- ಆತ್ಮರಥಿ ಎನ್ನುವುದು ಒಳ್ಳೆಯದಾ? ಕೆಟ್ಟದ್ದಾ? ಅದರಿಂದ ಒಬ್ಬ ವ್ಯಕ್ತಿಗೆ ಅಥವಾ ಅಂಥ ಮನಃಸ್ಥಿತಿ ಉಳ್ಳ ವ್ಯಕ್ತಿಯಿಂದ ಸಮಾಜದ ಮೇಲೆ ಬೀರುವ ಪ್ರಭಾವ ಎಂಥದ್ದು? ಕೆಲವರಿಗೇಕೆ ತಮ್ಮನ್ನು ತಾವು ಅತಿಯಾಗಿ ವೈಭವೀಕರಿಸಿಕೊಳ್ಳುವ ಹಪಾಹಪಿ? ಆತ್ಮರಥಿ ಎಂದರೆ ಒಂದು ವ್ಯಸನವಾ ಅಥವಾ ರೋಗವಾ? ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅರ್ಥಪೂರ್ಣವಾಗಿ ಬರೆದಿದ್ದಾರೆ.
ವಿಶ್ವವಿದ್ಯಾನಿಲಯವೊಂದರಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಸ್ನೇಹಿತರ ಅಂಕಣ ಬರಹಗಳ ಸಂಕಲನ ಮುದ್ರಣಗೊಂಡ ಬಳಿಕ, ಆ ಪುಸ್ತಕದ ಮುಖಪುಟವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಎಲ್ಲರ ಗಮನಕ್ಕೆ ಅದು ಬರಲಿ ಎಂಬ ಸದುದ್ದೇಶ ಅವರದು. ಅದೇನೋ ಸರಿ. ಆದರೆ ಆ ಮುಖಪುಟದಲ್ಲಿ ಅವರ ಹೆಸರಿನ ಕೆಳಗೆ ‘…ಪ್ರಶಸ್ತಿ ಪುರಸ್ಕೃತರು’ ಎಂಬ ಬಿರುದು ಕೂಡಾ ಅಂಟಿಕೊಂಡಿತ್ತು. ಸಾಹಿತ್ಯ ಸಂಘಟನೆಯೊಂದು ಅವರಿಗೆ ನೀಡಿದ ಬಿರುದು ಅದು. ಅದನ್ನು ತನ್ನ ಹೆಸರಿನ ಮುಂದೆ ಪ್ರಕಟಿಸಿಕೊಳ್ಳುವ ಜರೂರತ್ತು ಅವರಿಗೇನಿತ್ತೋ ನನಗೆ ಗೊತ್ತಿಲ್ಲ. ಅದನ್ನು ಪ್ರಕಟಿಸದಿದ್ದರೂ ಆಸಕ್ತರು ಅವರ ಅಂಕಣ ಬರಹಗಳ ಸಂಕಲನವನ್ನು ಓದಿಯೇ ಓದುತ್ತಿದ್ದರು. ಆ ಮುಖಪುಟದಲ್ಲಿ ಅವರ ಹೆಸರಿನ ಮುಂದೆ ಇದ್ದ ಬಿರುದು ನೋಡಿ ನನಗೆ ತಕ್ಷಣ ಹೊಳೆದ ಅನಿಸಿಕೆಯನ್ನು ಆ ಗೆಳೆಯರ ವಾಟ್ಸಾಪ್ಗೆ ಕಳಿಸಿಯೇಬಿಟ್ಟೆ. ‘ನಿಮ್ಮ ಹೆಸರೇ ನಿಮ್ಮ ಯೋಗ್ಯತೆಯ ಮಾನದಂಡವಾಗಬೇಕು. ನಿಮ್ಮ ಹೆಸರಿನ ಹಿಂದೆ ಅಥವಾ ಮುಂದೆ ಹಾಕುವ ಕೆಲವು ಅಕ್ಷರಗಳು ನಿಮ್ಮ ಯೋಗ್ಯತೆಯ ಮಾನದಂಡ ಆಗಬಾರದು’ – ಇದು ನಾನು ಅವರಿಗೆ ಕಳಿಸಿದ ಪ್ರತಿಕ್ರಿಯೆ. ಅವರದನ್ನು ಗಮನಿಸಿದ್ದರು ಎಂಬುದು ವಾಟ್ಸಾಪ್ ಸಂದೇಶದ ತುದಿಯಲ್ಲಿನ ಎರಡು ನೀಲಿ ಗೆರೆಗಳಿಂದ ಗೊತ್ತಾಯಿತು.
ನಮ್ಮ ತೂಕ ಮತ್ತು ಅಳತೆಯ ಕಲ್ಲು
ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದ ಆ ಮುಖಪುಟಕ್ಕೆ ನನ್ನ ಆತ್ಮೀಯ ಹಿರಿಯ ಗೆಳೆಯರೊಬ್ಬರ ಪುತ್ರ, ಸೂಕ್ಷ್ಮ ಸಂವೇದನಾಶೀಲ ಚತುರ ತನ್ನದೊಂದು ಕಾಮೆಂಟ್ ಸೇರಿಸಿದ್ದ. ‘ನಮ್ಮ ತೂಕ ಕಡಿಮೆ ಇದ್ದಾಗ ಕೆಲವೊಮ್ಮೆ ಸರಿದೂಗಿಸಲು ಅಳತೆಯ ಕಲ್ಲನ್ನು ಜೊತೆಗಿರಿಸಿಕೊಳ್ಳಬೇಕಾಗುತ್ತದೆ’. ಅಂಕಣಕಾರ ಮಿತ್ರರು ಆ ಕಾಮೆಂಟ್ ಗಮನಿಸಿರಲಿಕ್ಕಿಲ್ಲ! ಆದರೆ ಆ ಕಾಮೆಂಟ್ ಬಹಳ ಅರ್ಥಪೂರ್ಣ ಹಾಗೂ ವಿಡಂಬನಾತ್ಮಕ ಚಾಟಿ ಏಟಿನಂತಿತ್ತು.
ದೂರದರ್ಶನದಲ್ಲಿ ಉನ್ನತ ಅಧಿಕಾರಿಯಾಗಿ ನಿವೃತ್ತರಾಗಿರುವ ‘ಗಣ್ಯ’ರೊಬ್ಬರು ತಮ್ಮ ಹೆಸರಿನ ಹಿಂದೆ ನಾಡೋಜ ಹಾಗೂ ಗೌರವ ಡಾಕ್ಟರೇಟ್ ಪದವಿಗಳನ್ನು ಸೇರಿಸದೆ ತಮ್ಮ ಹೆಸರನ್ನು ಬರೆಯುವುದೇ ಇಲ್ಲ. ಯಾರಾದರೂ ವಾಟ್ಸಾಪ್’ನಲ್ಲಿ ಶುಭಾಶಯದ ಸಾಮಾನ್ಯ ಸಂದೇಶವೊಂದನ್ನು ಕಳಿಸಬೇಕಾದರೂ ಸಂದೇಶದ ಅಡಿಯಲ್ಲಿ ನಾಡೋಜ ಡಾ?.. (ಹೆಸರು) ನಮೂದಿಸಿಯೇ ಕಳಿಸುತ್ತಾರೆ. ತಮ್ಮ ಸಹಿ ಹಾಕುವಾಗಲೂ ನಾಡೋಜ ಇತ್ಯಾದಿ ಸೇರಿಸುತ್ತಾರೋ ಇಲ್ಲವೋ ಗೊತ್ತಿಲ್ಲ! ನಾಡೋಜ ಹಾಗೂ ಗೌರವ ಡಾಕ್ಟರೇಟ್ ಅವರು ಪಡೆದಿದ್ದು ಹೌದು. ಅದಕ್ಕಾಗಿ ಅವರು ತೀವ್ರತರ ‘ಪರಿಶ್ರಮ’ ಪಟ್ಟಿದ್ದೂ ಹೌದು! ಬಹುಶಃ ಅದೇ ಕಾರಣಕ್ಕೆ ತಮ್ಮ ಹೆಸರು ಹಾಕುವಾಗಲೆಲ್ಲ, ಹೆಸರಿನ ಹಿಂದೆ ಗೌರವ ಪದವಿಗಳನ್ನು ಸೂಚಿಸಿಕೊಳ್ಳುತ್ತಿದ್ದಿರಬಹುದು! ಯಾರಿಗಾದರೂ ತಮ್ಮನ್ನು ತಾವೇ ಪರಿಚಿಯಿಸಿಕೊಳ್ಳುವಾಗಲೂ ‘ನಾನು ನಾಡೋಜ ಡಾ?.?’ ಎಂದೇ ಅವರು ಪರಿಚಯಿಸಿಕೊಳ್ಳುವ ರೂಢಿ ಬೆಳೆಸಿಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ ಏನು ಹೇಳಿದೆ?
ನಾಡೋಜ, ಪದ್ಮಶ್ರೀ, ಗೌರವ ಡಾಕ್ಟರೇಟ್, ರಾಜ್ಯೋತ್ಸವ ಇತ್ಯಾದಿ ಯಾವುದೇ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ನೀಡಿದ ಬಿರುದುಗಳನ್ನು ಹೆಸರಿನ ಹಿಂದೆ ಅಥವಾ ಮುಂದೆ ಹಾಕಿಕೊಳ್ಳುವುದು ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪೆ ಇದೆ ಎಂದು ನ್ಯಾ.ಮೂ.ಸಂತೋಷ್ ಹೆಗ್ಡೆಯವರೇ ಸಭೆಯೊಂದರಲ್ಲಿ ಒಮ್ಮೆ ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಆದರೆ ಆತ್ಮರತಿಯ ಪರಾಕಾಷ್ಠೆಯ ಮತ್ತೇರಿಸಿಕೊಂಡವರಿಗೆ ಇದೆಲ್ಲ ಎಲ್ಲಿ ಅರ್ಥ ಆಗಬೇಕು?
ಪರಿಚಯ ಮತ್ತು ಬಿರುದುಬಾವಲಿ
ಪುರಂದರೋತ್ಸವ ಸಂದರ್ಭದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆ ದಿನದ ಕಲಾವಿದರನ್ನು ಪರಿಚಯಿಸುವ ಹೊಣೆ ನನ್ನದಾಗಿತ್ತು. ಪಾಲ್ಗೊಂಡವರೆಲ್ಲರೂ ಪ್ರಸಿದ್ಧ ಕಲಾವಿದರೇ. ಹಾಗೂ ಅವರೆಲ್ಲರ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ, ಅವರಿಗೆ ಸಂದ ಬಿರುದು ಬಾವಲಿಗಳ ಸಹಿತ ಸಾಧ್ಯವಾದಷ್ಟೂ ವಿವರವಾಗಿ ಪರಿಚಯ ಮಾಡಿಕೊಟ್ಟೆ. ಕಲಾವಿದರ ಪರಿಚಯವನ್ನು ಸೊಗಸಾಗಿ ಮಾಡಿಕೊಟ್ಟಿದ್ದಕ್ಕೆ ಶ್ರೋತೃಗಳ ಮೆಚ್ಚುಗೆಯ ಕರತಾಡನವೇ ಸಾಕ್ಷಿಯಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಬಳಿಕ, ಸಂಗೀತ ಕಛೇರಿಯಲ್ಲಿ ಪಾಲ್ಗೊಂಡ ಖ್ಯಾತ ಮೃದಂಗ ವಾದಕರು ನನ್ನ ಬಳಿ ಬಂದು ’ನೀವು ನನಗೆ ಇತ್ತೀಚೆಗೆ ಟಿವಿ ವಾಹಿನಿಯಲ್ಲಿ ನೀಡಿದ ಪ್ರಶಸ್ತಿಯನ್ನು ಉಲ್ಲೇಖಸಲೇ ಇಲ್ಲ’ ಎಂದು ಅಸಮಾಧಾನದಿಂದಲೇ ಹೇಳಿದರು. ಅವರಿಗೆ ಪ್ರಾಪ್ತವಾದ ಪ್ರಮುಖ ಪ್ರಶಸ್ತಿ, ಬಿರುದುಗಳನ್ನೆಲ್ಲ ಒಂದೂ ಬಿಡದೇ ಪರಿಚಯದಲ್ಲಿ ಉಲ್ಲೇಖಿಸಿದ್ದೆ. ಟಿವಿ ವಾಹಿನಿ ನೀಡಿದ ಪ್ರಶಸ್ತಿ ನನಗೆ ತಿಳಿದಿರಲಿಲ್ಲ. ನನಗೇನು, ಯಾರಿಗೂ ತಿಳಿದಿರಲಿಲ್ಲ. ಆ ಪ್ರಶಸ್ತಿಯ ಕುರಿತು ಉಲ್ಲೇಖಿಸದೇ ಇದ್ದುದರಿಂದ ಕಲಾವಿದರ ಕಿಮ್ಮತ್ತು ಕಡಿಮೆಯಾಯಿತೆಂದು ಯಾರೂ ಭಾವಿಸಿರಲಿಲ್ಲ. ಆದರೆ ಅವರ ದೃಷ್ಟಿಯಲ್ಲಿ ಅದೊಂದು ಲೋಪವೇ ಆಗಿತ್ತು.
ಹೊಸ ಬಯೋಡೇಟಾ
ಖ್ಯಾತ ಇತಿಹಾಸ ಸಂಶೋಧನಾ ಸಂಸ್ಥೆ ’ದಿ ಮಿಥಿಕ್ ಸೊಸೈಟಿ’ ಆಶ್ರಯದಲ್ಲಿ ವಿಖ್ಯಾತ ಹೃದಯರೋಗ ತಜ್ಞೆಯೊಬ್ಬರ ಆರೋಗ್ಯ ಕುರಿತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾಮೂಲಿಯಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರೊಬ್ಬರು ಅವರ ಪರಿಚಯ ಮಾಡುತ್ತಿದ್ದಂತೆಯೇ, ಆ ತಜ್ಞೆ ಮಧ್ಯದಲ್ಲೇ ತಡೆದು ’ನೀವು ಮಾಡ್ತಿರೋದು ನನ್ನ ಹಳೇ ಬಯೋಡೇಟಾದ ಪರಿಚಯ. ನಾನು ಇತ್ತೀಚೆಗೆ ಪ್ರಕಟಿಸಿದ ಪ್ರಬಂಧ, ಸಂದ ಬಿರುದುಗಳ ಬಗೆಗೆ ಉಲ್ಲೇಖಿಸಲೇ ಇಲ್ಲ’ ಎಂದು ಖ್ಯಾತೆ ತೆಗೆದು, ತಾವೇ ತಮ್ಮ ದೀರ್ಘ ಪರಿಚಯ ಮಾಡಿಕೊಟ್ಟರು. ಎಲ್ಲರೂ ಚಿರಪರಿಚಿತ ವ್ಯಕ್ತಿ ಆಕೆ. ಪರಿಚಯದ ಅಗತ್ಯವೇ ಇರಲಿಲ್ಲ. ಔಪಚಾರಿಕತೆಗೆ ಕುಂದುಂಟಾಗಬಾರದೆಂದು ಪರಿಚಯ ಮಾಡಲಾಗಿದ್ದರೂ ಆ ಹೃದಯತಜ್ಞೆ ಹೃದಯವಂತಿಕೆ ಮೆರೆಯಲೇ ಇಲ್ಲ!
1977ರಲ್ಲಿ ತುರ್ತು ಪರಿಸ್ಥಿತಿ ಮುಗಿದ ಬಳಿಕ ಬೆಂಗಳೂರಿನಲ್ಲಿ ಸಮಾನಮನಸ್ಕರ ಒಂದು ಸಭೆ ನಡೆದಿತ್ತು. ಮುಖ್ಯ ಅತಿಥಿ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆಯವರು. ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರು ಅವರನ್ನು ಪರಿಚಯಿಸಿದ್ದು ಹೀಗೆ: ’ಇಂದಿನ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವವರು ರಾಮಕೃಷ್ಣ ಹೆಗಡೆಯವರು. ಎಲ್ಲರಿಗೂ ಗೊತ್ತಿರುವವರು. ಅವರ ಪರಿಚಯ ಅನಗತ್ಯ.’ ತಮ್ಮ ಪರಿಚಯವನ್ನು ಈ ಪರಿಯಾಗಿ ಮಾಡಿಕೊಟ್ಟಿದ್ದಕ್ಕೆ ರಾಮಕೃಷ್ಣ ಹೆಗಡೆಯವರು ಒಂದಿನಿತೂ ಬೇಸರಿಸಿಕೊಳ್ಳದೆ, ಹಸನ್ಮುಖರಾಗಿಯೇ ಸಾಕಷ್ಟು ಹೊತ್ತು ಸೊಗಸಾಗಿ ಮಾತನಾಡಿದ್ದರು.
ಕರ್ನಾಟಕದ ಹಿರಿಯ ಪತ್ರಕರ್ತ, ಸಾಹಿತಿ, ಚಿಂತಕ ಎಸ್.ಆರ್. ರಾಮಸ್ವಾಮಿಯವರಿಗೆ ನಾಡೋಜ, ಗೌರವ ಡಾಕ್ಟರೇಟ್ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಬಂದಿವೆ. ಆದರೆ ಅವರೆಂದೂ ತಮ್ಮ ಹೆಸರಿನ ಮುಂದೆ ಅಥವಾ ಹಿಂದೆ ಆ ಪ್ರಶಸ್ತಿಗಳನ್ನು ಅಂಟಿಸಿಕೊಂಡವರಲ್ಲ. ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಕಾರ್ಯಕ್ರಮದ ಆಮಂತ್ರಣದಲ್ಲಿ ಯಾರಾದರೂ ಆ ಪದವಿಗಳನ್ನು ಸೇರಿಸಿದರೆ ಅವರು ತರಾಟೆಗೆ ತೆಗೆದುಕೊಳ್ಳದೆ ಬಿಡುತ್ತಿರಲಿಲ್ಲ. ಸಂಘಪರಿವಾರದ ಬೈಠಕ್ ಗಳಲ್ಲಿ ಅಥವಾ ಸಭೆಗಳಲ್ಲಿ ಅವರು ’ರಾಮಸ್ವಾಮಿ’ ಎಂದಷ್ಟೇ ತಮ್ಮನ್ನು ಸಾಮಾನ್ಯರಂತೆ ಪರಿಚಯಿಸಿಕೊಳ್ಳುತ್ತಿದುದನ್ನು ನಾನೇ ಹಲವು ಬಾರಿ ಗಮನಿಸಿರುವೆ. ಆ ಮಟ್ಟದ ಪ್ರಶಸ್ತಿ ಪರಾಙ್ಮುಖತೆ ಅವರದು.
ಕುವೆಂಪು, ಬೇಂದ್ರೆ, ಕಾರಂತ, ಭೈರಪ್ಪ ಮುಂತಾದ ಕನ್ನಡದ ದಿಗ್ಗಜ ಸಾಹಿತಿಗಳು ತಮ್ಮ ಕೃತಿಗಳಲ್ಲಿ ತಮ್ಮ ಹೆಸರಿನ ಹಿಂದೆ ಅಥವಾ ಮುಂದೆ ತಮಗೆ ದೊರೆತ ಪ್ರಶಸ್ತಿ, ಬಿರುದುಗಳನ್ನು ಎಂದೂ ಅಂಟಿಸಿಕೊಂಡಿರಲಿಲ್ಲ. ಅವರ ಕೃತಿಗಳೇ ಅವರ ಯೋಗ್ಯತೆಯ ಮಾನದಂಡಗಳಾಗಿದ್ದವು. ಗೌರವ ಪದವಿಗಳನ್ನು ಹೆಸರಿನ ಜೊತೆಗೆ ಅಂಟಿಸಿಕೊಳ್ಳದಿದ್ದರೆ ನಮ್ಮ ಕಿಮ್ಮತ್ತು ಕಡಿಮೆಯಾಗಬಹುದೆಂದು ಅವರಾರಿಗೂ ಅನಿಸಿರಲಿಲ್ಲ. ಏಕೆಂದರೆ ಅವರೆಲ್ಲರಿಗೂ ತಾವು ಸೃಷ್ಟಿಸಿದ ಕೃತಿಗಳೇ ತಮಗೆ ಕೀರ್ತಿ ತಂದುಕೊಡಲಿವೆ ಎಂಬ ಪರಮ ವಿಶ್ವಾಸ ಇತ್ತು. ಅವರ ಕೃತಿಗಳ ಗುಣಮಟ್ಟವೂ ಅಂತಹದೇ ಆಗಿರುತಿತ್ತು.
ಆದರೀಗ ಎಲ್ಲವೂ ಅಯೋಮಯ. ಕೃತಿಕಾರರು ತಮ್ಮನ್ನು ತಾವೇ ಹೊಗಳಿಕೊಳ್ಳಬೇಕಾದ, ತಮ್ಮ ತುತ್ತೂರಿ ತಾವೇ ಊದಿಕೊಳ್ಳಬೇಕಾದ ಅಪಶ್ರುತಿಯ ಸಾಂಕ್ರಾಮಿಕ ಸೋಂಕು, ಕೊರೋನಾ ಹರಡಿದಂತೆ ವ್ಯಾಪಕವಾಗಿ ಹರಡಿ, ಅಟ್ಟಹಾಸ ಮೆರೆಯುತ್ತಲೇ ಇದೆ. ಆತ್ಮರತಿ ವ್ಯಾಧಿಗೆ ಮದ್ದಿದೆಯೆ?
ದು.ಗು. ಲಕ್ಷ್ಮಣ
- ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ’ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ’ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.