90ರ ದಶಕದಲ್ಲಿ ಬಹುತೇಕ ಪತನವಾಗಿದ್ದ ರಷ್ಯ, ಇದೀಗ ಮತ್ತೆ ಪುಟಿದೆದ್ದಿದೆ. ಸೋವಿಯತ್ ಒಕ್ಕೂಟದ ವೈಭವವನ್ನು ಮರಳಿ ಪಡೆಯುತ್ತಿದೆ. ಅತ್ತ ಸೇನಾಶಕ್ತಿಯಲ್ಲಿ, ಇತ್ತ ಬಾಹ್ಯಾಕಾಶ ಸಂಶೋಧನೆಯಲ್ಲಿ ಕೂಡ. ಬ್ರಿಟನ್ ವಿಜ್ಞಾನಿಗಳಿಗೆ ಸಡ್ಡು ಹೊಡೆಯುವಂತೆ ಇಡೀ ಶುಕ್ರ ಗ್ರಹವೇ ತನ್ನ ಜಹಗೀರು ಎಂದು ಗೇರು ಹಾಕಿ ಕೂತಿದೆ. ಇನ್ನೇನು ಶುರುವಾಗುತ್ತಾ ಸೌರಮಂಡಲದಲ್ಲಿ ಪಾರುಪತ್ಯಕ್ಕಾಗಿ ಹೋರಾಟ?
***
courtesy wikipedia
ನಮ್ಮ ಭೂಮಿಗೆ ಅತ್ಯಂತ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆಯ ಬಗ್ಗೆ ಕೆಲ ದಿನಗಳ ಹಿಂದೆ ಹೊರಬಂದ ಮಾಹಿತಿ ಹಿನ್ನೆಲೆಯಲ್ಲಿ ಜಾಗತಿಕವಾಗಿ ಚರ್ಚೆ ಆರಂಭವಾಗಿದೆ. ಶುಕ್ರನ ಮೇಲಿರುವ ದಟ್ಟವಾದ ಮೋಡಗಳಲ್ಲಿ ಪೋಸ್ಪಿನ್ (phosphine) ಎಂಬ ಅನಿಲ ಇದೆ ಎಂದು ಬ್ರಿಟನ್ನಿನ ಕಾರ್ಡಿಫ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ ಬೆನ್ನಲ್ಲಿಯೇ ರಷ್ಯ ರಂಗಪ್ರವೇಶ ಮಾಡಿದೆ. “ಅದು ನನ್ನ ಗ್ರಹ. ಅದು ರಷ್ಯದ ಗ್ರಹ” ಎಂದು ಹೇಳುವ ಮೂಲಕ ಜಗತ್ತಿನಾದ್ಯಂತ ಸಂಚಲನ ಉಂಟು ಮಾಡಿದೆ. ವೈಜ್ಞಾನಿಕವಾಗಿ ಎದ್ದಿರುವ ಈ ವಿವಾದದಿಂದ ಜಗತ್ತಿನ ಇತರೆ ದೇಶಗಳ ವಿಜ್ಞಾನಿಗಳು ಚಕಿತರಾಗಿದ್ದಾರೆ.
ಇತ್ತೀಚೆಗೆ ಕೋವಿಡ್ ಸೋಂಕು ವಾಸಿ ಮಾಡುವ ನಿಟ್ಟಿನಲ್ಲಿ ಎಲ್ಲ ದೇಶಗಳು ವ್ಯಾಕ್ಸಿನ್ ಸಂಶೋಧನೆಯಲ್ಲಿ ನಿರತವಾಗಿದ್ದಾಗಲೇ ಶಾಕ್ ನೀಡಿದ್ದ ರಷ್ಯ, ಹೊಸದಾಗಿ ವ್ಯಾಕ್ಸಿನ್ ಪರಿಶೋಧಿಸಿ ಅದಕ್ಕೆ ʼಸ್ಫುಟ್ನಿಕ್ʼ ಎಂದು ನಾಮಕರಣ ಮಾಡಿತ್ತು. ಆಗ್ಗೆ ವ್ಯಾಕ್ಸಿನ್ ಶೋಧನೆಯಲ್ಲಿ ವೇಗವಾಗಿ ಹೆಜ್ಜೆ ಇಡುತ್ತಿದ್ದ ಕೋವಿಡ್ ಜನಕದೇಶ ಚೀನ ಹಾಗೂ ಆ ವೈರಾಣುವಿನಿಂದ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಅಮೆರಿಕ ದೇಶಗಳು ಒಟ್ಟಿಗೇ ಆಘಾತಕ್ಕೇ ಈಡಾಗಿದ್ದವು. ಏಕೆಂದರೆ, ಕೋವಿಡ್ ಕಾರಣದಿಂದ ಅವೆರಡೂ ದೇಶಗಳ ನಡುವೆ ಶೀತಲ ಸಮರ ಸೃಷಿಯಾಗಿ ಅದು ತಾರಕಕ್ಕೂ ಏರಿತ್ತು.
ಹೀಗಿರಬೇಕಾದರೆ, ಶುಕ್ರನ ವಿಚಾರದಲ್ಲಿ ರಷ್ಯ ದೇಶವು ಅವೆರಡೂ ದೇಶಗಳಿಗೆ ಮಾತ್ರವಲ್ಲ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ, ಜರ್ಮನಿ, ಜಪಾನ್, ಬ್ರಿಟನ್ ದೇಶಗಳಿಗೂ ಶಾಕ್ ಕೊಟ್ಟಿದೆ.
ಇಷ್ಟಕ್ಕೂ ರಷ್ಯ ಹೇಳಿದ್ದೇನು?
ಮೊದಲಿಗೆ, ಶುಕ್ರ ಗ್ರಹ ತನ್ನದು ಎಂದು ಪ್ರತಿಪಾದಿಸಿದೆ. ಸದ್ಯಕ್ಕೆ ಮಾಸ್ಕೋದಲ್ಲಿ ನಡೆಯುತ್ತಿರುವ ಕೈಗಾರಿಕಾ ಮೇಳವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ರಷ್ಯದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್‌ಮೋಸ್ (Roscosmos) ಮುಖ್ಯಸ್ಥ ಹಾಗೂ ಆ ದೇಶದ ಉಪ ಪ್ರಧಾನಿ ಡಿಮಿಟ್ರಿ ರೋಗೋಜಿನ್ ಹೇಳಿರುವುದು ಇಷ್ಟು.. “ಶುಕ್ರ ಗ್ರಹದ ಮೇಲೆ ಹೆಜ್ಜೆ ಇಟ್ಟ ಮೊತ್ತಮೊದಲ ದೇಶ ರಷ್ಯ. ಏಕೈಕ ದೇಶವೂ ರಷ್ಯ. 60, 70,80ನೇ ದಶಕದಲ್ಲಿ ನಮ್ಮ ದೇಶದ ಸಂಶೋಧಕರು ಶುಕ್ರ ಗ್ರಹದ ಬಗ್ಗೆ ಸಾಕಷ್ಟು ಪರಿಶೋಧನೆ ನಡೆಸಿದ್ದಾರೆ. ಜಗತ್ತಿನ ಬೇರಾವ ದೇಶಕ್ಕೂ ತಿಳಿಯದ ಆ ಗ್ರಹದ ಮಾಹಿತಿಯನ್ನು ಬಹು ಹಿಂದೆಯೇ ನಮ್ಮ ವಿಜ್ಞಾನಿಗಳು ಶೇಖರಿಸಿದ್ದಾರೆ” ಎಂದು ಹೇಳಿದ್ದಾರೆ.
2017ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡಿಮಿಟ್ರಿ ರೋಗೋಜಿನ್, ಪ್ರಧಾನಿ ಮೋದಿ ಅವರ ಜತೆ ಮಾತುಕತೆ ನಡೆಸಿದ್ದರು. ಅಂದಿನ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅವರ ಜತೆಯೂ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದರು.
ಇದೇ ವೇಳೆ ಬೇರಾವ ದೇಶದ ಪ್ರಮೇಯ ಅಥವಾ ಸಹಕಾರವೂ ಇಲ್ಲದೆ ಮತ್ತೆ ಶುಕ್ರನ ಬಗ್ಗೆ ರಷ್ಯವು ಮತ್ತಷ್ಟು ಗಾಢವಾದ ಸಂಶೋಧನೆ ನಡೆಸಲಿದೆ ಎಂದು ಡಿಮಿಟ್ರಿ ರೋಗೋಜಿನ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಈ ವಿಷಯದಲ್ಲಿ ಬೇರೊಂದು ದೇಶದ ಕ್ಲೈಮುಗಳನ್ನು ಒಪ್ಪಲು ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಅವರು ಮಾತನಾಡಿದ್ದಾರೆ. “ಆ ಗ್ರಹದ ಮೇಲೆಯೇ ಸಂಶೋಧನೆ ನಡೆಸಿದ ಹೆಗ್ಗಳಿಕೆ ರಷ್ಯದ್ದು. ಇಡೀ ಸೌರಕುಟುಂಬದಲ್ಲಿ ಅನ್ಯ ಗ್ರಹದ ಮೇಲೆ ಅತ್ಯಂತ ಯಶಸ್ವಿಯಾಗಿ ಹೆಜ್ಜೆ ಇಟ್ಟ ದೇಶವೂ ನಮ್ಮದೇ. 1970ರಲ್ಲಿಯೇ ವೆನೆರಾ-7ರ ಮೂಲಕ ಶುಕ್ರ ಗ್ರಹದ ಅತ್ಯಂತ ಮಹತ್ವದ ಮಾಹಿತಿಯನ್ನು ಸಂಗ್ರಹ ಮಾಡಿದ್ದೇವೆ. ಆ ಗ್ರಹದ ಮೇಲಿನ ವಾತಾವರಣ, ಮಣ್ಣು, ಮತ್ತಿತರೆ ಅಂಶಗಳ ಬಗ್ಗೆ ಅನೇಕ ರೀತಿಯಲ್ಲಿ ಪ್ರಯೋಗ ಮಾಡಿದ್ದೇವೆ” ಎಂದು ಅವರು ಹೇಳಿಕೊಂಡಿದ್ದಾರೆ.
@DRogozin
ನಿಜ, ಮುಂಚೂಣಿಯಲ್ಲಿತ್ತು ಸೋವಿಯತ್
ಇದೇ ವೇಳೆ ರೋಗೋಜಿನ್ ಹೇಳುತ್ತಿರುವ ಯಾವುದೇ ಮಾತನ್ನು ಜಗತ್ತಿನ ಬೇರಾವ ದೇಶವೂ ತಳ್ಳಿಹಾಕುತ್ತಿಲ್ಲ. ಯಾಕೆಂದರೆ, ಶುಕ್ರ ಗ್ರಹದ ವಿಚಾರದಲ್ಲಿ ಅತಿ ಹೆಚ್ಚು ಸಂಶೋಧನೆ ನಡೆಸಿರುವ ದೇಶವೂ ನಿರ್ವಿವಾದವಾಗಿ ರಷ್ಯವೇ. 1961 ಫೆಬ್ರವರಿ 12ರಂದು ಮೊತ್ತ ಮೊದಲಿಗೆ ಶುಕ್ರನಲ್ಲಿಗೆ ಸೋವಿಯತ್ ನೌಕೆಯನ್ನು ಕಳಿಸಿತ್ತು. ಆದರೆ ಅದು ಅದೆಷ್ಟೋ ಲಕ್ಷ ಕಿ.ಮೀ ದೂರದಲ್ಲಿದ್ದಾಗಲೇ ನಾಶವಾಗಿತ್ತು. ವಾತಾವರಣದಲ್ಲಿದ್ದ ಬಿಸಿ ಅದನ್ನು ಆಹುತಿ ತೆಗೆದುಕೊಂಡಿತ್ತು. ಅದಾದ ಮೇಲೆ 1966ರ ಮಾರ್ಚ್‌ನಲ್ಲಿ ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಶುಕ್ರನತ್ತ ಹಾರಿಬಿಟ್ಟಿತು. ಆದರೆ, ಅದು ಮಾತ್ರ ಶುಕ್ರನ ಮೇಲೆ ಲ್ಯಾಂಡ್ ಆಗಿ ಕ್ರ್ಯಾಶ್ ಆಯಿತು. ಅಲ್ಲಿಗೂ ಪಟ್ಟುಬಿಡದ ತ್ರಿವಿಕ್ರಮನಂತೆ ಮರಳಿ ಯತ್ನವ ಮಾಡಿದ ಸೋವಿಯತ್, 1967 ಅಕ್ಟೋಬರ್ 18ರಂದು ಯಶಸ್ವಿಯಾಗಿ ವೆನೆರಾ ಬಾಹ್ಯಾಕಾಶ ನೌಕೆಯನ್ನು ಶುಕ್ರನ ಮೇಲೆ ಲ್ಯಾಂಡ್ ಮಾಡಿಸಿತಲ್ಲದೆ, ಅದರಿಂದ ಮಾಹಿತಿಯನ್ನು ಸಂಗ್ರಹ ಮಾಡಿತು. ಅದೇ ದಿನ ಆ ವೆನೆರಾ ಸಿಗ್ನಲ್ ಕಳೆದುಕೊಂಡಿತು. ಆದರೂ ಅದರಿಂದ ಸೋವಿಯತ್ ವಿಜ್ಞಾನಿಗಳು ಅಗತ್ಯ ಮಾಹಿತಿಯನ್ನು ಶೇಖರಣೆ ಮಾಡಿದ್ದರು. ಆ ಬಗ್ಗೆ ಇದೀಗ ರೋಗೋಜಿನ್ ಮಾತನಾಡಿದ್ದಾರೆ.
ಇನ್ನೊಂದೆಡೆ ಜಪಾನ್, ಬ್ರಿಟನ್, ಅಮೆರಿಕ ಹಾಗೂ ಯುರೋಪಿನ ಕೆಲ ದೇಶಗಳು ಈಗಾಗಲೇ ಶುಕ್ರನ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿವೆ. ಆದರೆ, ಶುಕ್ರನ ಮೇಲೆ ಎಲ್ಲಗೂ ಮೊದಲು ನೌಕೆ ಇಳಿಸಿದ್ದು ಮಾತ್ರ ಸೋವಿಯತ್. ಆ ಕಾಲಕ್ಕೆ ಸೋವಿಯತ್ ಅಬ್ಬರ ಕಂಡು ಅಮೆರಿಕದ ವಿಜ್ಞಾನಿಗಳು ತಲ್ಲಣಗೊಂಡಿದ್ದರಂತೆ. ಸದ್ಯಕ್ಕೆ ಇರುವ ದಾಖಲೆ ಪ್ರಕಾರ, ಶುಕ್ರ ಗ್ರಹದ ಮೇಲೆ 127 ನಿಮಿಷ ಕಾಲ ಸಕ್ರಿಯವಾಗಿ ಕೆಲಸ ಮಾಡಿದ ಬಾಹ್ಯಾಕಾಶ ನೌಕೆ ವೆನೆರಾ 13ರನ್ನು ಉಡಾಯಿಸಿದ್ದ ಸೋವಿಯತ್ ದಾಖಲೆ ಇವತ್ತಿಗೂ ಹಾಗೆಯೇ ಅವಿಚ್ಛಿನ್ನವಾಗಿಯೇ ಇದೆ. 1982 ಮಾರ್ಚ್ 1ರಂದು ಹಾರಿಸಿದ್ದ ವೆನೆರಾ 13 ಯಶಸ್ವಿಯಾಗಿ ಶುಕ್ರನ ಮೇಲೆ ಇಳಿದಿತ್ತಲ್ಲದೆ, ಅಗತ್ಯ ಮಾಹಿತಿಯನ್ನು ಸಂಗ್ರಹ ಮಾಡಿ ರವಾನಿಸಿತ್ತು.
ಬ್ರಿಟನ್ ತಜ್ಞರ ಶೋಧನೆ
ರಷ್ಯ ಏನೇ ಹೇಳುತ್ತಿದ್ದರೂ ಕಳೆದ ಸೋಮವಾರ ತಮ್ಮ ಸಂಶೋಧನೆಯ ವರದಿಗಳನ್ನು ಬಹಿರಂಗಡಿಸಿದ ಬ್ರಿಟನ್ ತಜ್ಞರು ಮಾತ್ರ, ಶುಕ್ರನ ಮೇಲೆ ಜೀವಿಗಳಿರುವ ಸಾಧ್ಯತೆ ಇದೆ ಎಂದೇ ನಂಬಿದ್ದಾರೆ. ಆದರೆ, ಇಡೀ ಗ್ರಹ ತನ್ನದೆಂದು ಹೇಳುತ್ತಿರುವ ರಷ್ಯ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿದ ಹಾಗಿಲ್ಲ. ಶುಕ್ರನ ಮೇಲಿರುವ ದಟ್ಟ ಮೋಡಗಳಲ್ಲಿ ಪೋನ್ಸಿಸ್ ಅನಿಲ ಇರುವಿಕೆಯನ್ನು ಅವರು ಪತ್ತೆ ಹಚ್ಚಿದ್ದಾರೆ. ಆದರೆ, ಆಮ್ಲಜನಕ ಇಲ್ಲದ ಪ್ರದೇಶಗಳಲ್ಲಿ ವಾಸ ಮಾಡುವ ಸೂಕ್ಷ್ಮಜೀವಿಗಳು ಈ ಅನಿಲವನ್ನು ರಿಲೀಸ್ ಮಾಡುತ್ತವೆ ಎಂಬುದು ವಿಜ್ಞಾನಿಗಳ ತರ್ಕ. ಹೀಗಾಗಿ ಶುಕ್ರನೊಳಗೆ ಸೂಕ್ಷ್ಮಾಣುಗಳು ಇರಬಹುದು ಎಂಬುದು ಬ್ರಿಟಿಷ್ ತಜ್ಞರ ಮಾತು. ಈ ತಜ್ಞರೆಲ್ಲರೂ ದಕ್ಷಿಣ ಅಮೆರಿಕಾದಲ್ಲಿರುವ ಚಿಲಿ ದೇಶದ ಅಟಕಾಮಾ ಮರುಭೂಮಿಯಲ್ಲಿ ಭಾರೀ ಟೆಲಿಸ್ಕೋಪುಗಳನ್ನು ಬಳಸಿ ಶುಕ್ರನ ಮೇಲಿರಬಹುದಾದ ಅನಿಲವನ್ನು ಪತ್ತೆ ಮಾಡಿದ್ದಾರೆ. ಅಂದಹಾಗೆ, ಈ ಅನಿಲಕ್ಕೆ ಉರಿಯುವ ಗುಣವಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ರಷ್ಯಾಗೆ ಟಾಂಗ್
ಇದೇ ವೇಳೆ ಶುಕ್ರ ನನ್ನದು ಎಂದ ರಷ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಟ್ಟಿ ಜನ ಕಾಲೆಯುತ್ತಿದ್ದಾರೆ. ಬ್ರಿಟನ್ ಟೀವಿ ನಿರೂಪಕಿ ಸಾರಾ ಒ ಕಾನೆಲ್ ಟ್ವೀಟ್ ಮಾಡಿ, “ನೀವು ಶುಕ್ರನನ್ನು ಹೊಂದಬಹುದು, ಆದರೆ ಯುರೇನಸ್ ನನ್ನದು” ಎಂದು ಚಟಾಕಿ ಹಾರಿಸಿದ್ದಾರೆ. ಡಿಮಿಟ್ರಿ ರೋಗೋಜಿನ್ ಹೇಳಿಕೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.