ಕೋವಿಡ್ 19 ವಾರಿಯರುಗಳಾಗಿ ಕೆಲಸ ಮಾಡುತ್ತಿದ್ದ ಮಾಧ್ಯಮ ಮಿತ್ರರಿಗೆ ಕೊರೊನಾ ಸೋಂಕು ತಾಕಿದ ಕಾರಣಕ್ಕೆ, ಆ ಪತ್ರಕರ್ತರ ಸಂಪರ್ಕಕ್ಕೆ ಹೋಗಿದ್ದ ಕಾರಣಕ್ಕೆ ಉಪ ಮಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು 2020ರ ಮೇ ತಿಂಗಳಲ್ಲಿ ಕೆಲ ದಿನಗಳ ಕಾಲ ಸ್ವಯೊ ಕ್ವಾರಂಟೈನಿಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ತಮಗಾದ ಕೆಲ ವಿಶೇಷ ಅನುಭವಗಳು ಹಾಗೂ ಕಲಿತ ಪಾಠಗಳ ಬಗ್ಗೆ ಅವರು ಸಿಕೆನ್ಯೂಸ್ ನೌ ಗೆ ವಿಶೇಷ ಲೇಖನ ಬರೆದುಕೊಟ್ಟಿದ್ದಾರೆ.
ರಾಜಕಾರಣಕ್ಕೆ ಬರುವ ಮುನ್ನ, ಬಂದ ನಂತರ ಸದಾ ಕ್ರಿಯಾಶೀಲನಾಗಿರುವ ನನಗೆ ಕೋವಿಡ್ ಕಾರಣಕ್ಕೆ ಸ್ವತಃ ಕ್ವಾರಂಟೈನ್‌ಗೆ ಒಳಗಾಗಿ ಹಲವು ದಿನ ಮನೆಯಲ್ಲೇ ಉಳಿಯಬೇಕಾಗಿ ಬಂದಿದ್ದು ನನ್ನನ್ನು ನಾನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ಸಿಕ್ಕಿದ ಅವಕಾಶ ಎಂದು ನಿಸ್ಸಂಶಯವಾಗಿ ಹೇಳಬಲ್ಲೆ.
ಸಾಮಾನ್ಯ ವ್ಯಕ್ತಿ ಇರಲಿ, ರಾಜಕಾರಣಿಯೇ ಇರಲಿ ಅಥವಾ ಇನ್ನು ಯಾವುದೇ ಕ್ಷೇತ್ರದ ಪ್ರಮುಖನೇ ಆಗಲಿ, ಯಾರೇ ಆದರೂ ಸ್ವಯಂ ದಿಗ್ಭಂಧನಕ್ಕೆ ಒಳಗಾಗಿ ಮನೆಯ ಹೊಸಿಲು ದಾಟದೇ ಹತ್ತಾರು ದಿನ ಗೋಡೆಗಳ ಮಧ್ಯೆಯೇ ಒತ್ತಾಯಪೂರ್ವಕವಾಗಿ ಉಳಿಯುವುದು ಸಾಮಾನ್ಯ ಸಂಗತಿಯಲ್ಲ. ನಾನೊಬ್ಬ ರಾಜಕಾರಣಿ, ಶಾಸಕ, ಉಪ ಮುಖ್ಯಮಂತ್ರಿ ಎನ್ನುವ ಟ್ಯಾಗ್‌ಲೈನುಗಳನ್ನು ಆಚೆಗಿಟ್ಟು ಸಾಮಾನ್ಯನಂತೆ ಕ್ವಾರಂಟೈನ್ ನ ರೀತಿ-ರಿವಾಜುಗಳನ್ನು ಅನುಸರಿಸಿದ್ದೇನೆ. ಅದರ ಅಗತ್ಯಗಳನ್ನು, ನಿಬಂಧನೆಗಳನ್ನು ಶಿರಸಾ ಪಾಲಿಸಿದ್ದೇನೆ. ಕೆಲವೊಮ್ಮೆ ಇಂಥ ಸಂದರ್ಭಗಳು ವ್ಯಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಹಾಗೂ ಪಾಲೀಶ್ ಮಾಡುತ್ತವೆ ಎಂಬ ಬಲವಾದ ಭಾವನೆ ನನ್ನದು.
ಆದರೂ, ಒಂದೆಡೆ ರಾಜ್ಯವನ್ನು ಕೋವಿಡ್ ಮಾರಿ ಆವರಿಸಿದ್ದ ಹೊತ್ತಿನಲ್ಲಿ ಹಗಲಿರುಳು ಜನಸೇವೆ ಮಾಡಬೇಕಾಗಿದ್ದ ನಾನು ಸ್ವತಃ ದಿಗ್ಭಂಧನಕ್ಕೆ ಸಿಲುಕಿದ್ದು ಅತೀವ ದುಃಖವನ್ನುಂಟು ಮಾಡಿತ್ತು. ಮತ್ತೊಂದೆಡೆ ವಿವಿಧ ಜವಾಬ್ದಾರಿಗಳು, ನಿರ್ವಹಿಸಲೇಬೇಕಾದ ಹೊಣೆಗಾರಿಕೆಗಳು, ರಾಜ್ಯ ಮತ್ತು ಕ್ಷೇತ್ರದ ಕೆಲಸ, ಜನರು ಮತ್ತು ಪಕ್ಷದ ಕಾರ್ಯಕರ್ತರ ದಿನನಿತ್ಯದ ಪರಾಮರ್ಶೆ.. ಹೀಗೆ, ನನಗೆ ಕೊಂಚ ಆತಂಕ ಉಂಟಾದರೂ ಈ ಬಗೆಯ ಅನುಭವವೊಂದು ನನಗೂ ಅನಿವಾರ್ಯವಾಗಿತ್ತೇನೋ ಎಂಬ ಅನಿಸಿಕೆ ಈಗೀಗ ಬರುತ್ತಿದೆ.
ಟಿವಿ ಮಾಧ್ಯಮದ ಕ್ಯಾಮರಾಮನ್ ಮಿತ್ರರ ಸಂಪರ್ಕದಿಂದ ನಾನು ಕ್ವಾರಂಟೈನ್‌ಗೆ ಒಳಗಾದೆನಾದರೂ ಅನೇಕ ಸಂದರ್ಭಗಳಲ್ಲಿ ಸೋಂಕಿತ ಮಾಧ್ಯಮ ಮಿತ್ರರ ಆರೋಗ್ಯದ ಬಗ್ಗೆ ಉಂಟಾಗಿದ್ದ ಕಳವಳವನ್ನು ಇಲ್ಲಿ ವ್ಯಕ್ತಪಡಿಸುವ ಬಗೆ ನನಗೆ ಗೊತ್ತಾಗುತ್ತಿಲ್ಲ. ಮಹಾಯುದ್ಧದಂಥ ಇಂಥ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಜನರಿಗಾಗಿ ಕೆಲಸ ಮಾಡಿದ್ದ ‘ಮೀಡಿಯಾ ಯೋಧ’ರ ಬಗ್ಗೆ ಅನುದಿನವೂ ನಾನು ಮಾಹಿತಿ ಪಡೆಯುತ್ತಿದ್ದೆ. ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಕ್ಷಣಕ್ಷಣದ ವಿವರ ನನಗೆ ಬರುತ್ತಿತ್ತು. ಕ್ವಾರಂಟೈನ್‌ನಲ್ಲಿದ್ದ ಅವರ ಕುರಿತ ನಿರಂತರ ಮಾಹಿತಿ ನನಗಿರುತ್ತಿತ್ತು. ಊಟ ಉಪಚಾರದ ಬಗ್ಗೆಯೂ ತಿಳಿಯುತ್ತಿದ್ದೆ.
ವಿಚಲಿತನಾಗಲಿಲ್ಲ:
ಕೋವಿಡ್ ನನ್ನನ್ನು ಕಟ್ಟಿಹಾಕಿದರೂ ವಿಚಲಿತನಾಗಲಿಲ್ಲ ನಾನು. ಒಂದು ವೇಳೆ ಸ್ವತಃ ನಾನೇ ಸೋಂಕಿತನಾಗಿದ್ದರೂ ಅದನ್ನು ಎದುರಿಸುವ ಚೈತನ್ಯ ನನಗೆ ಇದ್ದೇ ಇತ್ತು. ರಾಜಕಾರಣಕ್ಕೆ ಮೊದಲು ನಾನೂ ಒಬ್ಬ ವೈದ್ಯನಲ್ಲವೇ? ಸದಾ ಈ ಜಾಗೃತಿ ನನ್ನಲ್ಲಿ ಇದ್ದೇ ಇದೆ. ಹೀಗಾಗಿ ನನ್ನ ಆತ್ಮವಿಶ್ವಾಸ ಹಾಗೂ ಇಚ್ಚಾಶಕ್ತಿಯನ್ನು ಉಡುಗಿಸಲು ವೈರಸ್‌ಗೆ ಸಾಧ್ಯವಾಗಲೇ ಇಲ್ಲ. ನಾನೊಬ್ಬ ಸೋಂಕಿತನಲ್ಲ ಎಂಬುದನ್ನು ಬಿಟ್ಟರೆ ಕೊರೋನಾ ಪೀಡಿತನೊಬ್ಬ ಕೈಗೊಳ್ಳಬೇಕಾದ ಎಲ್ಲ ಮುನ್ನೆಚ್ಚರಿಕೆಗಳನ್ನು ಚಾಚೂ ತಪ್ಪದೇ ಪಾಲಿಸಿದ್ದೆ. ಮಾತಿಲ್ಲದ ಗೋಡೆಗಳ ಮಧ್ಯೆ ನನ್ನ ಇಚ್ಛಾಶಕ್ತಿಯೇ ನನಗೆ ಸಂವಾದಿಯಾಗಿತ್ತು. ಹೀಗಾಗಿಯೇ ಮನೆಯಲ್ಲೇ ಇದ್ದರೂ ಎಲ್ಲರಿಂದಲೂ ಕಠಿಣ ಅಂತರ ಕಾಯ್ದುಕೊಳ್ಳಲು ಆಯಿತು. ಸಾಮಾಜಿಕ ಅಂತರ ಎನ್ನುವುದು ನಿತ್ಯ ಕಾಯಕದಂತೆ, ದೈವ ವ್ರತದಂತೆ ಆಗಿತ್ತು ನನಗೆ. ಎಲ್ಲವನ್ನು ಅಧಿಕಾರದಲ್ಲಿದ್ದೇನೆ ಎಂಬ ಅಹಮಿಕೆ ಇಲ್ಲದೆ ಸಾಮಾನ್ಯನಾಗಿ ಅತಿ ಜವಾಬ್ದಾರಿ, ಜಾಗರೂಕತೆಯಿಂದ ಅನುಭವಿಸಿದ್ದೇನೆ.
ನಾನೊಂದಿಷ್ಟು ಹೇಳಲೇಬೇಕು:
ಈ ಕ್ವಾರಂಟೈನ್ ಅನುಭವದಲ್ಲಿ ಹೇಳಲೇಬೇಕಾದ ಹಲವು ಸಂಗತಿಗಳು ಇವೆ. ಅದೆಷ್ಟೋ ವರ್ಷಗಳ ನಂತರ ದಿನದ ಮೂರೊತ್ತು ಮನೆಯಲ್ಲಿಯೇ ಊಟ ಮಾಡಿದೆ. ನನ್ನ ಪತ್ನಿ, ಮಕ್ಕಳು, ತಂದೆಯವರಲ್ಲಿ ಕಂಡ ಆನಂದ ಬದುಕಿನ ಕ್ಷಣಗಳಿಗೆ ಹೊಸ ಭಾಷ್ಯ ಬರೆಯಿತೇನೋ ಅನಿಸುತ್ತಿದೆ. ರಾಜಕಾರಣಕ್ಕೆ ಬಂದ ಮೇಲೆ ಮೂರೊತ್ತು ಮನೆಯಲ್ಲಿ ಊಟ ಮಾಡಿದ್ದು ಕಡಿಮೆ. ಇನ್ನು, ಆಗಾಗ ಮಗಳು ಮಾಡಿಟ್ಟ ‘ಪ್ರಾಯೋಗಿಕ ತಿನಿಸು’ಗಳ ಸವಿರುಚಿಯನ್ನು ಹೇಗೆ ವರ್ಣಿಸಲಿ? ಅಂಬೆಗಾಲಿಡುತ್ತ ನನ್ನೆದೆಯ ಮೇಲೆ ಆಟವಾಡಿದ ಕಂದ ಅಪ್ಪನಿಗೆ ಅನ್ನ ಮಾಡಿ ಬಡಿಸುವ ಎತ್ತರಕ್ಕೆ ಬೆಳೆದರೆ ಯಾವ ತಂದೆಗೆ ಆನಂದವಾಗುವುದಿಲ್ಲ? ಇದರ ಜತೆಗೆ ಜವಾಬ್ದಾರಿ. ತಂತ್ರಜ್ಞಾನವನ್ನು ಬಳಿಸಿಕೊಂಡು ಆಡಳಿತಕ್ಕೆ ಚುರುಕು ಕೊಡುವ ಬಗೆ, ಜರೂರಾಗಿ ನಿರ್ಧಾರಗಳನ್ನು ಕೈಗೊಳ್ಳುವ ಪರಿ, ಇತ್ಯಾದಿಗಳನ್ನು ಕ್ವಾರಂಟೈನ್ ಕಾಲ ಕಲಿಸಿಕೊಟ್ಚಿದೆ. ಮನೆಯಿಂದಲೇ ನನ್ನ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿದ ರೀತಿಯನ್ನು ಓದುಗರ ಜತೆ ಹಂಚಿಕೊಳ್ಳಲು ನನಗೆ ಅತೀವ ಸಂತೋಷವಾಗುತ್ತಿದೆ.
ರಾಜ್ಯಕ್ಕೆ ಕೊರೊನಾ ಮಾರಿ ಏರಿಬಂದಾಗ ಉಂಟಾಗುವ ಪರಿಣಾಮಗಳನ್ನು ಕ್ಷಿಪ್ರಗತಿಯಲ್ಲಿ ಎದುರಿಸಲು ಸರಕಾರ ಎಲ್ಲ ಕ್ರಮಗಳನ್ನೂ ಕೈಗೊಂಡಿತ್ತು. ಕೋವಿಡ್ ಕಾರ್ಯಪಡೆ ರಚಿಸಲಾಯಿತು. ಇದಕ್ಕೆ ನಾನೂ ಕೂಡ ಸದಸ್ಯ. ಜತೆಗೆ ನನ್ನ ಅಧ್ಯಕ್ಷತೆಯಲ್ಲಿ ಕೃಷಿ ಉತ್ಪನ್ನಗಳ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಅತಿ ಮಹತ್ವದ ‘ಸಚಿವರ ಗುಂಪು’ (Group of Ministers) ರಚಿಸಲಾಯಿತು. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇನೆ. ಈ ವಿಷಯದಲ್ಲಿ ಸಂಪೂರ್ಣ ಸಹಕಾರ ನೀಡಿದ ಎಲ್ಲ ಸಚಿವರಿಗೂ, ಅಧಿಕಾರಿಗಳಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಐಟಿ ಸಚಿವರ ಜತೆ ಮಾತುಕತೆ:
ಕ್ವಾರಂಟೈನ್ ಸಮಯದಲ್ಲಿಯೇ ಕೇಂದ್ರದ ಮಾಹಿತಿ ತಂತ್ರಜ್ಞಾನ ಖಾತೆ ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದ ನನ್ನ ಪಾಲಿಗೆ ವಿಶೇಷವಾದ ಅನುಭವ. ಎರಡೂವರೆ ಗಂಟೆಯ ಈ ಚರ್ಚೆಯು ಕೊರೊನಾ ನಂತರ ಕಾಲದಲ್ಲಿ ರಾಜ್ಯದ ಐಟಿ ಉದ್ಯಮಕ್ಕೆ ದೊಡ್ಡ ಶಕ್ತಿ ತುಂಬಬಹುದು ಎಂಬ ಬಲವಾದ ನಂಬಿಕೆ ನನ್ನಲ್ಲಿ ಮೂಡಿತು. ಜತೆಗೆ ಚೀನ ಮತ್ತಿತರ ದೇಶಗಳಿಂದ ರಾಜ್ಯಕ್ಕೆ ಬರಲಿರುವ ಉದ್ದಿಮೆಗಳನ್ನು ಸ್ವಾಗತಿಸಿ ಮರುಸ್ಥಾಪಿಸುವ ಬಗ್ಗೆ ನನ್ನಲ್ಲಿ ಒಂದು ಒಳನೋಟ ಮೂಡಿತು. ಇನ್ನು ಸುಲಭವಾಗಿ ಬಿಸಿನೆಸ್ ಮಾಡುವುದು, ಮುಂದಿನ ದಿನಗಳಲ್ಲಿ ಹೊಸಹೊಸ ಉದ್ಯಮಗಳನ್ನು ನಿರಾಯಾಸವಾಗಿ ನೆಲೆಗೊಳಿಸುವ ನಿಟ್ಟಿನಲ್ಲಿ ಉದ್ದಿಮೆದಾರರ ಜತೆ ವಿಡಿಯೊ ಸಂವಾದ ನಡೆಸಿದ್ದೆ. ಪ್ರಾಥಮಿಕ ಹಂತದಲ್ಲಿ ನಿರುದ್ಯೋಗ ನಿವಾರಣೆಗೆ ಕ್ರೆಡಾಯ್ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ ಕೊರೊನೋತ್ತರದಲ್ಲಿ ನಿರ್ಮಾಣ ಕಾಮಗಾರಿಗಳನ್ನು ಪುನಾರಂಭಿಸುವ ಬಗ್ಗೆ ತಿಳಿಸಿದ್ದೇನೆ.
ದುಬೈ ಕನ್ನಡಿಗರ ಕಷ್ಟ-ಸುಖಗಳ ಬಗ್ಗೆ ಅಲ್ಲಿನ ಕನ್ನಡಿಗರ ಜತೆ ನಾನು ವಿಡಿಯೊ ಸಂವಾದ ನಡೆಸಿದೆ. ಅನೇಕರು ಅಲ್ಲಿಂದ ವಾಪಾಸ್ ಬರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೇನೆ. ಮನೆಯಿಂದಲೇ ಆ ಅಧಿಕಾರಿಗಳ ಜತೆ ಹಲವು ಸುತ್ತಿನ ಚರ್ಚೆ ಮಾಡಿದ್ದೇನೆ. ಈ ಬಿಕ್ಕಟ್ಟು ಬಗೆಹರಿದ ಕೂಡಲೇ ಅವರು ತಾಯ್ನಾಡಿಗೆ ವಾಪಾಸ್ ಬರಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷಜಿ ಜತೆಗಿನ ಸಂವಾದ ಕೂಡ ಕಣ್ತೆರೆಸಿತು.
ವಿಷನ್ ಗ್ರೂಪ್:
ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ವಿಜ್ನಾನ (Epidemiological science) ಕುರಿತು ವಿಸ್ತೃ್ತತವಾಗಿ ಅಧ್ಯಯನ ಮಾಡಲು, ಭವಿಷ್ಯದಲ್ಲಿ ಕೊರೊನಾದಂಥ ಮಹಾಮಾರಿ ಬಂದಾಗ ಸುಲಭವಾಗಿ ಎದುರಿಸಲು ವಿಷನ್ ಗ್ರೂಪ್ (Vision group) ಒಂದನ್ನು ರಚಿಸುವ ಯೋಚನೆ ಬಂತು. ಅದಕ್ಕೆ ಪೂರಕವಾಗಿ ಕೆಲ ಖ್ಯಾತ ವೈದ್ಯರು, ತಜ್ಞರ ಜತೆ ಕ್ವಾರಂಟೈನ್ ಕೋಣೆಯಿಂದಲೇ ವಿಡಿಯೋ ಸಂವಾದ ನಡೆಸಿದ್ದೇನೆ. ಆದಷ್ಟು ಬೇಗ ಈ ಗ್ರೂಪ್ ರಚನೆಯಾಗಿ ಸರಕಾರದ ಆದೇಶವೂ ಹೊರಬೀಳಲಿದೆ. ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಟಕ್ಕೆ ಒಂದು ಪ್ರಬಲ ವ್ಯವಸ್ಥೆ ರೂಪಿಸುವುದು ಇದರ ಉದ್ದೇಶ. ಕೊರೊನಾ ವಿರುದ್ಧ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶವೂ ಇದರಲ್ಲಿ ಅಡಗಿದೆ. ಜತೆಜತೆಯಲ್ಲಿಯೇ ರಾಜ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿತ ಮೂಲ ಸೌಕರ್ಯಗಳನ್ನು ಜಾಗತಿಕ ಗುಣಮಟ್ಟದಲ್ಲಿ ಕಲ್ಪಿಸಲು ಬೇಕಾದ ಸಿದ್ದತೆಯನ್ನು ಮಾಡಿಕೊಳ್ಳುವ ಕುರಿತೂ ನಾನು ಅವರೊಂದಿಗೆ ಚರ್ಚಿಸಿದ್ದೇನೆ. ಇದರ ಜತೆಯಲ್ಲೇ ಬೆಂಗಳೂರಿನ ಎಲ್ಲ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಸ್ಮಾರ್ಟ್ ಕ್ಲಿನಿಕ್ (Smart clinic)ಗಳನ್ನೂ ಸ್ಥಾಪಿಸುವ ಚಿಂತನೆ ಇದೆ. ಇದಕ್ಕೆ ಎಲ್ಲ ತಜ್ಞರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರಾಯೋಗಿಕವಾಗಿ ಮಲ್ಲೇಶ್ವರ ಕ್ಷೇತ್ರದಲ್ಲಿ ಇದನ್ನು ಆರಂಭಿಸಿ ತದನಂತರ ಎಲ್ಲೆಡೆಗೆ ವಿಸ್ತರಿಸಲಾಗುವುದು. ಮಾರಕ ವೈರಸ್‌ಗಳು ವಕ್ಕರಿಸಿದಾಗ ಇಂಥ ಕ್ಲಿನಿಕ್ಕುಗಳು ಹೆಚ್ಚು ಸಹಾಯಕರ.
ನಿಟ್ಟುಸಿರುಬಿಟ್ಟ ಗಳಿಗೆ:
ರಾಮನಗರಕ್ಕೆ ಪಾದರಾಯನಪುರ ಗಲಭೆಯ ಆರೋಪಿಗಳನ್ನು ಕಳಿಸಿದ್ದು, ಆ ನಂತರ ಉಂಟಾದ ರಾಜಕೀಯ ಬಿಕ್ಕಟ್ಟು ನನಗೆ ಅತೀವ ನೋವುಂಟು ಮಾಡಿತ್ತು. ಆ ವಿವಾದದ ಸಂದರ್ಭದಲ್ಲೇ ನಾನು ಮಾಧ್ಯಮ ಮಿತ್ರರ ಸಂಪರ್ಕಕ್ಕೆ ಬಂದು ಕ್ವಾರಂಟೈನ್ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರ ಮಾಡಿದ ಮೇಲೆ ಇವರ ಸಂಪರ್ಕಕ್ಕೆ ಬಂದ ರಾಮನಗರ ಜೈಲು ಸಿಬ್ಬಂದಿ ಹಾಗೂ ನಗರಸಭೆ, ಪೋಲಿಸ್ ಸೇರಿ ವಿವಿಧ ಇಲಾಖೆಗಳ ಸಿಬ್ಬಂದಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳಿಸಿದಾಗ ನಿಜಕ್ಕೂ ನನ್ನ ಗಂಟಲೇ ಒಣಗಿತ್ತು. ಆ ಕ್ಷಣದಲ್ಲಿ ನಾನು ಓರ್ವ ವೈದ್ಯನಾಗಿಯೂ ಯೋಚಿಸಿದ್ದೆ. ಅವರ ವರದಿಗಳಿಗಾಗಿ ಚಾತಕಪಕ್ಷಿಯಂತೆ ಕಾದಿದ್ದೆ. ಆ ಸಮಯದಲ್ಲಿ ಅನ್ನ, ನೀರು, ನಿದ್ದೆಗಳು ಸನಿಹಕ್ಕೂ ಸುಳಿದಿರಲಿಲ್ಲ ಎಂದರೆ ಬಹಳಷ್ಟು ಜನ ನಂಬಲಾರರು. ಅಂತಿಮವಾಗಿ ಅವರೆಲ್ಲರ ವರದಿಗಳು ಕೈಸೇರಿ ನೆಗೆಟಿವ್ ಅಂತ ಬಂದ ಮೇಲೆ ನಾನು ನಿಜಕ್ಕೂ ನಿಟ್ಟುಸಿರುಬಿಟ್ಟೆ. ಅದುವರೆಗೂ ನನ್ನ ಮಾನಸಿಕ ಒತ್ತಡ, ತಳಮಳ ನನಗಷ್ಟೇ ಗೊತ್ತು. ನಿಜವಾಗಿಯೂ ನನಗೆ ಅದು ಅಗ್ನಿಪರೀಕ್ಷೆಯೇ ಆಗಿತ್ತು. ಈ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕದಲ್ಲಿದ್ದೆ. ಕಟ್ಟುನಿಟ್ಟಾದ ಸೂಚನೆಗಳನ್ನು ಕೊಟ್ಟೆ. ಅಲ್ಲಿನ ಜಿಲ್ಲಾಸ್ಪತ್ರೆಯನ್ನು ಒಂದು ಅತ್ಯತ್ತಮ ಆಸ್ಪತ್ರೆಯನ್ನಾಗಿ ಮಾಡಲು ಬೇಕಾದ ಎಲ್ಲ ಪೂರ್ವಭಾವಿ ಕೆಲಸಗಳನ್ನು ಆರಂಭಿಸಿದ್ದೇನೆ. ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪ್ರಗತಿಪಥದತ್ತ ಒಯ್ಯಲು ಬೇಕಾದ ನೀಲನಕ್ಷೆಯೂ ತಯಾರಾಗುತ್ತಿದೆ. ಈ ನಡುವೆಯೇ ಹಿರಿಯ ಪತ್ರಕರ್ತರ ಜತೆ ಸಂವಾದ ನಡೆಸಿ ಅವರ ಸಲಹೆಗಳನ್ನು ಪಡೆದುಕೊಂಡಿದ್ದೇನೆ.
ಕ್ವಾರಂಟೈನ್ ಅನೇಕ ಜೀವನಪಾಠಗಳನ್ನು ಕಲಿಸಿದೆ. ನನ್ನ ಯೋಚನಾ ವಿಧಾನವನ್ನೇ ಬದಲಿಸಿದೆ. ಮಾತ್ರವಲ್ಲ, ಕೊರೊನೋತ್ತರ ಕಾಲದಲ್ಲಿ ಏನೆಲ್ಲ ಮಾಡಬಹುದು ಎಂಬ ಚಿಂತನೆಗೆ ಹಚ್ಚಿದೆ.
ಈ ಕೆಲಸಗಳ ನಡುವೆ ನನ್ನ ಇಲಾಖೆಗಳ ಕರ್ತವ್ಯಗಳನ್ನು ನಾನು ಮರೆತಿಲ್ಲ. ಪ್ರತಿದಿನವೂ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೆ. ಸಿಇಟಿ ವಿದ್ಯಾರ್ಥಿಗಳಿಗೆ ಈಗ ಆನ್‌ಲೈನ್ ಕೋಚಿಂಗ್ ನಡೆಯುತ್ತಿದೆ. ಇದು ಬಹಳ ಮುಖ್ಯ. ಜತೆಗೆ ಪ್ರತಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಅಧ್ಯಾಪಕರು, ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಜತೆ ಸಂಪರ್ಕ ಸಾಧಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಕ್ವಾರಂಟೈನ್‌ನಿಂದಲೇ ಚಾಲನೆ ನೀಡಿದ್ದೇನೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಂಜೀವಿನಿ ವಿಭಾಗಗಳ ಎಲ್ಲ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡಿದ್ದೇನೆ. ಮುಖ್ಯವಾಗಿ, ಕೋರೊನದಿಂದ ಪಾರಾಗಲು ರಕ್ಷಾಕವಚವಾದ ಮಾಸ್ಕುಗಳ ತಯಾರಿಕೆ, ಪೂರೈಕೆಯಲ್ಲಿ ನಮ್ಮ ಮಹಿಳೆಯರ ಸ್ವ-ಸಹಾಯ ಗುಂಪುಗಳು ಅತ್ಯುತ್ತಮವಾಗಿ ಕೆಲಸ ಮಾಡಿವೆ. ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಮುಖಗವಸುಗಳನ್ನು ಸಂಜೀವಿನಿ ವತಿಯಿಂದ ಪೂರೈಸಲಾಗಿದೆ. ನನಗೆಷ್ಟೋ ತೃಪ್ತಿ ನೀಡಿದ ಕಾರ್ಯಕ್ರಮ ಇದಾಗಿದೆ.
ಮಲ್ಲೇಶ್ವರದಲ್ಲಿ ನಿರಂತರ ಸೇವೆ:
ಇದೆ ವೇಳೆ ನನ್ನ ಕ್ಷೇತ್ರಕ್ಕೆ ಅತಿಹೆಚ್ಚು ಸಮಯವನ್ನೂ ಮೀಸಲಿಟ್ಟಿದ್ದೆ. ‘ಡಿಸಿಎಂ ಕೇರ್ಸ್’ ಆಪ್ ಮೂಲಕ ಆಹಾರ ಕಿಟ್ ಗಳನ್ನು ಪ್ರತಿ ಅರ್ಹ ಕುಟುಂಬಕ್ಕೂ ಒದಗಿಸಲಾಗುತ್ತಿದೆ. ಏಪ್ರಿಲ್ 1ರಿಂದಲೇ ಕ್ಷೇತ್ರದಲ್ಲಿ ಫುಡ್ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಸರಕಾರ, ದಾನಿಗಳು ಕೊಟ್ಟಿದ್ದನ್ನು ಹೊರತುಪಡಿಸಿ ನಿತ್ಯ 16,000 ಕ್ಷೇತ್ರವಾಸಿಗಳಿಗೆ ಊಟದ ಪೊಟ್ಟಣ ತಲುಪುವಂತೆ ಮಾಡಿದ್ದೇನೆ. ಒಂದು ಛತ್ರವನ್ನು ಪಡೆದು ಅಲ್ಲಿ ಉತ್ತಮ ಗುಣಮಟ್ಟದ ಆಹಾರ ತಯಾರಿಸಿ ಅಗತ್ಯ ಇರುವವರಿಗೆ ಮನೆಬಾಗಿಲಿಗೆ ತಲುಪಿಸಿದೆವು. ನಾನೂ ಇದೇ ಆಹಾರವನ್ನು ಮನೆಗೆ ತರಿಸಿಕೊಂಡು ಸೇವಿಸಿ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದೇನೆ. ವಿತರಿಸುವ ಅಕ್ಕಿಯನ್ನೂ ತರಿಸಿಕೊಂಡು ಮನೆಯಲ್ಲಿ ಅಡುಗೆ ಮಾಡಿಸಿ ಊಟ ಮಾಡಿದ್ದೇನೆ. ಇದು ನನ್ನ ಬದ್ಧತೆ. ನಾನು ಮನೆಯಲ್ಲಿಯೇ ಇದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಈ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡಿದ್ದಾರೆ. ಅವರೆಲ್ಲರನ್ನು ಇಲ್ಲಿ ಸ್ಮರಿಸಲೇಬೇಕಾಗಿದೆ.
ಮನೆಯಲ್ಲಿ ಕಳೆದ ಕಾಲ:
ಇಷ್ಟು ಕೆಲಸಗಳ ನಡುವೆಯೂ ನನಗೂ ಒಂದಿಷ್ಟು ಸಮಯವನ್ನು ಮೀಸಲಿಟ್ಟುಕೊಂಡಿದ್ದೆ. ಬೆಳಗ್ಗೆ ಆದಷ್ಟು ಬೇಗ ನಿದ್ದೆಯಿಂದ ಏಳುವ ನಾನು, ನಿತ್ಯವೂ ಜಿಮ್ ತಪ್ಪಿಸುವುದಿಲ್ಲ. ಒಂದು ಗಂಟೆ ಆ ಕಸರತ್ತು ಇದ್ದೇ ಇರುತ್ತದೆ. ಬಳಿಕ ಸ್ನಾನ, ಪೂಜೆ, ನಂತರ ದಿನಪತ್ರಿಕೆ, ಸುದ್ದಿ ವಾಹಿನಿಗಳತ್ತ, ಆ ಕೂಡಲೇ ಪೂರ್ವ ನಿಗದಿಯಂತೆ ವಿಡಿಯೋ ಸಂವಾದ ಇರುತ್ತಿತ್ತು. ಮಧ್ಯಾಹ್ನಕ್ಕೆ ಅರ್ಧಗಂಟೆ ಬ್ರೇಕ್. ಆಮೇಲೆ ಮತ್ತೆ ನಿಗದಿತ ಸಭೆ, ಅಧಿಕಾರಿಗಳ ಜತೆ ಚರ್ಚೆ ಇತ್ಯಾದಿ. ಈ ನಡುವೆಯೂ ಬಿಡುವು ಮಾಡಿಕೊಂಡು ಕೆಲ ಬಯೋಗ್ರಫಿಗಳ ಸಿನಿಮಾಗಳನ್ನು ನೋಡುವ ಅವಕಾಶ ಸಿಕ್ಕಿತು. ಸ್ಟೀವ್‌ಜಾಬ್ಸ್ ಅವರ ‘ಜಾಬ್ಸ್’, ಸ್ಟಿಫೆನ್ ಹಾಕಿನ್ಸ್ ಅವರ ಜೀವನ ಕಥೆ ‘ಥಿಯರಿ ಆಫ್ ಎವರಿಥಿಂಗ್’, ಬಿಹಾರದ ಗಣಿತ ತಜ್ಞ ಆನಂದ್ ಕುಮಾರ್ ಅವರ ಲೈಫ್‌ಸ್ಟೋರಿ ‘ಸೂಪರ್ 30′, ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಡೆಸಿದ ಮಂಗಳಯಾನದ ‘ಮಿಷನ್ ಮಂಗಲ್’, ಹಾಲಿವುಡ್ ನ ಹೆಸರಾಂತ ಚಿತ್ರಗಳಾದ ‘ಎ ಬ್ಯೂಟಿಫುಲ್ ಮೈಂಡ್, ‘ದಿ ಇಮಿಟೇಶನ್ ಗೇಮ್’, ‘ದಿ ಏವಿಯೇಟರ್’, ‘ರೈಡ್’, ‘ಸ್ಪೆಷಲ್ 26’, ‘ದಿ ಟರ್ನಿಂಗ್’ ಸಿನಿಮಾಗಳನ್ನು ನೋಡಿದೆ. ಈ ಸಿನಿಮಾಗಳು ಹೊಸ ರೀತಿಯ ಅನುಭೂತಿ ನೀಡುತ್ತವೆ ಮಾತ್ರವಲ್ಲದೆ, ಕೆಲವೊಮ್ಮೆ ನಮ್ಮಲ್ಲಿ ಓಡುತ್ತಿರುವ ಆಲೋಚನೆಗಳಿಗೆ ರೆಕ್ಕೆಗಳನ್ನು ಕಟ್ಟುತ್ತವೆ. ಸ್ಟೀವ್‌ಜಾಬ್ಸ್, ಆನಂದ್ ಕುಮಾರ್ ಹಾಗೂ ಸ್ಟಿಫೆನ್ ಹಾಕಿನ್ಸ್ ಅವರ ಕಥೆಗಳು ಬಹಳ ಪ್ರಭಾವಶಾಲಿಯಾಗಿವೆ.
ಅನಿರೀಕ್ಷಿತವಾಗಿ ನನ್ನ ಪಾಲಿಗೆ ಬಂದ ಈ ದಿಗ್ಭಂದನ ನನಗೆ ಹಲವು ಪಾಠಗಳನ್ನು ಕಲಿಸಿದೆ. ನನ್ನನ್ನು ನಾನೇ ರೀಫೈನ್ ಮಾಡಿಕೊಳ್ಳುವ ಹಾಗಾಯಿತು. ಆದರೂ ಇಂಥ ಪ್ರಮೇಯ ಎಲ್ಲರಿಗೂ ಬರುವುದು ಬೇಡ ಎಂಬುದು ನನ್ನ ಆಶಾಭಾವನೆ. ಹೀಗೆ ಕ್ವಾರಂಟೈನ್‌ನಲ್ಲಿ ಇದ್ದರೂ ನಾನು ಕಾಲವನ್ನು ವ್ಯರ್ಥ ಮಾಡಲಿಲ್ಲ. ಪ್ರತಿಯೊಬ್ಬರಿಗೂ ಸಮಯ ಅತ್ಯಂತ ಅಮೂಲ್ಯ. ನನಗೂ ಕೂಡ.
ನನ್ನ ಕ್ವಾರಂಟನ್ ಡೈರಿ ತಮಗಿಷ್ಟವಾದರೆ ಒಂದು ಪ್ರೀತಿಯ ಪ್ರತಿಕ್ರಿಯೆ ಇರಲಿ.
ಸದಾ ನಿಮ್ಮ ಸೇವೆಯಲ್ಲಿ..
– ಡಾ. ಸಿ.ಎನ್. ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ