ಕಲಬುರಗಿಯಲ್ಲಿ ಫೆ. 5, 6 ಮತ್ತು 7, 2020 ರಂದು ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ‘ಮಾಧ್ಯಮ: ಸವಾಲುಗಳು’ ಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣಗಳ ಕುರಿತು ಹಿರಿಯ ಪತ್ರಕರ್ತ ಸುಭಾಷ್ ಹುಗಾರ್ ಅವರು ಮಾಡಿರುವ ಪೂರ್ಣ ಭಾಷಣ ಇಲ್ಲಿದೆ…
***
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರೇ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಮನು ಬಳಿಗಾರ್ ಅವರೇ, ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ವಿಜಯ ಕರ್ನಾಟಕ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ ಅವರೇ, ಆಶಯ ಭಾಷಣ ಮಾಡಿದ ಪ್ರಜಾವಾಣಿ ಸಂಪಾದಕರಾದ ಶ್ರೀ ರವೀಂದ್ರ ಭಟ್ ಅವರೇ, ವಿವಿಧ ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ಮಂಡನೆ ಮಾಡಿದ ವಿಜಯವಾಣಿ ಸಂಪಾದಕರಾದ ಶ್ರೀ ಕೆ.ಎನ್.ಚನ್ನೇಗೌಡ ಅವರೇ, ಸುವರ್ಣ ನ್ಯೂಸ್ ನ ಎ.ಎಸ್.ರಮಾಕಾಂತ್ ಅವರೇ, ಶ್ರೀಮತಿ ಕೋಡಿಬೆಟ್ಟು ರಾಜಲಕ್ಷ್ಮಿ ಅವರೇ ಮತ್ತು ಕಲಬುರಗಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿರುವ ಕನ್ನಡ ಸಾಹಿತ್ಯ ಪ್ರೇಮಿಗಳೇ…
ಈ ಮಾಧ್ಯಮ ಗೋಷ್ಠಿ ವಾಸ್ತವವಾಗಿ 12.30ಕ್ಕೆ ಆರಂಭವಾಗಬೇಕಿತ್ತು. ಆದರೆ, ಎರಡು ಗಂಟೆ ತಡವಾಗಿ ಆರಂಭವಾಗುತ್ತಿದೆ. ಈ ಗೋಷ್ಠಿಯ ನಂತರ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ ಸೇರಿದಂತೆ ಇನ್ನೂ ಹಲವು ಮಹತ್ವದ ಗೋಷ್ಠಿಗಳು ನಡೆಯಬೇಕಿವೆ. ಜತೆಗೆ, ಬೆಳಿಗ್ಗೆಯಿಂದ ನಡೆಯುತ್ತಿರುವ ಎಲ್ಲಾ ಗೋಷ್ಠಿಗಳಲ್ಲಿ ತಪ್ಪದೇ ಭಾಗವಹಿಸಿರುವ ನೀವು ಈಗಷ್ಟೇ ಊಟ ಮುಗಿಸಿ ಬಂದು ಕುಳಿತಿದ್ದೀರಿ ಎಂಬುದೂ ನನಗೆ ಚೆನ್ನಾಗಿ ಗೊತ್ತಿದೆ. ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಾಳ್ಮೆಯನ್ನು ಪರೀಕ್ಷಿಸುವ ಸಾಹಸ ಮಾಡದೇ ನಾನು ಸಾಮಾಜಿಕ ಜಾಲತಾಣಗಳ ಬಗೆಗೆ ನೇರವಾಗಿ ಮತ್ತು ಸಂಕ್ಷಿಪ್ತವಾಗಿ ನನ್ನ ವಿಚಾರ ಮಂಡನೆ ಮಾಡುತ್ತೇನೆ.
ನನಗಿಂತ ಮೊದಲು ಮಾತನಾಡಿರುವವರು ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಇಂಟರ್ನೆಟ್ ಮಾಧ್ಯಮ ಹಾಗೂ ಈ ಎಲ್ಲಾ ಮಾಧ್ಯಮಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರವಾಗಿ ಬೆಳಕು ಚೆಲ್ಲಿದ್ದಾರೆ.
ನಾನು ಈಗ ನಮ್ಮ ನಿಮ್ಮೆಲ್ಲರ ಅಂದರೆ, ಜನ ಸಾಮಾನ್ಯರ ಮಾಧ್ಯಮ ಮತ್ತು ಭವಿಷ್ಯದ ಮಾಧ್ಯಮವಾದ ಸೋಷಿಯಲ್ ಮೀಡಿಯಾದ ಬಗ್ಗೆ ನನ್ನ ಕೆಲವು ವಿಚಾರಗಳನ್ನು ತಮ್ಮ ಜೊತೆ ಹಂಚಿಕೊಳ್ಳುತ್ತೇನೆ.
ಕಳೆದ 20 ವರ್ಷಗಳಿಂದ ಈಚೆಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರ ಅಪಾರವಾದ ಮತ್ತು ತ್ವರಿತವಾದ ಬೆಳವಣಿಗೆಯನ್ನು ಕಂಡಿದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಶೇ.45ರಷ್ಟು ಜನ ಅಂದರೆ, ಸುಮಾರು 350 ಕೋಟಿ ಜನ ಹಾಗೂ ಭಾರತದ ಸುಮಾರು 40 ಕೋಟಿ ಜನ ಸಾಮಾಜಿಕ ಜಾಲತಾಣ ಬಳಸುತ್ತಾರೆ.
ತಮ್ಮ ಸ್ನೇಹಿತರು, ಬಂಧು ಬಾಂಧವರು, ಆತ್ಮೀಯರು ಮತ್ತು ಪರಿಚಿತರೊಂದಿಗೆ ದಿನನಿತ್ಯ ಸಂಪರ್ಕದಲ್ಲಿರಲು, ಜಗತ್ತಿನ ಆಗುಹೋಗುಗಳ ಬಗೆಗಿನ ಸುದ್ದಿ ತಿಳಿಯಲು ಮತ್ತು ಮನರಂಜನೆ ಹೊಂದಲು ಫೇಸ್‌ಬುಕ್, ಟ್ವಿಟರ್ ಮತ್ತು ಇನ್ಸಸ್ಟಾಗ್ರಾಂ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ವೇದಿಕೆಗಳನ್ನು ಅವಲಂಭಿಸಿದ್ದಾರೆ. ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ವೇದಿಕೆಗಳು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗಗಳೇ ಆಗಿವೆ…
’ಹಾಗಾದರೆ, ಸೋಷಿಯಲ್ ಮೀಡಿಯಾ ಅಂದರೇನು..?’
ಅತ್ಯಂತ ಸರಳವಾಗಿ ಹೇಳುವುದಾದರೆ ಹಲವಾರು ಜನರು ಅಥವಾ ಬೇರೆ ಬೇರೆ ಸಮುದಾಯಗಳ ನಡುವಿನ ಸಂಪರ್ಕ ಸಾಧನವೇ ಸಾಮಾಜಿಕ ಜಾಲತಾಣ ಅಥವಾ ಸಾಮಾಜಿಕವಾಗಿ ಪರಸ್ಪರರ ಜೊತೆಗೆ ಸಂಪರ್ಕದಲ್ಲಿ ಇರಲು ಬಳಕೆಯಾಗುವ ಆನ್ಲೈನ್ ವೇದಿಕೆಯನ್ನು ಸಾಮಾಜಿಕ ಜಾಲತಾಣ ಎಂದು ಕರೆಯಬಹುದು.
ಸಾಂಪ್ರದಾಯಿಕ ಸಂವಹನ ಸಾಧನಗಳಾದ ದೂರವಾಣಿ, ಪತ್ರ ವ್ಯವಹಾರ ಮತ್ತು ಇ-ಮೇಲ್ ಗಳ ಮೂಲಕ ಇಬ್ಬರು ವ್ಯಕ್ತಿಗಳು ಮಾತ್ರ ಸಂವಹನ ನಡೆಸಬಹುದಾಗಿತ್ತು. ಆದರೆ, ಈ ಸಾಮಾಜಿಕ ಜಾಲತಾಣಗಳ ಮೂಲಕ ಏಕಕಾಲಕ್ಕೆ ಒಬ್ಬರಿಗಿಂತ ಹೆಚ್ಚು ಜನರು ಮತ್ತು ಸಮುದಾಯಗಳೊಂದಿಗೆ ಸಂವಹನ ಮತ್ತು ಸಂವಾದ ಸಾಧ್ಯ. ಇದುವೇ ಸಾಮಾಜಿಕ ಜಾಲತಾಣಗಳ ವಿಶೇಷತೆ.
ಮೊಬೈಲ್ ತಂತ್ರಜ್ಞಾನದಲ್ಲಿ ಆಗಿರುವ ಅಗಾಧ ಬೆಳವಣಿಗೆ ಮತ್ತು ಸುಲಭ ಇಂಟರ್ನೆಟ್ ಲಭ್ಯತೆಯು ಸಾಮಾಜಿಕ ಜಾಲತಾಣಗಳ ಪ್ರಭಾವ, ಮಹತ್ವ ಮತ್ತು ಜನಪ್ರಿಯತೆ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣವಾಗಿವೆ.
ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳ ಬಳಕೆಗೆ ಜನರು ಮೊಬೈಲ್ ಮೇಲೆಯೇ ಅತಿ ಹೆಚ್ಚು ಅವಲಂಬಿತರಾಗಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣ ಬಳಸುವವರ ಪೈಕಿ ಶೇ. 91 ರಷ್ಟು ಜನರು ಮೊಬೈಲ್ ನ್ನೇ ನೆಚ್ಚಿಕೊಂಡಿದ್ದಾರೆ.
ಇಂಟರ್ನೆಟ್ ಬಳಕೆದಾರರ ನಡುವೆ ಮೊಬೈಲ್ ಇಷ್ಟೊಂದು ಜನಪ್ರಿಯ ಆಗಿರುವುದಕ್ಕೆ ಪ್ರಮುಖ ಕಾರಣವೆಂದರೆ, ಕೇವಲ ಒಂದು ಬಟನ್ ಒತ್ತುವ ಮೂಲಕ ತಮಗೆ ಬೇಕಾದ ಮಾಹಿತಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಪಡೆಯಬಹುದು ಅಥವಾ ತಮಗೆ ಬೇಕಾದವರನ್ನು ಯಾವ ಜಾಗದಿಂದಾದರೂ ಸಂಪರ್ಕಿಸಬಹುದು. ಸೋಷಿಯಲ್ ಮೀಡಿಯಾ ಯುಗ ಆರಂಭವಾಗುವ ಮೊದಲು ಇದೆಲ್ಲಾ ಕನಸಿನ ಮಾತಾಗಿತ್ತು.
ಸೋಷಿಯಲ್ ಮೀಡಿಯಾ ಆರಂಭವಾಗಿದ್ದು 1997 ರಲ್ಲಿ. ’ಸಿಕ್ಸ್ ಡಿಗ್ರೀಸ್ (ಡಾಟ್) ಕಾಮ್’ ಎಂಬ ವೆಬ್ಸೈಟ್ ಆಗ ಆರಂಭವಾಯಿತು. ಜನರು ಈ ವೆಬ್ಸೈಟ್ ಮೂಲಕ ತಮ್ಮ ಖಾಸಗಿ ಬದುಕಿನ ಭಾವಚಿತ್ರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಆರಂಭಿಸಿದರು. ಈ ಕಾರಣಕ್ಕಾಗಿ ’ಸಿಕ್ಸ್ ಡಿಗ್ರೀಸ್ (ಡಾಟ್) ಕಾಮ್’ನ್ನು ಜಗತ್ತಿನ ಮೊದಲ ಸಾಮಾಜಿಕ ಜಾಲತಾಣ ಎಂದು ಹೇಳಬಹುದು. ನಂತರ ’ಮೈ ಸ್ಪೇಸ್’ ಮತ್ತು ’ಆರ್ಕೂಟ್’ ಎಂಬ ಸಾಮಾಜಿಕ ಜಾಲತಾಣ ವೇದಿಕೆಗಳೂ ಆರಂಭವಾದವು. ಆದರೆ, ಈ ವೇದಿಕೆಗಳು ಬಳಕೆದಾರರ ನಡುವೆ ನಿರೀಕ್ಷಿಸಿದಷ್ಟು ಜನಪ್ರಿಯತೆ ಹೊಂದಲಿಲ್ಲ.
2004ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ 21 ವರ್ಷದ ಮಾರ್ಕ್ ಝುಕರ್ಬರ್ಗ್ ಫೇಸ್‌ಬುಕ್ ಹೆಸರಿನ ಸೋಷಿಯಲ್ ಮೀಡಿಯಾ ವೇದಿಕೆ ಆರಂಭಿಸಿದರು.
ಆರಂಭದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರಸ್ಪರ ಸಂವಹನ ನಡೆಸುವುದಷ್ಟೇ ಫೇಸ್‌ಬುಕ್ ಉದ್ದೇಶವಾಗಿತ್ತು. ಆದರೆ, ಈ ವೇದಿಕೆ ಶೀಘ್ರ ಜನಪ್ರಿಯತೆ ಪಡೆದಿದ್ದರಿಂದ ಮರುವರ್ಷವೇ ಅದನ್ನು ಅಮೆರಿಕದ ಎಲ್ಲಾ ಪ್ರಮುಖ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಲಾಯಿತು ಹಾಗೂ 2006ರಲ್ಲಿ ಇಡೀ ಜಗತ್ತಿಗೆ ಫೇಸ್‌ಬುಕ್ ಪರಿಚಯಿಸಲಾಯಿತು.
ಅಲ್ಲಿಂದ ಇಲ್ಲಿಯವರೆಗೆ ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಅತ್ಯಂತ ಜನಪ್ರಿಯ ವೇದಿಕೆ ಎಂಬ ಗರಿಮೆ ಹೊಂದಿದ್ದು, ಪ್ರತಿ ತಿಂಗಳು ಸರಾಸರಿ 235 ಕೋಟಿಗೂ ಅಧಿಕ ಜನ ಫೇಸ್‌ಬುಕ್ ಬಳಕೆ ಮಾಡುತ್ತಾರೆ. ವಿಶ್ವದಲ್ಲಿ ಸಾಮಾಜಿಕ ಜಾಲತಾಣದ ಎರಡನೇ ಅತಿ ದೊಡ್ಡ ವೇದಿಕೆ ಎನಿಸಿರುವ ಟ್ವಿಟರ್ ಕೂಡ 2006ರಲ್ಲೇ ಆರಂಭವಾಯಿತು.
ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಪ್ರತಿಯೊಂದು ಬೆಳವಣಿಗೆಯ ಮೇಲೂ ಸಾಮಾಜಿಕ ಜಾಲತಾಣದ ಪ್ರಭಾವ ಗಾಢವಾಗಿದೆ. ಉದ್ಯಮ, ಶಿಕ್ಷಣ, ಆರೋಗ್ಯ, ರಾಜಕೀಯ, ಕ್ರೀಡೆ, ಪರಿಸರ ಹೀಗೆ ಯಾವುದೇ ಕ್ಷೇತ್ರ ಇಂದು ಸಾಮಾಜಿಕ ಜಾಲತಾಣದ ಪ್ರಭಾವದಿಂದ ಹೊರತಾಗಿಲ್ಲ. ಪ್ರತಿಭಟನೆಗಳು ಮತ್ತು ಸಾಮಾಜಿಕ ಚಳವಳಿಗಳೂ ಡಿಜಿಟಲ್ ಸ್ವರೂಪ ಪಡೆದುಕೊಂಡಿವೆ.
ಸಾಮಾಜಿಕ ಜಾಲತಾಣಗಳಿಂದ ಆಗಿರುವ ಬಹುದೊಡ್ಡ ಲಾಭವೆಂದರೆ, ಬಳಕೆದಾರರು ಇಲ್ಲಿ ತಾವೇ ವಿಷಯ ಪ್ರಸ್ತಾಪಿಸಬಹುದು ಮತ್ತು ಅದರ ಪ್ರಸಾರ, ಪ್ರಚಾರವನ್ನೂ ಮಾಡಬಹುದು. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಸಂದರ್ಭದಲ್ಲಿ ಮಾಹಿತಿಯ ಹರಿವು ಏಕಮುಖವಾಗಿತ್ತು. ಸಾಮಾನ್ಯ ಓದುಗರು ಅಥವಾ ವೀಕ್ಷಕರು ಪತ್ರಿಕೆಗಳು ಮತ್ತು ಟಿವಿಗಳು ಒದಗಿಸುವ ಸುದ್ದಿ, ಮಾಹಿತಿಯನ್ನು ಕೇವಲ ತಿಳಿಯಬಹುದಾಗಿತ್ತು. ಆದರೆ, ತಮ್ಮ ಅಭಿಪ್ರಾಯ, ವಿಚಾರಗಳನ್ನು ಸುದ್ದಿ ಮಾಧ್ಯಮಗಳಿಗಾಗಲೀ ಹೊರ ಜಗತ್ತಿಗಾಗಲೀ ತಿಳಿಸಲು ಸಾಧ್ಯವಿರಲಿಲ್ಲ.
ಆದರೆ, ಫೇಸ್‌ಬುಕ್ ಮತ್ತು ಟ್ವಿಟರಿನಂಥ ಸಾಮಾಜಿಕ ಜಾಲತಾಣ ವೇದಿಕೆಗಳು ಅಸ್ತಿತ್ವಕ್ಕೆ ಬಂದ ನಂತರ ಜನ ಸಾಮಾನ್ಯರು ಮತ್ತು ಸಮಾಜದ ಕಟ್ಟ ಕಡೆಗೆ ನಿಂತ ವ್ಯಕ್ತಿಯೂ ಸಹ ತನ್ನ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಹಾಗೂ ಪ್ರಭುತ್ವದ ಮೇಲೆ ಪ್ರಭಾವ ಬೀರುವುದು ಸಾಧ್ಯವಾಗಿದೆ. ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವುದು ಈಗ ಸಾಧ್ಯವಿದೆ. ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಗೊಳ್ಳಲು ಈ ಬೆಳವಣಿಗೆ ಸಹಕಾರಿಯಾಯಿತು.
ಹೀಗೆ, ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಅಭಿಪ್ರಾಯ, ವಿಚಾರ ಮಂಡಿಸುವುದಕ್ಕೆ ಶಕ್ತಿಶಾಲಿ ಸಾಧನವೊಂದು ದೊರೆತ ಪರಿಣಾಮವಾಗಿ ಜಗತ್ತಿನಲ್ಲಿ ಕ್ಷಿಪ್ರ ಬದಲಾವಣೆಗಳಿಗೆ ನಾಂದಿಯಾಯಿತು. ಇದಕ್ಕೆ ಅತ್ಯುತ್ತಮ ಉದಾಹರಣೆ ’ಅರಬ್ ಕ್ರಾಂತಿ’ ಇದನ್ನು ಫೇಸ್‌ಬುಕ್ ಕ್ರಾಂತಿ ಎಂದೂ ಕರೆಯಲಾಗುತ್ತದೆ.
ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ದೇಶಗಳ ಸರ್ವಾಧಿಕಾರಿ ಆಡಳಿತಗಾರರ ವಿರುದ್ಧ ಅಲ್ಲಿನ ಜನ ನಡೆಸಿದ ಸರಣಿ ಪ್ರತಿಭಟನೆ, ಹೋರಾಟಗಳನ್ನೇ ’ಅರಬ್ ಕ್ರಾಂತಿ’ ಎಂದು ಕರೆಯಲಾಗಿದೆ. ಸರ್ವಾಧಿಕಾರಿ ಆಡಳಿತಗಳನ್ನು ಕೊನೆಗೊಳಿಸಿ ಈ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸಲು ಕಾರಣವಾದ ಈ ಹೋರಾಟಗಳು ಜಗತ್ತಿನ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಗಳು. ಇದಕ್ಕೆ ಕಾರಣವಾಗಿದ್ದು, ಫೇಸ್‌ಬುಕ್ ನಂತಹ ಸಾಮಾಜಿಕ ಜಾಲತಾಣ.
2010 ಡಿಸೆಂಬರ್ 17ರಂದು ಉತ್ತರ ಆಫ್ರಿಕಾದ ದೇಶವಾದ ಟ್ಯೂನಿಷಿಯಾದಲ್ಲಿ ತರಕಾರಿ ವ್ಯಾಪಾರಿಯೊಬ್ಬ ಆ ದೇಶದ ರಾಷ್ಟ್ರಾಧ್ಯಕ್ಷ, ಸರ್ವಾಧಿಕಾರಿ ಬೆನ್ ಆಲಿಯ ದೌರ್ಜನ್ಯ, ಶೋಷಣೆ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಲು ಜನನಿಬಿಡ ಮಾರ್ಕೆಟ್ ನಡುವೆಯೇ ಆತ್ಮಾಹುತಿಗೆ ಪ್ರಯತ್ನಿಸಿದ. ಹಲವಾರು ವರ್ಷಗಳಿಂದ ಬೆನ್ ಆಲಿಯ ಆಡಳಿತದ ಜನವಿರೋಧಿ ನೀತಿಗಳಿಂದ ರೋಸಿ ಹೋಗಿ ತರಕಾರಿ ವ್ಯಾಪಾರಿ ಈ ಉಗ್ರ ಪ್ರತಿಭಟೆನೆಗೆ ಮುಂದಾಗಿದ್ದ. ತರಕಾರಿ ವ್ಯಾಪಾರಿಯ ಈ ಆತ್ಮಾಹುತಿ ಪ್ರಯತ್ನದ ವೀಡಿಯೋ ಇಡೀ ದೇಶದಲ್ಲಿ ವೈರಲ್ ಆಯಿತು. ಈ ಘಟನೆ ಟ್ಯೂನಿಷಿಯಾದಲ್ಲಿ ಜನರ ನಡುವೆ ಚರ್ಚೆಯ ದೊಡ್ಡ ವಿಷಯವಾಯಿತು. ಕ್ರೂರಿ ಬೆನ್ ಆಲಿಯ ದೌರ್ಜನ್ಯ, ಶೋಷಣೆ, ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಜನರ ದನಿ ಗಟ್ಟಿಯಾಗತೊಡಗಿತು. ಆ ಜನದನಿ ದೇಶದ ಹೊರಗೂ ಕೇಳಲಾರಂಭಸಿತು. ಇಡೀ ಜಗತ್ತು ಸಹ ಟ್ಯೂನಿಷಿಯಾದ ಬೆಳವಣಿಗೆಗಳನ್ನು ಗಮನಿಸತೊಡಗಿತು.
ಟ್ಯೂನಿಷಿಯಾದ ಸಾಂಪ್ರದಾಯಿಕ ಮಾಧ್ಯಮಗಳು ಸಂಪೂರ್ಣವಾಗಿ ಬೆನ್ ಆಲಿಯ ಹಿಡಿತದಲ್ಲಿದ್ದವು. ಪ್ರಭುತ್ವದ ವಿರುದ್ಧ ವರದಿ ಮಾಡುವುದು ಅಲ್ಲಿ ಅಸಾಧ್ಯವೇ ಆಗಿತ್ತು.
ಆದರೆ, ಸೋಷಿಯಲ್ ಮೀಡಿಯಾದ ಮೇಲೆ ಯಾರ ನಿಯಂತ್ರಣವೂ ಇರಲಿಲ್ಲ. ಬೆನ್ ಆಲಿ ದುರಾಡಳಿತದ ವಿರುದ್ಧದ ಪ್ರತಿಭಟನೆಯ ಸುದ್ದಿಗಳನ್ನು ಜನರಿಗೆ ತಲುಪಿಸಲು ಫೇಸ್‌ಬುಕ್, ಟ್ವಿಟರ್ ಬಳಸಿಕೊಳ್ಳಲಾಯಿತು. ದಿನೇ ದಿನೇ ಪ್ರತಿಭಟನೆಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚುತ್ತಲೇ ಹೋಯಿತು.
ಹಲವು ತಿಂಗಳುಗಳ ನಿರಂತರ ಹೋರಾಟದ ಪರಿಣಾಮವಾಗಿ 24 ವರ್ಷಗಳ ಕಾಲ ನಿರಂಕುಶ ಪ್ರಭುವಾಗಿ ಮೆರೆದಿದ್ದ ಬೆನ್ ಆಲಿಯ ಆಡಳಿತ ಕೊನೆಗೊಂಡು ಟ್ಯೂನಿಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಸಾಧ್ಯವಾಯಿತು.
ಫೇಸ್‌ಬುಕ್, ಟ್ವಿಟರ್ ನೆರವಿನಿಂದ ಟ್ಯೂನಿಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾದ ನಂತರ ಈ ಕ್ರಾಂತಿಯ ಕಿಡಿ ಇತರ ದೇಶಗಳಿಗೂ ಹಬ್ಬಿತು. ಹಲವು ರಾಷ್ಟ್ರಗಳಲ್ಲಿ ಸರ್ವಾಧಿಕಾರ ಅಂತ್ಯವಾಗಿ ಪ್ರಜೆಗಳ ಪ್ರಭುತ್ವ ಸ್ಥಾಪನೆಗೆ ಕಾರಣವಾಯಿತು. ಈ ಅರಬ್ ಕ್ರಾಂತಿ ಇಷ್ಟಕ್ಕೇ ನಿಲ್ಲಲಿಲ್ಲ.
ಜೋರ್ಡಾನ್ ದೇಶದ ಅರಸ ಎರಡನೇಯ ಅಬ್ದುಲ್ಲಾ, ಈಜಿಪ್ಟಿನ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಮತ್ತು ಲಿಬಿಯಾದ ನಿರಂಕುಶ ಅಧ್ಯಕ್ಷ ಮುಅಮ್ಮರ್ ಗಡಾಫಿ ಆಡಳಿತಗಳೂ ಸಹ ಜನಾಕ್ರೋಶಕ್ಕೆ ಬಲಿಯಾದವು. ಈ ದೇಶಗಳಲ್ಲೂ ಸರ್ವಾಧಿಕಾರ ಕೊನೆಗೊಂಡು ಪ್ರಜೆಗಳೇ ಆಯ್ಕೆ ಮಾಡಿದ ಸರಕಾರಗಳು ಅಸ್ತಿತ್ವಕ್ಕೆ ಬಂದವು. ಸಾಮಾಜಿಕ ಜಾಲತಾಣಗಳು ಹೊತ್ತಿಸಿದ ಹೋರಾಟದ ಈ ಕಿಡಿ ಹಲವು ರಾಷ್ಟ್ರಗಳಲ್ಲಿ ಈಗಲೂ ಮುಂದುವರಿದಿದೆ.
ಪ್ರಭುತ್ವದ ನಿಯಂತ್ರಣದಲ್ಲಿರುವ ಸಾಂಪ್ರದಾಯಿಕ ಮಾಧ್ಯಮಗಳಿಂದ ಇಂಥದೊಂದು ಕ್ರಾಂತಿ ಸಾಧ್ಯವೇ ಇರಲಿಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಜನರ ಕೈಗೆ ಸಿಕ್ಕಿರುವ ಸೋಷಿಯಲ್ ಮೀಡಿಯಾ ಎಂಬ ಪ್ರಬಲ ಅಸ್ತ್ರದಿಂದಾಗಿಯೇ ಎಂಬುದು ನೂರಕ್ಕೆ ನೂರರಷ್ಟು ದಿಟ. ಅದೇ ಕಾರಣಕ್ಕೆ ಸೋಷಿಯಲ್ ಮೀಡಿಯಾ ಅನ್ನು ಜನರ ಮಾಧ್ಯಮ ಎಂದೂ ಕರೆಯಲಾಗುತ್ತಿದೆ.
ಆದರೆ, ಇತರ ಎಲ್ಲಾ ಮಾಧ್ಯಮಗಳಿಗೆ ಇರುವಂತೆ ಸೋಷಿಯಲ್ ಮೀಡಿಯಾಕ್ಕೂ ತನ್ನದೇ ಆದ ಕೆಲ ಅನಾನುಕೂಲಗಳೂ ಇವೆ.
ಮಾಹಿತಿಯನ್ನು ಸೃಜಿಸುವ ಅಧಿಕಾರ ಜನರ ಕೈಗೆ ಸಿಕ್ಕಾಗ ಅದರಿಂದ ಕೆಲವು ಅನಾನುಕೂಲ ಹಾಗೂ ಅನಾಹುತಗಳೂ ಸಹಜವೇ ಆಗಿದ್ದವು. ಫೇಕ್ ನ್ಯೂಸ್ ಅಥವಾ ಸುಳ್ಳುಸುದ್ದಿ ಸೋಷಿಯಲ್ ಮೀಡಿಯಾದಿಂದ ಆಗುವ ಅನಾಹುತಕ್ಕೆ ಅತ್ಯುತ್ತಮ ಉದಾಹರಣೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಕ್ಷಣಕ್ಕೂ ನಾವು ನೋಡುವ ಸುದ್ದಿ ಅಥವಾ ಪಡೆಯುವ ಮಾಹಿತಿಯ ಸಿಂಹಪಾಲು ಫೇಕ್ ನ್ಯೂಸ್ ಆಗಿರುತ್ತದೆ ಇದು ಎಂಬುದು ಖಂಡಿತ ಸುಳ್ಳಲ್ಲ.
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ತಪ್ಪು ಮಾಹಿತಿ ನೀಡಲು, ಅವರಿಗೆ ಮೋಸ ವಂಚನೆ ಮಾಡಲು ಅಥವಾ ಕೆಲವು ನಿರ್ದಿಷ್ಟ ಗುಂಪು, ಸಮುದಾಯ, ರಾಜಕೀಯ ಪಕ್ಷಗಳು, ಸೈದ್ಧಾಂತಿಕ ಸಂಘಟನೆಗಳು ತಮ್ಮ ರಾಜಕೀಯ, ಸಾಮಾಜಿಕ ಮತ್ತು ವ್ಯಾಪಾರಿ ಅಜೆಂಡಾಗಳನ್ನು ಜಾರಿಗೊಳಿಸಲು ಇಂತಹ ಫೇಕ್ ನ್ಯೂಸ್ ಗಳನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಸಿ ಅವುಗಳು ವೈರಲ್ ಆಗುವಂತೆ ನೋಡಿಕೊಳ್ಳುತ್ತವೆ.
ಇಂಥ ಫೇಕ್ ನ್ಯೂಸ್ ಜನರ ಅಭಿಪ್ರಾಯ ರೂಪಿಸಲು ಮತ್ತು ನೀತಿ, ನಿಲುವು, ಒಲವುಗಳನ್ನು ಪ್ರಭಾವಿಸಲು ಕಾರಣವಾಗುತ್ತವೆ. ಇಂಥ ಫೇಕ್ ನ್ಯೂಸ್ ವ್ಯವಹಾರದಲ್ಲಿ ತೊಡಗಿರುವವರು ತಮ್ಮ ರಾಜಕೀಯ ಅಥವಾ ರಾಜಕೀಯೇತರ ಅಜೆಂಡಾ ಜಾರಿಗೊಳಿಸುವುದಲ್ಲದೇ ಆರ್ಥಿಕ ಲಾಭವನ್ನೂ ಪಡೆಯುತ್ತಾರೆ.
ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ವಿಶ್ವಾಸಾರ್ಹ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನೇ ಹೋಲುವಂತಹ ನಕಲಿ ಖಾತೆಗಳನ್ನು ತೆರೆದು ತಪ್ಪು ಮತ್ತು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹರಡುವುದು ಚಾಲ್ತಿಯಲ್ಲಿರುವ ಕೆಟ್ಟ ಪದ್ಧತಿ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ದೇಶದ ಹಾಗೂ ಜಾಗತಿಕ ರಾಜಕೀಯ ವ್ಯವಸ್ಥೆ ಮೇಲೆ ಈ ಫೇಕ್ ನ್ಯೂಸ್ ಬೀರುತ್ತಿರುವ ಪ್ರಭಾವದ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿವೆ.
ಫೇಕ್ ನ್ಯೂಸ್ ಪದ ಬಳಕೆ ಇತ್ತೀಚಿನ ವರ್ಷಗಳಲ್ಲಿ ಎಷ್ಟೊಂದು ಹೆಚ್ಚಾಗಿದೆಯೆಂದರೆ 2017ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಈ ಪದದ ಬಳಕೆ ಶೇ.375ರಷ್ಟು ಹೆಚ್ಚಾಗಿತ್ತು. ಕಾಲಿನ್ ಡಿಕ್ಷನರಿ ಈ ಪದವನ್ನು 2017ರ ವರ್ಷದ ಪದ ಎಂದೂ ಘೋಷಣೆ ಮಾಡಿತ್ತು.
ಈ ಫೇಕ್ ನ್ಯೂಸ್ ಎಂಬ ಹೆಮ್ಮಾರಿಯನ್ನು ಸೆದೆಬಡಿಯುವುದು ಅಸಾಧ್ಯವೇನಲ್ಲ. ಸೋಷಿಯಲ್ ಮೀಡಿಯಾ ಬಳಕೆದಾರರು ಜವಾಬ್ದಾರಿಯಿಂದ ವರ್ತಿಸಿದರೆ ಅದು ಖಂಡಿತ ಸಾಧ್ಯ. ಫೇಕ್ ನ್ಯೂಸ್ ಪತ್ತೆ ಹಚ್ಚುವ ಪ್ರಪ್ರಥಮ ಹೆಜ್ಜೆಯೆಂದರೆ, ಸೋಷಿಯಲ್ ಮೀಡಿಯಾದಲ್ಲಿ ಬರುವ ಪ್ರತಿಯೊಂದು ವಿಷಯ ನಂಬುವುದನ್ನು ಬಳಕೆದಾರರು ಮೊದಲು ನಿಲ್ಲಿಸಬೇಕು. ಪ್ರತಿಯೊಬ್ಬರಿಗೂ ಮಾಹಿತಿ ಸೃಜಿಸುವ ಅವಕಾಶ ಹಾಗೂ ಅಧಿಕಾರ ಇರುವುದರಿಂದ ಈ ಮಾಧ್ಯಮದಲ್ಲಿ ಬರುವ ಮಾಹಿತಿ ಸಹಜವಾಗಿಯೇ ಪ್ರಶ್ನಾರ್ಹವಾಗಿರುತ್ತದೆ ಎಂಬುದನ್ನು ಮನಗಾಣಬೇಕು.
ಸೋಷಿಯಲ್ ಮೀಡಿಯಾದಲ್ಲಿ ಬರುವ ಸುದ್ದಿ ಮತ್ತು ಮಾಹಿತಿಗಳು ಸರಿಯೋ ತಪ್ಪೋ ಎಂಬುದನ್ನು ಖಚಿತಪಡಿಸಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಫೇಕ್ ನ್ಯೂಸ್ ತಡೆಗಟ್ಟಬಹುದು. ಸಾಮಾನ್ಯವಾಗಿ ಜನರು ಸಾಮಾಜಿಕವಾಗಿ, ರಾಜಕೀಯವಾಗಿ ತಮಗೆ ಇಷ್ಟವಾಗುವ, ಅನುಕೂಲವಾಗುವ ಅಥವಾ ಲಾಭವಾಗುವ ಸಂಗತಿಗಳ ಸತ್ಯಾಸತ್ಯತೆ ಪರೀಕ್ಷಿಸದೇ ಅದನ್ನು ಒಪ್ಪಿಕೊಳ್ಳುತ್ತಾರೆ. ಹಿಂದೆ ಮುಂದೆ ಯೋಚಿಸದೇ ಅಂಥದನ್ನು ಫಾರ್ವರ್ಡ್ ಮಾಡುವ ಮೂಲಕ ಫೇಕ್ ನ್ಯೂಸ್ ಹರಡುವುದರಲ್ಲಿ ತಮಗೆ ಅರಿವಿಲ್ಲದಂತೆಯೇ ಭಾಗಿಯಾಗುತ್ತಾರೆ. ನಮ್ಮ ಅಭಿಪ್ರಾಯ ಮತ್ತು ನಂಬಿಕೆಗಳು ತೀರ್ಪು ತೆಗೆದುಕೊಳ್ಳುವ ನಮ್ಮ ಸಾಮರ್ಥ್ಯದ ಮೇಲೆ ಪ್ರಭಾವ ಬೀರದಂತೆ ನಾವು ಎಚ್ಚರಿಕೆ ವಹಿಸಬೇಕು.
ಈ ಸುದ್ದಿ ಅಥವಾ ಮಾಹಿತಿಯನ್ನು ಪ್ರಕಟಿಸಿರುವ ವೆಬ್ಸೈಟ್ ನಮಗೆ ಪರಿಚಿತವೇ?, ಮಾಹಿತಿಯ ಮೂಲ ನಂಬಲರ್ಹವೇ ಎಂಬುದನ್ನು ತಿಳಿದುಕೊಳ್ಳಬೇಕು. ತಮಗೆ ಪರಿಚಿತವಲ್ಲದ ವೆಬ್ಸೈಟ್ ಆಗಿದ್ದರೆ ಅದರ ಅಬೌಟ್ ಸೆಕ್ಷನ್ ಗೆ ಹೋಗಿ ಇನ್ನಷ್ಟು ವಿವರ ತಿಳಿಯಬೇಕು. ಇಲ್ಲವೇ ಆ ಬರಹಗಾರರ ಬಗೆಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸೋಷಿಯಲ್ ಮೀಡಿಯಾದಲ್ಲಿ ಬರುವುದೆಲ್ಲವನ್ನೂ ನಂಬದೇ ಆ ಮಾಹಿತಿಯ ಸಾಚಾತನ ಖಚಿತಪಡಿಸಿಕೊಳ್ಳಬೇಕು. ಅದು ನಂಬಿಕೆಗೆ ಯೋಗ್ಯವಲ್ಲದ ಸುದ್ದಿ, ಮಾಹಿತಿ ಆಗಿದ್ದರೆ ಯಾವುದೇ ಕಾರಣಕ್ಕೂ ಅದನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಬಾರದು ಮತ್ತು ‘ಇದು ಸುಳ್ಳು ಸುದ್ದಿ’ ಎಂದು ತಪ್ಪದೇ ಕಾಮೆಂಟ್ ಮಾಡಬೇಕು.
ಕೊನೆಯದಾಗಿ, ಇತರ ಎಲ್ಲಾ ಸಂಶೋಧನೆಗಳಂತೆ ಸೋಷಿಯಲ್ ಮೀಡಿಯಾ ಕೂಡ ಎಂಬುದನ್ನು ಮರೆಯಬಾರದು. ಇದು ನೈತಿಕವಾಗಿ ಸರಿಯಾದದ್ದು ಎಂದು ಹೇಳಲಾಗದು. ಈ ಮಾಧ್ಯಮವನ್ನೂ ಸಹ ಒಳ್ಳೆಯ ಅಥವಾ ಕೆಟ್ಟ ಉದ್ದೇಶಗಳೆರಡಕ್ಕೂ ಬಳಸಬಹುದು. ಸಮಾಜದ ಜವಾಬ್ದಾರಿಯುತ ಪ್ರಜೆಯಾಗಿ ಮತ್ತು ಸೋಷಿಯಲ್ ಮೀಡಿಯಾದ ಜವಾಬ್ದಾರಿಯುತ ಬಳಕೆದಾರರಾಗಿ ಒಳ್ಳೆಯ ಉದ್ದೇಶಕ್ಕೆ ಮಾತ್ರ ಇದನ್ನು ಬಳಸುವುದು ಮತ್ತು ಸುಳ್ಳು ಹಾಗೂ ತಪ್ಪು ಮಾಹಿತಿ ಹರಡದಂತೆ ತಡೆಯುವುದು ನಮ್ಮೆಲ್ಲರ ಕರ್ತವ್ಯ…
ನಮಸ್ಕಾರ…
ಈ ಗೋಷ್ಠಿಯಲ್ಲಿ ನನ್ನ ವಿಚಾರ ಮಂಡಿಸಲು ಅವಕಾಶ ನೀಡಿದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಮತ್ತು ಸಮ್ಮೇಳನದ ಸಂಘಟಕರಿಗೆ ಧನ್ಯವಾದ.
good story