ಕೆಜಿಎಫ್’ನ ಅಳಿದುಳಿದ ಸಂಪನ್ಮೂಲಗಳ ವೈಜ್ಞಾನಿಕ ವಿಶ್ಲೇಷಣೆ
“ಚಿನ್ನ ಖಾಲಿಯಾದರೂ ಪರವಾಗಿಲ್ಲ; ಕೆಜಿಎಫ್ ಎಂದರೆ ಎಲ್ಲರಿಗೂ ಇಷ್ಟ..” ಚಿನ್ನದ ಗಣಿಗಳ ಬಗ್ಗೆ ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾದ ಮೊದಲ ವಿಶ್ಲೇಷಣಾತ್ಮಕ ವರದಿಗೆ ಉತ್ತಮ ಪ್ರತಿಕ್ರಿಯೆ ಬಂದ ಬೆನ್ನಲ್ಲೆ, ಖ್ಯಾತ ಭೂವಿಜ್ಞಾನಿ ಡಾ. ಎಂ.ವೆಂಕಟಸ್ವಾಮಿ 2ನೇ ಲೇಖನ ಬರೆದಿದ್ದಾರೆ. ಅಳಿದುಳಿದ ಗಣಿ ಜಾಗದಲ್ಲಿ ಈಗ ಗೋಲ್ಡ್ ಮೈನಿಂಗ್ ಮಾಡಬಹುದಾ? ಅಥವಾ ಅದೇ ಗಣಿ ಕಂಪನಿ ವಶದಲ್ಲಿರುವ 3,200 ಎಕರೆ ಭೂಮಿಯಲ್ಲಿ ಕೈಗಾರಿಕಾ ಪಾರ್ಕ್ ಮಾಡಬಹುದಾ? ಎಲ್ಲರ ಹುಬ್ಬೇರಿಸಿರುವ ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ಮುಂದೆ ನೀವೆ ಓದಿ… ರಾಜ್ಯವನ್ನೇ ಏಕೆ? ಇಡೀ ದೇಶದ ಅಭಿವೃದ್ಧಿಗೆ ರೆಕ್ಕೆ ಕಟ್ಟಿದ ಕೆಜಿಎಫ್ ಎಂಬ ನತದೃಷ್ಟ ನೆಲದ ಬಗ್ಗೆ ಮತ್ತಷ್ಟು ವರದಿಗಳು ಸಿಕೆನ್ಯೂಸ್ ನೌ ನಲ್ಲಿ ಪ್ರಕಟವಾಗಲಿವೆ. ನಿರೀಕ್ಷಿಸಿ…
CKPHOTOGRAPHY
ಇತ್ತೀಚೆಗೆ ಕೆಜಿಎಫ್ ಪ್ರದೇಶಕ್ಕೆ ಭೇಟಿ ಕೊಟ್ಟ ಕರ್ನಾಟಕ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಎರಡು ವಿಷಯಗಳನ್ನು ಜನರ ಮುಂದಿಟ್ಟಿದ್ದಾರೆ.
ಒಂದು, ಕೋಲಾರ ಚಿನ್ನದ ಗಣಿ ಪ್ರದೇಶಗಳಲ್ಲಿ ಬಿದ್ದಿರುವ ಗಣಿ ತ್ಯಾಜ್ಯ ಗುಡ್ಡಗಳಲ್ಲಿರುವ (ಸೈನೇಡ್ ಗುಡ್ಡಗಳು) ಚಿನ್ನ, ಟಂಗ್ಸ್ಟನ್ ಮತ್ತು ಪಲ್ಲಾಡಿಯಮ್ ಖನಿಜಗಳ ಅಂಶವನ್ನು ಗುರುತಿಸಿ ತೆಗೆಯುವುದು. ಎರಡು, ಕೋಲಾರ ಚಿನ್ನದ ಗಣಿಗಳ (ಬಿ.ಜಿ.ಎಮ್.ಎಲ್) ನಿಯಂತ್ರಣದಲ್ಲಿರುವ 12,500 ಎಕರೆಗಳ ಭೂಮಿಯಲ್ಲಿ ಬಳಸದೆ ಇರುವ 3,200 ಎಕರೆಗಳ ನೆಲವನ್ನು ಸರಕಾರ ವಶಪಡಿಸಿಕೊಂಡು ಕೈಗಾರಿಕಾ ವಲಯವನ್ನು ಸ್ಥಾಪನೆ ಮಾಡುವುದು.
4,000 ಗಣಿ ಕಾರ್ಮಿಕರು
ಮೇಲಿನ ಎರಡು ವಿಷಯಗಳನ್ನು ಚರ್ಚೆ ಮಾಡುವುದಕ್ಕೆ ಮುಂಚೆ ಕೆಲ ವಿಷಯಗಳನ್ನು ನಿಮ್ಮ ಮುಂದೆ ಸ್ಪಷ್ಟಪಡಿಸಿಬೇಕಿದೆ. ಕೆಜಿಎಫ್ ಜನರು ವಿಶೇಷವಾಗಿ ಗಣಿಗಳಲ್ಲಿ ಕಾರ್ಮಿಕರಾಗಿ ದುಡಿದವರು. ಯಾವಾಗಲಾದರೂ ಒಂದು ದಿನ ಚಿನ್ನದ ಗಣಿಗಳು ಮತ್ತೇ ಪುನುಶ್ಚೇತನಗೊಳ್ಳುತ್ತವೆ ಎಂಬ ಆಸೆಯನ್ನು ಇನ್ನೂ ಜೀವಂತವಾಗಿ ಇಟ್ಟುಕೊಂಡು ಬಂದಿದ್ದಾರೆ. 2001ರ ಫೆಬ್ರವರಿ 28ರಂದು ಕೇಂದ್ರ ಸರಕಾರ ಚಿನ್ನದ ಗಣಿಗಳನ್ನು ಏಕಾಏಕಿ ಸ್ಥಗಿತಗೊಳಿಸಿಬಿಟ್ಟಿತು. ಆಗ ಕೆಲಸ ಮಾಡುತ್ತಿದ್ದ ಸುಮಾರು 4,000 ಗಣಿ ಕಾರ್ಮಿಕರು ರಾತ್ರೋರಾತ್ರಿ ಬೀದಿಗೆ ಬಿದ್ದುಬಿಟ್ಟರು. ಆ ನಂತರ ಅವರ ಗೋಳು ಹೇಳತೀರದಾಯಿತು. ಅವರಿಗೆ ಆಗ ಯಾವುದೇ ಪಿಂಚಣಿ ದೊರಕುತ್ತಿರಲಿಲ್ಲ. ಒಂದಷ್ಟು ಗ್ರ್ಯಾಚುಯಿಟಿ ಮತ್ತು ಪಿಎಫ್ ಇತ್ಯಾದಿ ಹೆಸರಿನ ಅಲ್ಪಸ್ವಲ್ಪ ಹಣ ಮಾತ್ರ ದೊರಕುತ್ತಿತ್ತು. ಅಧಿಕಾರಿಗಳಿಗೆ ಸಾಮಾನ್ಯವಾಗಿಯೆ ಹೆಚ್ಚು ಸಂಬಳ ದೊರಕುತ್ತಿತ್ತು. ಅವರಿಗೂ ಕೂಡ ಪಿಂಚಣಿ ಇರಲಿಲ್ಲ. ಆಗ ಗಣಿ ಕಾರ್ಮಿಕರಿಗೆ ಹೆಚ್ಚೆಂದರೆ 8,000 ಕಡಿಮೆಂದರೆ 5,000 ರೂಪಾಯಿ ಸಂಬಳ ದೊರಕುತ್ತಿತ್ತು. ಸ್ವಯಂ ನಿವೃತ್ತಿ ಕೊಡುಗೆ ನೀಡಿ 65,000 ದಿಂದ 3,00,000 ರೂಪಾಯಿಗಳ ವರೆಗೂ ಪ್ಯಾಕೇಜ್ ಘೋಷಿಸಲಾಗಿತ್ತು. ಆದರೆ ಈ ಹಣವನ್ನು ಹೆಚ್ಚು ಕಾರ್ಮಿಕರು ಪಡೆದುಕೊಳ್ಳದೆ ನ್ಯಾಯಾಲಯಕ್ಕೆ ಹೋಗಿ ಅದನ್ನು ಪಡೆದುಕೊಳ್ಳುವುದರೊಳಗೆ 15 ವರ್ಷಗಳು ಕಳೆದುಹೋಗಿದ್ದವು. ಅಷ್ಟರಲ್ಲಿ ಎಷ್ಟೋ ಕಾರ್ಮಿಕರು ಗಣಿ ಕಾಯಿಲೆ ಸಿಲಿಕೋಸಿಸ್ ಮತ್ತು ಇತರ ರೋಗಗಳಿಂದ ಸತ್ತೇಹೋಗಿದ್ದರು.
ಇದರ ಜೊತೆಗೆ ಕೇಂದ್ರ ಸರಕಾರ ಗಣಿಗಳನ್ನು ಮುಚ್ಚುವುದರ ಜೊತೆಗೆ ಇನ್ನೊಂದು ಎಡವಟ್ಟು ಮಾಡಿಬಿಟ್ಟಿತ್ತು. ಅದೆಂದರೆ ವಿದ್ಯುತ್ ಸಂಪರ್ಕವನ್ನು ದಿಢೀರನೆ ಅದೇ ದಿನ ಕಡಿತಗೊಳಿಸಿಬಿಟ್ಟಿತು. ಕಾರಣ 1902ರಿಂದ ನಿರಂತರವಾಗಿ ಆಳವಾದ ಗಣಿಗಳಿಂದ ನೀರನ್ನು ಶಕ್ತಿಯುತ ಪಂಪ್‌ಗಳಿಂದ ಮೇಲಕ್ಕೆ ತೆಗೆಯುವುದು ನಿಂತುಹೋಯಿತು. ಮೂರುಕಾಲು ಕಿಲೋಮೀಟರುಗಳ ಆಳ, ಎಂಟು ಕಿಲೋಮೀಟರುಗಳ ಉದ್ದ ಮತ್ತು ಎರಡು ಕಿಲೋಮೀಟರುಗಳ ಅಗಲದ ಪ್ರದೇಶದಲ್ಲಿ ಹರಡಿಕೊಂಡಿದ್ದ ಚಿನ್ನದ ಗಣಿ ಸುರಂಗಗಳಲ್ಲಿ ನಿಧಾನವಾಗಿ ನೀರು ತುಂಬಿಕೊಂಡು ನೀರಿನ ಮಟ್ಟ ನಾಲ್ಕಾರು ವರ್ಷಗಳಲ್ಲಿ ಮೇಲಿನ ಹಂತದವರೆಗೂ ತುಂಬಿಕೊಂಡುಬಿಟ್ಟಿತು.
ಬೆಟ್ಟ ಅಗೆದು ಇಲಿ ಹಿಡಿಯುವ ಯೋಜನೆ
ಅಂದರೆ, ಗಣಿಗಳನ್ನು ಮಾಡುವಾಗ ಮೇಲಿನ ಒಂದು ನೂರು ಅಡಿಗಳ ನೆಲವನ್ನು ಮಾತ್ರ ಬಿಟ್ಟಿರುತ್ತಾರೆ. ಆ ನಂತರದ ದಿನಗಳಲ್ಲಿ ಮಳೆಗಾಲ ಬಂದಾಗೆಲ್ಲ ಗಣಿಗಳು ತುಂಬಿಹೋಗಿ ನೀರು ಅಲ್ಲಲ್ಲಿ ಮೇಲಕ್ಕೆ ಹರಿಯತೊಡಗಿತು. ಎಂಟು ಕಿ.ಮೀ.ಗಳ ಉದ್ದಕ್ಕೂ ಎಲ್ಲಾ ಗಣಿಗಳ ಸುರಂಗಗಳಿಗೂ ಮೇಲಿನಿಂದ ಕೆಳಗಿನವರೆಗೂ ಸಂಪರ್ಕವಿದ್ದು ನೀರು ತುಂಬಿಕೊಳ್ಳುತ್ತಿದ್ದಂತೆ ಎಲ್ಲವೂ ಕುಸಿದೋಗಿ ಒಳಗೆ ಅದೊಂದು ಸೂಪರ್ ಪಿಟ್ ಆಗಿ ಮಾರ್ಪಟ್ಟಿತು. ಈ ಪರಿಸ್ಥಿತಿಯಲ್ಲಿ ಇನ್ನು ಯಾವುದೇ ಕಾರಣದಿಂದಲೂ ಈ ಗಣಿಗಳನ್ನು ಮತ್ತೆ ಪುನುಚ್ಚೇತನಗೊಳಿಸಲು ಸಾಧ್ಯವೆ ಇಲ್ಲದಾಗಿದೆ. ಇನ್ನು ಓಪನ್ ಪಿಟ್ (ಕಬ್ಬಿಣ ಗಣಿಗಳಂತೆ) ಗಣಿ ಮಾಡುವ ಮಾತುಗಳನ್ನು ಕೆಲವರು ಹೇಳುತ್ತಾರೆ? ಅಲ್ಲಿ ಚಿನ್ನವೇ ಇಲ್ಲದಾಗ ಹತ್ತಾರು ಕಿಲೋಮೀಟರುಗಳ ಸುತ್ತಳತೆಯ ಮೂರು ಕಿಲೋಮೀಟರುಗಳ ಆಳದ ಗಣಿ ಮಾಡಲು ಸಾಧ್ಯವೆ? ಅದೇನು ಕಬ್ಬಿಣದ ಗಣಿಯೆ? ಕೆಜಿಎಫ್ ನಗರ ಏನಾಗುತ್ತದೆ? ಬೆಟ್ಟ ಅಗೆದು ಇಲಿಯನ್ನು ಹಿಡಿಯುವ ಯೋಜನೆಯನ್ನು ಯಾರು ಮಾಡುತ್ತಾರೆ? ಅದೆಲ್ಲ ಆಗದ ಬರೀ ಮಾತುಗಳಾಗಿವೆ.
ಒಂದು ವೇಳೆ ಕೇಂದ್ರ ಸರಕಾರ ಗಣಿಗಳಿಂದ ನೀರನ್ನು ನಿರಂತರವಾಗಿ ತೆಗೆದು ಹೊರಕ್ಕೆ ಹಾಕಿದ್ದರೆ ಈ ಗಣಿಗಳನ್ನು ಮತ್ತೆ ಪ್ರಾರಂಭಿಸಬಹುದಾಗಿತ್ತು! ಈಗಿನ ಬೆಲೆಗಳಿಗೆ ಉಳಿದಿದ್ದ ಅಲ್ಪಸ್ವಲ್ಪ ಚಿನ್ನವನ್ನು ತೆಗೆಯಬಹುದಾಗಿತ್ತು. ಅಂದು (2001) ಚಿನ್ನದ ಬೆಲೆ ಒಂದು ಗ್ರಾಂಗೆ 400 ರೂಪಾಯಿಗಳಿದ್ದು ಈಗ ಒಂದು ಗ್ರಾಂಗೆ 5,000 ರೂಪಾಯಿಗಳಾಗಿದೆ. ಕೇಂದ್ರ ಸರಕಾರದ ಈ ಎಡವಟ್ಟು ಎಷ್ಟು ದೊಡ್ಡದು ಎನ್ನುವುದನ್ನೂ ನೀವೆ ಊಹಿಸಬಹುದು? ಜೊತೆಗೆ ಗಣಿಗಳ ಒಳಗಿದ್ದ ಎಲ್ಲಾ ಯಂತ್ರಗಳನ್ನು ತೆಗೆಯಲಾಗದೇ ಹಾಗೇ ಬಿಟ್ಟುಬಿಡಲಾಯಿತು. ಅವೆಲ್ಲ ಏನಾಗಿರುತ್ತವೆ? ವಿದ್ಯುತ್ ಸಂಪರ್ಕ ಇದ್ದ ತಂತಿಗಳ ಕಥೆ ಏನಾಗಿರುತ್ತದೆ? ಎಲ್ಲವನ್ನೂ ತಿಳಿದುಕೊಂಡರೆ ಕರಳು ಕಿತ್ತುಬರುತ್ತದೆ ಎಂಬುದಾಗಿ ಕೆಲವು ಗಣಿ ಕಾರ್ಮಿಕರು ಇಂದಿಗೂ ಭಾವುಕರಾಗುತ್ತಾರೆ. ಇನ್ನು ಮೇಲಿದ್ದ ಎಲ್ಲಾ ರೀತಿಯ ಸಣ್ಣಪುಟ್ಟ ಯಂತ್ರಗಳಿಂದ ಹಿಡಿದು ದೊಡ್ಡದೊಡ್ಡ ಯಂತ್ರಗಳನ್ನು ಮಾರಿಕೊಳ್ಳಲಾಯಿತು, ಇಲ್ಲವೇ ಕಳ್ಳತನ ಮಾಡಲಾಯಿತು. ಈಗ ಉಳಿದುಕೊಂಡಿರುವುದು ಅಸ್ತಿಪಂಜರಗಳಂತಹ ಮಿಲ್ಲುಗಳು, ಗಣಿ ಶಾಫ್ಟ್’ಗಳು, ಗತವೈಭವ ನೆನಪಿಸುವ ಬಂಗಲೆಗಳು, ನೂರಾರು ಆಟದ ಮೈಧಾನಗಳು, ಗುಲ್‌ಮಹಾರ್ ಮರಗಳು ಮತ್ತು ಸೈನೇಡ್ ಗುಡ್ಡಗಳು.
ಎಷ್ಟು ಚಿನ್ನ ಉಳಿದುಕೊಂಡಿದೆ?
ಈಗ ಮೊದಲನೇ ವಿಷಯಕ್ಕೆ ಬರೋಣ. ಕೋಲಾರ ಚಿನ್ನದ ಗಣಿಗಳನ್ನು ಮುಚ್ಚಿದಾಗ ಗಣಿಗಳು ತೀರಾ ನಷ್ಟಕ್ಕ ಒಳಪಟ್ಟಿದ್ದವು ಎನ್ನುವುದು ನಿಜ. ಆಗ ಚಿನ್ನದ ಬೆಲೆ ಒಂದು ಗ್ರಾಂಗೆ ಕೇವಲ 400 ರೂಪಾಯಿಗಳಿದ್ದವು. ಗಣಿಗಳಲ್ಲಿ ಚಿನ್ನ ಖಾಲಿಯಾಗಿ ವರ್ಷಕ್ಕೆ ಕೇವಲ ಒಂದೆರಡು ಟನ್ನು ಚಿನ್ನ ಉತ್ಪಾದನೆಯಾಗುತ್ತಿತ್ತು. 2000 ದಿಂದಲೇ ಗಣಿಗಳು ಸಾಕಷ್ಟು ನಷ್ಟದಲ್ಲೇ ನಡೆಯುತ್ತಿದ್ದವು. ಗಣಿಗಳು ಮೂರು ಕಿ.ಮೀ.ಗಳ ಆಳ ಇಳಿದು ಅಲ್ಲಿನ ತಾಪಮಾನದಲ್ಲಿ ಕೆಲಸ ಮಾಡುವುದು ಕಷ್ಟದ ಕೆಲಸವಾಗಿತ್ತು. ಜೊತೆಗೆ 1980ರಿಂದಲೇ ಸಾಕಷ್ಟು ಕಾರ್ಮಿಕರ ಸಂಘಟನೆಗಳು ಹುಟ್ಟಿಕೊಂಡು ಸಮಸ್ಯೆಗಳನ್ನು ಹುಟ್ಟುಹಾಕಿದ್ದವು. ಗಣಿಗಳನ್ನು ಮುಚ್ಚುವುದಕ್ಕೆ ಮುಂಚೆ ಗಣಿಗಳಲ್ಲಿ ಎಷ್ಟು ಚಿನ್ನ ಉಳಿದುಕೊಂಡಿದೆ ಎನ್ನುವ ಯಾವುದೇ ರೀತಿಯ ಸಂಶೋಧನೆಗಳನ್ನು ನಡೆಸಲಿಲ್ಲ. ಬಹುಶಃ ಇನ್ನೂ 100 ರಿಂದ 150 ಟನ್ನುಗಳಷ್ಟು ಚಿನ್ನ ಉಳಿದುಕೊಂಡಿದೆ ಎಂಬ ಊಹೆಗಳಿವೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ಇನ್ನು 121 ವರ್ಷಗಳಲ್ಲಿ ಸುರಂಗಗಳಿಂದ ಮೇಲಕ್ಕೆ ತಂದ ಚಿನ್ನದ ಅದಿರನ್ನು ಪುಡಿ ಮಾಡಿ ಎಸೆದ ಗಣಿ ತ್ಯಾಜ್ಯ 50 ದಶಲಕ್ಷ ಟನ್ನುಗಳು ಎಂಬ ಲೆಕ್ಕಾಚಾರವಿದೆ. ಎಲ್ಲಾ ಗಣಿಗಳ ಸುರಂಗಗಳನ್ನು ಒಟ್ಟಾಗಿ ರೈಲು ಬೋಗಿಗಳಂತೆ ಒಂದರ ಹಿಂದೆ ಒಂದು ಜೋಡಿಸಿದರೆ ಅದು ಸುಮಾರು 1,600 ಕಿ.ಮೀ.ಯಷ್ಟು ಉದ್ದವಾಗುತ್ತದೆ ಎನ್ನಲಾಗಿದೆ. ಪ್ರಸ್ತುತ ಜಗದೀಶ್ ಶೆಟ್ಟರ್ ಅವರು ಈ ಗಣಿ ತ್ಯಾಜ್ಯದಲ್ಲಿ ಚಿನ್ನ, ಟಂಗ್ಸ್ಟನ್ ಮತ್ತು ಪಲ್ಲಾಡಿಯಮ್ ಅಂಶವನ್ನು ಕಂಡು ಹಿಡಿಯುವಂತೆ ಎಂ.ಇ.ಸಿ.ಎಲ್ ಸಂಸ್ಥೆಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಗಣಿ ತ್ಯಾಜ್ಯದಲ್ಲಿ ಚಿನ್ನ, ಟಂಗ್ಸ್ಟನ್, ಪಲ್ಲಾಡಿಯಮ್, ಬೆಳ್ಳಿ, ಸಲ್ಫೇಡ್ ಗುಂಪಿನ ಖನಿಜಗಳು ತೀರಾ ಕಡಿಮೆ ಅಂಶದಲ್ಲಿ ಇರುವುದು ದೃಢಪಟ್ಟಿದೆ.
ಕೆಜಿಎಫ್ ನಗರದಲ್ಲಿರುವ ಮತ್ತೊಂದು ಬೃಹತ್ ಸೈನೇಡ್ ದಿಬ್ಬ.
ckphotography
15 ಸೈನೇಡ್ ಗುಡ್ಡಗಳು
ಕೆಜಿಎಫ್ ನಗರದ ಮಧ್ಯೆಮಧ್ಯೆ ಒಟ್ಟು 15 ಸೈನೇಡ್ ಗುಡ್ಡಗಳು ಬಿದ್ದಿದ್ದು ಇವುಗಳಲ್ಲಿ 50 ದಶಲಕ್ಷ ಟನ್ನುಗಳ ಗಣಿ ತ್ಯಾಜ್ಯ ಇರುವುದಾಗಿ ತಿಳಿದುಬರುತ್ತದೆ. ಆದರೆ ಕಳೆದ ಒಂದು ಶತಮಾನದಿಂದ ಮಳೆ-ನೀರು ಗಾಳಿಯ ಮೂಲಕ ಎಷ್ಟು ತ್ಯಾಜ್ಯ ಹರಿದು ಹೋಗಿದೆ ಎನ್ನುವುದು ತಿಳಿದಿಲ್ಲ. ಈ ಗುಡ್ಡಗಳಲ್ಲಿನ ಚಿನ್ನದ ಅಂಶವನ್ನು ಸಂಶೋಧನೆಗೆ ಒಳಪಡಿಸಿದಾಗ ಒಂದು ಟನ್ನು ಗಣಿ ತ್ಯಾಜ್ಯದಲ್ಲಿ 0.70 ಗ್ರಾಂನಿಂದ 1.00 ಗ್ರಾಂ ಚಿನ್ನ ಇರುವುದಾಗಿ ತಿಳಿದುಬಂದಿದೆ! ಅಂದರೆ ಸರಾಸರಿ ಒಂದು ಟನ್ನು ತ್ಯಾಜ್ಯದಲ್ಲಿ 0.5ರಿಂದ 0.7 ಗ್ರಾಂ ಚಿನ್ನ ದೊರಕಬಹುದು. ಈ ಚಿನ್ನವನ್ನು ಕೆಲ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ತೆಗೆಯಬಹುದಾಗಿದೆ. ಆದರೆ ಹಾಗೇನಾದರೂ ಮಾಡಿದರೆ ಗುಡ್ಡಗಳಂತೆ ಸ್ವಲ್ಪ ಗಟ್ಟಿಯಾಗಿ ನೆಲೆಯೂರಿರುವ ಈ ಮಣ್ಣನ್ನು ಮತ್ತೆ ಕೆದರಿದಂತಾಗಿ ನಗರ ವಿಷ ಧೂಳಿನಿಂದ ಕಲುಚಿತಗೊಳ್ಳುತ್ತದೆ. ಈಗಾಗಲೇ ಕೆಜಿಎಫ್ ನಗರವನ್ನು ’ಗೋಸ್ಟ್ ಸಿಟಿ’ ಎಂದು ಕರೆಯಲಾಗುತ್ತಿದೆ. ಗಣಿ ತ್ಯಾಜ್ಯದಲ್ಲಿರುವ ಚಿನ್ನವನ್ನು ಸಂಸ್ಕರಿಸುವುದು ಯಾವ ರೀತಿಯಲ್ಲೂ ಸರಿಯಾದ ನಿಲುವಲ್ಲ. ಕೆಲ ವರ್ಷಗಳ ಕಾಲ ಟಂಗ್ಸ್ಟನ್ ಸಂಸ್ಕರಣೆ ಮಾಡಿ ತೆಗೆಯಲಾಯಿತು. ಆದರೆ ಅದು ನಷ್ಟಕ್ಕೆ ಒಳಗಾಗಿ ನಿಲ್ಲಿಸಲಾಯಿತು. ಟಂಗ್ಸ್ಟನ್ ಅಂಶ ತೀರಾ ಕಡಿಮೆ ಇದೆ. ಉಳಿದ ಖನಿಜಗಳ ಬಗ್ಗೆ ಯಾವುದೇ ಸಂಶೋಧನೆಗಳು ನಡೆದಿಲ್ಲ. ಏನೇ ಮಾಡಿದರೂ ತ್ಯಾಜ್ಯ ಮಣ್ಣನ್ನು ಕೆದರಿದಂತಾಗಿ ಪರಿಸರ ಮಾಲಿನ್ಯವಾಗುವುದು ಗ್ಯಾರಂಟಿ.
ಈ ಗಣಿ ತ್ಯಾಜ್ಯವನ್ನು ಯಾವುದಾದರೂ ತಂತ್ರಜ್ಞಾನವನ್ನು ಬಳಸಿ ಇಟ್ಟಿಗೆಗಳನ್ನು ತಯಾರು ಮಾಡಿದರೆ ತುಂಬಾ ಒಳ್ಳೆಯ ಕೆಲಸವಾಗುತ್ತದೆ. ಈ ವಿಷದ ಗುಡ್ಡಗಳು ಖಾಲಿಯಾಗುವುದಲ್ಲದೆ ಜನರಿಗೆ ಒಂದಷ್ಟು ಕೆಲಸವೂ ದೊರಕಬಹುದು. ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನಗಳು ನಡೆಯಬೇಕಿದೆ. ಇನ್ನು ಗಣಿ ಪ್ರದೇಶದಲ್ಲಿ ಬಿದ್ದಿರುವ ಹೇರಳ ಕಪ್ಪು ಕಲ್ಲುಗಳನ್ನು ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಂಡರೆ ಗಣಿ ಪ್ರದೇಶ ಸ್ವಲ್ಪ ಸ್ವಚ್ಛವಾಗುತ್ತದೆ. ಗಣಿಗಳ ಒಳಗಿರುವ ನೀರನ್ನು ಕೃಷಿ, ಮೀನುಗಾರಿಕೆ, ಇತ್ಯಾದಿ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ. ನೀರನ್ನು ತೆಗೆಯುವ ಪಂಪುಗಳನ್ನಾಕಿ ಕಾಲುವೆ ಮತ್ತು ಟ್ಯಾಂಕ್‌ಗಳನ್ನು ಮಾಡಬೇಕಾಗಿದೆ. ಇದರ ಬಗ್ಗೆಯೂ ಸಾಕಷ್ಟು ಸಲ ಮಾತುಕತೆ ನಡೆದರೂ ಅದೇಕೊ ಈ ಯೋಜನೆಯ ಬಗ್ಗೆ ಯಾರಿಗೂ ಆಸಕ್ತಿ ಇರುವಂತೆ ತೋರುವುದಿಲ್ಲ. ಅದನ್ನು ಬಿಟ್ಟು ದೂರದ ನದಿಗಳಿಂದ ನೀರನ್ನು ತರುವ ಯೋಜನೆಗಳ ಬಗ್ಗೆಯೇ ರಾಜಕಾರಣಿಗಳು ಆಲೋಚಿಸುತ್ತಿದ್ದಾರೆ!
ಒತ್ತುವರಿ, ಇದೇ ದೊಡ್ಡ ವರಿ!!
ಇನ್ನು ಎರಡನೇ ವಿಷಯಕ್ಕೆ ಬಂದರೆ, ಶೆಟ್ಟರ್ ಅವರು ಈಗಾಗಲೇ ಕೇಂದ್ರ ಸರಕಾರದ ಜತೆಗೆ ಮಾತುಕತೆಗಳನ್ನು ನಡೆಸುತ್ತಿದ್ದು 3,200 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಚರ್ಚೆಯಲ್ಲಿ ತೊಡಗಿಕೊಂಡಿದೆ ಎಂದು ಹೇಳಿದ್ದಾರೆ. ಕೇಂದ್ರದಲ್ಲಿರುವ ಕರ್ನಾಟಕದ ಗಣಿ ಸಚಿವವರಾದ ಶ್ರೀ ಪ್ರಹ್ಲಾದ್ ಜೋಶಿ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿಯೂ ತಿಳಿದುಬಂದಿದೆ. ಈ 3,200 ಎಕರೆಗಳಲ್ಲಿ ಭೂಮಿಯ ಕೆಳಗೆ ಏನಾದರೂ ಅಮೂಲ್ಯ ಖನಿಜ ನಿಕ್ಷೇಪಗಳು ಇವೆಯೇ ಎಂಬುದರ ಬಗ್ಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮೀಕ್ಷೆ ನಡೆಸಿ ಆರು ತಿಂಗಳ ಒಳಗೆ ವರದಿ ಕೊಡುವಂತೆ ಶೆಟ್ಟರ್ ಅವರು ಹೇಳಿರುವುದಾಗಿಯೂ ತಿಳಿಸಿದ್ದಾರೆ. ಆ ನಂತರ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ಭೂಮಿಯನ್ನು ಕೇಂದ್ರ ಗಣಿ ಸಚಿವಾಲಯದಿಂದ ಸ್ವಾಧೀನಪಡಿಸಿಕೊಳ್ಳಲಿದೆಯಂತೆ.
1875ರಲ್ಲಿ ಬ್ರಿಟಿಷ್ ಸರಕಾರ ಕೆಜಿಎಫ್ ಗಣಿಗಳ ಸುತ್ತಲೂ 12,500 ಎಕರೆ ಭೂಮಿಯನ್ನು ಗುರುತಿಸಿ ಸಮೀಕ್ಷೆ ಮಾಡಿ ಗಡಿಗಳಲ್ಲಿ ಕಲ್ಲುಗಳನ್ನು ಹಾಕಿತ್ತು. 1880ರಲ್ಲಿ ಪ್ರಾರಂಭವಾದ ಚಿನ್ನದ ಗಣಿಗಳು 2001ರ ವರೆಗೂ ನಡೆದು ನಿಂತುಹೋದವು. 1956ರಲ್ಲಿ ಬ್ರಿಟಿಷರು ಭಾರತಿಯರಿಗೆ ಗಣಿಗಳನ್ನು ಒಪ್ಪಿಸಿ ಹೊರಟುಹೋದರು. ಬ್ರಿಟಿಷರ ಕಾಲದಲ್ಲಿ ಉತ್ತರದಲ್ಲಿ ಗೋಲ್ಕೊಂಡ ಮತ್ತು ದಕ್ಷಿಣದಲ್ಲಿ ಮಾರಿಕುಪ್ಪಂವರೆಗೂ (8 ಕಿ.ಮೀಗಳು ಉದ್ದ) ಮತ್ತು ಅದರಾಚೆಗೆ ಉತ್ತರದಲ್ಲಿ ಬ್ಯಾಟರಾಯನಬೆಟ್ಟ-ಕತ್ತಿಪಲ್ಲಿ ದಕ್ಷಿಣದಲ್ಲಿ ಎರ‍್ರಕೊಂಡ-ವೀರೂಪಾಕ್ಷಿಪುರದ (ಆಂಧ್ರ ಪ್ರದೇಶದ ಗಡಿಯವರೆಗೂ) ಹಾಸಿಕೊಂಡಿದೆ. ಇನ್ನು ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಗಣಿಗಳಿರುವ ಪ್ರದೇಶಗಳಿಗಿಂತ 3 ರಿಂದ 5 ಕಿಲೋಮೀಟರುಗಳ ದೂರದವರೆಗಿನ ನೆಲ ಬಿ.ಜಿ.ಎಮ್.ಎಲ್.ಗೆ ಸೇರಿದೆ.
ಆದರೆ, ಕಳೆದ ಒಂದೂವರೆ ಶತಮಾನದಲ್ಲಿ ಹಳ್ಳಿಗಳು ದೊಡ್ದವಾಗಿ ಜನಸಂಖ್ಯೆ ನಾಲ್ಕಾರು ಪಟ್ಟು ಹೆಚ್ಚಾಗಿದೆ. ಈಗ ಬಿ.ಜಿ.ಎಮ್.ಎಲ್. ಪ್ರದೇಶವನ್ನು ಸುತ್ತಲೂ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇಕೆ ಗಣಿಗಳಿರುವ ಪ್ರದೇಶಗಳಲ್ಲೂ ಸಾಕಷ್ಟು ನೆಲ ಒತ್ತುವರಿಯಾಗಿದೆ. ಇನ್ನು ಶೆಟ್ಟರ್ ಅವರು ಹೇಳುತ್ತಿರುವ 3,200 ಎಕರೆಗಳ ಪ್ರದೇಶ ಯಾವುದೆಂದು ತಿಳಿದಿಲ್ಲ. ಈಗಿನ ಬಿ.ಎ.ಎಮ್.ಎಲ್ ಕಾರ್ಖಾನೆ ಇರುವ ಪ್ರದೇಶವೂ ಕೂಡ ಮೂಲವಾಗಿ ಬಿ.ಜಿ.ಎಮ್.ಎಲ್ ಒಡೆತನಕ್ಕೆ ಸೇರಿದ ಪ್ರದೇಶವೇ ಆಗಿದೆ. ಬಹುಶಃ ಕೆಜಿಎಫ್ ಗಣಿಗಳಿಗೆ ಉತ್ತರ ದಿಕ್ಕಿನಲ್ಲಿರುವ ಬಿ.ಇ.ಎಮ್.ಎಲ್ ಕಾರ್ಖಾನೆಯ ಪಶ್ಚಿಮಕ್ಕಿರುವ ಪ್ರದೇಶವೇ ಕೈಗಾರಿಕಾ ಪ್ರದೇಶವನ್ನಾಗಿ ಮಾಡಲು ಗುರುತಿಸಿರಬೇಕು!
ದೇಶವನ್ನು ಉದ್ಧರಿಸಿ ಕೆಜಿಎಫ್ ಮುಳುಗಿತು!!
ಒಟ್ಟಿನಲ್ಲಿ ಆಗಿನ ಮೈಸೂರು ರಾಜ್ಯ ಮತ್ತು ಆ ನಂತರದ ಕರ್ನಾಟಕ ರಾಜ್ಯವನ್ನು ’ಮಾದರಿ ರಾಜ್ಯ’ವೆಂದು ಕರೆಯಲು ಕಾರಣವಾಗಿದ್ದೆ ಈ ಕೋಲಾರ ಚಿನ್ನದ ಗಣಿಗಳು. ಮೈಸೂರು ಗಂಧದ ಎಣ್ಣೆ /ಸಾಬೂನು ಕಾರ್ಖಾನೆ, ಭದ್ರಾವತಿ ಪೇಪರ್ ಕಾರ್ಖಾನೆ, ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಇನ್ನಿತರ ಕಾರ್ಖಾನೆಗಳು ಪ್ರಾರಂಭವಾಗಲು ಚಿನ್ನದ ಗಣಿಗಳೇ ಕಾರಣವಾಗಿವೆ. ಕೆಜಿಎಫ್ ಚಿನ್ನದ ಗಣಿಗಳಿಂದ ಮೈಸೂರು ಸರಕಾರಕ್ಕೆ ಮೂರು ವರ್ಷಗಳಲ್ಲಿ ದೊರಕಿದ ಹಣದ ವಿವರಗಳನ್ನು ಗಮನಿಸಿದರೆ ಅಚ್ಚರಿ ಆಗುತ್ತದೆ. ಆ ವಿವರಕ್ಕಾಗಿ ಈ ಕೆಳಗಿನ
ಕೋಷ್ಠಕ ನೋಡಬಹುದು…
cnn graphics
ರಾಜ್ಯ ಮತ್ತು ದೇಶಕ್ಕೆ ಇಷ್ಟೆಲ್ಲ ಕೊಡುಗೆ ನೀಡಿರುವ ಕೋಲಾರ ಜಿಲ್ಲೆಗೆ ಅಂದರೆ ಕೆಜಿಎಫ್ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ ಮಾಡಲೇಬೇಕಿದೆ. ಬಹುಶಃ ಇಷ್ಟು ವರ್ಷಗಳಾದ ಮೇಲೆ ಜಿಜೆಪಿ ಸರಕಾರ ಇದನ್ನು ನೆರವೇರಿಸುತ್ತದೆಯೇ ಕಾದುನೋಡಬೇಕಿದೆ. ಯಾಕೆಂದರೆ ಇಂತಹ ಮಾತುಗಳು ಚುನಾವಣೆ ಹತ್ತಿರ ಬಂದಾಗ ಮುಂಚೂಣಿಗೆ ಬಂದುಬಿಡುತ್ತವೆ. ಹಿಂದಿನ ಚುನಾವಣೆಯ ಸಮಯದಲ್ಲೂ ಚಿನ್ನದ ಗಣಿಗಳನ್ನು ಪ್ರಾರಂಭಿಸಿಯೇ ಬಿಡುತ್ತಾರೆ ಎಂಬು ಮಾತಗಳು ದಟ್ಟವಾಗಿ ಹರಿದಾಡಿದವು. ಚುನಾವಣೆ ಮುಗಿದ ಮೇಲೆ ಅವರೆಲ್ಲ ಎಲ್ಲಿಗೋದರೊ ಕಾಣಿಸಲಿಲ್ಲ.
ಮಲತಾಯಿ ದೋರಣೆ
ವಿಶ್ವ ಮಹಾಯುದ್ಧಗಳು ಮುಗಿದ ನಂತರ ಬೆಂಗಳೂರಿನಲ್ಲಿ ಪ್ರಾರಂಭವಾದ ಅನೇಕ ಕಾರ್ಖಾನೆಗಳಿಗೆ ಕೆಜಿಎಫ್ ಗಣಿಗಳು ತಂತ್ರಜ್ಞಾನದ ಕೊಡುಗೆಯನ್ನು ನೀಡಿವೆ. ದೇಶದ ಹಲವಾರು ರಾಜ್ಯಗಳಲ್ಲಿ ಗಣಿಗಳು ಪ್ರಾರಂಭವಾಗಲು ಮತ್ತು ಕಾರ್ಯ ನಿರ್ವಹಿಸಿಲು ಇಲ್ಲಿನ ಅಧಿಕಾರಿಗಳು ಮತ್ತು ಕಾರ್ಮಿಕರು ಸಹಾಯ ಮಾಡಿದ್ದಾರೆ. ಹಾಗಾಗಿಯೇ ಕೆಜಿಎಫ್ ಗಣಿಗಳನ್ನು ’ತಾಯಿ ಗಣಿಗಳು’ ಎಂದು ಕರೆಯುತ್ತಿದ್ದರು. ಇಷ್ಟೆಲ್ಲ ಕೊಡುಗೆಯನ್ನು ಕೊಟ್ಟ ಈ ಚಿನ್ನದ ಗಣಿಗಳ ಕಾರ್ಮಿಕರನ್ನು ಆ ಕಾಲದಿಂದ ಈ ಕಾಲದವರೆಗೂ ದಲಿತರು, ತಮಿಳರು ಎಂದೇ ಹೀಯಾಳಿಸುತ್ತ ಬರಲಾಗಿದೆ. ಸ್ವಾತಂತ್ರ್ಯದ ನಂತರ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಅವಿಭಜಿತ ಕೋಲಾರ ಜಿಲ್ಲೆಯ ಬಗ್ಗೆ ಮಲತಾಯಿ ದೋರಣೆಯನ್ನು ತೋರಿಸುತ್ತಲೇ ಬಂದಿವೆ.
ವಿಶ್ವೇಶ್ವರಯ್ಯ, ಕೆ.ಸಿ.ರೆಡ್ಡಿ ಮಾಡಿದ್ದೇನು?
ವಿಪರ‍್ಯಾಸವೆಂದರೆ ಮೈಸೂರಿನ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಇದೇ ಕೆಜಿಎಫ್ ಹತ್ತಿರದ ಕ್ಯಾಸಂಬಳ್ಳಿಯವರು. ಸರ್.ಎಂ.ವಿಶ್ವೇಶ್ವರಯ್ಯ ಅವರು ಕೂಡ ಅಂದಿನ ಕೋಲಾರ ಜಿಲ್ಲೆಯವರೆ. ವಿಶ್ವೇಶ್ವರಯ್ಯ ಅವರ ಉಸ್ತುವಾರಿಯಲ್ಲಿ ಕಟ್ಟಿದ ಕೃಷ್ಣರಾಜಸಾಗರದ ಅಣೆಕಟ್ಟಿನಿಂದ ತಮಿಳುನಾಡಿಗೆ 419 ಟಿಎಂಸಿ ನೀರು ಮತ್ತು ಕರ್ನಾಟಕಕ್ಕೆ 270 ಟಿಎಂಸಿ ನೀರನ್ನು ಕೊಡಲಾಯಿತು. ಕೇರಳ ಮತ್ತು ಪುದುಚೇರಿಗೆ ಕ್ರಮವಾಗಿ 30 ಮತ್ತು 7 ಟಿಎಂಸಿ ನೀರು ನೀಡಲಾಯಿತು. ಆದರೆ ಪಕ್ಕದಲ್ಲಿಯೇ ಇದ್ದ ಕೋಲಾರ ಜಿಲ್ಲೆಗೆ ಮಾತ್ರ ಒಂದೇ ಒಂದು ಟಿ.ಎಂಸಿ ನೀರು ದೊರಕಲಿಲ್ಲ. ಕಾವೇರಿ ನೀರು ಬೆಂಗಳೂರು ಪಕ್ಕದಲ್ಲಿರುವ ಹೊಸೂರಿಗೂ ದೊರಕುತ್ತದೆ. ಆದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಿನ ಕೊಳಚೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನಮ್ಮ ರಾಜಕಾರಣಿಗಳು ಸಂತೋಷವಾಗಿ ಅದನ್ನೇ ಪ್ರಸಾದದಂತೆ ಸ್ವೀಕರಿಸಿದ್ದಾರೆ.
ಕೆಜಿಎಫ್ ನಗರದಲ್ಲಿರುವ ಸೈನೇಡ್ ದಿಬ್ಬ.
ckphotography
“ಕೆಜಿಎಫ್ ಎಂದರೆ ಎಲ್ಲರಿಗೂ ಇಷ್ಟ!! ಏಕೆಂದರೆ..” ಈ ಕೆಳಗಿನ ವರದಿ ಓದಿ..
Very nice information…
ಉತ್ತಮ ಮಾಹಿತಿ, ನಿರೂಪಣೆಯುಳ್ಳ ಲೇಖನ ಸರಣಿ. ರಾಜಕೀಯ ಮೇಲಾಟಗಳಿಗೆ ಕೈಗಾರಿಕಾ ಪಾರ್ಕ್ ಕೈ ಜಾರದಿರಲಿ.