ಬೆಂಗಳೂರು: 2020ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯಿಂದ ಕರ್ನಾಟಕದ ಅಭಿವೃದ್ಧಿಯ ಭಾಗ್ಯದ ಬಾಗಿಲು ತೆರೆಯುತ್ತದೆ! ಹೀಗೆಂದು ರಾಜ್ಯ ಸರಕಾರ ಹೇಳಿಕೊಂಡಿದೆ!
ಇದು ಸಂಪೂರ್ಣ ಸುಳ್ಳು. ರೈತರ ಭೂಮಿಯನ್ನು ಖಾಸಗಿಯವರ ಪಾಲು ಮಾಡಲು ಸರಕಾರ ನಡೆಸಿರುವ ದೊಡ್ಡ ಷಡ್ಯಂತ್ರವಿದು. ಇದು ಗಣಿ ಹಗರಣಕ್ಕಿಂತ ದೊಡ್ಡದು ಹಗರಣ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ!!
ರೈತರ ಭೂಮಿಯನ್ನು ಭೂ ಮಾಲೀಕರು ಹಾಗೂ ಕಾರ್ಪೋರೇಟ್ ಕಂಪನಿಗಳ ಪಾಲು ಮಾಡಿ ರಾಜ್ಯದ ಅರ್ಧಕ್ಕೂ ಹೆಚ್ಚು ಕೃಷಿಭೂಮಿಯನ್ನು ವ್ಯವಸ್ಥಿತವಾಗಿ ನುಂಗುವ ಹುನ್ನಾರ ಇದರಲ್ಲಿ ಅಡಗಿದೆ!!!
ಹೀಗೆಂದು ರೈತಪರ ಹೋರಾಟಗಾರರ ಆರೋಪ.
ಹೀಗೆ ಕೋವಿಡ್-19ರ ಸಮರ ಕಾಲದಲ್ಲಿಯೂ ಸರಕಾರ ’ಅತ್ಯಗತ್ಯ’ವೆಂದು ಭಾವಿಸಿ ಜಾರಿಗೆ ತರುತ್ತಿರುವ 1974ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಬಗ್ಗೆ ಮೂರು ಮತ್ತೂ ಹೆಚ್ಚಿನ ದಿಕ್ಕುಗಳಿಂದ ಕೇಳಿಬರುತ್ತಿರುವ ಮಾತುಗಳಿವು. ಈಗ ಕಾಯ್ದೆ ತಿದ್ದುಪಡಿಗೆ ತಂದಿರುವ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲ್ಲ ಎಂದು ಸರಕಾರ ಹೇಳುತ್ತಿದ್ದರೆ, ಹಿಂಪಡೆಯಲೇಕೇಕು ಎಂದು ಪ್ರತಿಪಕ್ಷ ಒತ್ತಾಯಿಸುತ್ತಿದೆ. ಹಗ್ಗಜಗ್ಗಾಟ ಜೋರಾಗಿದೆ.
ಉಳುಮೆ ಮಾಡುತ್ತಿರುವ ರೈತ. Photo: CKPhotography
1974ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಏನು ಹೇಳುತ್ತದೆ?:
ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ಬಹುತೇಕ ಭೂಮಿ ಉಳ್ಳವರು, ಅದರಲ್ಲೂ ಜಮೀನ್ದಾರಿಕೆಯಲ್ಲಿ ಪಾರುಪತ್ಯ ಹೊಂದಿದ್ದ ಮೇಲ್ಜಾತಿವಯರ ಕೈಯ್ಯಲ್ಲಿತ್ತು. ಬಡವರು, ದೀನದಲಿತರು, ಹಿಂದುಳಿದ ವರ್ಗದ ಜನರು ಭೂ ವಂಚಿತರಾಗಿದ್ದರು. ಆಗ ಬಂದಿದ್ದೇ ಭೂ ಸುಧಾರಣಾ ಕಾಯ್ದೆ. ಅದರ ಪ್ರಕಾರ, ಕೃಷಿಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲೇಬಾರದು. ಐವರು ಸದಸ್ಯರುಳ್ಳ ಕುಟುಂಬವೂ 50 ಎಕರೆಗೂ ಹೆಚ್ಚು ಕೃಷಿಭೂಮಿಯನ್ನು ಹೊಂದುವಂತಿಲ್ಲ ಎಂಬ ಅತ್ಯಂತ ಪ್ರಮುಖ ಅಂಶ ಆ ಕಾಯ್ದೆಯಲ್ಲಿತ್ತು. ಇದರಿಂದ ಅಸಂಖ್ಯಾತ ಭೂರಹಿತರಿಗೆ ಭೂಮಿ ಸಿಕ್ಕಿತ್ತು. ಅನೇಕರ ಕಣ್ಣು ಕೆಂಪಾಯಿತು. ಆ ಕಾಲದಲ್ಲಿ ಅರಸು ತಂದ ಈ ಕಾಯ್ದೆ ದೇಶಾದ್ಯಂತ ಸಂಚಲನವನ್ನೇ ಉಂಟು ಮಾಡಿತ್ತಲ್ಲದೆ, ನೆರೆ ರಾಜ್ಯಗಳು, ಅದರಲ್ಲೂ ಪ್ರಮುಖವಾಗಿ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳದಂಥ ರಾಜ್ಯಗಳು ಕೂಡ ಭೂ ಸುಧಾರಣೆಗೆ ಕೈ ಹಾಕಿದವು. ಆದರೆ, ನಮ್ಮ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದ ಕಾಯ್ದೆ ಅತ್ಯಂತ ಪರಿಣಾಮಕಾರಿ ಆಗಿತ್ತು ಎಂದು ರೈತಪರ ಹೋರಾಟಗಾರರು ಸ್ಮರಿಸುತ್ತಾರೆ.
ದೇವರಾಜ ಅರಸು / Courtesy: Wikipedia
2020ರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹೇಳುವುದೇನು?:
ಈ ಕಾಯ್ದೆಯಲ್ಲಿನ 79ಎಬಿಸಿಡಿ ಕಲಮುಗಳಿಗೆ ಈಗಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತಿದ್ದುಪಡಿ ತಂದಿದೆ. ಆ ಮೂಲಕ ಭೂಮಿ ಹೊಂದುವ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಐವರು ಸದಸ್ಯರಿರುವ ಕುಟುಂಬವು ಮೊದಲಿದ್ದಂತೆ 50 ಎಕರೆಗೆ ಬದಲಾಗಿ ಗರಿಷ್ಠ 432 ಎಕರೆಯಷ್ಟು ದೊಡ್ಡ ಪ್ರಮಾಣದ ಕೃಷಿಭೂಮಿಯನ್ನು ಹೊಂದಬಹುದು. ಅಲ್ಲದೆ, ಐವರಿಗೂ ಕಡಿಮೆ ಇರುವ ಕುಟುಂಬದ ಸದಸ್ಯರು ಗರಿಷ್ಠ 216 ಎಕರೆವರೆಗೂ ಭೂಮಿಯನ್ನು ಹೊಂದಬಹುದು, ಖರೀದಿಸಬಹುದು. ಇದರಿಂದ ರಾಜ್ಯದ ಅಭಿವೃದ್ಧಿಯ ಬಾಗಿಲು ತೆರೆದಂತೆ ಆಗುತ್ತದೆ. ಇದರ ಜತೆಗೆ, ಕೃಷಿಭೂಮಿ ಹೊಂದಲು ಆದಾಯ ಮೀತಿ ಹೇರಿದ್ದ ಸೆಕ್ಷನ್ 79ಎ, ಕೃಷಿಕರಲ್ಲದವರಿಗೆ ಭೂಮಿ ಖರೀದಿ ನಿಷೇಧಿಸಿದ್ದ 79 ಬಿ, ಸುಳ್ಳು ಪ್ರಮಾಣಪತ್ರ ಸಲ್ಲಿಸಿದವರಿಗೆ ದಂಡ ವಿಧಿಸಿದ್ದ ಸೆಕ್ಷನ್ 79ಸಿ, ಕೃಷಿಕರಲ್ಲದವರಿಗೆ ಭೂಮಿ ವರ್ಗಾವಣೆ ನಿಷೇಧಿಸಿದ್ದ ಸೆಕ್ಷನ್ 80 ಅನ್ನು ರದ್ದುಪಡಿಸಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಪ್ರಗತಿಯಲ್ಲಿ ಜಿಡ್ಡುಗಟ್ಟಿದ್ದ ಪ್ರಗತಿಗೆ ವೇಗ ಈಗ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಸರಕಾರ ಹಾಗೂ ಆಡಳಿತಾರೂಢ ಪಕ್ಷ ಬಿಜೆಪಿ ವಾದಿಸುತ್ತಿದೆ.
216 ಅಥವಾ 432 ಎಕರೆಯಷ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿಸಲು ಯಾರಿಗೆ ಸಾಧ್ಯ? ಬೆಳೆಯನ್ನು ಭಿತ್ತಿ ಮಳೆಗಾಗಿ ಆಕಾಶವನ್ನೇ ನೋಡುತ್ತ ನಿಲ್ಲುವ ಬಡರೈತನಿಂದ ಇದು ಸಾದ್ಯವೇ? ಹೋಗಲಿ, ವರ್ಷಕ್ಕೆ ಕಡಿಮೆ ಎಂದರೂ 5 ಲಕ್ಷ ರೂಪಾಯಿ ಸಂಪಾದನೆ ಮಾಡುವ ಸ್ಥಿತಿವಂತ ಕೃಷಿಕನಿಂದಲೂ ಇದು ಸಾಧ್ಯವೇ? ಒಂದು ವೇಳೆ ಇಂತಹ ಸಣ್ಣ, ಮಧ್ಯಮ ಅಥವಾ ದೊಡ್ಡ ಪ್ರಮಾಣದ ರೈತರು ಖರೀದಿ ಮಾಡಿದರೂ ಅಬ್ಬಾ ಎಂದರೂ 20 ಎಕರೆವರೆಗೂ ಕೊಳ್ಳುವುದು ಕಷ್ಟ. ಹಾಗಾದರೆ, ಕುಟುಂಬದ ಭೂ ಪರಿಮಿತಿ ಹಕ್ಕನ್ನು ಈ ಪಾಟಿ ಭಾರೀ ಪ್ರಮಾಣಕ್ಕೆ ಹೆಚ್ಚಿಸಿದರ ಉದ್ದೇಶವೇನು? ಇಷ್ಟು ಭೂಮಿಯನ್ನು ಖರೀದಿಸುವುದು ಯಾರಿಂದ ಸಾಧ್ಯ?
ಆತಂಕ ಯಾಕೆ?:
ಈ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಅವರ ಮಾತುಗಳು ಹೀಗಿವೆ…
“ಹೊಸದಾಗಿ ತರುತ್ತಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಲ್ಲಿ ದೊಡ್ಡ ಹಿಡೆನ್ ಅಜೆಂಡಾ, ಷಡ್ಯಂತ್ರ ಅಡಗಿದೆ. ಸೆಕ್ಷನ್ 79ಎ ಮತ್ತು 79ಬಿ ಗೆ ಸಂಬಂಧಿಸಿದ ಪ್ರಕರಣಗಳು ಹಲವಾರು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಭೂ ಸುಧಾರಣಾ ಕಾಯಿದೆ ತಿದ್ದುಪಡಿಯಿಂದ ಬೆಂಗಳೂರಿನ ಗೃಹ ನಿರ್ಮಾಣ ಸಹಕಾರ ಸಂಘಗಳ ಮೇಲಿರುವ ಎಲ್ಲ ಬಾಕಿ ಪ್ರಕರಣಗಳು ರದ್ದಾಗಲಿವೆ. ಈ ಪ್ರಕರಣಗಳು ಒಳಗೊಂಡಿರುವ ಜಮೀನಿನ ಬೆಲೆ ಅಂದಾಜು ರೂ. 15ರಿಂದ 20 ಸಾವಿರ ಕೋಟಿಗಳಷ್ಟಾಗಬಹುದು. ಹೀಗೆ 13 ಸಾವಿರಕ್ಕೂ ಹೆಚ್ಚು ಭೂ ವ್ಯಾಜ್ಯಗಳಿಗೆ ತಿಲಾಂಜಲಿ ಹಾಡುವ ಆತುರದಿಂದ ಸರಕಾರ ತಿದ್ದುಪಡಿ ಕಾಯ್ದೆ ತಂದಿದೆ. ಸುಮಾರು 45 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭೂ ಸಂಬಂಧಿತ ವಿವಾದಗಳಿವು. ಇದು ಬಳ್ಳಾರಿಯಲ್ಲಿ ನಡೆದ ಗಣಿ ಹಗರಣಕ್ಕಿಂತ ದೊಡ್ಡ ಹಗರಣ” ಎಂದು ಹೇಳುತ್ತಾರೆ ಅವರು.
ಮುಂದುವರೆದು ಅವರು ಹೇಳುತ್ತಾರೆ, “ಬೆಂಗಳೂರು ಸುತ್ತಮುತ್ತ ದಳ್ಳಾಳಿಗಳ ಮೂಲಕ ಹಲವಾರು ಗೃಹ ನಿರ್ಮಾಣ ಸಹಕಾರ ಸಂಘಗಳು ಅಪಾರ ಪ್ರಮಾಣದ ಭೂಮಿಯನ್ನು ಖರೀದಿ ಮಾಡಿವೆ. ಈ ಒಟ್ಟಾರೆ ಭೂಮಿಯ ಬೆಲೆ 10 ಸಾವಿರ ಕೋಟಿ ರೂಪಾಯಿಗೂ ಹೆಚ್ಚು. ಸರಕಾರವೇ ನಡೆಸಿರುವ ಲೆಕ್ಕ ಪರಿಶೋಧನೆಯಲ್ಲಿ ಈ ಅಂಶ ಬಯಲಾಗಿದೆ. ಹೀಗಾಗಿ ಇದು ದೊಡ್ಡ ಹಗರಣ, ತನಿಖೆ ನಡೆಯಬೇಕು. ಇನ್ನು ಭೂ ಸುಧಾರಣಾ ಕಾಯ್ದೆಯು ಅಧಿಕಾರಿಗಳ ಮಟ್ಟದಲ್ಲಿ ಭಾರೀ ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು ಎಂದು ಸರಕಾರ ಹೇಳುವುದರಲ್ಲಿ ಯಾವ ಹುರುಳೂ ಇಲ್ಲ. ಬಂಡವಾಳ ಹೂಡಿಕೆಗೆ ಅಡ್ಡಿಯಾಗಿತ್ತು ಎಂಬ ಆರೋಪದಲ್ಲೂ ಸತ್ಯಾಂಶವಿಲ್ಲ. ಕೇವಲ ಬಂಡವಾಳ ಹೂಡಿಕೆ, ಕೈಗಾರಿಕಭಿವೃದ್ಧಿ ಹಾಗೂ ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ಸರಕಾರ ಹೇಳುತ್ತಿದೆ. ಇದು ಸಂಪೂರ್ಣ ಸುಳ್ಳು. ಹಾಗಾದರೆ ನಮ್ಮ ಸರಕಾರ ಇದ್ದಾಗ ಕೈಗಾರಿಕೆಗಳು ಬರಲಿಲ್ಲವೇ? ಬಂಡವಾಳ ಹರಿದು ಬರಲಿಲ್ಲವೇ? ಅಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಗೆ ಬರಲಿಲ್ಲವೇ? ಕೋವಿಡ್-19ದಂತಹ ಸಂಕಷ್ಟದ ಸಮಯದಲ್ಲಿ ಜನರು ನೋವಿನಲ್ಲಿದ್ದರೆ, ಸರಕಾರ ತರಾತುರಿಯಲ್ಲಿ ತಿದ್ದುಪಡಿ ತಂದ ಉದ್ದೇಶವಾದರೂ ಏನು?” ಎಂದು ಆರೋಪಿಸಿದ್ದಾರೆ ಅವರು.
“ಒಂದು ಕುಟುಂಬ 432 ಎಕರೆ ಖರೀದಿ ಮಾಡುತ್ತದೆ ಎಂದರೇನು? ರೈತರಿಗೆ ಇಷ್ಟು ಭೂಮಿ ಕೊಳ್ಳಲು ಸಾಧ್ಯವೇ? ಬಂಡವಾಳಶಾಹಿಗಳು, ಕಾರ್ಪೋರೇಟ್ ಕಂಪನಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಮಾತ್ರ ಇದರಿಂದ ಅನುಕೂಲವಾಗುತ್ತದೆ. ಇಷ್ಟು ಭೂಮಿಯಲ್ಲಿ ಅವರೇನು ಮಾಡುತ್ತಾರೆ? ಕೃಷಿ ಮಾಡುತ್ತಾರೆಯೇ? ಬೆಳೆ ಬೆಳೆಯುತ್ತಾರೆಯೇ? ರೈತರ ಭೂಮಿ ಕಿತ್ತು ಭೂಗಳ್ಳರಿಗೆ ಕೊಡುವುದು ಯಾವ ರೀತಿಯ ಪ್ರಗತಿ?” ಎಂದು ಸಿದ್ದು ಪ್ರಶ್ನಿಸುತ್ತಾರೆ.
ಜಿ.ವಿ. ಶ್ರೀರಾಮ ರೆಡ್ಡಿ
ಪ್ರಗತಿ ಆಗುತ್ತದೆ ಎಂಬುದು ಸುಳ್ಳು, ರೈತರ ಭೂಮಿ ಹೋಗೋದು ನಿಜ:
ರೈತಪರ ಹೋರಾಟಗಾರ, ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ. ಶ್ರೀರಾಮ ರೆಡ್ಡಿ ಈ ತಿದ್ದುಪಡಿ ಕಾಯ್ದೆ ಬಗ್ಗೆ ಇಲ್ಲಿ ವಿವರವಾಗಿ ಮಾತನಾಡಿದ್ದಾರೆ. ಜತೆಗೆ 1994ರಿಂದಲೇ ಈ ಕಾಯ್ದೆಯನ್ನು ತೆಳುಗೊಳಿಸಲು ನಡೆದ ಪ್ರಯತ್ನಗಳನ್ನು ವಿವರಿಸಿದ್ದಾರೆ.
“ಬಿಜಪಿ ಸರಕಾರ ತಂದಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣಶಾಸನ. ರಿಯಲ್ ಎಸ್ಟೇಟ್ ಕುಳಗಳಿಗೆ ಬಂಪರ್. ರಾಮರಾಜ್ಯ ಪರಿಕಲ್ಪನೆ ಎಂದರೆ ಇದಾ? ದೇವರಾಜ ಅರಸು ಸರಕಾರ ಬಡವರ ಪರವಾಗಿ ತಂದ ಈ ಕಾಯ್ದೆಯನ್ನು ಈ ಸರಕಾರ ಭೂ ಸಮಾಧಿ ಮಾಡಿದೆ. 1994ರಲ್ಲಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಅರಸು ಜಾರಿಗೊಳಿಸಿದ್ದ ಕಾಯ್ದೆಗೆ ಮೊಳೆ ಹೊಡೆಯುವ ಕೆಲಸ ಆರಂಭವಾಯಿತು. ಆಗ 2 ಲಕ್ಷ ರೂಪಾಯಿ ಆದಾಯ ಹೊಂದಿರುವ ವ್ಯಕ್ತಿಯೂ ಕೃಷಿಭೂಮಿ ಖರೀದಿಸಬಹುದು ಎಂದು ತಿದ್ದುಪಡಿ ತರಲಾಯಿತು. ಆಗ ಸದನದಲ್ಲಿ ಈ ಕಾಯ್ದೆಯನ್ನು ವಿರೋಧಿಸಿದ ಏಕೈಕ ಶಾಸಕ ನಾನು. ಆವತ್ತು ಸದನದಲ್ಲಿ ಮಾತನಾಡುತ್ತಾ ಸರಕಾರವನ್ನು ಎಚ್ಚರಿಸಿದ್ದೆ. ನೀವು ತರಲು ಹೊರಟಿರುವ ತಿದ್ದುಪಡಿಯಿಂದ ರೈತರ ಭೂಮಿ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಕಾರ್ಪೋರೇಟ್ ಕಂಪನಿಗಳ ಪಾಲಾಗಲಿದೆ ಎಂದು ಸದನದಲ್ಲೇ ಹೇಳಿದ್ದೆ. ಅದಾದ ಎರಡೇ ವರ್ಷದಲ್ಲಿ ದೇವನಹಳ್ಳಿ ಸುತ್ತಮುತ್ತ ಇದ್ದ ಲಕ್ಷಾಂತರ ಎಕರೆಯಷ್ಟು ಭೂಮಿ ಖಾಸಗಿಯವರ ಪಾಲಾಯಿತು” ಎಂದು ಅವರು ವಿವರ ನೀಡಿದ್ದಾರೆ.
ಆರ್. ಆಂಜನೇಯ ರೆಡ್ಡಿ
“ಒಂದು ಕಾಲದಲ್ಲಿ ಕೃಷಿ ಚಟುವಟೆಕೆಗಳಿಂದ ಸಮೃದ್ಧವಾಗಿದ್ದ ದೇವನಹಳ್ಳಿ ತಾಲ್ಲೂಕಿನ ಜನ ಇವತ್ತು ತಮ್ಮದೇ ಜಮೀನುಗಳಲ್ಲಿ ತಲೆಎತ್ತಿರುವ ಬಿಲ್ಡಿಂಗುಗಳಲ್ಲಿ, ಫಾರ್ಮಹೌಸುಗಳಲ್ಲಿ ಕೂಲಿಗೆ ಹೋಗುತ್ತಿದ್ದಾರೆ. ಚಕೋತಾ, ಹೂವು, ಹಣ್ಣುಗಳನ್ನು ಅಪಾರವಾಗಿ ಬೆಳೆಯುತ್ತಿದ್ದ ಜಾಗದಲ್ಲಿ ರೈತರು ಈಗ ಅನಾಥರಂತೆ ಬದುಕುತ್ತಿದ್ದಾರೆ. ಆ ಭಾಗದಲ್ಲಿ ಸಿನಿಮಾ ನಟರು, ಕೈಗಾರಿಕೋದ್ಯಮಿಗಳು, ಹಣವಂತರು ವಿಲಾಸಿ ಹೋಟೆಲ್’ಗಳು, ರೆಸಾರ್ಟುಗಳನ್ನು, ಫಾರ್ಮಹೌಸುಗಳನ್ನು ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರ ಇರುವುದರಿಂದ ಇಲ್ಲಿನ ದೇಶ-ವಿದೇಶಗಳ ಕುಳಗಳೆಲ್ಲ ಭೂಮಿ ಖರೀದಿಸಿದ್ದಾರೆ” ಎಂದು ಪ್ರಗತಿಪರ ರೈತ ಹಾಗೂ ಶಾಶ್ವತ ನೀರಾವರಿ ಹೋರಾಟಗಾರ ಆರ್. ಆಂಜನೇಯ ರೆಡ್ಡಿ ಹೇಳುತ್ತಾರೆ.
ಇನ್ನು ಮುಂದುವರಿದು ಶ್ರೀರಾಮ ರೆಡ್ಡಿ ಹೇಳುತ್ತಾರೆ..,
“ಸಿದ್ದರಾಮಯ್ಯ ಸರಕಾರವೂ 1974ರ ಕಾಯ್ದೆಗೆ ಮತ್ತಷ್ಟು ಪೆಟ್ಟು ನೀಡಿತು. ರೈತರು ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಕಳೆದುಕೊಳ್ಳುವುದೂ ಮತ್ತೂ ಮುಂದುವರಿಯಿತು. ಸದ್ಯಕ್ಕೆ ಭಾರತವು 130 ಕೋಟಿಯಷ್ಟು ಜನಸಂಖ್ಯೆ ಹೊಂದಿದೆ. ಎರಡು ಹೊತ್ತಿನ ಊಟವನ್ನು ಲೆಕ್ಕ ಇಟ್ಟುಕೊಂಡರೆ ವಾರ್ಷಿಕ ನಮ್ಮ ದೇಶಕ್ಕೆ 440 ದಶಲಕ್ಷ ಟನ್’ಗೂ ಅಧಿಕ ಪ್ರಮಾಣದ ಆಹಾರ ಪದಾರ್ಥ ಅಗತ್ಯವಿದೆ. ಆದರೆ ನಮ್ಮಲ್ಲಿ ಸದ್ಯಕ್ಕೆ 290 ದಶಲಕ್ಷ ಟನ್’ನಷ್ಟೇ ಆಹಾರ ಪದಾರ್ಥ ಉತ್ಪಾದನೆ ಆಗುತ್ತಿದೆ. ಅಂದರೆ 150 ದಶಲಕ್ಷ ಟನ್’ನಷ್ಟು ಉತ್ಪಾದನೆ ಕಡಿಮೆ ಇದೆ. ಇದೇನು ಸಣ್ಣ ಪ್ರಮಾಣವಲ್ಲ. ನಮ್ಮಲ್ಲಿ ಕೃಷಿಯನ್ನು ಬಲಿಗೊಟ್ಟು ದಕ್ಷಿಣ ಕೊರಿಯ, ವಿಯೆಟ್ನಾಂ ಮುಂತಾದ ದೇಶಗಳಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನು ಆಫ್ರಿಕಾದ ಕೆಲ ದೇಶಗಳಿಂದ ತೊಗರಿ ಬೇಳೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೂ ಆಹಾರದ ಕೊರತೆ ಪ್ರಮಾಣವನ್ನು ಸರಿದೂಗಿಸಲು ಸರಕಾರಗಳಿಗೆ ಸಾಧ್ಯವಾಗಿಲ್ಲ. ಇದಕ್ಕಿಂತಲೂ ದುರಂತದ ಸಂಗತಿ ಏನಿದೆ?” ಎಂದು ಅವರು ಪ್ರಶ್ನಿಸುತ್ತಾರೆ.
ಈಗಾಗಲೇ ಕೃಷಿ ನಿರ್ನಾಮವಾಗಿದೆ:
ಶ್ರೀರಾಮ ರೆಡ್ಡಿ ಹೇಳುತ್ತಾರೆ…
“ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳ ದುಷ್ಪರಿಣಾಮ ಯಾವ ರೀತಿಯಲ್ಲಿದೆ ಎಂಬುದನ್ನು ನಾವು ರಾಷ್ಟ್ರೀಯ ಹೆದ್ದಾರಿ 7 ಮತ್ತು 4ರಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ ಎಂಬ ಕಾರಣಕ್ಕೆ ಬೆಂಗಳೂರಿನಿಂದ ಆಂಧ್ರ ಪ್ರದೇಶದ ಅನಂತಪುರದವರೆಗೆ NH 7ರಲ್ಲಿ ಹೋದರೆ ಕೃಷಿಭೂಮಿ ಕಾಣುವುದೇ ಇಲ್ಲ. ಉದ್ದಕ್ಕೂ ಕಟ್ಟಡಗಳು, ಉಳ್ಳವರ ಫಾರ್ಮಹೌಸುಗಳು, ಭೂ ಮಾಲೀಕರು ಕಾಂಪೋಂಡುಗಳು ಹಾಕಿಕೊಂಡಿರುವ ಎಸ್ಟೇಟುಗಳೇ ಕಾಣುತ್ತವೆ. ರಿಯಲ್ ಎಸ್ಟೇಟು ಕುಳಗಳ ಕಣ್ಣು ಹೆದ್ದಾರಿಗಳ ಪಕ್ಕದ ಭೂಮಿಗಳ ಮೇಲೆಯೇ ಬೀಳುತ್ತಿದೆ. ವಿಮಾನ ನಿಲ್ದಾಣ ಬರುವುದಕ್ಕೆ ಮೊದಲು ಈ ಹೆದ್ದಾರಿಯುದ್ದಕ್ಕೂ ಕೃಷಿ ಬೆಳೆಗಳೇ ಕಾಣುತ್ತಿದ್ದವು. ಹೀಗೆ ನೋಡಿದರೆ ಸ್ವಾತಂತ್ರ್ಯಪೂರ್ವದಲ್ಲಿದ್ದ ಜಮೀನ್ದಾರಿಕೆ ಪದ್ದತಿ ಹೊಸರೂಪದಲ್ಲಿ ಬರುತ್ತಿದೆ ಎನಿಸುತ್ತಿದೆ. ಇದು ನಿಜ ಕೂಡ” ಎನ್ನುತ್ತಾರೆ ಅವರು.
ರೆಡ್ಡಿ ಅವರ ಮಾತು ಅಕ್ಷರಶಃ ಸತ್ಯ ಎನ್ನುತ್ತಾರೆ ಆರ್. ಆಂಜನೇಯ ರೆಡ್ಡಿ. “1996ರಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೋಗುವುದೇ ಚೆಂದವಿತ್ತು. ಉದ್ದಕ್ಕೂ ಹೆದ್ದಾರಿ ಪಕ್ಕದಲ್ಲಿ ಭತ್ತದ ಗದ್ದೆಗಳು, ಕೊಕ್ಕರೆಯಂಥ ಪಕ್ಷಿಗಳ ದಂಡು, ದ್ರಾಕ್ಷಿ ಮತ್ತು ಗುಲಾಬಿ ತೋಟಗಳು ಮನಸೆಳೆಯುತ್ತಿದ್ದವು. ವೆಂಕಟಗಿರಿ ಕೋಟೆಯ ಕೆರೆ ಸದಾ ನೀರಿನಿಂದ ತುಂಬಿರುತ್ತಿತ್ತು. ಅದರ ಕೆಳಗಿನ ಭೂಮಿಗಳಲ್ಲಿ ಯಾವಾಗಲೂ ಭತ್ತವನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿತ್ತು. ಇನ್ನು ದೇವನಹಳ್ಳಿ ಬಸ್ ನಿಲ್ದಾಣದಲ್ಲಿ ಚಕೋತಾ ಹಣ್ಣುಗಳ ರಾಶಿರಾಶಿಯೇ ಕಾಣುತ್ತಿತ್ತು. ಆ ವೈಭವ ಈಗೆಲ್ಲಿದೆ. ಅಲ್ಲೊಂದು ಇಲ್ಲೊಂದು ತೋಟಗಳಿವೆ. ಇನ್ನು ಮುಂದೆ ಅವು ಕೂಡ ಮಾಯವಾಗಲಿವೆ. ಈ ಕಾಯ್ದೆ ಹೇಗಿದೆ ಎಂದರೆ, ಸರಕಾರವೇ ರೈತರ ಬೇಟೆಗೆ ಸುಪಾರಿ ಕೊಟ್ಟ ಹಾಗಿದೆ. ಮುಖ್ಯವಾಗಿ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರನ್ನು ಟಾರ್ಗೆಟ್ ಮಾಡುವ ಉದ್ದೇಶ ಇದರ ಹಿಂದೆ ಅಡಗಿದೆ” ಎನ್ನುತ್ತಾರೆ.
ಇಡೀ ಬಯಲುಸೀಮೆ ಮೇಲೆ ಕಣ್ಣು:
“ಇಷ್ಟು ಮಾತ್ರವಲ್ಲ, ಈ ಕಾಯ್ದೆ ಮೂಲಕ ರೈತರಿಂದ ವ್ಯವಸ್ಥಿತವಾಗಿ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ಅಡಗಿದೆ. ಹೆಚ್ಚಿನ ಹಣದ ಆಮಿಷವೊಡ್ಡಿ ಅವರ ಜೀವನಾಡಿಯಾದ ಭೂಮಿಯನ್ನು ಕಬಳಿಸಲು ರತ್ನಗಂಬಳಿ ಹಾಸುವುದೇ ಈ ಕಾಯ್ದೆಯ ದುರುದ್ದೇಶ. ಕೆಲ ದಿನಗಳ ಹಿಂದೆ ಮಂತ್ರಿಯೊಬ್ಬರು ಹೇಳಿದ್ದರು, ನೀರಾವರಿ ಪ್ರದೇಶಗಳಿಗೆ ಈ ಕಾಯ್ದೆಯಿಂದ ವಿನಾಯಿತಿ ಇದೆ ಎಂದು. ಅಂದರೆ ಏನರ್ಥ? ಶಾಶ್ವತ ನೀರಾವರಿ ಸೌಲಭ್ಯವೇ ಇಲ್ಲದ ಬಯಲುಸೀಮೆಯ 14 ಜಿಲ್ಲೆಗಳ ಮೇಲೆ ಇವರ ಕಣ್ಣು ಬಿದ್ದಿದೆ ಎಂದಾಯಿತು. ಅಂದರೆ, ಅರ್ಧರಾಜ್ಯವನ್ನೇ ಕಬಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ ಎಂಬುದು ಸ್ಪಷ್ಟ. ಹೀಗೆ ಲಕ್ಷಾಂತರ ಎಕರೆ ಭೂಮಿ ರೈತರ ಕೈತಪ್ಪಿ ಖಾಸಗಿ ಭೂ ಮಾಲೀಕರ ಪಾಲಾಗಲಿದೆ. ಇದಕ್ಕೆ ಸರಕಾರವೇ ಮುಂದಾಳತ್ವ ವಹಿಸಿದೆ” ಎಂಬುದು ಅವರ ವಾದ.
“ಭೂಮಿ ಎನ್ನುವುದು ಸಮಸ್ತ ಮನುಕುಲದ ಹಕ್ಕು. ನೀರು, ಗಾಳಿ, ಭೂಮಿ, ಆಕಾಶ ಎಲ್ಲವೂ ಪ್ರಕೃತಿದತ್ತ ಸಂಪತ್ತು. ಇದರ ಮೇಲೆ ಯಾರೂ ಹಕ್ಕು ಸಾಧಿಸುವಂತಾಗಬಾರದು. ಇಡೀ ಮಾನವ ಸಮಾಜಕ್ಕೇ ಭೂಮಿಯೇ ಅಡಿಪಾಯ. ಕೃಷಿ ಇಲ್ಲದೆ ಕೈಗಾರಿಕೆ ಇಲ್ಲ, ಕೈಗಾರಿಕೆ ಇಲ್ಲದೆ ಕೃಷಿ ಇಲ್ಲ. ಇದನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡು ಸರಕಾರಗಳು ಕಾಯ್ದೆಗಳನ್ನು ರೂಪಿಸಬೇಕು. ಈಗಾಗಲೇ ರಾಜ್ಯದಲ್ಲಿ ಆಹಾರ ಧಾನ್ಯಗಳ ತೀವ್ರ ಕೊರತೆ ಇದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶ್ರೀರಾಮ ರೆಡ್ಡಿ.
ಸೋಮಾಲಿಯಾ ಸಾಕ್ಷಿ:
“ಈ ಕಾಯ್ದೆಯನ್ನು ರೂಪಿಸುವ ಮುನ್ನ ಸರಕಾರ ಸೋಮಾಲಿಯಾ ದೇಶದ ಬಗ್ಗೆ ಒಮ್ಮೆ ಯೋಚಿಸಬೇಕಾಗಿತ್ತು. 1991ರ ಹೊತ್ತಿಗೆ ಆ ದೇಶದಲ್ಲಿ ದೊಡ್ಡ ಅಂತರ್ಯುದ್ಧವೇ ನಡೆಯಿತು. ಕಾರಣವಿಷ್ಟೇ, ದೇಶದ ಮುಕ್ಕಾಲು ಭಾಗಕ್ಕೂ ಹೆಚ್ಚು ಭೂಮಿ ಅಮೆರಿಕ, ಬ್ರಿಟನ್ ದೇಶಗಳ ಸಕ್ಕರೆ ಉದ್ದಿಮೆದಾರರ ಕೈಯ್ಯಲ್ಲಿತ್ತು. ತಮ್ಮದೇ ಭೂಮಿಗಳಲ್ಲಿ ಅಲ್ಲಿನ ಜನ ಕೂಲಿ ಮಾಡುತ್ತಿದ್ದರು. ಎಲ್ಲಡೆ ಬರೀ ಕಬ್ಬನ್ನೇ ಬೆಳೆಸಲಾಗುತ್ತಿತ್ತು. ಇದರಿಂದ ಆಹಾ ರ ಪದಾರ್ಥಗಳ ಕೊರತೆ ಉಂಟಾಯಿತು. ಕೊನೆಗೆ ಹಸಿವು ತಾಳಲಾರದೆ ಜನ ರೊಚ್ಚಿಗೆದ್ದರು. ಅನೇಕರು ಸತ್ತರು. ಯಾರು ಭೂಮಿಯನ್ನು ತಮ್ಮ ಕಪಮುಷ್ಠಿಯಲ್ಲಿ ಇಟ್ಟುಕೊಂಡಿದ್ದರೋ ಅವರೇ ಹೆಲಿಕಾಪ್ಟರ್ ಮತ್ತು ವಿಮಾನಗಳಲ್ಲಿ ಆಹಾರ ಪೊಟ್ಟಣಗಳನ್ನು ನೆಲಕ್ಕೆ ಹಾಕಿದರು. ಇದಲ್ಲವೇ ವಿಪರ್ಯಾಸ. ಕರ್ನಾಟಕ ಇನ್ನೊಂದು ಸೋಮಾಲಿಯಾ ಆಗಬೇಕೆ?” ಎಂದು ಶ್ರೀರಾಮ ರೆಡ್ಡಿ ಪ್ರಶ್ನಿಸುತ್ತಾರೆ.
ಬರೀ ಪೊಳ್ಳು ಅಂತಾರೆ ಡಿಸಿಎಂ:
ಮುಖ್ಯವಾಗಿ ಸಿದ್ದರಾಮಯ್ಯ ಅರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುತ್ತಾರೆ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ. ಅವರ ಮಾತುಗಳು ಹೀಗಿವೆ…
“ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಹೊರಡಿಸಲಾಗಿರುವ ಸುಗ್ರೀವಾಜ್ಞೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಪ್ರಗತಿಗೆ ಪೂರಕವಾದ ಈ ತಿದ್ದುಪಡಿ ಕಾಯ್ದೆಯನ್ನು ಹಿಂದೆ ಸದನದಲ್ಲಿ ಕಾಂಗ್ರೆಸ್ ಸದಸ್ಯರೇ ಬೆಂಬಲಿಸಿದ್ದರು. ಈಗ ನೋಡಿದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡುತ್ತಿರುವುದು ಅಚ್ಚರಿ ತಂದಿದೆ. ಇಡೀ ದೇಶದಲ್ಲೇ ಒಂದು ಕಾಯ್ದೆ ಇದ್ದರೆ, ನಮ್ಮ ರಾಜ್ಯದಲ್ಲೇ ಒಂದು ಕಾಯ್ದೆ ಇತ್ತು. ಅದರಿಂದ ರೈತರಿಗೆ, ಜನರಿಗೆ ಅನುಕೂಲವಾಗಿದ್ದು ಏನೂ ಇಲ್ಲ. ಈವರೆಗೂ ಇದರ ದುರ್ಬಳಕೆ ಆಗಿ ವಿಪರೀತ ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು. ಇದರಿಂದಾಗಿಯೇ ರಾಜ್ಯಕ್ಕೆ ಸಾಕಷ್ಟು ಹಾನಿಯಾಗಿದೆ. ಹಾಗೆ ನೋಡಿದರೆ ಈ ತಿದ್ದಪಡಿ ಕಾಯ್ದೆಯೂ ಪ್ರಗತಿಗೆ ಪೂರಕವಾದ ಕ್ರಮವಾಗಿದೆ. ವಿಧಾನಸಭೆಯಲ್ಲಿ ಚರ್ಚೆ ನಡೆಯಬೇಕಾದರೆ, ಇದೊಂದು ಅತ್ಯುತ್ತಮ ಕಾಯ್ದೆ. ಇದು ಜಾರಿಗೆ ಬರಬೇಕು ಎಂದು ಕೆಪಿಸಿಸಿಯ ಈಗಿನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಸದನದಲ್ಲಿ ಹೇಳಿದ್ದರು. ಈ ಬಗ್ಗೆ ಬಗ್ಗೆ ಟೀಕೆ ಮಾಡುತ್ತಿರುವವರು ಎದೆ ಮುಟ್ಟಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲಿ. ಇದು ಖಂಡಿತಾ ರೈತ ವಿರೋಧಿಯಲ್ಲ. ಕೆಲವರು ತಮ್ಮ ಏನೇನೋ ರಾಜಕೀಯ ಹುನ್ನಾರಗಳ ಕಾರಣಕ್ಕೆ ಭಿನ್ನಸ್ವರ ಹಾಡುತ್ತಿದ್ದಾರೆ. ಜನರನ್ನು ಹಾಳು ಮಾಡುವುದೇ ಕೆಲವರ ನಿತ್ಯ ಕೆಲಸವಾಗಿದೆ” ಎಂದು ಡಿಸಿಎಂ ಟೀಕಿಸಿದ್ದಾರೆ.
ಕಾಂಗ್ರೆಸ್ ಡಬಲ್ ಕ್ರಾಸ್:
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಇಬ್ಭಾಗವಾಗಿದೆಯೇ? ಮೇಲ್ನೋಟಕ್ಕೆ ಹಾಗೆಯೇ ಕಾಣುತ್ತಿದೆ. ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕಾದರೆ ಡಿ.ಕೆ. ಶಿವಕುಮಾರ್ ಅವರು ಈ ಕಾಯ್ದೆಯನ್ನು ಬೆಂಬಲಿಸಿ ಮಾತನಾಡಿದ್ದರು ಎಂದು ಡಿಸಿಎಂ ಡಾ. ಆಶ್ವತ್ಥನಾರಾಯಣ ಹಾಗೂ ಕಂದಾಯ ಸಚಿವ ಆರ್. ಅಶೋಕ್ ದೂರಿದ್ದಾರೆ. ಈ ವಿವಾದ ಮೇಲೆದ್ದು ಬಂದಾಗಿನಿಂದ ಡಿಕೆಶಿ ಮತಾನಾಡಿದ್ದೇ ಇಲ್ಲ. ಸಿದ್ದರಾಮಯ್ಯ ಮಾತ್ರ ಪತ್ರಿಕಾಗೋಷ್ಠಿ ನಡೆಸಿ ಕಾಯ್ದೆಯನ್ನು ಖಂಡಿಸಿದ್ದು ಮಾತ್ರವಲ್ಲದೆ, ಅವಕಾಶ ಸಿಕ್ಕಾಗಲೆಲ್ಲ ಇದೇ ವಿಷಯವನ್ನೇ ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಜನರಲ್ಲಿ ಅನುಮಾನಕ್ಕೆ ಕಾರಣವಾಗಿದೆ.
ಇನ್ನೊಂದು ಗಂಭೀರ ಆರೋಪ:
ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಒಂದಾಗಿದ್ದರೆ, ರಾಜ್ಯಪಾಲರ ಅಂಕಿತಕ್ಕೆ ಬೇರೆಯೇ ಕರಡಿನ ಕಾಯ್ದೆಯನ್ನು ಕಳಿಸಲಾಗಿತ್ತು. ಕ್ಯಾಬಿನೇಟ್ ಒಪ್ಪಿಗೆ ನೀಡಿದ ಕಾಯ್ದೆಯ ಅಂಶಗಳೇ ಬೇರೆ. ರಾಜ್ಯಪಾಲರು ಸಹಿ ಹಾಕಿದ ಕರಡಿನ ಅಂಶಗಳೇ ಬೇರೆ ಎಂದು ಜಿ.ವಿ. ಶ್ರೀರಾಮ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಅಂತೂ 2020ಜುಲೈ 13ರಂದು ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದೆ. ಇನ್ನು 39 ದಿನಗಳಲ್ಲಿ ಈ ಕಾಯ್ದೆಯ ಮೂಲಪುರುಷರಾಗಿದ್ದ ದೇವರಾಜ ಅರಸು ಅವರ 105ನೇ ಜನ್ಮದಿನವಿದೆ!!
Nice explainations