ಕೋವಿಡ್-19 ಪೀಡೆಯಿಂದ ಕಂಗಾಲಾಗಿದ್ದ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂಥ ಒಂದು ಶುಭಸುದ್ದಿ ಬಂದಿದೆ. ಈ ಸೋಂಕಿನ ವಿರುದ್ಧ ನಡೆಯುತ್ತಿರುವ ಜಾಗತಿಕ ಸಂಶೋಧನೆಯಲ್ಲಿ ನಮ್ಮ ನಾಡಿನ ವಿಜ್ಞಾನಿಗಳು, ಅದರಲ್ಲೂ ಕನ್ನಡದ ಪ್ರತಿಭಾವಂತ ಸಂಶೋಧಕರು ದೊಡ್ಡ ಮೈಲುಗಲ್ಲುಗಳನ್ನೇ ಸ್ಥಾಪಿಸಿದ್ದಾರೆ.
ಇವತ್ತಿನವರೆಗೂ ಚೀನಾ ಸೇರಿದಂತೆ ಹಲವು ದೇಶಗಳನ್ನು ನಂಬಿಕೊಂಡಿದ್ದ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಸ್ವಾವಲಂಭನೆಯ ದಾರಿ ಕಂಡಿದೆ. ರಾಜ್ಯದಲ್ಲಿ ಸೋಮವಾರದ ಮಧ್ಯಾಹ್ನದ ಹೊತ್ತಿಗೆ ಸೋಂಕಿತರ ಸಂಖ್ಯೆ 25317 ದಾಟಿತ್ತು. ಅದೇ ದೇಶಾದ್ಯಂತ 7,19,665 ಈ ಪ್ರಮಾಣದ ಗಡಿ ದಾಟಿದ ಬೆನ್ನಲ್ಲಿಯೇ ಈ ಸಿಹಿಸುದ್ದಿ ಬಂದಿದೆ.
ಕೋವಿಡ್-19 ಸೋಂಕನ್ನು ಹತ್ತಿಕ್ಕಲು ಉಪಯೋಗಿಸಲಾಗುತ್ತಿದ್ದ ಬಹುತೇಕ ಉತ್ಪನ್ನಗಳನ್ನು ನಾವು ಕಳೆದ ಆರು ತಿಂಗಳಿಂದ ಚೀನಾ ಮತ್ತಿತರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಹೀಗೆ ಆಮದು ಮಾಡಿಕೊಳ್ಳಲಾಗಿದ್ದ ಕೋವಿಡ್ ಪರೀಕ್ಷಾ ಕಿಟ್ಟುಗಳನ್ನು ಬಳಸಬೇಕಾದ ಅನಿವಾರ್ಯತೆ ಇತ್ತು ನಮಗೆ. ಇವುಗಳಲ್ಲಿ ಕೆಲವು ದೋಷಪೂರಿತವಾಗಿದ್ದವು, ಇನ್ನು ಕೆಲವಕ್ಕೆ ಗುಣಮಟ್ಟ ಕೊರತೆ ಇತ್ತು. ಮತ್ತೆ ಕೆಲ ಉತ್ಪನ್ನಗಳು ಭಾರೀ ದುಬಾರಿಯಾಗಿದ್ದವು. ಕೆಲ ತಿಂಗಳ ಹಿಂದೆ ಚೀನಾದ ಒಂದು ಕಂಪನಿಯಿಂದ ಆಮದು ಮಾಡಿಕೊಳ್ಳಲಾದ ಕೋವಿಡ್ ಕಿಟ್ಟುಗಳನ್ನು ದೋಷದಿಂದ ಕೂಡಿವೆ ಎಂಬ ಕಾರಣಕ್ಕೆ ತಮಿಳುನಾಡು ಸರಕಾರ ವಾಪಸ್ ಕಳಿಸಿತ್ತು. ಕೇಂದ್ರ ಸರಕಾರವೇ ಈ ಬಗ್ಗೆ ಮಾಹಿತಿ ನೀಡಿತ್ತು. ನಮ್ಮ ವಿಜ್ಞಾನಿಗಳು ಇಂತಹ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದಾರೆ.
ಆರು ಉತ್ಪನ್ನಗಳು ಮತ್ತು ಆರು ಹೆಜ್ಜೆಗಳು:
ಆತ್ಮನಿರ್ಭರ್ ಭಾರತದತ್ತ ನಮ್ಮ ಸಂಶೋಧಕರು 6 ಹೆಜ್ಜೆಗಳನ್ನು ಇರಿಸಿದ್ದಾರೆ. ಅಂದರೆ ಆರು ಸಂಶೋಧನೆಗಳನ್ನು ಮಾಡಿದ್ದಾರೆ. ಈ 6 ಪ್ರಮುಖ ಉತ್ಪನ್ನಗಳನ್ನುಸಂಫೂರ್ಣವಾಗಿ ದೇಶಿಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಐಟಿ-ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಟಿವ್ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟಪ್ ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ. ಇದರಿಂದಾಗಿ ನಾವು ವಿದೇಶಿ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಬಹುದು. ಜತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ಸ್ಫೂರ್ತಿಯಿಂದ ಇವೆಲ್ಲ ಸಾಕಾರವಾಗಿವೆ. ಇವುಗಳಲ್ಲಿ ಕೆಲವು ಬಹಳ ಮಹತ್ವದ ಸಂಶೋಧನೆಗಳಾಗಿವೆ. ಎದೆಯ ಎಕ್ಸ್ ರೇ ತೆಗೆದು ಕೋವಿಡ್-19 ಅನ್ನು ಪತ್ತೆ ಹಚ್ಚುವುದು, ಜೀವಂತ ವೈರಸ್ ಅನ್ನು ಅತ್ಯಂತ ಸುರಕ್ಷಿತವಾಗಿ ಟೆಸ್ಟ್ ಲ್ಯಾಬಿಗೆ ತಲುಪಿಸುವ ಉಪಕರಣ ಸೇರಿದಂತೆ ಆರು ಸಂಶೋಧನೆಗಳನ್ನು ಮಾಡಲಾಗಿದೆ.
ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಮಾನ್ಯತೆಯ ಜತೆಗೆ, ಸರಕಾರದ ಎಲ್ಲ ಮಾನದಂಡಗಳು ಹಾಗೂ ವಿವಿಧ ಪರೀಕ್ಷಾ ಹಂತಗಳಲ್ಲಿ ತೇರ್ಗಡೆಯಾಗಿರುವ ಈ ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಬುಧವಾರ (ಜುಲೈ 7) ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಡುಗಡೆ ಮಾಡಿದ್ದಾರೆ. ಈ ಕ್ಷಣದಿಂದಲೇ ಇವೆಲ್ಲವನ್ನು ಎಲ್ಲರೂ ಬಳಸಬಹುದು, ಖರೀದಿಸಬಹುದು. ಸರಕಾರವು ಈ ಉತ್ಪನ್ನಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದ್ದಾರೆ.
ಅತ್ಯಂತ ಅಲ್ಪಾವಧಿಯಲ್ಲಿಯೇ ನಮ್ಮ ಯುವ ಸಂಶೋಧಕರು, ವಿಜ್ಞಾನಿಗಳು ಈ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಇವು ವಿದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳಿಗಿಂತ ಉತ್ತಮ ಗುಣಮಟ್ಟದವು, ಮತ್ತೂ ಅವುಗಳಿಗಿಂತ ಮುಂದುವರೆದ ತಂತ್ರಜ್ಞಾನವನ್ನು ಹೊಂದಿವೆ. ಕರ್ನಾಟಕ ಮಾತ್ರವಲ್ಲದೆ, ಭಾರತ ನಡೆಸುತ್ತಿರುವ ಕೋವಿಡ್ ವಿರುದ್ಧದ ಹೋರಾಟಕ್ಕೆ ಇದರಿಂದ ದೊಡ್ಡ ಬಲ ಬಂದಂತೆ ಆಗಿದೆ. ಇದಕ್ಕಾಗಿ ನಾನು ಸಂಬಂಧಪಟ್ಟ ಎಲ್ಲರನ್ನೂ ಅಭಿನಂದಿಸುತ್ತೇನೆ.
-ಡಾ. ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ
6 ಉತ್ಪನ್ನಗಳ ಮಾಹಿತಿ ಇಲ್ಲಿದೆ:
- ಶೀಲೆಡೆಕ್ಸ್24:
ಕೋವಿಡ್ 19 ಅನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವ ಸಾಧನವಿದು. ಇದು ಮೈಕ್ರೋವೇವ್ ಬಾಕ್ಸ್ ರೀತಿಯಲ್ಲಿ ವಿವಿಧ ಗಾತ್ರಗಳಲ್ಲಿ ಇರುತ್ತದೆ. (ಒಂದು ಫ್ರಿಜ್ ಗಾತ್ರದಲ್ಲೂ ಇರುತ್ತದೆ.) ಇದರಲ್ಲಿ ಅಲ್ಟ್ರಾವೈಲೇಟ್ ರೇಸ್ ಇರುತ್ತದೆ, ಈ ರೇಸ್ ಬಿದ್ದಾಗ ವೈರಸ್ ಕೂಡಲೇ ಅಂದರೆ 15 ಸೆಕೆಂಡುಗಳಲ್ಲಿ ಸಾಯುತ್ತದೆ. ನಮಗೆ ಯಾವುದೇ ವಸ್ತುವಿನ ಮೇಲೆ ವೃರಸ್ ಇದೆ ಅಂತ ಅನುಮಾನವಿದ್ದರೆ ಈ ಬಾಕ್ಸ್ ನಲ್ಲಿ ಆ ವಸ್ತುವನ್ನು ಹಾಕಿದರೆ ಸಾಕು. ಉದಾಹರಣೆಗೆ: ಮೊಬೈಲ್, ವಾಚ್, ಪೆನ್ ಇತ್ಯಾದಿ. ಇದನ್ನು ಕಚೇರಿ, ಮನೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ ಮುಂತಾದೆಡೆ ಪ್ರವೇಶ ದ್ವಾರದಲ್ಲಿಯೇ ಇಟ್ಟು ಬಳಸಬಹುದು. ಅಲ್ಲಿ ಇಡುವುದರಿಂದ ಅಲ್ಲಿಂದ ಒಳಹೋಗುವ ಹೊರಬರುವ ಲಗ್ಗೇಜ್, ಮತ್ತಿತರೆ ವಸ್ತಗಳ ಮೇಲಿರುವ ವೈರಸ್ ಅನ್ನು ನಾಶ ಮಾಡಹುದು. ಅದೂ ಸೆಕೆಂಡುಗಳಲ್ಲಿ!! ಈ ಉತ್ಪನ್ನವನ್ನು ಬಯೋ ಫೀ ಕಂಪನಿಯ ರವಿಕುಮಾರ್ ಅವರು ಸಂಶೋಧಿಸಿ ತಯಾರಿಸಿದ್ದಾರೆ. - ಫ್ಲೋರೋಸೆನ್ಸ್ ಪ್ರೋಬ್ಸ್:
ಇದು ಕೋವಿಡ್ ಕಿಟ್ ನಲ್ಲಿಇರಬಹುದಾದ ಪ್ರಮುಖ ಅಂಗ ಅಥವಾ ಉಪಕರಣ. ಇದು ಇಲ್ಲದಿದ್ದರೆ ವೈರಸ್ ಅನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಫ್ಲೋರೋಸೆನ್ಸ್ ಪ್ರೋಬ್ಸ್ ಅನ್ನು ಬಳಸಲಾಗುತ್ತದೆ. ಭಾರತದಲ್ಲಿಕೋವಿಡ್ ಕಿಟ್ ತಯಾರಿಸುವ ಕಂಪನಿಗಳಿಗೆ ಈ ಸಂಶೋಧನೆ ವರದಾನವಾಗಿದೆ. ಇದು ಹೊರಬಂದ ಕಾರಣ ಕಿಟ್ ತಯಾರಿಸುವುದು ಸುಲಭವಾಗಲಿದೆ. ಜತೆಗೆ ಕಿಟ್ ಬೆಲೆ ತೀರಾ ಕಡಿಮೆಯಾಗಲಿದೆ. ಇದನ್ನು ವಿಎನ್ ಐಆರ್ ಸಂಸ್ಥೆಯ ಡಾ. ಗೋವಿಂದ ರಾಜನ್ ಮತ್ತು ಡಾ. ಮೆಹರ್ ಪ್ರಕಾಶ್ ಅಭಿವೃದ್ಧಿಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆ ಈ ಉತ್ಪನ್ನವೂ ಬಹಳ ದುಬಾರಿ ಮತ್ತು ಅಷ್ಟೇ ಸೂಕ್ಷ್ಮವೂ ಹೌದು. ಇದನ್ನು ವಿವಿಧ ದೇಶಗಳಿಂದ, ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ನಮ್ಮಲ್ಲಿ ತಯಾರಿಸಿರುವ ಈ ಉತ್ಪನ್ನವೂ ಅತ್ಯಂತ ಉತ್ತಮ ಗುಣಮಟ್ಟವನ್ನು ಹೊಂದಿದೆ. - ಭ್ರೂಣ ನಿಗಾ ಯಂತ್ರ (ಫೀಟೆಲ್ ಮಾನಿಟರಿಂಗ್ ಡಿವೈಸ್):
ಕೋವಿಡ್ ಇದ್ದಾಗ ಗರ್ಭಿಣಿಯರು ನೇರವಾಗಿ ವೈದ್ಯರನ್ನು ಭೇಟಿಯಾಗಲು ಸಾಧ್ಯವೇ ಇಲ್ಲ. ಪಟ್ಟಿಯಾಕಾರಾದ ಈ ಉಪಕರಣದ ಮೂಲಕ ಭ್ರೂಣದ ಹೃದಯ ಬಡಿತವನ್ನೂ ವೈದ್ಯರು ತಿಳಿಯಬಹುದು. ಗರ್ಭಿಣಿ ಮಹಿಳೆ ಈ ಉಪಕರಣವನ್ನು ತಮ್ಮ ಹೊಟ್ಟೆ ಮೇಲಿಟ್ಟುಕೊಂಡರೆ ವೈದ್ಯರಿಗೆ ಎಲ್ಲ ಮಾಹಿತಿಯೂ ಕ್ಷಣಮಾತ್ರದಲ್ಲಿ ತಿಳಿಯುತ್ತದೆ. ಗರ್ಭಣಿಯರು ಮನೆಯಲ್ಲಿದ್ದೇ ಚಿಕಿತ್ಸೆ ಪಡೆಯಬಹುದು. ವರ್ಚುವಲ್ ವ್ಯವಸ್ಥೆ ಮೂಲಕವೇ ಚಿಕಿತ್ಸೆ ನೀಡಬಹುದು. ಈ ಯಂತ್ರವನ್ನು ’ದಕ್ಷ್’ ಎಂದು ಕರೆಯಲಾಗುತ್ತದೆ. ಜೆನಿತ್ರೀ ಕಂಪನಿಯ ಡಾ. ಅರುಣ್ ಅಗರವಾಲ್ ಇದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ. - ವಿಟಿಎಂ (ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ):
’ಡೇಕೊಂತೋ’ ಎಂಬ ಹೆಸರಿನ ಈ ಉತ್ಪನ್ನವನ್ನು ಡಿನೋವೋ ಬಯೋಲ್ಯಾಬ್ಸ್ ನ ಐಬಿಎಬಿಯ ಮಂಜುನಾಥ್ ಹಾಗೂ ದಿನೇಶ್ ಅವರು ಸಂಶೋಧಿಸಿ ತಯಾರಿಸಿದ್ದಾರೆ. ಇದು ಸದ್ಯದ ಸ್ಥಿತಿಯಲ್ಲಿಅತ್ಯಂತ ಮಹತ್ವದ ಸಂಶೋಧನೆ. ಸೋಂಕಿತರಿಂದ ಗಂಟಲು ದ್ರವ ಮತ್ತಿತರೆ ಸ್ಯಾಂಪಲ್ಲುಗಳನ್ನು ಪಡೆದು ಟಿಸ್ಟಿಂಗ್ ಲ್ಯಾಬಿಗೆ ಕಳಿಸುವ ಪ್ರಕ್ರಿಯೆಯಲ್ಲಿಈ ಉಪಕರಣ ಅತ್ಯಗತ್ಯವಾಗಿ ಬೇಕಿತ್ತು. ಏಕೆಂದರೆ, ಇದು ಜೀವಂತ ವೈರಸ್ ಅನ್ನು ಸಾಗಿಸುತ್ತದೆ. ಜೀವಂತ ವೈರಸ್ ಅನ್ನು ಒಂದು ಕಡೆಯಿಂದ ಇನ್ನೊಂದಡೆಗೆ ಸಾಗಿಸುವುದು ಅತ್ಯಂತ ಸವಾಲು ಮತ್ತು ಅಪಾಯಕಾರಿ ಕೂಡ. ಈ ಉಪಕರಣವನ್ನು ವಿದೇಶಗಳಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳಬೇಕಾಗಿತ್ತು.
5.ಕೋವ್-ಆಸ್ತ್ರ:
ಈ ಸಂಶೋಧನೆ ಬಹಳ ವಿಶೇಷವಾಗಿದೆ. ಇದುವರೆಗೂ ನಾವು ಗಂಟಲು ದ್ರವ ಮತ್ತಿತರೆ ಸ್ಯಾಂಪಲ್ಲುಗಳನ್ನು ಪಡೆದು ಕೋವಿಡ್ ಅನ್ನು ಪತ್ತೆ ಮಾಡುತ್ತಿದ್ದೆವು. ಈಗ ಕೋವ್ – ಅಸ್ತ್ರದ ಮೂಲಕ ಕೇವಲ ರೋಗಿಯ ಎದೆಯ ಭಾಗದ ಎಕ್ಸ್ ರೇ ತೆಗೆದು ವೈರಸ್ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಸುಮಾರು 4ರಿಂದ 5 ಸಾವಿರ ರೂಪಾಯಿ ವೆಚ್ಚವನ್ನು ಕಡಿಮೆ ಮಾಡಿ ಕೇವಲ 150ರಿಂದ 200 ರೂಪಾಯಿ ಎಕ್ಸ್ ರೇ ಯಿಂದ ಸೋಂಕನ್ನು ಪತ್ತೆ ಮಾಡಬಹುದು. ಇದಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಈ ಮೂಲಕ ವ್ಯಕ್ತಿಗೆ ಕೋವಿಡ್ ಪಾಸಿಟೀವ್ ಇದೆಯೇ ಇಲ್ಲವೇ ಎಂಬುದನ್ನು ಸುಲಭ, ಸರಳವಾಗಿ ತಿಳಿಯಬಹುದು. ಇದನ್ನು ಅಯಿಂದ್ರ ಕಂಪನಿಯ ಆದರ್ಶ್ ನಟರಾಜನ್ ಅವರು ಇದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.
ಸಿಕೆನ್ಯೂಸ್ ನೌ ಜತೆ ಮಾತನಾಡಿದ ಆದರ್ಶ್ ನಟರಾಜನ್, ನಾವು ಮಾಡಿರುವ ಸಂಶೋಧನೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಕೋವಿಡ್ ವಾರಿಯರುಗಳು ಪ್ರತಿಕ್ಷಣವೂ ವೈರಸ್ ಅನ್ನು ಎದುರಿಸುವ ಅಪಾಯವಿರುತ್ತದೆ. ಗಂಟಲು ದ್ರವ ಮತ್ತಿತರೆ ಸ್ಯಾಂಪಲ್ಲುಗಳನ್ನು ಪಡೆದಾಗ, ಆ ನಂತರ ಅದನ್ನು ಟೆಸ್ಟ್ ಲ್ಯಾಬಿಗೆ ಸಾಗಿಸುವಾಗ, ಆ ಲ್ಯಾಬಿನಲ್ಲಿ ಅದನ್ನು ಪರೀಕ್ಷೆ ಮಾಡುವಾಗ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಸೋಂಕು ಅವರಿಗೂ ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಕ್ಸ್ ರೇ ಯಿಂದಲೇ ಸೋಂಕನ್ನು ಪತ್ತೆ ಮಾಡುವ ಸಂಶೋಧನೆ ಅತ್ಯಂತ ಮಹತ್ವದ್ದು ಎಂದು ನಾನು ಹೇಳಬಲ್ಲೆ. ಏಕೆಂದರೆ ಇಲ್ಲಿ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಬಂದುಬಿಡುತ್ತದೆ. ದಿನಗಟ್ಟಲೆ ಕಾಯಬೇಕಾದ ಪ್ರಮೇಯ ಇರುವುದಿಲ್ಲ. ಜೀವಗಳನ್ನು ನಾವು ರಕ್ಷಿಸಬಹುದು, ಹಾಗೂ ವೈದ್ಯಕೀಯ ಸಿಬ್ಬಂದಿಗೆ ಯಾವ ರಿಸ್ಕು ಇರುವುದಿಲ್ಲ ಎನ್ನುತ್ತಾರೆ.
- ಆಂಟಿ ಮೈಕ್ರೋಬಿಯಲ್ ಫೇಸ್ ವಾಶ್:
ಮುಖದ ಮೇಲೆ ಕೂರುವ ಕೋವಿಡ್ ವೈರಸ್ ಜತೆಗೆ ಬೇರೆ ಯಾವುದೇ ವೈರಾಣುವನ್ನು ಸೆಕೆಂಡುಗಳಲ್ಲಿನಾಶ ಮಾಡುವ ಫೇಸ್ ವಾಶ್ ಇದಾಗಿದೆ. ಇದನ್ನು ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ. ಕೋವಿಡ್ ನಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಇದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮುಖ್ಯವಾಗಿ ಇದನ್ನು ನಮ್ಮ ಸಾಂಪ್ರದಾಯಿಕ ಪದ್ಧತಿಯ ಮೂಲಕ ಸಿದ್ಧಪಡಿಸಲಾಗಿದೆ. ಇದನ್ನು ಆಟ್ರಿಮ್ಡ್ ಕಂಪನಿಯ ಡಾ. ಲತಾ ಡ್ಯಾಮಲ್ ಅವರು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ.
**
ಮೇಲಿನ ಚಿತ್ರದಲ್ಲಿ ಸಂಶೋಧಕರ ಜತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ.