ಸೆಪ್ಟೆಂಬರ್ 3, 2009. ಗುರುವಾರ. ಆ ದಿನ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬೆಳಗ್ಗೆ ಸುಮಾರು ಆರೂಮುಕ್ಕಾಲು ಗಂಟೆಗೇ ನಾನು ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರದ ಮನೆಯ (ಈಗಿರುವ ಹೊಸ ಮನೆಯಲ್ಲ) ಹೊರಗಿನ ಗೇಟು ದಾಟಿ ಲಿವಿಂಗ್ ರೂಮ್ ತಲುಪಿದ್ದೆ. ಸೆಕ್ಯೂರಿಟಿ ಬಿಟ್ಟರೆ ಅವರ ಯಾವ ಆಪ್ತ ಸಹಾಯಕರೂ ಕಾಣಲಿಲ್ಲ. ಮೊದಲ ಮಹಡಿಯಲ್ಲಿದ್ದ ಇನ್ನೊಂದು ಲಿವಿಂಗ್ ರೂಮಿನಲ್ಲಿರಬಹುದು ಎಂದುಕೊಂಡು ಮೆಟ್ಟಿಲ ಕಡೆ ನೋಡುವಷ್ಟರಲ್ಲಿ ಅವರ ಆಪ್ತ ಸಹಾಯಕ ದಿಲೀಪ್ ಎದುರಾದರು. “ಎಲ್ಲಿ ಅಣ್ಣ” ಎಂದು ಕೇಳಿದೆ. ಅವರ ನಿತ್ಯದ ಮೆಲುವಾದ ಮಾತು, ಮುಗ್ಧನಗೆಯ ಮಂದಹಾಸ ನನಗೆ ಆವತ್ತು ಕಾಣಲಿಲ್ಲ. “ಮೇಲೆ.. ಒಬ್ಬರೇ” ಅಂದರು. ನಾನು ಕ್ಷಣಮಾತ್ರದಲ್ಲಿ ಮೆಟ್ಟಿಲೇರಿ ಅವರ ಮುಂದಿದ್ದೆ.
ಆ ಕ್ಷಣದಲ್ಲಿ ನನಗೇನಾಯಿತೋ ಗೊತ್ತಾಗಲಿಲ್ಲ. ಅದು ಆಶ್ಚರ್ಯವೋ, ಆತಂಕವೋ ನನಗೆ ತಿಳಿಯದ ಸ್ಥಿತಿ. ಅವರನ್ನು ಹಾಗೆ ನೋಡಿದ್ದು ಅದೇ ಮೋದಲು. ನನ್ನನ್ನೊಮ್ಮೆ ನೋಡಿ ಕುರ್ಚಿಯಲ್ಲಿ ಕೂರಲು ಸಂಜ್ಞೆ ಮಾಡಿದರು. ಕುರ್ಚಿಯ ಕೊನೆತುದಿಗೆ ಮೈಆನಿಸಿಕೊಂಡು ಕೂತು ಮತ್ತೊಮ್ಮೆ ಅವರನ್ನು ದಿಟ್ಟಿಸಿದೆ. ಕಣ್ಣುಗಳು ಕೆಂಪಾಗಿದ್ದವು. ರಾತ್ರಿ ನಿದ್ದೆ ಇಲ್ಲ ಎಂಬುದನ್ನು ಆ ಕಂಗಳೇ ಹೇಳುತ್ತಿದ್ದವು. ಆ ಕ್ಷಣದ ಮೌನ ಮುರಿಯುವಷ್ಟರಲ್ಲಿ ಅದೇ ಕಂಗಳಿಂದ ನಾಲ್ಕು ಹನಿಗಳು ಜಾರಿಬಿದ್ದವು. ಕ್ಷಣಮಾತ್ರದಲ್ಲಿ ಆ ಹನಿಗಳನ್ನು ಒರೆಸಿಕೊಂಡ ಅವರು, “ಏನು ಕೃಷ್ಣ, ಸಮಾಚಾರ?” ಎಂದು ಕೇಳುವಷ್ಟರಲ್ಲಿ ವಿಷಯ ನನಗೆ ಆರ್ಥವಾಗಿಬಿಟ್ಟಿತ್ತು.
ಹಿಂದಿನ ದಿನ.. ಸೆಪ್ಟೆಂಬರ್ 2, 2009 ಬುಧವಾರ. ಆವತ್ತಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರು ಚಿತ್ತೂರು ಜಿಲ್ಲೆಯ ನಲ್ಲಮಲ್ಲ ಅರಣ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ್ದರು. ಪಾರ್ಥೀವ ಶರೀರವನ್ನು ದರ್ಶಿಸಲು ಅವರು ಗುರುವಾರ ಬೆಳಗ್ಗೆಯೇ ಹೈದರಾಬಾದಿಗೆ ಹೊರಡುವವರಿದ್ದರು. “ಅಣ್ಣ, ವೈಎಸ್ಸಾರ್ ಅವರ ಬಗ್ಗೆ ಏನಾದರೂ ಮಾತಾಡುವಿರಾ?” ಎಂದು ಕೇಳಿದೆ. ಅವರ ಕಂಗಳಲ್ಲಿ ಕಂಡಿದ್ದು ಮತ್ತಷ್ಟು ದುಃಖ. ತುಂಬಿದ್ದ ನೀರು. ನನಗೆ ನಿಲ್ಲಲಾಗಲಿಲ್ಲ. ನನಗೂ ಅವರು ನಿಲ್ಲಲು ಹೇಳಲಿಲ್ಲ.
ಮರುದಿನ ಬೆಳಗ್ಗೆಯೇ ನಾನು ತೆಲುಗಿನ ಕೆಲ ಪತ್ರಿಕೆಗಳನ್ನು ತಿರುವಿ ಹಾಕುತ್ತಾ ಕೂತೆ. ಈನಾಡು, ಸಾಕ್ಷಿ, ವಾರ್ತಾ ಇತ್ಯಾದಿಗಳನ್ನು. ಅವುಗಳಲ್ಲಿ ವೈಎಸ್ಸಾರ್ ಸುದ್ದಿಗಳು ಬಿಟ್ಟರೆ ಬೇರೊಂದು ಸುದ್ದಿಯ ಸಣ್ಣ ಚುಕ್ಕೆಯೂ ಇರಲಿಲ್ಲ. “ಮಹಾನೇತ ವೈಎಸ್ ಇಕಲೇರು” (ಮಹಾನಾಯಕ ವೈಸ್ ಇನ್ನಿಲ್ಲ) ಎಂಬ ಹೆಡ್ಲೈನುಗಳ ನಡುವೆ ಎಲ್ಲೋ ಒಂದು ಕಡೆ ಎರಡು ಸಾಲು ಕಣ್ಣಿಗೆ ಬಿತ್ತು. “ನೈಜ ಮಹಾನಾಯಕ, ಜನಪ್ರಿಯ ಮುಖ್ಯಮಂತ್ರಿ, ಪರಿಪೂರ್ಣ ನೇತಾರ, ರೈತರು ಮತ್ತು ಬಡವರ ಆರಾಧ್ಯದೈವ ವೈ.ಎಸ್. ರಾಜಶೇಖರ ರೆಡ್ಡಿ ಅವರ ನಿಧನ ನನ್ನನ್ನು ತೀವ್ರ ದುಃಖಕ್ಕೆ ದೂಡಿದೆ”. ಈ ಸಾಲುಗಳ ಕೆಳಗೆ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನಾಯಕ, ಕರ್ನಾಟಕ ಎಂದು ಅಚ್ಚಾಗಿತ್ತು.
ಈ ಸಾಲುಗಳು ಹಿಂದಿನ ದಿನದ ಡಿಕೆಶಿಯನ್ನು ಮತ್ತೆ ಮುಂದೆ ಕಣ್ಮುಂದೆ ನಿಲ್ಲುವಂತೆ ಮಾಡಿದ್ದವು. ನನ್ನೆದುರಿನಲ್ಲಿ ಅವರ ಕಂಗಳಿಂದ ಕೆಳಕ್ಕೆ ಜಾರಿದ ಹನಿಗಳು ಇಲ್ಲಿ ಅಕ್ಷರಗಳಾಗಿಬಿಟ್ಟವಾ ಎಂದು ನನಗೆ ಅನಿಸತೊಡಗಿತು. ಕಾರಣವಿಷ್ಟೇ, ವೈಎಸ್ಸಾರ್ ಎಂದರೆ ಡಿಕೆಶಿ ಅವರಿಗೆ ಎಲ್ಲಿಲ್ಲದ ಅಭಿಮಾನ, ಗೌರವ. ವೈಎಸ್ ಅವರು ಆಂಧ್ರದ ಪ್ರತಿಪಕ್ಷ ನಾಯಕರಾಗಿದ್ದಾಗ, ಮೊದಲ ಅವಧಿಗೆ ಸಿಎಂ ಆಗಿದ್ದಾಗ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದರು. ಆಗ ಇದೇ ಡಿಕೆಶಿ ಕಾಲೇಜು ಹುಡುಗನಂತೆ ಸಂಭ್ರಮದಿಂದ ಓಡಾಡಿದ್ದರು. ವೈಸ್ ಎಂದರೆ ಡಿಕೆಶಿ ಅವರಿಗೆ ಗೌರವ ಮಾತ್ರವಲ್ಲ ಆರಾಧನೆ ಎನ್ನವಷ್ಟರ ಮಟ್ಟಿಗೆ ಆಭಿಮಾನವಿತ್ತು.
ಹೀಗಿದ್ದ ಡಿಕೆಶಿ ಅವರನ್ನು ಬಹಳ ಹತ್ತಿರದಿಂದ ಎರಡು ವರ್ಷ ನೋಡಿದ್ದೆ. ಅದು 2009 ಮತ್ತು 2010. ಆಮೇಲೆ 2011ಕ್ಕೆ ನಾನು “ವಿಜಯ ಕರ್ನಾಟಕ” ಸೇರಿಕೊಂಡ ಮೇಲೆ ಅವರ ಮನೆಯತ್ತ ಹೋಗುವುದು ನಿಲ್ಲಿಸಿಬಿಟ್ಟೆ. ಆದರೆ, ಆ ಎರಡು ವರ್ಷಗಳಲ್ಲಿ ನಾನು ಡಿಕೆಶಿ ಅವರನ್ನು ತುಂಬಾ ಅರ್ಥ ಮಾಡಿಕೊಂಡಿದ್ದೆ, ಹೀಗೆನ್ನುವುದಕ್ಕಿಂತ ಹಚ್ಚಿಕೊಂಡಿದ್ದೆ ಎಂದರೇನೆ ಸರಿ. ಒಮ್ಮೆ ಅವರ ಸಹೋದರ ಡಿ.ಕೆ.ಸುರೇಶ್ ಅವರಿಗೆ ನನ್ನನ್ನು ಪರಿಚಯ ಮಾಡಿಕೊಡುವಾಗ, “ಇವರು ಕೃಷ್ಣ. ನನಗೆ ತುಂಬಾ ಬೇಕಾದವರು. ಒಳ್ಳೇ ಇಂಟಲಿಜೆಂಟ್” ಅಂತ ಹೇಳಿದ್ದರು. (ಅವರು ನನ್ನನ್ನು ಚನ್ನಕೃಷ್ಣ ಎಂಬುದರ ಬದಲಾಗಿ ಕೃಷ್ಣ ಎಂದೇ ಕರೆಯುತ್ತಿದ್ದರು) ಅದೇ ಲಾಗಾಯ್ತಿನಿಂದ ಸುರೇಶ್ ಅವರು ಕೂಡ ಎದುರಿಗೆ ಸಿಕ್ಕರೆ ಬಹು ಅಕ್ಕರೆಯಿಂದ ಮಾತನಾಡಿಸುತ್ತಿದ್ದರು.
ಯಾವುದೋ ಒಂದು ವಿಷಯಕ್ಕೆ ಒಮ್ಮೆ ಅವರ ಖಾಸಗಿ ಕಚೇರಿಯಲ್ಲಿ ಕೂತು ನಡುರಾತ್ರಿವರೆಗೂ ಅವರೊಟ್ಟಿಗೆ ಚರ್ಚೆ ಮಾಡಿದ್ದಿದೆ. ಮಾತಿನ ನಡುವೆ, ಹತ್ತಾರು ಬಾರಿಯಾದರೂ ನನ್ನ ಯೋಗಕ್ಷೇಮದ ಬಗ್ಗೆ ಕೇಳುವುದನ್ನು ಮರೆಯುತ್ತಿರಲಿಲ್ಲ. ಹೀಗೊಂದು ದಿನ ಹೈಕಮಾಂಡ್ ಮೇಲಿನ ಈ ಪರಿ ನಿಷ್ಠೆ ನಿಮಗೆ ಅಗತ್ಯವೇ ಎಂದು ಕೇಳಿಯೇಬಿಟ್ಟೆ. ಅದಕ್ಕವರು ಹೇಳಿದ್ದು ಈ ಒಂದೇ ಮಾತು, “ಸೀ.. ನನ್ನ ಪಾಲಿಗೆ ಹೈಕಮಾಂಡ್ ಎಂದರೆ ಅಮ್ಮನಂತೆ. ತಾಯಿಗೆ ನಾನೆಂದೂ ಎದುರುತ್ತರ ಕೊಡಲಾರೆ. ಅವರ ವಿರುದ್ಧ ನಡೆಯಲಾರೆ. ಇದು ನನ್ನ ಫಿಲಾಸಫಿ” ಎಂದು ಹೇಳುತ್ತಿದ್ದಂತೆ ಅವರ ಮೊಬೈಲ್ ರಿಂಗಾಗಿ ಮಾತಿನಲ್ಲಿ ಮುಳುಗಿಬಿಟ್ಟರು. ಕಾಲ್ ಮುಗಿದ ಮೇಲೆ, “ಕೃಷ್ಣ ಏನೋ ಹೇಳುತ್ತಿದ್ದೆ..” ಎಂದರು. “ಏನಿಲ್ಲಣ್ಣ, ನೀವೇಳಿದ್ದು ನನಗೆ ಅರ್ಥವಾಯಿತು” ಎಂದೇಳಿ ಸುಮ್ಮನಾದೆ. ಆದರೆ, ಅವರು ಹೇಳಿದ ಮಾತುಗಳು ನನ್ನಲ್ಲಿ ಹಾಗೆ ಉಳಿದುಹೋದವು. ನಿಷ್ಠೆಗೆ ಸೋಲಿಲ್ಲ. ಗೆಲವು ತಡವಾಗಬಹುದಷ್ಟೇ. ನಿಷ್ಠೆ ಇದ್ದವರಿಗೆ ಮಾತ್ರ ಅದು ಅರ್ಥವಾದೀತು.
ಒಮ್ಮೆ ಅವರ ಸ್ನೇಹಕ್ಕೋ, ವಿಶ್ವಾಸಕ್ಕೋ, ನಂಬಿಕೆಗೋ ಪಾತ್ರರಾಗಿಬಿಟ್ಟರೆ ಮುಗಿಯಿತು. ಬದುಕಿರುವ ತನಕ ಆ ಪ್ರೀತಿಗೆ ಮುಕ್ಕು, ಮುಪ್ಪು ಎಂಬುದು ಇರುವುದಿಲ್ಲ. ಅವರೂ ಅಷ್ಟೇ, ವಿಶ್ವಾಸ-ನಂಬಿಕೆಗೆ ಬದ್ಧರಾದರೆ, ಯಾರನ್ನಾದರೂ ಹಚ್ಚಿಕೊಂಡರೆ ಆ ‘ನೆಚ್ಚಿಗೆ’ ಕೊನೆ ಎಂಬುದೇ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಅಧಿಕಾರ ಇರಲಿ, ಇಲ್ಲದಿರಲಿ. ಅವರ ಬೆಂಬಲಿಗರು ಬದಲಾಗಲ್ಲ, ಬೇಲಿ ಹಾರಲ್ಲ. ಸದಾಶಿವನಗರದ ಮನೆ ಮುಂದೆ, ಅವರು ಹೋದಲ್ಲಿ ಬಂದಲ್ಲಿ ಜನಜಾತ್ರೆ ನಿಲ್ಲುವುದಿಲ್ಲ.
ಮೇಲೆ ಹೇಳಿದ್ದು ಕೆಲ ಸಂಗತಿಗಳಷ್ಟೇ. ನೆನಪಿನಲ್ಲಿದ್ದ ಕೆಲವು ಇಲ್ಲಿ ಅಕ್ಷರಗಳಾಗಿವೆ. ನನಗೆ ಆ ಎರಡು ವರ್ಷ ಡಿಕೆಶಿ ಅವರೊಂದಿಗೆ ತಕರಾರಿನ ಮಾತಿರಲಿ, ಬೇಸರ ಮಾಡಿಕೊಳ್ಳುವ ಸಣ್ಣ ಘಟನೆಯು ನಡೆಯಲಿಲ್ಲ. ಹೀಗಾಗಿ ನಾ ಕಂಡ ಡಿಕೆಶಿಯನ್ನು ಬಹುತೇಕರು ನೋಡಿರಲಿಕ್ಕಿಲ್ಲ ಎಂಬ ಮಾತನ್ನು ತುಸು ಸೊಕ್ಕಿನಿಂದಲೇ ಹೇಳಬಲ್ಲೆ. ಮನೆಯ ಮುಂದಿನ ಕಾರಿಡಾರಿನಲ್ಲಿ ನನ್ನ ಹೆಗಲ ಮೇಲೆ ಕೈಹಾಕಿಕೊಂಡು ಹತ್ತಾರು ನಿಮಿಷ ಮಾತಾಡಿದ್ದ ಕ್ಷಣಗಳು ನನ್ನ ಪಾಲಿಗೆ ಈಗಲೂ ಉಳಿದಿರುವ ಅಪರೂಪದ ಇಡುಗಂಟು. ಬೆಂಗಳೂರು ಏರ್ ಪೋರ್ಟಿನಲ್ಲಿ ರನ್ ವೇ ಯತ್ತ ಹೆಜ್ಜೆಯಿಕ್ಕುವ ತನಕವೂ ನನ್ನ ಅದೇ ಭುಜದ ಮೇಲೆ ಕೈಹಾಕಿಕೊಂಡು ನಡೆದಾಡಿದ್ದ ಡಿಕೆಶಿ ಅವರೊಳಗಿನ “ಶಿಶುರೂಪಿ ಶಿವಕುಮಾರ”ನನ್ನು ನಾನ್ಹೇಗೆ ಮರೆಯಲಿ?
ಹೊರಜಗತ್ತಿಗೆ ಕೋಪಿಷ್ಟ, ಕೆಲವರ ಪಾಲಿಗೆ ಮಹಾ ಆಟಿಟ್ಯೂಡ್ ಮನುಷ್ಯ, ಧಿಮಾಕಿನ ಆಸಾಮಿ!! ಆದರೆ ನಾನು ನೋಡಿದ ಡಿಕೆಶಿಯೇ ಹಾಗಲ್ಲ. ಬದ್ಧತೆಯ ಮನುಷ್ಯ, ಹೇಳಿದ್ದನ್ನು ಉಳಿಸಿಕೊಳ್ಳುವ ಜೀವಿ, ಶುದ್ಧ ಅಂತಃಕರುಣಿ, ನಂಬಿದವರ ಪಾಲಿಗೆ ಆಪ್ತಬಂಧು, ನಂಬಿಕೆಯಿಟ್ಟರೆ ಅವರಿಗಾಗಿ ನೂರಲ್ಲ ಸಾವಿರ ಹೆಜ್ಜೆ ಇಡಲು ಹಿಂಜರಿಯದಂಥ ಎದೆಗಾರಿಕೆಯ ನೇತಾರ, ಹೈಕಮಾಂಡ್ ಪಾಲಿಗೆ ಆಪ್ತಮಿತ್ರ- ಅವರು ಹೇಳಿದ್ದನ್ನು ತಲೆಮೇಲೆ ಹೊತ್ತು ಮಾಡುವ ಒಂಟಿ ಸಲಗ. ರಿಸ್ಕು ಎಂದು ಗೊತ್ತಿದ್ದರೂ ಅದರ ವಿರುದ್ಧವೇ ತೊಡೆತಟ್ಟಿ ಹೋರಾಡುವ ಮನೋನಿಬ್ಬರತೆಯುಳ್ಳ ವಿರಳಾತಿ ವಿರಳ ನಾಯಕ, ಪ್ರವಾಹಕ್ಕೇ ಎದುರಾಗಿ ಈಜುವ ಎಂಟೆದೆಯ ಗಂಡು. ಈ ಗುಣಗಳೇ ಅವರನ್ನು ಈಗ ನಾಯಕನನ್ನಾಗಿ ರೂಪಿಸಿ ನಿಲ್ಲಿಸಿವೆ.
ಹೈಕಮಾಂಡ್ ಪಾಲಿನ ಮಗನಾದ ಡಿಕೆಶಿ ತಮ್ಮ ರಾಜಕೀಯ ಬದುಕಿನ ಬಹುಮುಖ್ಯ ಘಟ್ಟವನ್ನು ಬಂದು ತಲುಪಿದ್ದಾರೆ. ಹಿಂದೆ ಅವರಿಗೆ ತಪ್ಪಿಸಲ್ಪಟ್ಟಿದ್ದ ಕೆಪಿಸಿಸಿ ಆಧ್ಯಕ್ಷಗಿರಿಯನ್ನು ಸ್ವತಃ ಸೋನಿಯಾ ಗಾಂಧಿಯವರೇ ತಟ್ಟೆಯಲ್ಲಿಟ್ಟು ಕೊಟ್ಟಿದ್ದಾರೆ. ಡಿಕೆಶಿ ಬಂದರೆ ಹಿರಿಯ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಹೆಚ್ಚಾಗುತ್ತದೆ, ಬೇರೆಬೇರೆ ಪಕ್ಷಗಳಿಂದ ಹಾರಿ ಬಂದವರಿಗೂ ಅವರು ಸಹನೀಯವಾಗುವುದಿಲ್ಲ, ಹಳೇ ಜನತಾ ಪರಿವಾರದಿಂದ ವಲಸೆ ಬಂದವರ ಜತೆ ಅವರ ಸಂಬಂಧ ಅಷ್ಟಕ್ಕಷ್ಟೇ, ಉತ್ತರ ಕರ್ನಾಟಕದ ನಾಯಕರನ್ನು ಸರಿದೂಗಿಸಿಕೊಂಡು ಹೋಗುವ ಚಾಕಚಕ್ಯತೆ ಅವರಿಗಿಲ್ಲ.. ಹೀಗೆ ಒಂದೇ ಎರಡೇ. ದಿಲ್ಲಿಯ ಜನಪಥ ಹತ್ತರ ಸುತ್ತ, ಸಫ್ತಜಂಗ್ ರಸ್ತೆಯಲ್ಲಿ ಸಿಕ್ಕಸಿಕ್ಕ ಕಿವಿಗಳನ್ನು ಕಚ್ಚಿಕೊಂಡು ಹೊಟ್ಟೆಯಲ್ಲಿದ್ದದ್ದೆಲ್ಲವನ್ನು ಕಕ್ಕಿಕೊಂಡವರು ಈಗ ಸುಮ್ಮನಾಗಿದ್ದಾರೆ. ಸಾರಥ್ಯ ಸಿಕ್ಕಿದ ಮೇಲೆ ಕಾಲೆಳೆದಿದ್ದವರೆಲ್ಲರ ಮನೆ ಬಾಗಿಲಿಗೂ ಹೋಗಿಬಂದಿದ್ದಾರೆ ಡಿಕೆಶಿ.
ಈ ಮೇ 15ಕ್ಕೆ (ಇವತ್ತು) ಅವರಿಗೆ 57 ತುಂಬಿ 58ಕ್ಕೆ ಬಿದ್ದಿದೆ. ವಯಸ್ಸು ಮಾಗುವ ಹೊತ್ತು ಅದು. ಅವರು ಮಾಗುತ್ತಿದ್ದಾರೆ ಎಂಬುದಕ್ಕೆ ನನಗೆ ಹತ್ತಾರು ಉದಾಹರಣೆಗಳು ಕಾಣುತ್ತಿವೆ. ರೂಪವಿಲ್ಲದ ಕಲ್ಲಿಗೆ ಹುಳಿಯೇಟು ಬಿದ್ದು ಶಿಲ್ಪವಾಗುವಂತೆ ಡಿಕೆಶಿ ಕೂಡ ಈಗ ಶಿಲ್ಪವಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಈಗ ಅವರನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಈ ಮೆರವಣಿಗೆ ಕೆಪಿಸಿಸಿ ಕಚೇರಿವರೆಗಷ್ಟೇ ಮೀಸಲಾಗದೇ ವಿಧಾನಸೌಧದ ಮೂರನೇ ಮಹಡಿವರೆಗೂ ಸಾಗಲಿ ಎಂಬುದೇ ನನ್ನ ಹಾರೈಕೆ.
ಕಿಚ್ಚ ಸುದೀಪ್ ನಟಿಸಿರುವ “ರನ್ನ” ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. “ಎಲ್ಲಾ ಕಡೆ ತಲೆಎತ್ತಿ ನಿಲ್ಲೋನಲ್ಲ ಕಣೋ ದೊಡ್ಮನುಷ್ಯ. ಎಲ್ಲಿ ತಲೆತಗ್ಗಿಸಿ ನಿಲ್ಲಬೇಕು ಅಂತ ಗೊತ್ತಿರೋನೇ ದೊಡ್ಮನುಷ್ಯ”.
ಯೆಸ್, ಡಿಕೆಶಿ ಈಗ ದೊಡ್ಮನುಷ್ಯರಾಗಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ.