲು ಸೈನಿಕ, ಅದಕ್ಕೂ ಹಿಂದೆ ಸೇನೆಯಲ್ಲಿ ನಾನಾ ಹುದ್ದೆ, ಅದಕ್ಕೂ ಮುನ್ನ ಮಾಜವಾದಿ. ಹೋರಾಗಾರ. ಪಾಠ ಹೇಳುವ ಅಧ್ಯಾಪಕನಾಗಿದ್ದ. ಅದಾಗುವುದಕ್ಕೂ ಮೊದಲೇ ಪತ್ರಕರ್ತನಾಗಿದ್ದ!! ಸಂಪಾದಕನೂ ಆಗಿದ್ದ!! ( ಫ್ಯಾಸಿಸ್ಚ್ ಜರ್ನಲಿಸಂನ ಜನಕ ಇವನೇ.) ಅಷ್ಟೇ ಅಲ್ಲ, ಐದಾರು ಭಾಷೆಗಳನ್ನು ಚೆನ್ನಾಗಿಯೇ ಕಲಿತುಕೊಂಡಿದ್ದ. ಬೇಕಾದಷ್ಟು ಬರೆದ. ಬರೆದದ್ದನ್ನು ತನಗ ಬೇಕಾದ ಹಾಗೆ ಬಳಸಿಕೊಂಡ. ಇದೆಲ್ಲವನ್ನು ಸಿರಿಯಸ್ಸಾಗಿಯೇ ಮಾಡಿದ.
1922ರಿಂದ 1943ರವರೆಗೆ, ಅಂದರೆ ಅವನ ಗ್ರಹಚಾರ ಹಾಳಾಗುವ ತನಕ ಇಟಲಿಯನ್ನು ತನಗಿಷ್ಟ ಬಂದ ಹಾಗೆ ಬಳಸಿಕೊಂಡಿದ್ದ, ಆಳಿದ್ದ. ನರನಾಡಿಗಳಲ್ಲೂ ಪ್ಯಾಸಿಸ್ಟ್ ಮನೋಭಾವದ ಮೂಲ ಗುಣಗಳಾದ ಸಿಟ್ಟು, ಆಕ್ರೋಶವನ್ನೇ ಹಾಸಿಹೊದ್ದಿದ್ದ. ಆದರೆ, ಪಕ್ಕದ ಜರ್ಮನಿಯ ಹಿಟ್ಲರ್ ಗಿಂತ ವಿಭಿನ್ನವಾಗಿದ್ದ. ಆ ಕಾಲಕ್ಕೆ ಮಾಧ್ಯಮದಿಂದ ಬೆಳೆದು ಅಧಿಕಾರದ ಒಳಸುಳಿಗಳನ್ನು ಹೇಗೆ ಅರಿತು ಮೆರೆಯಬಹುದು ಎಂಬುದನ್ನು ಗೊತ್ತು ಮಾಡಿಕೊಂಡು ತೋರಿಸಿದ. ಇಂತಹ ಮುಸೊಲಿನಿ ಮನಸು, ಅವನ ಪತ್ರಿಕೋದ್ಯಮ ಈಗಲೂ ಗಾಢವಾಗಿ ಬಾಳಿ ಬದುಕುತ್ತಿದೆ.
ಹಸಿವಿನ ದರ್ಶನ
1902ರಲ್ಲಿ ಸ್ವಿಡ್ಜರ್ಲೆಂಡಿಗೆ ಹೋದ ಮುಸೊಲಿನಿಗೆ ಕಷ್ಟ, ಹಸಿವುಗಳ ದರ್ಶನವಾಯಿತು. ಹೊತ್ತಿನ ಊಟಕ್ಕೂ ತತ್ವಾರ. ಅಲ್ಲಿ ಜೈಲು, ಹೊಸ ಹೊಸ ಸಂಪರ್ಕಗಳನ್ನು ಸಾಧಿಸಿದ ಆತನಿಗೆ ಸಮಾಜವಾದದ ಘಾಟು ವಾಸನೆ ಬಡಿದಿದ್ದೇ ಅಲ್ಲಿ. ಬಗೆಬಗೆಯ ನಮೂನೆಯ ಕಮ್ಯುನಿಸ್ಟರು ಪರಿಚಯವಾದರು. ಅಲ್ಲಿ ಅವನ ಸಮಾಜವಾದಿ ಪ್ರಖರತೆ ಜಾಸ್ತಿ ಆದಾಗ ಅಲ್ಲಿನ ಸರಕಾರ ವಾಪಾಸ್ ಇಟಲಿಗೆ ಗಡೀಪಾರು ಮಾಡಿತು. ಸ್ವದೇಶಕ್ಕೆ ಮರಳಿದ ಮೇಲೆ ಕೆಲಕಾಲ ವಿದ್ಯಾರ್ಥಿಗಳಿಗೆ ಪಾಠ ಮಾಡಿಕೊಂಡಿದ್ದ ಮೊಸೊಲಿನಿಗೆ ತೃಪ್ತಿ ಎನ್ನುವುದೇ ನಾಸ್ತಿ ಆಗಿತ್ತು. ಸದಾ ತುಡಿತ, ಹೊಸದರ ಬಗ್ಗೆ ಹುಡುಕಾಟ ಅವನ ಜಾಯಮಾನವಾಗಿತ್ತು. ಮತ್ತೆ, ಇಟಲಿ ಬಿಟ್ಟು ಆಸ್ಟ್ರಿಯಾ ಮತ್ತು ಹಂಗೇರಿಯತ್ತ ಹೋದ. ಅಲ್ಲಿ ಒಂದಿಷ್ಟು ಸಮಾಜವಾದಿಗಳ ಜತೆಗೂಡಿ ‘ಕಾರ್ಮಿಕನ ಭವಿಷ್ಯ’ ಎಂಬ ಪತ್ರಿಕೆಗೆ ಸಂಪಾದಕನಾಗಿಬಿಟ್ಟ. ಕೊನೆಗೆ ಅಲ್ಲೂ ಇರಲಾರದೆ ವಾಪಾಸ್ ಮಿಲಾನ್ ಗೆ ಹಿಂದಿರುಗಿ ‘ವರ್ಗಗಳ ಹೋರಾಟ’ ಎನ್ನುವ ತನ್ನದೇ ವೀಕ್ಲಿ ಮಾಡಿ ಅದಕ್ಕೂ ತಾನೇ ಎಡಿಟರ್ ಆಗಿಬಿಟ್ಟ. ಅಷ್ಟಕ್ಕೂ ಸುಮ್ಮನಾಗಲಿಲ್ಲ, ಇನ್ನೊಂದು ತೀವ್ರಗಾಮಿ ಪತ್ರಿಕೆ ‘ಲಾ ವೊಚೆ’ ಯನ್ನು ಆರಂಭಿಸಿದ. ಜತೆಜತೆಯಲ್ಲೇ ಸಾಹಿತ್ಯ ಬರೆಯಲು ಶುರು ಮಾಡಿದ. ಪ್ರಬಂಧ, ಕಥೆ, ಕಾದಂಬರಿಯನ್ನು ಬರೆದ. ‘ಕಾರ್ಡಿನಲ್ ನ ಪ್ರಿಯತಮೆ’ ಎಂಬುದು ಆ ಕಾದಂಬರಿಯ ಹೆಸರು. ಕೊನೆಗೆ ಅದೇನೋ ವಿವಾದ ಮಾಡಿಕೊಂಡು ದೊಡ್ಡ ಗಲಾಟೆಗೆ ಕಾರಣವಾಯಿತು.
ಹೀಗೆ ಪತ್ರಿಕೋದ್ಯಮ ಮತ್ತು ಸಾಹಿತ್ಯವನ್ನು ಪ್ರಬಲ ಅಸ್ತ್ರಗಳನ್ನಾಗಿ ಮಾಡಿಕೊಂಡು ಪ್ರಸಿದ್ದಿಗೆ ಬಂದ ಮುಸೊಲಿನಿ ಆ ಹೊತ್ತಿಗೆ ಇಟಲಿ ಸಮಾಜವಾದಿಗಳಲ್ಲಿ ಅತಿ ಪ್ರಮುಖನಾಗಿಬಿಟ್ಟ. ಮೆಲ್ಲಮೆಲ್ಲಗೆ ಸೇನೆಯ ಸನಿಹಕ್ಕೆ ಬರುತ್ತಲೇ ಪ್ರಮುಖ ತತ್ವಜಾನಿಗಳ ಸಾಂಗತ್ಯವನ್ನು ಮುಸೊಲಿನಿ ಸಂಪಾದಿಸಿಕೊಂಡ. ಅದೇ ಹೊತ್ತಿನಲ್ಲಿ ಅವನು ಮತ್ತೆ ಮತ್ತೊಂದು ಸುದ್ದಿ ಪತ್ರಿಕೆ ಮಾಡಿ ಬರೆಯತೊಡಗಿದ. ‘ಅವಂತಿ’ ಎಂಬ ಹೆಸರಿನ ಆ ಪತ್ರಿಕೆ ಅನತಿ ಕಾಲದಲ್ಲಿಯೇ ದೇಶದಲ್ಲಿ ಮನೆಮಾತಾಗಿಬಿಟ್ಟಿತು. ಕ್ರಮೇಣವಾಗಿ ರಾಜಕೀಯ ಎನ್ನುವುದು ಅವನ ಹತ್ತಿರಕ್ಕೆ ತಾನಾಗಿಯೇ ಸುಳಿಯಲಾರಂಭಿಸಿತು. ಅಧಿಕಾರದ ವಾಸನೆ ಅವನಿಗೂ ಹಿತವೆನಿಸಿತು. ಪರಿಣಾಮ ಅವನ ನಿಲುವುಗಳಲ್ಲಿ ಬದಲಾವಣೆ ಬಂತು. ಆ ಪತ್ರಿಕೆಯ ಸಂಪಾದಕ ಹುದ್ದೆಯಿಂದ ಕಿತ್ತೆಸೆಯಲ್ಪಟ್ಟ. ಇದರಿಂದ ಉಂಟಾದ ಹತಾಶೆ, ಸಿಟ್ಟಿನಿಂದ ಮತ್ತೊಂದು ಪತ್ರಿಕೆಯನ್ನು ಕಟ್ಟಿದ. ಅದರಲ್ಲಿ ಅದುವರೆಗೂ ತಾನು ಜತೆಯಾಗಿ ಕೆಲಸ ಮಾಡಿದ್ದ ಸಮಾಜವಾದಿಗಳ ವಿರುದ್ಧವಾಗಿಯೇ ಬರೆದ, ಕಟುವಾಗಿ ಟೀಕಿಸಿದ. ಬಳಿಕ ಕಮ್ಯುನಿಸ್ಟರು ಅವನನ್ನು ಪಕ್ಷದಿಂದ ಹೊರ ಹಾಕಿದರು. ಅಲ್ಲಿಂದ ಅವನು ತಾನು ಸಾಯುವ ತನಕ ಸಮಾಜವಾದಿಗಳ ವಿರೋಧಿಯಾಗಿಯೇ ಉಳಿದು, ಅವರಿಂದಲೇ ಹತನಾದ.
ಅವನಲ್ಲೊಬ್ಬ ಪತ್ರಕರ್ತ
ಕಮ್ಯುನಿಸ್ಟರನ್ನು ಬಿಟ್ಟು ಹೊರಬಂದ ಮೇಲೆ ಮುಸೊಲಿನಿ ನಡೆದ ದಾರಿಯ ಬಗ್ಗೆ ಇಲ್ಲಿ ವಿವರಣೆ ಬೇಕಿಲ್ಲ. ಹಿಟ್ಲರ್ ಗಿಂತ ಬೇರೆಯದ್ದೇ ದೃಷ್ಟಿಕೋನ ಇವನಿಗಿತ್ತು. ಹಿಟ್ಲರ್ ಗಿಂತ ವಿಭಿನ್ನ ಆಯಾಮಗಳಲ್ಲಿ ಯೋಚನೆ ಮಾಡುತ್ತಿದ್ದ. ಪ್ರತಿ ಕ್ಷಣದಲ್ಲಿಯೂ ಅವನಲ್ಲೊಬ್ಬ ಪತ್ರಕರ್ತ ಜಾಗೃತನಾಗಿರುತ್ತಿದ್ದ ಎಂದು ಇತಿಹಾಸಕಾರರರು ಹೇಳುತ್ತಾರೆ. ಇವನು ಸರ್ವಾಧಿಕಾರಿಯಾಗಿ ಮಾತ್ರವಲ್ಲ, ಓರ್ವ ಸಾಹಿತಿಯಾಗಿ, ರಾಜಕೀಯ ಪಂಡಿತನಾಗಿ, ಆರಂಭದಲ್ಲಿ ಸಮಾಜವಾದದ ಕಟ್ಟಾಳುವಾಗಿವಾಗಿ ಕಾಣುತ್ತಾನೆ. ಇವೆಲ್ಲಕ್ಕೂ ಮಿಗಿಲಾಗಿ ಒಬ್ಬ ರಾಜಕೀಯ ಪತ್ರಕರ್ತನಾಗಿ ಹೆಚ್ಚು ಗಮನ ಸೆಳೆಯುತ್ತಾನೆ. ನಾಲ್ಕೈದು ಪತ್ರಿಕೆಗಳನ್ನು ಕಟ್ಟಿ, ಬೆಳೆಸಿ ಆ ಕಾಲದ ವ್ಯವಸ್ಥೆಯನ್ನು ಮೈಮೇಲೆ ಎಳೆದುಕೊಂಡು ಅವುಗಳ ಸಂಪಾದಕನಾಗಿ ಸಮರ್ಥವಾಗಿ ಮುನ್ನೆಡೆಸಿದ್ದ. ಮುಖ್ಯವಾಗಿ ಅವನು ಪತ್ರಿಕೋದ್ಯಮ ಮತ್ತು ಸಾಹಿತ್ಯವನ್ನು ತನ್ನ ರಾಜಕೀಯ ಬೆಳವಣಿಗೆಗೆ ಏಣಿಯನ್ನಾಗಿ ಮಾಡಿಕೊಂಡು ಯಶಸ್ವಿಯೂ ಆದ. ಪರಮ ಪ್ರಚೋದನೆಗೆ ಕಾರಣವಾದ, ಇಟಲಿಯಲ್ಲಿ ಸಿಕ್ಕಾಪಟ್ಟೆ ಅಶಾಂತಿಗೆ ಕಾರಣವಾದ ಸಾಹಿತ್ಯವನ್ನು ಬರೆದು ಅಧಿಕಾರದ ಗದ್ದುಗೆಯತ್ತ ಸಾಗಲು ಬಂಡವಾಳ ಗಟ್ಟಿ ಮಾಡಿಕೊಂಡ. ಜನರ ನಾಡಿಮಿಡಿತಕ್ಕೆ ತಕ್ಕ ಹಾಗೆ ಬರವಣಿಗೆಯನ್ನು ಕರಗತ ಮಾಡಿಕೊಂಡ ಮುಸೊಲಿನಿಗೆ ಅಧಿಕಾರವನ್ನು ಕೈವಶ ಮಾಡಿಕೊಂಡು ಏಕಚಕ್ರಾಧಿಪತಿಯಂತೆ ಮೆರೆಯಲು ಇದೇ ಊರುಗೋಲಾಯಿತು.
ಇದಿಷ್ಟು ಬಿಟ್ಟರೆ ಈಗ ಮುಸೊಲಿನಿ ಏಕೆ ಎಂಬ ಪ್ರಶ್ನೆ ಸಹಜ. 20 ವರ್ಷದ ಮೇಲೆ 267 ದಿನ ಇಟಲಿಯನ್ನು ತನ್ನಿಚ್ಚೆಯಂತೆ ಆಳಿದ್ದ ಮುಸೊಲಿನಿ ಸತ್ತು ಇವತ್ತಿಗೆ (28 ಏಪ್ರಿಲ್ 1945) 75 ವರ್ಷಗಳೇ ಆಗಿವೆ. ತಾನು ಬದುಕಿ ಬಾಳಿದ 61 ವರ್ಷಗಳ ಜೀವಿತಾವಧಿಯಲ್ಲಿ ಮುಸೊಲಿನಿ ಸವೆಸಿದ ಹಾದಿ ಅತ್ಯಂತ ದುರ್ಗಮವಾಗಿತ್ತು. ಅವನ ಸಾವು ಕೂಡ ಅಷ್ಟೇ ಧಾರುಣವಾಗಿತ್ತು. ಕಮ್ಯೂನಿಸ್ಟ್ ಹೋರಾಟಗಾರರ ಗುಂಡಿಗೆ ಬಲಿಯಾದ ಅವನ ಬರಹಗಳು ಅತ್ತ ಕಮ್ಯುನಿಸ್ಟರ ಅತಿ ಪ್ರೀತಿಯಿಂದಲೂ, ಕ್ರಮೇಣ ಅತಿ ದ್ವೇಷದಿಂದಲೂ ಕೂಡಿದ್ದವು. ಅವನು ಬರೆದಿದ್ದ ಅನೇಕ ಸಂಪಾದಕೀಯಗಳು ಭಾರೀ ಪ್ರಕಂಪನಗಳನ್ನೇ ಉಂಟು ಮಾಡುತ್ತಿದ್ದವು ಎಂದು ತಿಳಿದುಬರುತ್ತದೆ. ಅವನ ಅಳಿವಿನ ನಂತರವೂ ಯುರೋಪಿನಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿ ಅವನ ಪತ್ರಿಕೋದ್ಯಮ ಬದುಕಿದೆಯೋ ಸತ್ತಿದೆಯೋ ಬೇರೆ ಮಾತು, ಅವನ ಗುಣಗಳನ್ನು ಆಪೋಶನ ಮಾಡಿರುವ ಅನೇಕ ಪತ್ರಕರ್ತರನ್ನು, ಮಾಲೀಕರನ್ನು ನಾನೇ ನೋಡಿದ್ದೇನೆ. ಅವನದ್ದೇ ಮನಸ್ಥಿತಿಯ ಸಂಪಾದಕರನ್ನು ಕಂಡಿದೇನೆ, ಕೆಲವರ ಜತೆ ಕೆಲಸವನ್ನೂ ಮಾಡಿದ್ದೇನೆ. ಮುಸೊಲಿನಿ ತನಗಾಗಿ, ತಾನು ನಂಬಿದ ಜನರಿಗಾಗಿ ಹಾಗೂ ತನ್ನ ರಾಜಕೀಯ ಭವಿಷ್ಯಕ್ಕಾಗಿ ಮೀಡಿಯಾವನ್ನು ಶಕ್ತಿಶಾಲಿಯಾಗಿ ಬಳಸಿಕೊಂಡ.
ಅದೇ ಮಾತನ್ನು ಇವತ್ತಿಗೆ ಅನ್ವಯಿಸಿ ನೋಡಿದರೆ, ಮಾಧ್ಯಮಗಳಲ್ಲಿ ಮುಸೊಲಿನಿಗಳು ಸತ್ತಿಲ್ಲ. ಸಾಯುತ್ತಲೂ ಇಲ್ಲ. ಬದಲಿಗೆ ಅವರ ಸಂತತಿ ಜಾಸ್ತಿಯಾಗುತ್ತಿದೆ. ಅವರೆ ತುಂಬಿ ಹೋಗಿದ್ದಾರೆ. ಜತೆಗೆ ಜಗತ್ತನ್ನು ಅಪ್ಪಳಿಸಿ ಕೂತಿರುವ ಕರೋನಾ ಕೂಡ ಹೊಸ ತಲೆಮಾರಿನ ಮುಸೊಲಿನಿಗಳ ಪಾಲಿಗೆ ಅಕ್ಷಯಪಾತ್ರೆ ಆಗಿಬಿಟ್ಟಿದೆ.
ಜೈ ಮುಸೊಲಿನಿ!!
ಸದ್ಯಕ್ಕೆ ನನಗೆ ಇಷ್ಟು ಬಿಟ್ಟರೆ ಬೇರೇನೂ ದಿಕ್ಕು ತೋಚುತ್ತಿಲ್ಲ.
- (ಮುಸೊಲಿನಿ ಚಿತ್ರಕೃಪೆ; ವಿಕಿಪೀಡಿಯ)