ಬೆಂಗಳೂರು: ಕೋವಿಡ್-19 ನಡುವೆಯೂ ಉನ್ನತ ಶಿಕ್ಷಣದ ಕನಸು ಕಾಣುತ್ತಿದ್ದ 1,94,000 ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣವಿಷ್ಟೇ, ರಾಜ್ಯ ಹೈಕೋರ್ಟ್’ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಬುಧವಾರ ಇತ್ಯರ್ಥವಾಗಿದ್ದು, ಪರೀಕ್ಷೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯದಲ್ಲಿ ಒಟ್ಟು 1,94,000 ವಿದ್ಯಾರ್ಥಿಗಳು 497 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಆತಂಕ ದೂರವಾಗಿದ್ದು, ಸರಕಾರವೂ ಕೊನೆಕ್ಷಣದ ಟೆನ್ಷನ್’ನಿಂದ ಬಚಾವಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ನಾಳೆ ಮತ್ತು ನಾಡಿದ್ದು (ಜುಲೈ 30-31) ಸಿಇಟಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತಮ್ಮತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಚಿಂತೆ ಇಲ್ಲದೆ ಪರೀಕ್ಷೆ ಬರೆಯಬಹುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಅರ್ಜಿಯನ್ನು ವಿಲೇವಾರಿ ಮಾಡಿದ ಕೋರ್ಟ್, ಸರಕಾರಕ್ಕೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದೆ. ತದ ನಂತರ ರಾತ್ರಿ 9 ಗಂಟೆ ಹೊತ್ತಿಗೆ ಆನ್ʼಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಇಡೀ ಪರೀಕ್ಷೆಯ ಪ್ರಕ್ರಿಯೆ ನ್ಯಾಯಾಲಯ ನೀಡಿರುವ ಸೂಚನೆಗಳ ಮೇರೆಗೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯವಲ್ಲ:
ಕಂಟೈನ್ಮೆಂಟ್ ಝೋನ್ʼನಿಂದ ಬರುವ ವಿದ್ಯಾರ್ಥಿಗಳ ಫಿಟ್ನೆಸ್ ಸರ್ಟಿಫಿಕೇಟ್’ನ್ನು ಪರೀಕ್ಷಾ ಕೇಂದ್ರದಲ್ಲಿ ಕೇಳುವಂತಿಲ್ಲ, ಅದನ್ನು ಕಡ್ಡಾಯ ಮಾಡುವಂತೆಯೂ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ವಿದ್ಯಾರ್ಥಿಗಳು ಆ ಸರ್ಟಿಫಿಕೇಟ್ ತರಲಿ, ಬಿಡಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ. ಈ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತೇವೆ ಎಂದು ಎಂದು ಡಿಸಿಎಂ ತಿಳಿಸಿದರು.
ಪ್ರವೇಶ ಪತ್ರ :
ಪ್ರವೇಶ ಪತ್ರ ತೋರಿಸುವ ಯಾವ ವಿದ್ಯಾರ್ಥಿಯ ಪ್ರವೇಶವನ್ನೂ ತಡೆಯುವಂತಿಲ್ಲ. ಅವರು ಕೋವಿಡ್ ಪಾಸಿಟೀವ್ ಇರಲಿ ಅಥವಾ ’ಎ’ ಸಿಂಪ್ಟೆಮಿಕ್ ಆಗಿರಲಿ, ಇಲ್ಲವೇ ಶೀತ-ಕೆಮ್ಮು ಮತ್ತಿತರೆ ಲಕ್ಷಣಗಳಿರಲಿ ಅವರನ್ನು ಕಡ್ಡಾಯವಾಗಿ ಪರೀಕ್ಷಾ ಕೇಂದ್ರಕ್ಕೆ ಬಿಡಲೇಬೇಕು. ಸೋಂಕಿತರಿಗೆ ಮತ್ತು ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಲಾಗುವುದು. ಈ ಎಲ್ಲ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಲಾಗಿದೆ. ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
sop ಪಾಲನೆ:
ಈಗಾಗಲೇ ಜಾರಿಯಲ್ಲಿರುವ ಪರಿಷ್ಕೃತ sop ಪ್ರಕಾರ ಕಂಟೈನ್ಮೆಂಟ್ ಝೋನ್ʼನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆ ಬಂದು ಪರೀಕ್ಷೆಗೆ ಹಾಜರಾಗಬಹುದು. ಇವರು ತಮ್ಮ ಮನೆಯಿಂದ ಹೊರಬಂದ ಕೂಡಲೇ ಯಾರೇ ತಡೆದರೂ ಪ್ರವೇಶ ಪತ್ರ ತೋರಿಸಿದರೆ ಸಾಕು, ಅವರನ್ನು ಯಾರೂ ತಡೆಯುವುದಿಲ್ಲ. ಇನ್ನುಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಹನದಲ್ಲಿ ಕರೆತಂದು, ಪರೀಕ್ಷೆ ಮುಗಿದ ನಂತರ ವಾಪಸ್ ಅವರ ಜಾಗಕ್ಕೆ ಬಿಡಲಾಗುವುದು. ಬೆಂಗಳೂರು ಸೇರಿ ರಾಜ್ಯ ಎಲ್ಲ ಜಿಲ್ಲೆಗಳಲ್ಲಿಎಲ್ಲ ದಿಕ್ಕುಗಳಿಂದ ಪರೀಕ್ಷಾ ಕೇಂದ್ರಗಳಿಗೆ ಕೆಎಸ್’ಆರ್’ಟಿಸಿ ಮತ್ತು ಬಿಎಂಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಮುಖ್ಯಸ್ಥರು ಸೇರಿ ಸಾರಿಗೆ, ಪೊಲೀಸ್, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಉನ್ನತಮಟ್ಟದ ತಂಡವನ್ನು ರಚಿಸಲಾಗಿದೆ. ಆ ತಂಡದ ಉಸ್ತುವಾರಿಯಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ ಎಂದು ಡಿಸಿಎಂ ತಿಳಿಸಿದರು.
40 ಪಾಸಿಟೀವ್ ವಿದ್ಯಾರ್ಥಿಗಳು:
ರಾಜ್ಯಾದ್ಯಂತ 40 ಮಂದಿ ಕೋವಿಡ್-19 ಪಾಸಿಟೀವ್ ಆಗಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇವರೆಲ್ಲರನ್ನೂ ಪ್ರತ್ಯೇಕ ಕೋಣೆಯಲ್ಲಿ ಕೂರಿಸಲಾಗುವುದು. ಇತರ ವಿದ್ಯಾರ್ಥಿಗಳ ಜತೆ ಇವರ ಸಂಪರ್ಕಕ್ಕೆ ಅವಕಾಶವೇ ಇರುವುದಿಲ್ಲ. ಎಲ್ಲರೂ ಹಾಜರಾಗುವ ನಿಗದಿತ ಕೇಂದ್ರದ ಬದಲು ಬೇರೆ ಜಾಗದಲ್ಲಿ ಅವರನ್ನು ಕೂರಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಸಿಇಟಿ ಹೆಲ್ಪ್ ಲೈನ್:
ಸಿಇಟಿ ಪರೀಕ್ಷೆ ಸಂಬಂಧ ಏನೇ ಅನುಮಾನಗಳು, ತೊಂದರೆ ಇದ್ದರೆ ಈ ದೂರವಾಣಿ ಸಂಖ್ಯೆಗಳಿಗೆ ದೂರವಾಣಿ ಕರೆ ಮಾಡಬಹುದು ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಹೇಳಿದರು.
ಹೆಲ್ಪ್ ಲೈನ್: 080 23460460, 080 23564583