ಇದು ನನ್ನ 2ನೇ ಕವನ ಸಂಕಲನದ ಹೆಸರು. 1993 ಮತ್ತೂ 1995ರವರೆಗೆ ನನ್ನ ಆತ್ಮತೃಪ್ತಿಗೆ ಗೀಚಿಕೊಂಡ ಸಾಲುಗಳು ಆ ಹೊತ್ತಿಗೆಯಲ್ಲಿವೆ. ಸದಾಶಿವ ಎಂಬ ಗೆಳೆಯ, ಚನ್ನ ಇದನ್ನು ಅಚ್ಚು ಹಾಕಿಸು, ಖರ್ಚು ನಾನು ನೋಡಿಕೊಳ್ಳುತ್ತೇನೆ ಅಂದಾಗ ನನ್ನ ಪದ್ಯಗಳಿಗೆ ಇಷ್ಟುಬೇಗ ಪುಸ್ತಕಭಾಗ್ಯ ಸಿಕ್ಕಿದ್ದಕ್ಕೆ ನಾನು ಹಿಗ್ಗಿದ್ದೆ. ಆ ಹಿಗ್ಗು ಬಹಳದಿನ ಉಳಿಯಲಿಲ್ಲ. ಕಾರಣವಿಷ್ಟೆ, ಆ ಸಂಕಲನ ಸೇಲಾಗಿದ್ದಕ್ಕಿಂತ ಗೌರವ ಪ್ರತಿಗಳಾಗಿ ನನ್ನಿಂದ ಹೊರಗೆ ಹೋಗಿದ್ದೇ ಹೆಚ್ಚು. ನನ್ನ ಪದ್ಯಗಳನ್ನು ಓದಿದ್ದ ನಾಗತಿಹಳ್ಳಿ ಚಂದ್ರಶೇಖರ ಅವರು ಬೆನ್ನುಡಿ ಬರೆದು ಬೆನ್ನುತಟ್ಟಿದ್ದರು.
1995 ಜನವರಿ 22ರಂದು ಭಾನುವಾರ ಆ ಕವಿತಾಗುಚ್ಛವನ್ನು ನಮ್ಮ ಅವಿಭಜಿತ ಕೋಲಾರ ಜಿಲ್ಲೆಯ ಹಿರಿಯ ಕವಯಿತ್ರಿ ಶ್ರೀಮತಿ ಉತ್ತನೂರು ರಾಜಮ್ಮನವರು ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಬಾಗೇಪಲ್ಲಿ ಕನ್ನಡ ಕಲಾಸಂಘ ವತಿಯಿಂದ ನಡೆದ “ಮಾಸ್ತಿ ಮತ್ತು ತೇಜಸ್ವಿ ಅವರ ಕಥಾಸಾಹಿತ್ಯದಲ್ಲಿನ ಸಾಮಾಜಿಕ ಮೌಲ್ಯಗಳು” ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಲೋಕಾರ್ಪಣೆ ಮಾಡಿದ್ದರು. ಆ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ ಇನ್ನೊಬ್ಬ ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಅವರೂ ಇದ್ದರು.
ಆ ಸಂಕಲನದಲ್ಲಿ ಈ ಕೆಳಗಿನ ಮೂರು ಲೈನು ಬರೆದಿದ್ದೆ.
“ಒಲವು ಅಲೆಯಂತೆ
ತೀರ ದಾಟುವುದಿಲ್ಲ
ಅದೆಷ್ಟು ಉಕ್ಕಿದರೂ..”
ಈ ಸಾಲುಗಳನ್ನು ಬರೆದಾಗ ಸುನಾಮಿ ಬಗ್ಗೆ ಗೊತ್ತಿರಲಿಲ್ಲ. 2004ರಲ್ಲಿ ಸುನಾಮಿ ಬಂದು ಸಾವಿರಾರು ಜನರು ಜಲಸಮಾಧಿಯಾದಾಗ ಈ ಸಾಲುಗಳನ್ನು ಮತ್ತೆ ಮತ್ತೆ ಓದಿ ಚಡಪಡಿಸದ್ದೆ. ಅದಕ್ಕೂ ಹಿಂದೆ 1964ರಲ್ಲಿ ಅದೇ ತಮಿಳುನಾಡಿನ ರಾಮೇಶ್ವರಂ ಮತ್ತು ಧನುಷ್ಕೋಡಿಯ ಮೇಲೆ ಸುನಾಮಿ ಎರಗಿ ಸಾವಿರಾರು ಜನ ಕಡಲ ಪಾಲಾಗಿದ್ದರು. ಕೊನೆಪಕ್ಷ ನಾನು ಈ ಸಾಲುಗಳನ್ನು ಬರೆಯುವವರೆಗೂ ಯಾವ ತರಗತಿಯಲ್ಲೂ ಮೇಷ್ಟ್ರುಗಳು (ಭೂಗೋಳದಲ್ಲಿ) ಸುನಾಮಿ ಬಗ್ಗೆ ಹೇಳಿರಲಿಲ್ಲ. ಬಹಶಃ ಅವರು ಹೇಳಿದ್ದಿದ್ದರೆ ಈ ಮೂರು ಸಾಲುಗಳನ್ನು ಬರೆಯುತ್ತಲೇ ಇರಲಿಲ್ಲವೇನೋ…
ಈಗ ಒಲವಿಗೂ ಕಡಲಿಗೂ ಹೋಲಿಸಿ ಬರೆಯಲು ಇಷ್ಚವಿಲ್ಲ. ಒಲವು ಮತ್ತು ಸುನಾಮಿ!!! ಈ ಹೋಲಿಕೆ ಹೇಗೆ ಮಾರಾಯರೆ, ಛೇ!!
ಒಂದು ಅಪ್ರಸ್ತುತ ಕವಿಸಮಯಕ್ಕೆ ವಿಷಾದವಿದೆ.
ಕ್ಯಾಪ್ಷನ್: ನನ್ನ ಒಲವಿನ ’ಅಲೆಗಳು ಕವನ’ ಸಂಕಲನವನ್ನು ಬಿಡುಗಡೆ ಮಾಡಿದ ಹಿರಿಯ ಕವಯಿತ್ರಿ ಉತ್ತನೂರು ರಾಜಮ್ಮ.