Obituary
ಸೆಪ್ಟೆಂಬರ್ 22. ನಾನು ಹುಟ್ಟಿದ ದಿನ. ಅದೇ ದಿನವಾ? ಗೊತ್ತಿಲ್ಲ, ಹಾಗಂತ ಅಮ್ಮ ನಮ್ಮ ಬಸವರಾಜ ಮೇಷ್ಟ್ರಿಗೆ ಹೇಳಿ ಶಾಲೆ ದಾಖಲಾತಿಯಲ್ಲಿ ಬರೆಸಿದ್ದರು. ನನ್ನ ಮದುವೆಯಾಗಿ ಮೊದಲ ವರ್ಷದ ಆನಿವರ್ಸರಿ ಕಳೆದ ಎಷ್ಟೋ ದಿನಕ್ಕೆ ನನ್ನ ಹೆಂಡ್ತಿ, ಇವತ್ತು ನಿಮ್ಮ ಬರ್ತ್ ಡೇ ರೀ.. ಅಂತ ಹೇಳಿ ಒಂದು ಕೇಕ್ ತಂದು ಮನೆಯಲ್ಲಿ ಕಟ್ ಮಾಡಿಸಿದ್ದಳು. ಹೀಗೆ ಸಂತೋಷವಾಗಿದ್ದ ದಿನಗಳಲ್ಲಿ ಅವಳ ಒಬ್ಬೇಒಬ್ಬ ತಮ್ಮ ಇದ್ದಕ್ಕಿದ್ದ ಹಾಗೆ ಹೋಗಿಬಿಟ್ಟ. ಆ ಇಡೀ ವರ್ಷ ನಮ್ಮ ಮನೆಯಲ್ಲಿ ಅಂಥ ಹೇಳಿಕೊಳ್ಳುವ ಸಂಭ್ರಮವೇ ಇರಲಿಲ್ಲ. ಅದಾದ ಮೇಲೆ ನಾನು ‘ಸಂಯುಕ್ತ ಕರ್ನಾಟಕʼ ಬಿಟ್ಟು ‘ಕನ್ನಡಪ್ರಭ’ ಸೇರಿಕೊಂಡಿದ್ದೆ. ಅದೇ ಒಂದು ಸೆಪ್ಟೆಂಬರ್ 22ರಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಆಫೀಸಿಗೆ ಬಂದ ನನಗೆ ಸುದ್ದಿ ಸಂಪಾದಕರಾಗಿದ್ದ ಜಯರಾಮ ಅಡಿಗರು ಕೆಸಿ ದಾಸ್ ಮಳಿಗೆಯ ಒಂದು ಸ್ವೀಟ್ ಬಾಕ್ಸ್ ತಂದು, “ಇದನ್ನು ತೆಗೆದುಕೊಳ್ಳಿ. ಇವತ್ತು ನಿಮ್ಮ ಹುಟ್ಟುಹಬ್ಬ ಅಲ್ಲವಾ? ಜನ್ಮದಿನದ ಶುಭಾಶಯಗಳು” ಎಂದು ಹೇಳಿ ಆಶೀರ್ವಾದ ಮಾಡಿದರು. ಅದೇ ಮೊದಲು, ನನ್ನ ಜೀವನದಲ್ಲಿ ಜನ್ಮದಿನದ ನಿಮಿತ್ತ ಅಂತ ಹೊರಗೆ ಒಬ್ಬರು ನನಗೆ ಹೀಗೆ ಸಿಹಿಕೊಟ್ಟು ಹಾರೈಸಿದ್ದು. ಅನಿರೀಕ್ಷಿತವಾಗಿ ಎದುರಾದ ಆ ಕ್ಷಣದಲ್ಲಿ ಅಡಿಗರನ್ನು ಕಣ್ತುಂಬಿಕೊಂಡು ನೋಡುತ್ತ ನಿಂತಿದ್ದು ಬಿಟ್ಟರೆ, ಅವರಿಗೆ ಒಂದು ಥ್ಯಾಂಕ್ಸ್ ಹೇಳುವುದನ್ನೂ ಮರೆತುಬಿಟ್ಟಿದ್ದೆ. ಆವತ್ತು ಹುಟ್ಟಿದ ದಿನವನ್ನು ನೆನಪು ಮಾಡಿದ ‘ಕನ್ನಡಪ್ರಭ’ಕ್ಕೂ ಒಂದು ಕೃತಜ್ಞತೆಯನ್ನೂ ಸಲ್ಲಿಸಲಾಗಲಿಲ್ಲ..
ಅಂಥದ್ದೇ ಇನ್ನೊಂದು ಬರ್ತ್ ಡೇ ಮೊನ್ನೆಮೊನ್ನೆ ಅಂದರೆ ಇದೇ ಸೆಪ್ಟೆಂಬರ್ 22ರಂದು ಮಂಗಳವಾರ ನನಗೆ ಎದುರಾಯಿತು. ಕೋವಿಡ್ಡೂ ಸೇರಿ ಬೇರೆಬೇರೆ ಕಾರಣಗಳಿಗೆ ಆವತ್ತೂ ನಾನು ಹುಟ್ಟಿದ ದಿನ ಎಂಬುದನ್ನೂ ಸತ್ಯವಾಗಿಯೂ ಮರೆತುಹೋಗಿದ್ದೆ. ಆ ಹಿಂದಿನ ದಿನ, ಅಂದರೆ ಸೋಮವಾರ ನಾನು ಕೆಲಸದಲ್ಲಿ ಬಿಝಿಯಾಗಿದ್ದೆ. ಏನೋ ಒತ್ತಡಗಳು, ಕೆಲಸದ ಕಷ್ಟಗಳು. ಯಾರ ಮೇಲೆಯೋ ಸಿಟ್ಟು, ಹತಾಶೆ ಹೀಗೆ ಹಲವು ತಾಕಲಾಟಗಳು.. ನಾನಿವತ್ತು ನನ್ನಮ್ಮನಿಂದ ಹೊರಬಂದು ಉಸಿರು ತುಂಬಿಕೊಂಡ ದಿನ ಎಂಬುದೂ ಮರೆತುಹೋಗಿತ್ತು. ಯಾವುದೋ ಒಂದು ಕೆಲಸ ಮಾಡಿಕೊಂಡು ನನ್ನ ಪಾಡಿಗೆ ನಾನಿದ್ದ ಹೊತ್ತಿನಲ್ಲಿ ರಾತ್ರಿ ಗಂಟೆ 12 ಆಗಿದ್ದನ್ನೂ ನಾನು ಗಮನಿಸಿರಲಿಲ್ಲ. ಗಡಿಯಾರದ ಮುಳ್ಳು 12ರ ಮೇಲೆ ಬಂದ ಕೂಡಲೇ ನನ್ನಿಬ್ಬರೂ ಮಕ್ಕಳು ಬಂದು ಬಾಚಿ ತಬ್ಬಿಕೊಂಡು, ʼಡ್ಯಾಡ್.. ಯಾಪಿ ಬರ್ತ್ ಡೇ ಯೂʼ ಅಂದರು. ಅದು ಸಡನ್ ಸಂಭ್ರಮ. ಆ ಕ್ಷಣ ನಾನೇ ನನ್ನ ಮಕ್ಕಳ ಮಡಿಲಲ್ಲಿ ಹುದುಗಿಹೋಗಿದ್ದೆ. ಎರಡೆಜ್ಜೆ ದೂರವಿದ್ದ ನನ್ನ ಪತ್ನಿ ನಮ್ಮಮೂವರ ಸಂಭ್ರಮವನ್ನು ಕಾಣುತ್ತ ನನ್ನ ಕಂಗಳಲ್ಲಿ ತೊಟ್ಟಿಕ್ಕುತ್ತಿದ್ದ ಹನಿಗಳನ್ನು ಗುರುತಿಸಿದ್ದಳು. ಅವು ಯಾಕೆಂದು ಅವಳಿಗೆ ಮಾತ್ರ ಗೊತ್ತಿತ್ತು.
***
ಅದಾದ ಮೇಲೆ ಎರಡೇ ದಿಗಳಷ್ಟೇ. ಗುರುವಾರ ರಾತ್ರಿಯೇ ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ ಅಂತ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ವೈದ್ಯರು ಟ್ವೀಟ್ ಮಾಡಿದ್ದರು. ಆ ರಾತ್ರಿ ಶುಕ್ರವಾರಕ್ಕೆ ಬಿದ್ದ ಮೇಲೆ ನಾನು ಅದನ್ನು ಗಮನಿಸಿದೆ. ನಿದ್ದೆ ಮತ್ತೂ ಹತ್ತಲಿಲ್ಲ. ಅದನ್ನು ರೀಟ್ವೀಟ್ ಮಾಡಿ ದಿಂಬಿಗೆ ತಲೆಹಾಕಿದರೆ, ಅವರ ಹಾಡುಗಳು, ಯುಟ್ಯೂಬಿನಲ್ಲಿ ನೋಡಿದ್ದ ಸಂದರ್ಶನಗಳು, ಅವರನ್ನೇ ಅನುಕರಣೆ ಮಾಡಿ ಹಾಡಲೆತ್ನಿಸಿದ ವಿಫಲ ಪ್ರಯತ್ನಗಳೂ, ಬಾಗೇಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಹಾಡಿದ್ದ ಅವರ ಹಾಡುಗಳೆಲ್ಲ ನೆನಪಾಗಿ ಒದ್ದಾಡತೊಡಗಿದ್ದೆ. ನನ್ನ ಚಡಪಡಿಕೆ ನನ್ನವಳಿಗೆ ಗೊತ್ತಾಗಿ, “ಮಲಗ್ರೀ, 2 ಗಂಟೆಯಾಯಿತು” ಎಂದಳು. ನಿದ್ದೆ ಬರಲಿಲ್ಲ.
***
ಬೆಳಗ್ಗೆ ಎದ್ದ ಮೇಲೆ ಚಾನೆಲ್ ನೋಡಿದಾಗ ಬಾಲು ಅವರ ಸ್ಥಿತಿ ಗಂಭೀರವಾಗಿಯೇ ಇದೆ ಅಂತಲೇ ಚಾನೆಲ್‌ಗಳಲ್ಲಿ ಸುದ್ದಿ ಬರುತ್ತಿತ್ತು. ರೂಮು ಸೇರಿಕೊಂಡಿದ್ದ ನಾನು ಕೆಟ್ಟಸುದ್ದಿ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ. ನಮ್ಮ ವಾಟ್ಸಾಪು ಗ್ರೂಪುಗಳಲ್ಲಿ ಬಾಲು ಅವರ ಬಗ್ಗೆ ವಿಚಾರಿಸುವುದು ಜಾಸ್ತಿಯಾಗಿತ್ತು. ಆದರೆ, 1.30 ಹೊತ್ತಿಗೆ ಅವರು ಇನ್ನಿಲ್ಲ ಎಂಬ ಸುದ್ದಿ ಬಂದಾಗ ಮಾತು ಹೊರಡಲಿಲ್ಲ. ನನ್ನನ್ನು ಇಡಿಯಾಗಿ ಆವರಿಸಿಕೊಂಡ ಅವರು ದುಃಖವಾಗಿಯೇ ಉಕ್ಕಿಬರುತ್ತಿದ್ದರು.
***
ಗಡಿಗೆ ಹತ್ತಿರದಲ್ಲೇ ಹುಟ್ಟಿದ ನಾನು ಬಾಲು ಅವರು ಹಾಡಿದ ತೆಲುಗು ಹಾಡುಗಳನ್ನೇ ಮೊದಲು ಕೇಳಿದ್ದು. ಆಮೇಲೆ ಕನ್ನಡ ಹಾಡುಗಳ ರುಚಿ ಹತ್ತಿತು. ನಮ್ಮೂರಿನಲ್ಲಿ ಒಂದು ರಾಮಾಲಯವಿದೆ. ಆಗಷ್ಟೇ ಅದನ್ನು ಜೀರ್ಣೋದ್ಧಾರ ಮಾಡಿ ಅದಕ್ಕೊಂದು ಹೊಸ ಮೈಕ್‌ಸೆಟ್ ಅಳವಡಿಸಲಾಗಿತ್ತು. ನಮ್ಮೂರಿನ ರಾಮಕೃಷ್ಣರಾಯರು ಭದ್ರಾಚಲಂ ಶ್ರೀ ರಾಮದಾಸು ಸ್ವಾಮಿಗಳು ಶ್ರೀರಾಮಚಂದ್ರ ಪ್ರಭು ಮೇಲೆ ಬರೆದಿದ್ದ, ಇದೇ ಬಾಲು ಅವರು ಹಾಡಿದ್ದ ಕೀರ್ತನೆಗಳ ಕ್ಯಾಸೆಟ್ಟನ್ನು ತರಿಸಿ ಆ ಮೈಕ್‌ಸೆಟ್ಟಿನಲ್ಲಿ ಪ್ಲೇ ಮಾಡಿಸುತ್ತಿದ್ದರು. ಆ ಕೀರ್ತನೆಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆ ರಾಮಾಲಯದಿಂದ ಮಧುರವಾಗಿ ಕೇಳಿಬರುತ್ತಿದ್ದವು…
“ಸೀತಾರಾಮ ಸ್ವಾಮಿ ನೇನು ಚೇಸಿನ ನೇರಮು ಏಮಿ..” ಮತ್ತೂ “ನನು ಬ್ರೋವಮನಿ ಚಪ್ಪವೇ ಸೀತಮ್ಮ ತಲ್ಲಿ”…
ಹೀಗೆ ಎಂಟತ್ತು ಕೀರ್ತನೆಗಳು ನಿತ್ಯವೂ ನನ್ನ ಕಿವಿಗೆ ತಪ್ಪದೇ ಬೀಳುತ್ತಿದ್ದವು. ಅವು ಮೈಕಿನಲ್ಲಿ ಬರುವ ಹೊತ್ತಿಗೆ ನನ್ನ ಮನಸ್ಸು ಅತ್ತ ಹೊರಳಿಬಿಡುತ್ತಿತ್ತು. ಅತ್ಯಂತ ಭಕ್ತಿಯಿಂದ ಶ್ರೀರಾಮನ ಮೇಲೆ ಅಕ್ಷರಾಭಿಷೇಕ ಮಾಡಿದ್ದ ರಾಮದಾಸರ ಪ್ರತಿ ಅಕ್ಷರಕ್ಕೂ ಬಾಲು ಅವರು ಜೀವ, ಆರ್ದ್ರತೆಯನ್ನು ತುಂಬಿ ಹಾಡಿದ್ದರು. ನನಗೆ ಎಸ್‌ಪಿಬಿ ಅವರ ಗಾಯನದ ರುಚಿ ಹತ್ತಿದ್ದು ಆಗಲೇ. ಅದಾದ ಮೇಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಚಿತ್ರಗೀತೆಗಳಂತೂ ನನ್ನ ಪಾಲಿನ ದಿನನಿತ್ಯದ ಭಾಗವೇ ಆಗಿದ್ದವು.
ಹೀಗಿರಬೇಕಾದರೆ, ಆಗ್ಗೆ ಅನೇಕ ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದ ಬಾಲು ಅವರು, ಮೊತ್ತಮೊದಲಿಗೆ ದೊಡ್ಡರಂಗೇ ಗೌಡರ ‘ಮಾವು-ಬೇವುʼ ಭಾವಗೀತೆಗಳ ಗುಚ್ಛಕ್ಕೆ ಹಾಡಿದ್ದರು. ಅದು ಇವತ್ತಿಗೂ ಎವರ್‌ಗ್ರೀನ್ ಆಲ್ಬಂ. ಅದನ್ನು ಮೀರಿದ ಮತ್ತೊಂದು ಭಾವಗೀತೆಗಳ ಆಲ್ಬಂ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ. ಪಕ್ಕಾ ಗ್ರಾಮೀಣ ಶೈಲಿಯ, ಅದರಲ್ಲೂ ನಮ್ಮ ಬಯಲುಸೀಮೆಯ ನಾಟಿಶೈಲಿಯ ಕನ್ನಡದಲ್ಲಿ ಗೌಡರು ಬರೆದಿದ್ದ ಭಾವಗೀತೆಗಳಿಗೆ ಬಾಲು ಅವರು ಆ ಸೊಗಡಿಗೆ ಒಂದಿಷ್ಟೂ ಧಕ್ಕೆಯಾಗದೇ ಸ್ವರದಾನ ಮಾಡಿದ್ದರು.
//ಹೋದೋಟದ ಹಾದಿಯಾಗೆ // ಊರಿನಾಚೆ ತೋಪಿನಾಗೆ..//
ಮತ್ತೂ…
//ಚಿತ್ತಾರ ಬಿಡಿಸ್ಯಾವೆ ಮುಂಗಾರ ಮಳೆಮೋಡ// ಹಾಗೂ //ಮೂಡುತ್ತ ರವಿ ರಂಗ ತಂದೈತೆ…//
ಈ ಎಲ್ಲ ಗೀತೆಗಳು ಒಂದಿಕ್ಕಿಂತ ಒಂದು ಮಿಗಿಲು. ಇದಾದ ಮೇಲೆ ಮೈಸೂರ ಮಲ್ಲಿಗೆ ಚಿತ್ರಕ್ಕಾಗಿ ಅವರು ಹಾಡಿದ ಕೆ.ಎಸ್. ನರಸಿಂಹಸ್ವಾಮಿ ಅವರ ಭಾವಗೀತೆಗಳು. ಇಡೀ ಸಿನಿಮಾವನ್ನು ತಮ್ಮ ಸ್ವರಮಾಧುರ್ಯದ ಮೇಲೆ ಎತ್ತಿನಿಲ್ಲಿಸಿಬಿಟ್ಟ ಅವರು ಕೆಎಸ್‌ನ ಅವರ ಕಾವ್ಯಕ್ಕೆ ಉಸಿರು ತುಂಬಿದ್ದರು ಎಂದರೆ ಚಿಕ್ಕಪದವಾಗುತ್ತದೆ.
//ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು, ಒಳಗೆ ಬರಲಪ್ಪಣೆಯೇ ದೊರೆಯೇ//
ಇದರ ಜತೆಗೆ,
//ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ, ನಿನ್ನೊಳಿದೆ ನನ್ನ ಮನಸು..//
ಈ ಗೀತೆ ಸಾಹಿತ್ಯಿಕವಾಗಿ ನಮ್ಮ ಆಳದಲ್ಲಿ ಅಲೆಗಳನ್ನು ಎಬ್ಬಿಸಿದರೆ, ಬಾಲು ಅವರು ಹಾಡಿಗಾರಿಕೆ ಅದೇ ಆಳದಲ್ಲಿ ನಮ್ಮ ಬದುಕಿನಲ್ಲಿ ಆಗಿಹೋದ ಕಥೆಗಳ ಚಿತ್ರಗಳನ್ನು ಆರ್ದ್ರವಾಗಿ ಮೂಡಿಸುತ್ತದೆ. ಇವುಗಳ ಜತೆಗೆ, ‘ಮಹಾಕ್ಷತ್ರಿಯʼ ಚಿತ್ರಕ್ಕಾಗಿ ಅವರು ಹಾಡಿದ, ಹಂಸಲೇಖ ಅವರು ರಚಿಸಿ ರಾಗ ಸಂಯೋಜನೆ ಮಾಡಿದ “ಈ ಭೂಮಿ ಬಣ್ಣದ ಬುಗರಿ, ಆ ಶಿವನೇ ಚಾಟಿ ಕಣೋ” ಸದಾ ಹೃದಯದ ಕಪಾಟಿನಲ್ಲಿ ಸೇವ್ ಆಗಿರುವಂಥ ಹಾಡು. ಈ ಹಾಡಿಗಾಗಿಯೇ ವಿಷ್ಣುವರ್ಧನ್, ಹಂಸಲೇಖ ಮತ್ತು ಬಾಲು ಅವರು ಹುಟ್ಟಿದರೇನೋ. ಇದಾದ ಮೇಲೆ ಗಾನಯೋಗಿ ಪಂಚಾಕ್ಷರಿ ಗವಾಯಿ. ಈ ಚಿತ್ರದ ಮೂಲಕ ಬಾಲು ಅವರು ಮತ್ತು ಹಂಸಲೇಖ ಕನ್ನಡವೆಂಬುದು ಬದುಕಿರುವ ತನಕ ಬದುಕಿರುತ್ತಾರೆ. ಅನುಮಾನವೇ ಇಲ್ಲ. ಯಾರೇ ಸಂಗೀತ ರಸಿಕರು ಇದ್ದರೆ ಈ ಚಿತ್ರದ ಹಾಡುಗಳನ್ನು ಕೇಳದಿದ್ದರೆ ಅವರ ಹಾಡಿನ ಹಸಿವು ತೀರದು ಎನ್ನುವುದು ನನ್ನ ನಂಬಿಕೆ.
***
ಬಾಲಸುಬ್ರಹ್ಮಣ್ಯಂ ಅವರ ಕುರಿತ ಈ ಲೇಖನವನ್ನೂ ಓದಿ..
ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ..
ಪಂಡಿತಾರಾಧ್ಯುಲ ಅಂದರೆ ಪಂಡಿತರಿಂದಲೇ ಪೂಜಿಸಲ್ಪಡುವವರು ಎಂದರ್ಥ. ನಿಜವಾಗಿಯೂ ಇದು ಸತ್ಯ. ಶಾಸ್ತ್ರೀಯ ಸಂಗೀತದ ಓನಾಮಗಳನ್ನು ತಿಳಿಯದೇ, ನಲವತ್ತು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಸಾಕ್ಷಾತ್ ಪಂಡಿತರಿಂದಲೇ ಪೂಜಿಸಲ್ಪಟ್ಟವರು, ಗೌರವಿಸಲ್ಪಟ್ಟವರು ಬಾಲು.
ಇಷ್ಟೇ ಅಂತೀರಾ? ಇಲ್ಲ, ಇವರ ಹಾಡಿಗೆ ಅದೆಷ್ಟು ಸೆಳೆತವಿತ್ತು ಎಂದರೆ, ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರೇ ಫಿದಾ ಆಗಿಬಿಟ್ಟಿದ್ದರು. ಇದರಲ್ಲಿ ವಿಶೇಷ ಏನಂತೀರಾ? ಕ್ಲಿಂಟನ್ ಅವರಿಗೆ ಕನ್ನಡ ಗೊತ್ತಿಲ್ಲ, ತೆಲುಗು ಬರಲ್ಲ, ತಮಿಳು ತಿಳಿಯದು. ಆದರೆ ಬಾಲು ಅವರ ಹಾಡುಗಳು ಕ್ಲಿಂಟನ್ ಅವರಲ್ಲಿ ರಸಗಂಗೆಯನ್ನು ಉಕ್ಕಿಸುವಂತೆ ಮಾಡಿತ್ತು. ಕಛೇರಿಯಲ್ಲಿ ಅವರ ಹಾಡುಗಳನ್ನು ಕೇಳುತ್ತಲೇ ಮೈಮರೆತು ಮೇಲೆದ್ದು ತಮಗರಿವಿಲ್ಲದೆಯೇ ಚಪ್ಪಾಳೆ ತಟ್ಟಿಕೊಂಡೇ ನಿಂತುಬಿಟ್ಟಿದ್ದರಂತೆ ಕ್ಲಿಂಟನ್.
ಬಾಲು ಅವರನ್ನು ಆಕಾಶದೆತ್ತರಲ್ಲಿ ನಿಲ್ಲಿಸಿದ ʼಶಂಕರಾಭರಣಂʼ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಗೀತೆಯಲ್ಲಿ ಈ ಸಾಲುಗಳಿವೆ..
//ಪ್ರಾಣಮು ನೀವನಿ, ಗಾನಮೆ ನೀದನಿ, ಪ್ರಾಣಮೇ ಗಾನಮನಿ..//
(ಪ್ರಾಣವು ನಿನ್ನದು/ಗಾನವೂ ನಿನ್ನದು/ಪ್ರಾಣವೇ ಗಾನವೂ..)
ಅದೇ ಮಾತುಗಳನ್ನು ಬಾಲು ಸದಾ ಹೇಳುತ್ತಿದ್ದರು. ಅದರಂತೆ ಆ ಭಗವಂತನಿಗೆ ಮತ್ತು ತಾಯಿ ಸರಸ್ವತಿಗೆ ಶರಣಾಗಿ ಹಾಡಿದ್ದರು.
ಬಾಲು ಅವರನ್ನು ನಾವು ಮರೆಯುವುದು ಇರಲಿ, ಇನ್ನು ನೂರಾರು ವರ್ಷಗಳಾದರೂ ಅವರು ಹಾಡಿಟ್ಟುಹೋದ ಹಾಡುಗಳು ಅವರನ್ನು ಮರೆಯಲು ಬಿಡುವುದೇ ಇಲ್ಲ..ಇದು ಸತ್ಯ.
ಏಕೆಂದರೆ? ಅವರು ತಮ್ಮ ಹೃದಯವನ್ನೇ ಕೊರಳಾಗಿಸಿಕೊಂಡು ಹಾಡುತ್ತಿದ್ದರು..
***
Comments 1