ಬೆಂಗಳೂರು: ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇಲ್ಲ. ಕೋವಿಡ್ ಭಯದಿಂದ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸುಳಿಯದ ಕಾರಣಕ್ಕೆ ಹಳೆಯ ಯಶಸ್ವಿ ಸಿನಿಮಾಗಳನ್ನೇ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.
ಇದರ ಭಾಗವಾಗಿ ಯಶ್ ಅಭಿನಯದ ʼಕೆಜಿಎಫ್-ಚಾಪ್ಟರ್ 1ʼ ಹಾಗೂ ಶಿವರಾಜ್ ಕುಮಾರ್ ಅಭಿನಯದ ʼಟಗರುʼ ಚಿತ್ರಗಳು ರೀ ರಿಲೀಸ್ ಆಗುತ್ತಿವೆ. ಕಳೆದ ವಾರ ಚಿರಂಜೀವಿ ಸರ್ಜಾ ನಟಿಸಿದ್ದ ʼಶಿವಾರ್ಜುನʼ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಪ್ರೇಕ್ಷಕರು ನೋಡದ ಕಾರಣಕ್ಕೆ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಸ್ಯಾಂಡಲ್‌ವುಡ್ ನಿರ್ಮಾಪಕರು ಬಂದಂತಿದೆ. ಈ ಕಾರಣಕ್ಕೆ ಈಗಾಗಲೇ ಬಾಗಿಲು ತೆರೆದಿರುವ ಚಿತ್ರಮಂದಿರಗಳಿಗೆ ಸಿನಿಮಾಗಳ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಹಳೆಯ ಸಿನಿಮಾಗಳನ್ನೇ ಕೊಡಲಾಗುತ್ತದೆ ಎಂದು ನಿರ್ಮಾಪಕರೊಬ್ಬರು ತಿಳಿಸಿದ್ದಾರೆ.
“ಚಿತ್ರ ಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದ ನಂತರ ಸಹಜವಾಗಿಯೇ ಸ್ಯಾಂಡಲ್‌ವುಡ್ ಖುಷಿಯಾಗಿತ್ತು. ಲಾಕ್ʼಡೌನ್ʼಗೂ ಮೊದಲು ರಿಲೀಸ್ ಆಗಿದ್ದ ಕೆಲ ಚಿತ್ರಗಳು ಈಗಾಗಲೇ ಪ್ರದರ್ಶನವಾಗುತ್ತಿವೆ. ಉದಾಹರಣೆಗೆ; ʼದಿಯಾʼ, ʼಲವ್ ಮಾಕ್ಟೇಲ್ʼ ಮುಂತಾದ ಚಿತ್ರಗಳು ಈಗ ಪ್ರದರ್ಶನವಾಗುತ್ತಿವೆ. ಕೆಲ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಿದ್ದಾರೆ, ಮೆಚ್ಚುತ್ತಿದ್ದಾರೆ. ಇದು ನಿಜಕ್ಕೂ ಶುಭಸೂಚನೆ. ಜನ ಮತ್ತೆ ಥಿಯೇಟರುಗಳಿಗೆ ಬರುತ್ತಾರೆಂಬ ನಂಬಿಕೆ ನನಗಿದೆ” ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್.
ಸದ್ಯಕ್ಕೆ ಸಿಕೆನ್ಯೂಸ್ ನೌ ಸಂಗ್ರಹಿಸಿರುವ ಮಾಹಿತಿಯಂತೆ, ಕೆಜಿಎಫ್ ಮತ್ತು ಟಗರು ಚಿತ್ರಗಳಿಗೆ ಉತ್ತಮ ಓಪೆನಿಂಗ್ ಸಿಕ್ಕಿದೆ. ಅನ್‌ಲಾಕ್ ನಂತರ ಈ ಮಟ್ಟಿಗೆ ಪ್ರೇಕ್ಷಕರ ಪ್ರತಿಕ್ರಿಯೆಗೆ ಖುಷಿಯಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ರಿಲೀಸ್ ಆಗಿವೆ. ಜತೆಗೆ, ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಈ ಚಿತ್ರಗಳು ತೆರೆ ಕಂಡಿವೆ.
ಟಗರು ರೀ ರಿಲೀಸ್ʼಗೆ ಸ್ವಾಗತ ಎಂದ ನಿರ್ಮಾಪಕ
ತಮ್ಮ ನಿರ್ಮಾಣದ ʼಟಗರುʼ ರೀ ರಿಲೀಸ್ ಆಗುತ್ತಿರುವ ಬಗ್ಗೆ ಸಂತಸದಲ್ಲಿರುವ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
“ಕರೋನ ಅನ್ನುವ ಕಗ್ಗತ್ತಲಿನಿಂದ ಹೊರಬಂದು ಹೊಸ ಚೈತನ್ಯದ ಹೊಸ್ತಿಲಿಗೆ ಕನ್ನಡ ಚಿತ್ರರಂಗ ಕಾಲಿಡುತ್ತಿದೆ. ಸುಮಾರು ಆರೇಳು ತಿಂಗಳಿನಿಂದ ಚಿತ್ರ ಪ್ರದರ್ಶನವಿಲ್ಲದೆ ಬಣಗುಡುತ್ತಿದ್ದ ಚಿತ್ರಮಂದಿರಗಳು ನಿಧಾನವಾಗಿ ತುಂಬುತ್ತಿವೆ. ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಚುರುಕುಗೊಂಡಿರುವುದು ಸಂತಸದ ವಿಷಯ. ರೀ ರಿಲೀಸ್ ಆಗಿರುವ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಥಿಯೇಟರ್ʼನತ್ತ ಬರುತ್ತಿರುವುದು ಉದ್ಯಮಕ್ಕೆ ಹೊಸ ಭರವಸೆ ಮೂಡಿಸಿದೆ. ಈ ನಡುವೆ ನಮ್ಮ ಸಂಸ್ಥೆಯ ಹೆಮ್ಮೆಯ ಸಿನಿಮಾ ʼಟಗರುʼ ಸಿನಿಮಾ ಗೋಪಾಲನ್ ಸಿನಿಮಾಸ್ (ಸಿರ್ಸಿ ಸರ್ಕಲ್), ಗೋಪಾಲನ್ ಸಿನಿಮಾ ಅರ್ಕೇಡ್ ಮಾಸ್ʼಗಳಲ್ಲಿ ರೀ ರಿಲೀಸ್ ಆಗಿದೆ. ಅದರಂತೆ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ʼನಲ್ಲಿರುವ ಗೋಪಾಲ್ ಸಿನಿಮಾಸ್ʼನಲ್ಲಿ ಭಾನುವಾರ (ಅ.25) ಮಧ್ಯಾಹ್ನ 1.15ರ ಪ್ರದರ್ಶನವನ್ನ ಪ್ರೇಕ್ಷಕರೊಂದಿಗೆ ವೀಕ್ಷಿಸಲು ʼಸಲಗʼ ಚಿತ್ರದ ನಿರ್ದೇಶಕ ನಾಯಕ ದುನಿಯಾ ವಿಜಯ್, ʼಟಗರುʼ ನಿರ್ದೇಶಕ ಸೂರಿ, ಡಾಲಿ ಧನಂಜಯ, ವಸಿಷ್ಠ ಸಿಂಹ, ಮಾನ್ವಿತಾ ಕಾಮತ್ ಸೇರಿ ಇಡೀ ನಮ್ಮ ಚಿತ್ರತಂಡ ಭಾಗಿಯಾಗುತ್ತಿದೆ. ಚಿತ್ರ ಪ್ರದರ್ಶನದ ನಂತರ ಗೋಪಾಲನ್ ಸಿನಿಮಾಸ್ʼನಲ್ಲಿ ಮಧ್ಯಾಹ್ನ 3 ಗಂಟೆಗೆ ಟಗರು ರೀ ರಿಲೀಸ್ ಸಂಭ್ರಮಾಚರಣೆಯನ್ನು ಏರ್ಪಡಿಸಲಾಗಿದೆ.”
ಒಟ್ಟಾರೆಯಾಗಿ ಪ್ರೇಕ್ಷರನ್ನು ಪುನಾ ಥಿಯೇಟರ್‌ಗಳಿಗೆ ಸೆಳೆಯುವ ಸಲುವಾಗಿ ನಿರ್ಮಾಪಕರು ಸಾಕಷ್ಟು ಶ್ರಮ ಹಾಕುತ್ತಿದ್ದು, ಅದಕ್ಕಾಗಿ ಸ್ಟಾರ್‌ಗಳನ್ನು ಕೂಡ ಥಿಯೇಟರುಗಳಿಗೆ ಕರೆ ತರುತ್ತಿದ್ದಾರೆ. ಇನ್ನೊಂದೆಡೆ ಗೋಪಾಲನ್ ಮಾಲ್‌ನಲ್ಲಿ ಭಾನುವಾರದ ಮಧ್ಯಾಹ್ನದ ಶೋಗೆ ಅಭಿಮಾನಿಗಳು ಈಗಾಗಲೇ ತಮ್ಮ ಟಿಕೆಟ್‌ಗಳನ್ನು ಕಾದಿರಿಸಿದ್ದು, ತಮ್ಮ ನೆಚ್ಚಿನ ಶಿವಣ್ಣಗೆ ಟಿಕೆಟ್‌ಹಾರ ಹಾಕಿ ಸಂಭ್ರಮಿಸಿದ್ದಾರೆ.